ಶಾಲೆಗಳಲ್ಲಿ ಸಮವಸ್ತ್ರ ಧಾರಣೆ ಕಡ್ಡಾಯ, ಇದರಲ್ಲಿ ವಿನಾಯ್ತಿಯಿಲ್ಲ: ಶಿಕ್ಷಣ ಸಚಿವ ಬಿಸಿ ನಾಗೇಶ್ ಸ್ಪಷ್ಟನೆ
ಉಡುಪಿಯ ಶಾಲೆಯೊಂದರಲ್ಲಿ ಆರು ಮಕ್ಕಳು ಪ್ರತಿಭಟನೆ ನಡೆಸಿದ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಕರಾವಳಿಯ ಕೆಲ ಸಂಘಟನೆಗಳು ಇವರನ್ನು ಪ್ರಚೋದಿಸಿವೆ ಎಂದರು.
ಮಡಿಕೇರಿ: ಶಾಲೆಗಳಲ್ಲಿ ಸಮವಸ್ತ್ರ ಧರಿಸುವುದು ಕಡ್ಡಾಯ. ಇದರಲ್ಲಿ ಯಾವುದೇ ವಿನಾಯ್ತಿ ಸಿಗುವುದಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ. ಶಾಲಾ ಸಮಿತಿಗಳು ಎಂಥ ಸಮವಸ್ತ್ರ ಬೇಕು ಎಂಬುದನ್ನು ನಿರ್ಧರಿಸುತ್ತವೆ. ಬುರ್ಖಾ ನಿಷೇಧ ಮಾಡಬೇಕೆಂದು ಯಾರೂ ಹೇಳಿಲ್ಲ. ಆಯಾ ಶಾಲೆಗೆ ಸಂಬಂಧಿಸಿದ ಸಮವಸ್ತ್ರ ಧರಿಸಬೇಕು ಎಂದು ಸ್ಪಷ್ಟಪಡಿಸಿದರು. ಉಡುಪಿಯ ಶಾಲೆಯೊಂದರಲ್ಲಿ ಆರು ಮಕ್ಕಳು ಪ್ರತಿಭಟನೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಕರಾವಳಿಯ ಕೆಲ ಸಂಘಟನೆಗಳು ಇವರನ್ನು ಪ್ರಚೋದಿಸಿವೆ. ಉಳಿದ ಮಕ್ಕಳು ಎಂದಿನಂತೆ ಶಾಲೆಗೆ ಬಂದಿದ್ದಾರೆ. ಇವರ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ ಎಂದು ಹೇಳಿದರು.
ಹಿಜಾಬ್ ಧರಿಸಿ ಬಂದರೆ ಪ್ರವೇಶ ಇಲ್ಲ: ಉಡುಪಿ ಪ್ರಾಚಾರ್ಯ ಸ್ಪಷ್ಟನೆ ಉಡುಪಿ: ಉಡುಪಿಯ ಸರ್ಕಾರಿ ಪದವಿಪೂರ್ವ ಹೆಣ್ಣುಮಕ್ಕಳ ಕಾಲೇಜಿನಲ್ಲಿ ಕೆಲ ವಿದ್ಯಾರ್ಥಿನಿಯರು ಹಿಜಾಬ್ ಧರಿಸಲು ಅವಕಾಶ ಕೋರಿದ್ದಾರೆ. ಈ ವಿನಂತಿಗೆ ಪ್ರಾಚಾರ್ಯ ರುದ್ರೇಗೌಡ ಮನ್ನಣೆ ನೀಡಿಲ್ಲ. ಈವರೆಗೆ ಯಾವ ವಿದ್ಯಾರ್ಥಿನಿಯೂ ಹಿಜಾಬ್ ಧರಿಸಿ ತರಗತಿಗೆ ಬರುತ್ತಿರಲಿಲ್ಲ. ಕಳೆದ ಮೂರು ದಿನಗಳಿಂದ ಕೆಲವರು ಮಾತ್ರ ಹಿಜಾಬ್ ಧರಿಸುತ್ತಿದ್ದಾರೆ ಎಂದು ಅವರು ವಿವರಿಸಿದರು.
