ಸಾಂಚಿ ವಿಶ್ವವಿದ್ಯಾಲಯದ ಕುಲಾಧಿಪತಿಗಳಾಗಿ ಕರ್ನಾಟಕದ ಪ್ರೊ. ಯಜ್ಞೇಶ್ವರ ಶಾಸ್ತ್ರಿ ನೇಮಕ
ಸಾಂಚಿ ಯೂನಿವರ್ಸಿಟಿ ಆಫ್ ಬೌದ್ಧ-ಇಂಡಿಕ್ ಸ್ಟಡೀಸ್ (SUBIS) ಭಾರತದ ಮಧ್ಯಪ್ರದೇಶದ ಸಾಂಚಿಯಲ್ಲಿರುವ ಒಂದು ರಾಜ್ಯ ವಿಶ್ವವಿದ್ಯಾಲಯವಾಗಿದೆ. ಇದನ್ನು 2013ರಲ್ಲಿ ಮಧ್ಯಪ್ರದೇಶ ಸರ್ಕಾರವು ಸಾಂಚಿ ಯೂನಿವರ್ಸಿಟಿ ಆಫ್ ಬೌದ್ಧ-ಇಂಡಿಕ್ ಸ್ಟಡೀಸ್ ಆಕ್ಟ್, 2012ರ ಅಡಿಯಲ್ಲಿ ಸ್ಥಾಪನೆ ಮಾಡಿತು. ಕರ್ನಾಟಕದ ಯಜ್ಞೇಶ್ವರ ಶಾಸ್ತ್ರಿ ಅವರನ್ನು ಜುಲೈ 2016ರಲ್ಲಿ ಉಪಕುಲಪತಿಯಾಗಿ ನೇಮಿಸಲಾಯಿತು. ಅದಾದ ನಂತರ ನೀರಜಾ ಅರುಣ್ ಗುಪ್ತಾ ಅವರನ್ನು ಫೆಬ್ರವರಿ 2022ರಲ್ಲಿ ನೇಮಿಸಲಾಯಿತು. ಇದೀಗ ಪ್ರೊ. ಯಜ್ಞೇಶ್ವರ ಶಾಸ್ತ್ರಿ ಅವರನ್ನು ಸಾಂಚಿ ವಿಶ್ವವಿದ್ಯಾಲಯದ ಕುಲಾಧಿಪತಿಗಳಾಗಿ ನೇಮಕ ಮಾಡಲಾಗಿದೆ.
ಬೆಂಗಳೂರು: ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕೋಸಗುಳಿಯ ಪ್ರೊ. ಯಜ್ಞೇಶ್ವರ ಶಾಸ್ತ್ರಿ ಅವರನ್ನು ಮಧ್ಯಪ್ರದೇಶ ಸರಕಾರವು ಮುಂದಿನ 3 ವರ್ಷಗಳ ಅವಧಿಗೆ ಸಾಂಚಿ ಯುನಿವರ್ಸಿಟಿ ಆಫ್ ಬುದ್ಧಿಸ್ಟ್, ಇಂಡಿಕ್ ಸ್ಟಡೀಸ್ ಇದರ ಕುಲಾಧಿಪತಿಗಳಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ. ಇದು ಕನ್ನಡಿಗರೆಲ್ಲರಿಗೆ ಹೆಮ್ಮೆ ತರುವ ವಿಷಯವಾಗಿದೆ. ಅಂತಾರಾಷ್ಟ್ರೀಯ ಖ್ಯಾತಿಯ ವಿದ್ವಾಂಸರೂ, ಶಿಕ್ಷಣ ತಜ್ಞರೂ ಆಗಿರುವ ಪ್ರೊ. ಯಜ್ಞೇಶ್ವರ ಶಾಸ್ತ್ರಿ ಅವರು ಈ ಹಿಂದೆ ಇದೇ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಗಮನಾರ್ಹ ಸೇವೆ ಸಲ್ಲಿಸಿದ್ದರು.
