ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಇನ್ಮುಂದೆ ವಿದ್ಯಾರ್ಥಿಗಳಿಗೆ ಸ್ಪೋಕನ್ ಇಂಗ್ಲಿಷ್ ತರಗತಿ
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು (ಡಿಎಸ್‌ಇಎಲ್) 2024-25ರ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 1ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಸ್ಪೋಕನ್ ಇಂಗ್ಲಿಷ್ ತರಗತಿಗಳನ್ನು ಪರಿಚಯಿಸಲಿದೆ. 40 ನಿಮಿಷಗಳ ಸ್ಪೋಕನ್ ಇಂಗ್ಲಿಷ್ ತರಗತಿಯನ್ನು ಪ್ರತಿ ಶನಿವಾರ ನಡೆಸಲು ಸಿದ್ಧತೆ ನಡೆದಿದೆ.
ಬೆಂಗಳೂರು, ಮೇ.30: ಶಿಕ್ಷಣ ಕ್ಷೇತ್ರದಲ್ಲಿ ಬಹಳಷ್ಟು ಬದಲಾವಣೆಗಳು ನಡೆಯುತ್ತಿವೆ. ಇತ್ತೀಚೆಗಷ್ಟೇ ಸರ್ಕಾರಿ ಶಾಲೆಗಳಲ್ಲಿ ಎಲ್ಕೆಜಿ, ಯುಕೆಜಿ ಆರಂಭಿಸಬೇಕು ಎಂದು ಸರ್ಕಾರ (Karnataka Government) ಆದೇಶ ಹೊರಡಿಸಿತ್ತು. ಇದೀಗ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಪ್ರಸ್ತುತ 2024-25ನೇ ಶೈಕ್ಷಣಿಕ ಸಾಲಿನಿಂದ ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 1ರಿಂದ 10ನೇ ತರಗತಿಯ ಮಕ್ಕಳಿಗೆ ಸ್ಪೋಕನ್ ಇಂಗ್ಲೀಷ್(Spoken English) ತರಗತಿಗಳನ್ನ ನಡೆಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮುಂದಾಗಿದೆ.
ವಾರದಲ್ಲಿ ಒಂದು ದಿನ ಅಂದ್ರೆ ಪ್ರತಿ ಶನಿವಾರದಂದು ವಿದ್ಯಾರ್ಥಿಗಳಿಗೆ 40 ನಿಮಿಷದ ಸ್ಪೋಕನ್ ಇಂಗ್ಲೀಷ್ ತರಗತಿಗಳನ್ನ ನಡೆಸಲು ಶಿಕ್ಷಣ ಇಲಾಖೆ ಪ್ಲ್ಯಾನ್ ಮಾಡಿದೆ. ಈ ಮೂಲಕ ಸರ್ಕಾರಿ ಶಾಲೆಯ ಮಕ್ಕಳಿಗೆ ಇಂಗ್ಲಿಷ್ ಇನ್ಮುಂದೆ ಕಬ್ಬಿಣದ ಕಡಲೆಯಲ್ಲ. ಪಿಯುಸಿ ಮುಗಿದ ಬಳಿಕ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಭಯ ಪಡೋ ಅಗತ್ಯ ಇರಲ್ಲ. ಕನ್ನಡ ಮಾಧ್ಯಮ ಮಕ್ಕಳು ಬದುಕು ಕಟ್ಟಿಕೊಳ್ಳಲು ಇಂಗ್ಲಿಷ್ ಬಾರದೇ ಪರದಾಡುತ್ತಿದ್ದರು ಸದ್ಯ ಈ ಮಹತ್ವದ ಹೆಜ್ಜೆ ವಿದ್ಯಾರ್ಥಿಗಳ ಮುಂದಿನ ಬದುಕಿಗೆ ಸಹಾಯವಾಗಲಿದೆ.
