BC Nagesh: ಸಂಘರ್ಷ ಪರಿಸ್ಥಿತಿ ಉದ್ಭವಿಸಿದರೆ ಶಾಲಾ ಕಾಲೇಜುಗಳಿಗೆ ರಜೆ ಕೊಡಿ: ಜಿಲ್ಲಾಧಿಕಾರಿಗಳಿಗೆ ಅಧಿಕಾರ ಕೊಟ್ಟ ಕರ್ನಾಟಕ ಸರ್ಕಾರ
ರ್ನಾಟಕದಲ್ಲಿ ಸುಮಾರು ಐದು ಸಾವಿರ ಪಿಯು ಕಾಲೇಜುಗಳಿವೆ. ಈ ಪೈಕಿ ಕೇವಲ 10ರಿಂದ 12 ಕಾಲೇಜುಗಳಲ್ಲಿ ಸಂಘರ್ಷ ಉಂಟಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ (BC Nagesh) ಹೇಳಿದರು.
ಬೆಂಗಳೂರು: ಕರ್ನಾಟಕದಲ್ಲಿ ಸುಮಾರು ಐದು ಸಾವಿರ ಪಿಯು ಕಾಲೇಜುಗಳಿವೆ. ಈ ಪೈಕಿ ಕೇವಲ 10ರಿಂದ 12 ಕಾಲೇಜುಗಳಲ್ಲಿ ಸಂಘರ್ಷ ಉಂಟಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ (BC Nagesh) ಹೇಳಿದರು. ಕಾನೂನು ಸುವ್ಯವಸ್ಥೆ ಸಮಸ್ಯೆಯಾಗಿರುವ ಜಿಲ್ಲೆಗಳಲ್ಲಿ ಶಿಕ್ಷಣ ಸಂಸ್ಥೆಗಳಿಗೆ ರಜೆ ನೀಡುವ ಅಧಿಕಾರವನ್ನು ಆಯಾ ಜಿಲ್ಲಾಧಿಕಾರಗಳಿಗೆ ನೀಡಲಾಗಿದೆ. ಈಗಲೂ ರಾಜ್ಯದೆಲ್ಲೆಡೆ ಶಾಲಾ-ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಲೇ ಇವೆ. ಕೆಲವು ಕಡೆ ಯೂನಿಫಾರ್ಮ್ ಹಾಕಿಕೊಂಡು ಕಾಲೇಜುಗಳಿಗೆ ಬರುತ್ತಿದ್ದಾರೆ. ಅಂಥ ಕಾಲೇಜುಗಳಲ್ಲಿ ಹಿಜಾಬ್ (Hijab) ಮತ್ತು ಕೇಸರಿ ಶಾಲು (Saffron Shawl) ವಿವಾದ ಉದ್ಭವಿಸಿಲ್ಲ. ಬಿಜಾಪುರ, ಶಿವಮೊಗ್ಗ, ಬಾಗಲಕೋಟೆ ಸೇರಿದಂತೆ ಕೆಲವು ಕಡೆ ಮಾತ್ರ ಸಂಘರ್ಷ ಉಂಟಾಗಿದೆ ಎಂದು ಅವರು ವಿವರಿಸಿದರು.
ಜಿಲ್ಲೆಗಳ ಸ್ಥಿತಿಗತಿ ನೋಡಿಕೊಂಡು, ಡಿಡಿಪಿಐ ಸಲಹೆ ಪಡೆದು ಎರಡು ಮೂರು ದಿನ ರಜೆ ನೀಡಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಕೊವಿಡ್ ಕಾರಣದಿಂದ ಮಕ್ಕಳ ಶಿಕ್ಷಣಕ್ಕೆ ಈಗಾಗಲೇ ಹಿನ್ನಡೆ ಉಂಟಾಗಿದೆ. ಇದೀಗ ಮತ್ತೊಂದು ಕಾರಣಕ್ಕೆ ಶಿಕ್ಷಣಕ್ಕೆ ತೊಂದರೆಯಾಗಬಾರದು. ಮಕ್ಕಳು ಶಾಂತಿಯುತವಾಗಿ ಸಮವಸ್ತ್ರದಲ್ಲಿ ಬಂದು ಪರೀಕ್ಷೆ ಬರೆಯಬೇಕು ಎಂದು ಸೂಚಿಸಿದರು.
ರಾಷ್ಟ್ರಧ್ವಜ ಇಳಿಸಿ ಕೇಸರಿಧ್ವಜ ಹಾರಿಸಿದ್ದರೆ ಅದು ಖಂಡನೀಯ ಬೆಳವಣಿಗೆ. ಅಲ್ಲಿನ ಅಧಿಕಾರಿಗಳ ವರದಿ ತರಿಸಿಕೊಂಡು ತೀರ್ಮಾನ ಮಾಡುತ್ತೇವೆ. ಇಂಥ ಘಟನೆಗಳಿಂದ ಮಕ್ಕಳು ಖಂಡಿತ ಆತಂಕ್ಕೊಳಗಾಗುತ್ತಾರೆ. ಶಾಂತಿ ಕದಡುವುದು, ಕಾನೂನು ಸುವ್ಯವಸ್ಥೆಯನ್ನು ಕೈಗೆತ್ತಿಕೊಳ್ಳುವುದು ತಪ್ಪು. ಅಂಥ ಕೆಲಸವನ್ನು ಯಾರೂ ಮಾಡಬಾರದು. ಸರ್ಕಾರ ಎಲ್ಲ ಕಡೆ ಆ್ಯಕ್ಷನ್ ತೆಗೆದುಕೊಂಡಿದೆ. ಉಡುಪಿಯಲ್ಲಿ 20 ದಿನಕ್ಕೂ ಹೆಚ್ಚು ಕಾಲ ನಾವು ಶಾಂತಿ ಕಾಪಾಡಿದ್ದೆವು. ಉಡುಪಿಯ 9 ಪಿಯು ಕಾಲೇಜುಗಳಿಗೆ ವಿವಾದ ಹಬ್ಬಿರಲಿಲ್ಲ ಎಂದು ಹೇಳಿದರು.
