ಬೆಂಗಳೂರು, ಏಪ್ರಿಲ್ 18: ರಾಜ್ಯದಲ್ಲಿ ಇಂದು ಹಾಗೂ ನಾಳೆ ಎರಡು ದಿನಗಳ ಕಾಲ ಸಿಇಟಿ ಪರೀಕ್ಷೆ (CET Exam) ನಡೆಯುತ್ತಿದೆ. ಸಿಇಟಿ ಪರೀಕ್ಷೆ ಬರೆಯುತ್ತಿರುವ ಅಭ್ಯರ್ಥಿಗಳ ಪರೀಕ್ಷಾ ಕೇಂದ್ರ ನಿಗದಿಪಡಿಸುವಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಎಡವಟ್ಟು ಮಾಡಿದೆ. ಕೆಲವು ವಿದ್ಯಾರ್ಥಿಗಳ ಹಾಲ್ ಟಿಕೆಟ್ ಸಿಗದೆ ಸಮಸ್ಯೆಯಾಗಿದ್ದರೆ ಇನ್ನು ಕೆಲವು ವಿದ್ಯಾರ್ಥಿಗಳಿಗೆ ಪರೀಕ್ಷೆ ಕೇಂದ್ರಗಳ ಪರದಾಟಕ್ಕೆ ಕಾರಣವಾಗಿದೆ.
ಸಿಇಟಿ ಪರೀಕ್ಷೆ 2024 ಗೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳಿಗೆ ಫೆಬ್ರುವರಿ ವರೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅವಕಾಶ ನೀಡಿತ್ತು. ಈ ವರ್ಷ ಪ್ರಾಧಿಕಾರದ ನೀರಿಕ್ಷೆಗೂ ಮಿರಿ ದಾಖಲೆಯ ಸಂಖ್ಯೆಯಲ್ಲಿ ಅರ್ಜಿಗಳು ಸಲ್ಲಿಕೆಯಾಗಿವೆ. ಈ ವರ್ಷ ಎಸ್ಎಸ್ಎಲ್ಸಿ ಹಾಗೂ ಪಿಯುಸಿಗೆ ಮೂರು ಮೂರು ಪರೀಕ್ಷೆಗಳು ನಡೆಯುತ್ತಿರುವ ಹಿನ್ನಲೆ ವಿದ್ಯಾರ್ಥಿಗಳ ಪಾಸಿಂಗ್ ರೇಟ್ ಹೆಚ್ಚಾಗಿರಲಿದ್ದು ವಿದ್ಯಾರ್ಥಿಗಳಿಗೆ ಕಾನ್ಫಿಡೆನ್ಸ್ ಹೆಚ್ಚಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಮುಂದಿನ ಶಿಕ್ಷಣ ಮುಂದುವರೆಸುವ ದೃಷ್ಟಿಯಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಿಇಟಿ ಪರೀಕ್ಷೆಗೆ ದಾಖಲೆಯ ಸಂಖ್ಯೆಯಲ್ಲಿ ಅರ್ಜಿಗಳನ್ನು ಹಾಕಿದ್ದಾರೆ. ಈ ವರ್ಷ 3,49637 ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಕಳೆದ ವರ್ಷಕ್ಕಿಂತ ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಬಾರಿ ಸಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ಸದ್ಯ ಮೂರು ಲಕ್ಷಕ್ಕೂ ಅಧಿಕ ಅರ್ಜಿಗಳು ಬಂದಿರೊದು ಕರ್ನಾಟಕ ಪರೀಕ್ಷಾ ಪ್ರಾಥಿಕಾರಕ್ಕೆ ತಲೆ ಬಿಸಿಯಾಗಿದೆ. ಈ ಹಿಂದೆ ಯಾವತ್ತೂ ಇಷ್ಟು ಪ್ರಮಾಣದಲ್ಲಿ ವಿದ್ಯಾರ್ಥಿಗಳು ನೊಂದಣಿ ಮಾಡಿರಲಿಲ್ಲ. ಆದರೆ, ಈ ವರ್ಷ ದಾಖಲೆಯ ಸಂಖ್ಯೆಯಲ್ಲಿ ನೊಂದಣಿಯಾಗಿದೆ. ಹೀಗಾಗಿ ಕೆಲವು ವಿದ್ಯಾರ್ಥಿಗಳಿಗೆ ಸಮಸ್ಯೆಗಳು ಕೂಡಾ ಎದುರಾಗಿವೆ.