ಸಂಭಾಷಣೆ, ನಾಟಕ, ಪಾತ್ರಾಭಿನಯ, ಕಥೆ ಹೇಳುವುದು, ಪರಿಸ್ಥಿತಿ ವಿವರಣೆ, ಅನುಭವಗಳ ಹಂಚಿಕೆ ಈ ಎಲ್ಲಾ ಚಟುವಟಿಕೆಗಳು ಸ್ಪೋಕನ್ ಇಂಗ್ಲೀಷ್ ತರಗತಿಗಳಲ್ಲಿ ಇರಲಿವೆ. ಸ್ಪೋಕನ್ ಇಂಗ್ಲೀಷ್ ಪ್ರಸ್ತಾವನೆಯನ್ನ ಶಿಕ್ಷಣ ಇಲಾಖೆಯ 2024-25 ರ ಶೈಕ್ಷಣಿಕ ಮಾರ್ಗಸೂಚಿಯಲ್ಲಿ ಅಳವಡಿಸಲಾಗಿದೆ.
ಇದನ್ನೂ ಓದಿ: ಓದುವ ಅದಮ್ಯ ಆಸೆಯಿದ್ದರೂ ಹೊಟ್ಟೆಪಾಡಿಗಾಗಿ ಚಿಂದಿ ಆಯುತ್ತಿರುವ ರಾಯಚೂರು ಪೋರನಿಗೆ ಸರ್ಕಾರದ ನೆರವು ಸಿಕ್ಕೀತೇ?
ಗ್ರಾಮೀಣ ಭಾಗದ ಮಕ್ಕಳಲ್ಲಿ ಇಂಗ್ಲೀಷ್ ಕಲಿಕೆಯೂ ಸವಾಲಿನ ಕೆಲಸವಾಗಿತ್ತು. ಎಸ್ಎಸ್ಎಲ್ಸಿ, ಪಿಯುಸಿ ಮುಗಿದ ಬಳಿಕ ಸ್ಪರ್ಧಾತ್ಮಕ ಪರೀಕ್ಷೆಗಳಾದ ಜೆಇಇ(JEE), ಎನ್ ಇಇಟಿ(NEET), ಸಾಮಾನ್ಯ ಪ್ರವೇಶ ಪರೀಕ್ಷೆ(CET)ಗಳನ್ನು ಎದುರಿಸಲು, ವೃತ್ತಿಪರಕೋರ್ಸ್ ಗಳಾದ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಗೆ ಪ್ರವೇಶ ಪಡೆಯಲು ಇಂಗ್ಲೀಷ್ ಭಾಷೆ ಅಗತ್ಯವಿದ್ದ ಕಾರಣ ವಿದ್ಯಾರ್ಥಿಗಳು ಹೆದರುತ್ತಿದ್ದರು. ಈ ಹಿನ್ನೆಲೆಯಲ್ಲಿ ಶಾಲೆಗಳ ಹಂತದಲ್ಲೇ ಸ್ಪೋಕನ್ ಇಂಗ್ಲೀಷ್ ತರಬೇತಿಯನ್ನ ನೀಡಿದರೇ ವಿದ್ಯಾರ್ಥಿಗಳ ಭವಿಷ್ಯದ ಶಿಕ್ಷಣ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳನ್ನ ಎದುರಿಸಲು ಸಹಕಾರಿಯಾಗುತ್ತದೆ ಎಂದು ಶಿಕ್ಷಣ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ.
ಸ್ಪೋಕನ್ ಇಂಗ್ಲೀಷ್ ಕೈಪಿಡಿಯನ್ನ ಪದವೀಧರ ಶಿಕ್ಷಕರು, ಅಂಗ್ಲಭಾಷೆಯ ಶಿಕ್ಷಕರ ತಂಡ ತಯಾರಿಸಲಿದ್ದು ಇದು ವಿದ್ಯಾರ್ಥಿಗಳು ನಿರರ್ಗಳವಾಗಿ ಅಂಗ್ಲಭಾಷೆಯನ್ನ ಮಾತನಾಡಲು ಅನುಕೂಲವಾಗಲಿದೆ. ಇನ್ನು ಪ್ರತಿ ಶನಿವಾರ ಎಲ್ಲಾ ವಿದ್ಯಾರ್ಥಿಗಳು ಬರೀ ಇಂಗ್ಲೀಷನಲ್ಲೇ ಮಾತನಾಡಬೇಕೆಂಬುದನ್ನ ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