ಅವರು ಪ್ರಸ್ತುತ ಮಧ್ಯಪ್ರದೇಶ ಸರಕಾರದ ಸಂಸ್ಕೃತಿ ಸಚಿವಾಲಯದ ಆಚಾರ್ಯ ಶಂಕರ ಸಾಂಸ್ಕೃತಿಕ ಏಕ್ತಾ ನ್ಯಾಸಸ್ ಅಡ್ವೈಸರ್ ಆಗಿ ಕೆಲಸ ನಿರ್ವಹಿಸುತ್ತಿದ್ದು ತಮ್ಮ ಅಪ್ರತಿಮ ಕೆಲಸದ ಮೂಲಕ ಜನಮನ್ನಣೆ ಗಳಿಸಿದ್ದಾರೆ.
ವಿಶ್ವಖ್ಯಾತಿಯನ್ನು ಹೊಂದಿರುವ ಪ್ರೊ. ಯಜ್ಞೇಶ್ವರ ಶಾಸ್ತ್ರಿ ಅವರು ಭಾರತೀಯ ತತ್ವಶಾಸ್ತ್ರ, ವಿಶೇಷವಾಗಿ ಹಿಂದೂ, ಬೌದ್ಧ ಮತ್ತು ಜೈನ ಫಿಲಾಸಫಿಗಳ ವಿದ್ವಾಂಸರಾಗಿ ಗುರುತಿಸಿಕೊಂಡಿದ್ದಾರೆ. ಸಂಸ್ಕೃತ ಮತ್ತು ಭಾರತೀಯ ರಿಲಿಜನ್ ವಿಷಯಗಳಿಗೆ ಸಂಬಂಧಿಸಿಯೂ ತಮ್ಮ ಸಂಶೋಧನೆಗಳು ಮತ್ತು ಉಪನ್ಯಾಸಗಳಿಗಾಗಿ ಖ್ಯಾತರಾಗಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರ: ಕೌಶಲ್ಯ ವಿಶ್ವವಿದ್ಯಾಲಯಕ್ಕೆ ರತನ್ ಟಾಟಾ ಹೆಸರಿಟ್ಟ ಸರ್ಕಾರ
ಅವರು ಗುಜರಾತ್ ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರ ವಿಭಾಗದಲ್ಲಿ ಸಹಪ್ರಾಧ್ಯಾಪಕ, ಪ್ರೊಫೆಸರ್, ಅಧ್ಯಕ್ಷರೂ ಆಗಿ ಸುಮಾರು 40 ವರ್ಷಗಳಿಗೂ ಅಧಿಕ ಕಾಲ ಸೇವೆ ಸಲ್ಲಿಸಿದ್ದಾರೆ. ಅದಲ್ಲದೇ, ಐಸಿಸಿಆರ್, ಐಸಿಪಿಆರ್ ಗಳ ನ್ಯಾಶನಲ್ ಫೆಲೊ ಹಾಗೂ ನಾಮನಿರ್ದೇಶಿತ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಅನೇಕ ವಿದೇಶೀ ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಗುಜರಾತಿನ ಜಾಗತಿಕ ಶಾಂತಿ ಪ್ರತಿಷ್ಠಾನದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಸದ್ಯ ನ್ಯೂಜಿರ್ಲೆಂಡ್ನಲ್ಲಿ ತಮ್ಮ ಮಗನೊಂದಿಗೆ ವಾಸಿಸುತ್ತಿರುವ ಪ್ರೊ. ಶಾಸ್ತ್ರಿಗಳು ಮುಂದಿನ ಮೂರು ವರ್ಷಗಳಕಾಲ ಭೋಪಾಲದ ಸಮೀಪವಿರುವ ಸಾಂಚಿ ವಿಶ್ವವಿದ್ಯಾಲಯದ ಕುಲಾಧಿಪತಿಗಳಾಗಿ ಕೆಲಸ ನಿರ್ವಹಿಸಲಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