ರಾಜ್ಯದಲ್ಲಿ 737 ಪರೀಕ್ಷಾ ಕೇಂದ್ರಗಳಲ್ಲಿ ನಡೆಯುತ್ತಿರುವ ಪರೀಕ್ಷೆಗೆ ಬೆಂಗಳೂರಿನಲ್ಲಿಯೇ 167 ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದೆ. 737 ವೀಕ್ಷಕರು, 737 ವಿಶೇಷ ಜಾಗೃತ ದಳದ ಸದಸ್ಯರು 737 ಪ್ರಶ್ನೆಪತ್ರಿಕಾ ಪಾಲಕರು, 14568 ಕೊಠಡಿ ಮೇಲ್ವಿಚಾರಕರು 20300 ಅಧಿಕಾರಿ ವರ್ಗದವರ ನಿಯೋಜನೆ ಮಾಡಲಾಗಿದೆ. ಇಂಜಿನಿಯರಿಂಗ್, ಕೃಷಿ ವಿಜ್ಞಾನ, ವೆಟರ್ನರಿ, ಫಾರ್ಮಸಿ, ನ್ಯಾಚುರೋಪಥಿ ಮತ್ತು ಯೋಗ ಹಾಗೂ ಬಿ.ಎಸ್ಸಿ (ನರ್ಸಿಂಗ್) ಮುಂತಾದ ವೃತ್ತಿಪರ ಕೋರ್ಸುಗಳ ಪ್ರವೇಶಾತಿಗೆ ಸಿಇಟಿ ಪರೀಕ್ಷೆ ನಡೆಯುತ್ತಿದೆ.
ಎಲ್ಲ ಕೇಂದ್ರಗಳಲ್ಲೂ ಪರೀಕ್ಷಾ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ವಿಡಿಯೋ ಚಿತ್ರೀಕರಣ ಮಾಡಲಾಗುತ್ತಿದ್ದು ಬೆಳಿಗ್ಗೆ 10.30ರಿಂದ 11.50ರವರೆಗೆ ಜೀವಶಾಸ್ತ್ರ, ಮಧ್ಯಾಹ್ನ 2.30ರಿಂದ 3.50 ರವರೆಗೆ ಗಣಿತ, ಎರಡನೇ ದಿನ ಬೆಳಿಗ್ಗೆ ಭೌತಶಾಸ್ತ್ರ ಮತ್ತು ಮಧ್ಯಾಹ್ನ ರಸಾಯನಶಾಸ್ತ್ರ ಪರೀಕ್ಷೆ ನಡೆಯಲಿದೆ. ಎಪ್ರಿಲ್ 20ರಂದು ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಪರೀಕ್ಷೆ ನಡೆಯಲಿದೆ.
ಬೆಂಗಳೂರು, ಬೆಳಗಾವಿ, ವಿಜಯಪುರ, ಬಳ್ಳಾರಿ ಮತ್ತು ಮಂಗಳೂರು ಪರೀಕ್ಷಾ ಕೇಂದ್ರಗಳಲ್ಲಿ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ಬಿಗಿ ಕ್ರಮಕ್ಕೆ ಇಲಾಖೆ ಪೊಲೀಸ್ ಇಲಾಖೆಗೆ ಮನವಿ ಮಾಡಿದೆ. ಪರೀಕ್ಷಾ ಕೊಠಡಿಯ ಒಳಗೆ ಯಾವುದೇ ಆಧುನಿಕ ಉಪಕರಣ ಟ್ಯಾಬ್ಲೆಟ್ ಮೊಬೈಲ್ ಕ್ಯಾಲುಕುಲೇಟರ್, ಬ್ಲೂಟೂಥ್ ಕೈಗಾಡಿಯಾರ ಅವಕಾಶ ಇಲ್ಲ ಅಂತಾ ಸ್ಪಷ್ಟನೆ ನೀಡಿದೆ.
