ಬೆಂಗಳೂರು ವಿವಿ ಬಿಕಾಂ ಪರೀಕ್ಷೆಗೆ ಹೈಕೋರ್ಟ್ ಸಮ್ಮತಿ: ವಿದ್ಯಾರ್ಥಿಗಳು ನಿರಾಳ
ಬೆಂಗಳೂರು ವಿಶ್ವವಿದ್ಯಾಲಯದ ಬಿಕಾಂ ಪರೀಕ್ಷೆಗಳನ್ನು ಮುಂದೂಡುವಂತೆ ಹೈಕೋರ್ಟ್‌ನ ಏಕಸದಸ್ಯ ಪೀಠ ನೀಡಿದ್ದ ಆದೇಶಕ್ಕೆ ವಿಭಾಗೀಯ ಪೀಠ ತಡೆ ನೀಡಿದೆ. ಸೋಮವಾರದಿಂದ ಪರೀಕ್ಷೆಗಳು ಆರಂಭವಾಗಲಿವೆ. ೪೦,೦೦೦ ವಿದ್ಯಾರ್ಥಿಗಳ ಭವಿಷ್ಯ ಅನಿಶ್ಚಿತತೆಯಿಂದ ಕೂಡಿತ್ತು. ವಿಭಾಗೀಯ ಪೀಠದ ಈ ತೀರ್ಪು ಸಾವಿರಾರು ವಿದ್ಯಾರ್ಥಿಗಳಿಗೆ ಉಸಿರಾಡಲು ಅವಕಾಶ ಮಾಡಿಕೊಟ್ಟಿದೆ.
ಬೆಂಗಳೂರು, ಜನವರಿ 12: ಬೆಂಗಳೂರು ವಿಶ್ವವಿದ್ಯಾಲಯದ (Bengaluru University) ಬಿಕಾಂ ಪರೀಕ್ಷೆಗೆ (Bcom Exams) ಹೈಕೋರ್ಟ್ ವಿಭಾಗೀಯ ಪೀಠ ಅನುಮತಿ ನೀಡಿದೆ. ಸೋಮವಾರದಿಂದ ಬೆಂಗಳೂರು ವಿಶ್ವವಿದ್ಯಾಲಯದ ಬಿಕಾಂ 1, 3, 5ನೇ ಸೆಮಿಸ್ಟರ್ನ ಪರೀಕ್ಷೆಗಳು ಆರಂಭವಾಗಲಿವೆ. ಹಾಗೇ, ಸಿಎ ಫೌಂಡೇಶನ್ ಪರೀಕ್ಷೆಗಳು ಕೂಡ ಸೋಮವಾರದಿಂದಲೇ ಆರಂಭವಾಗಲಿವೆ. ಹೀಗಾಗಿ, ಬಿಕಾಂ 1, 3, 5ನೇ ಸೆಮಿಸ್ಟರ್ನ ಪರೀಕ್ಷೆಗಳನ್ನು ಮುಂದೂಡುವಂತೆ ಹೈಕೋರ್ಟ್ ಏಕಸದಸ್ಯ ಪೀಠ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಆದೇಶಿಸಿತ್ತು.
ಪರೀಕ್ಷೆ ಮುಂದೂಡಿಕೆಯಿಂದ 40 ರಿಂದ 50 ಸಾವಿರ ಬಿಕಾಂ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಹೀಗಾಗಿ, ಏಕಸದಸ್ಯ ಪೀಠದ ಆದೇಶಕ್ಕೆ ಪ್ರಶ್ನಿಸಿ ಬೆಂಗಳೂರು ವಿಶ್ವವಿದ್ಯಾಲಯ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು. ನ್ಯಾ. ಅನು ಶಿವರಾಮನ್, ನ್ಯಾ.ಎಂ.ಐ.ಅರುಣ್ ಅವರಿದ್ದ ಹೈಕೋರ್ಟ್ ವಿಭಾಗೀಯ ಪೀಠ ರವಿವಾರ ತುರ್ತು ವಿಚಾರಣೆ ವಿಚಾರಣೆ ನಡೆಸಿ, ಏಕಸದಸ್ಯ ಪೀಠ ನೀಡಿದ್ದ ಆದೇಶಕ್ಕೆ ತಡೆ ನೀಡಿ, ಪರೀಕ್ಷೆ ನಡೆಸಲು ಅನುಮತಿ ನೀಡಿದೆ. ಇದರಿಂದ, ಸಾವಿರಾರು ವಿದ್ಯಾರ್ಥಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