ಓದುತ್ತಿರುವ 60 ಮುಸ್ಲಿಮ್ ವಿದ್ಯಾರ್ಥಿನಿಯರ ಪೈಕಿ ಕೆಲವರು ಮಾತ್ರ ಹಿಜಾಬ್ ಧರಿಸುತ್ತಿದ್ದಾರೆ. ಈ ವಿದ್ಯಾರ್ಥಿನಿಯರ ಪೋಷಕರೊಂದಿಗೆ ಚರ್ಚಿಸಿದ್ದೇನೆ. ಬಹುತೇಕರು ಪರಿಸ್ಥಿತಿ ಅರಿತುಕೊಂಡು ಒಪ್ಪಿಕೊಂಡಿದ್ದಾರೆ ಎಂದರು. ಆದರೆ ಕೆಲವರು ಮಾತ್ರ ಹಿಜಾಬ್ಗೆ ಅವಕಾಶ ಕೊಡಲೇಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಪೋಷಕರು ಬಂದು ಮಾತನಾಡಿದರೂ ನಮ್ಮ ಸಮಸ್ಯೆ ಬಗೆಹರಿದಿಲ್ಲ. ನಮ್ಮ ಕಲಿಕೆಗೆ ಇದರಿಂದ ತೊಂದರೆಯಾಗುತ್ತಿದೆ ಎಂದು ವಿದ್ಯಾರ್ಥಿನಿಯರು ದೂರುತ್ತಿದ್ದಾರೆ.
ಕೊಪ್ಪ ತಾಲ್ಲೂಕು ಬಾಳಗಡಿಯಲ್ಲೂ ವಿವಾದ ಚಿಕ್ಕಮಗಳೂರು: ಕೊಪ್ಪ ತಾಲ್ಲೂಕು ಬಾಳಗಡಿ ಗ್ರಾಮದ ಪ್ರಥಮ ದರ್ಜೆ ಕಾಲೇಜಿನ ಕೆಲ ವಿದ್ಯಾರ್ಥಿಗಳು ಕೇಸರಿ ಶಾಲು ಹೊದ್ದು ಕಾಲೇಜಿಗೆ ಬಂದಿದ್ದು ವಿವಾದಕ್ಕೀಡಾಗಿತ್ತು. ವಿದ್ಯಾರ್ಥಿಗಳ ಮನವೊಲಿಸಿದ್ದ ಪ್ರಾಚಾರ್ಯರು ಪೋಷಕರ ಸಭೆ ನಡೆಸಿ ಚರ್ಚಿಸುವುದಾಗಿ ತಿಳಿಸಿದ್ದರು. ಮೂರು ವರ್ಷಗಳ ಹಿಂದೆಯೂ ಇದೇ ವಿಷಯಕ್ಕೆ ಕಾಲೇಜಿನಲ್ಲಿ ವಿವಾದ ಉಂಟಾಗಿತ್ತು.
ಕಾಲೇಜಿನ ಒಳಗೆ, ತರಗತಿಗಳಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ಹಿಜಾಬ್ ಧರಿಸುವಂತಿಲ್ಲ. ಮುಖ ಮುಚ್ಚಿಕೊಳ್ಳುವ ಹಾಗೆ ತರಗತಿಗಳಲ್ಲಿ ವಸ್ತ್ರ ಹಾಕಿಕೊಳ್ಳುವಂತಿಲ್ಲ. ಹಿಂದೂ ವಿದ್ಯಾರ್ಥಿಗಳು ಕೂಡ ಕೇಸರಿ ಶಲ್ಯ ಧರಿಸಿಕೊಂಡು ಕಾಲೇಜಿಗೆ ಬರುವಂತಿಲ್ಲ. ಈ ನಿಯಮಗಳನ್ನು ಧಿಕ್ಕರಿಸಿದ ವಿದ್ಯಾರ್ಥಿಗಳಿಗೆ ಟಿಸಿ ಕೊಟ್ಟು ಕಳುಹಿಸಲಾಗುವುದು ಎಂದು ಪ್ರಾಂಶುಪಾಲರು ಎಚ್ಚರಿಸಿದ್ದರು.