ಮಕ್ಕಳು ಕೇವಲ ಹಿಜಾಬ್ಗೆ ಮಾತ್ರ ಬೇಡಿಕೆ ಇಟ್ಟಿಲ್ಲ. ಕೆಲ ಮಕ್ಕಳು ಶಾಲೆಯಲ್ಲಿ ನಮಾಜ್ ಮಾಡಲೂ ಅವಕಾಶ ಕೇಳಿದ್ದಾರೆ. ಈ ಬಗ್ಗೆ ಸರ್ಕಾರ ಇನ್ನೂ ಯಾವುದೇ ತೀರ್ಮಾನ ಮಾಡಿಲ್ಲ. ಕೆಲವು ರಾಜಕೀಯ ನಾಯಕರು ಈ ಘಟನೆಗೆ ತುಪ್ಪ ಸುರಿದು ಶಕ್ತಿ ತುಂಬಿದರು. ಇದರಿಂದ ಎಲ್ಲ ಕಡೆ ವಿವಾದ ಹರಡಿದೆ. ಪಾಕಿಸ್ತಾನ ಅಥವಾ ಬೇರೆ ಯಾವುದೇ ಪ್ರಚೋದನಾತ್ಮಕ ವಿಚಾರಗಳನ್ನು ಈ ವೇಳೆ ಪ್ರಸ್ತಾಪಿಸಬಾರದು. ವಿವಾದ ಬೆಳೆಸಲು ಎಸ್ಡಿಪಿಐ ಸಂಘಟನೆ ಕಾರಣ ಅಂತ ಕೆಲ ವರದಿಗಳಿಂದ ತಿಳಿದು ಬಂದಿದೆ. ಇದರ ಬಗ್ಗೆ ತನಿಖೆ ಆಗಬೇಕು ಎಂದು ಸೂಚಿಸಿದರು.
ರಾಜಕೀಯ ಬೇಳೆ ಬೇಯಿಸಿಕೊಳ್ಳಬೇಕು ಎನ್ನುವುದು ಬಿಜೆಪಿಯ ಉದ್ದೇಶವಾಗಿದ್ದರೆ ಉಡುಪಿಯಲ್ಲಿ ಒಂದು ತಿಂಗಳು ಶಾಂತಿಯನ್ನು ತಣ್ಣಗೆ ಕಾಪಾಡುತ್ತಿರಲಿಲ್ಲ. ಹಿಜಾಬ್ ಬೇಕೇಬೇಕು ಎಂಬುದು ನಿಮ್ಮ ನಿಲುವಾಗಿದ್ದರೆ ಆನ್ಲೈನ್ ಶಿಕ್ಷಣಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಅಲ್ಲಿನ ಎಸ್ಡಿಎಂ ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ ಎಂದು ವಿವರಿಸಿದರು.
ರಾಜ್ಯದಲ್ಲಿ ಹಿಜಾಬ್-ಕೇಸರಿ ಶಾಲು ವಿವಾದ ವ್ಯಾಪಕವಾಗಿ ಹಬ್ಬುವುದರ ಹಿಂದೆ ಯಾರದೋ ಪ್ರಚೋದನೆ ಇದೆ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ತನಿಖೆ ಆಗಬೇಕು ಎನ್ನುವುದು ಸರ್ಕಾರದ ನಿಲುವು. ಆದರೆ ಈವರೆಗೆ ಆದೇಶ ಹೊರಡಿಸಿಲ್ಲ ಎಂದರು.
ಇದನ್ನೂ ಓದಿ: Hijab Row: ಶಿವಮೊಗ್ಗದಲ್ಲಿ ತಾರಕಕ್ಕೇರಿದ ಕೇಸರಿ ಶಾಲು- ಹಿಜಾಬ್ ಗಲಾಟೆ; ರಾಷ್ಟ್ರಧ್ವಜ ಕೆಳಗಿಳಿಸಿ ಕೇಸರಿ ಧ್ವಜ ಹಾರಿಸಿದ ವಿದ್ಯಾರ್ಥಿ ಇದನ್ನೂ ಓದಿ: Hijab: ಕರ್ನಾಟಕದಲ್ಲಿ ಹಿಜಾಬ್-ಕೇಸರಿ ಶಾಲು ವಿವಾದ: ಶಿವಮೊಗ್ಗದಲ್ಲಿ ನಿಷೇಧಾಜ್ಞೆ, ಮಂಗಳೂರು, ಹಾಸನ, ಹರಿಹರದಲ್ಲಿ ಪ್ರತಿಭಟನೆ