ಸಿಇಟಿ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಿರುವ ಹಲವು ವಿದ್ಯಾರ್ಥಿಗಳ ವಾಸದ ಜಾಗದಿಂದ ದೂರ ದೂರದ ಕೇಂದ್ರಗಳಿಗೆ ಹೋಗಿ ಪರೀಕ್ಷೆ ಬರೆಯಲು ವ್ಯವಸ್ಥೆಯಾಗಿರುವುದು ಸಮಸ್ಯೆ ಸೃಷ್ಟಿಸಿದೆ. ಸಿಇಟಿಬೋರ್ಡ್ ದೂರದ ಸ್ಥಳಗಳಲ್ಲಿ ಪರೀಕ್ಷಾ ಕೇಂದ್ರ ನೀಡಿದ್ದು, ಬಿರು ಬಿಸಿಲಿನ ತಾಪದಲ್ಲಿ ಹತ್ತಿರದ ಕೇಂದ್ರಗಳನ್ನು ಬಿಟ್ಟು ದೂರದ ಕೇಂದ್ರಗಳಿಗೆ ಹೋಗಿ ಪರೀಕ್ಷೆ ಬರೆಯಬೇಕಾದ ಸ್ಥಿತಿ ಎದುರಾಗಿದೆ. ಸದ್ಯ ಪರೀಕ್ಷಾ ಪ್ರವೇಶ ಪತ್ರಿಕೆ ಪಡೆಯುವುದಕ್ಕೂ ವಿದ್ಯಾರ್ಥಿಗಳು ಕಷ್ಟಪಡಿತ್ತಿದ್ದಾರೆ. ಹಾಲ್ ಟಿಕೇಟ್ ಡೌನ್ ಲೋಡ್ ಆಗ್ತಿಲ್ಲ ಎಂಬ ಸಮಸ್ಯೆ ಒಂದೆಡೆಯಾದರೆ, ಹಾಲ್ ಟಿಕೆಟ್ ಸಿಕ್ಕಿರುವ ವಿದ್ಯಾರ್ಥಿಗಳಿಗೆ ಮನೆಯಿಂದ ದೂರದ ಊರುಗಳ ಪರೀಕ್ಷಾ ಕೇಂದ್ರ ನೀಡಲಾಗಿದ್ದು ವಿದ್ಯಾರ್ಥಿಗಳ ಪರದಾಟ ಶುರುವಾಗಿದೆ.
ಇದನ್ನೂ ಓದಿ: ಪ್ರಯತ್ನ ಯಶಸ್ಸಿಗೆ ಸೋಪಾನ: 2 ಬಾರಿ ಪಿಯುಸಿ ಫೇಲ್ ಆಗಿದ್ದ ಕರುನಾಡಿನ ಶಾಂತಪ್ಪ ಯುಪಿಎಸ್ಸಿ ಪಾಸ್
ಪರೀಕ್ಷಾ ಅಕ್ರಮ ತಡೆಗಟ್ಟುವ ನಿಟ್ಟಿನಲ್ಲಿ ಕೆಲವು ಹೊಸ ನಿಯಮಗಳನ್ನ ಕೆಇಎ ಜಾರಿ ಮಾಡಿದೆ. ಆದರೆ ಪರೀಕ್ಷೆಗಳಲ್ಲಿ ಅಕ್ರಮವನ್ನು ತಡೆಗಟ್ಟುವುದು ಅಗತ್ಯ ಎಂದು ಹತ್ತಿರದ ಪರೀಕ್ಷಾ ಕೇಂದ್ರ ನೀಡದೇ ಇರುವುದು ಎಷ್ಟು ಸರಿ ಎಂಬ ವಿರೋಧ ಕೇಳಿ ಬರ್ತಿದೆ. ವಿದ್ಯಾರ್ಥಿಗಳಿಗೆ ದೂರ ದೂರದ ಕೇಂದ್ರಗಳನ್ನು ಹಂಚಿಕೆ ಮಾಡುವ ಬದಲಿಗೆ ಪರೀಕ್ಷೆಯನ್ನು ನಿರ್ವಹಣೆ ಮಾಡುವ ಶಿಕ್ಷಕರನ್ನು ಅದಲು ಬದಲು ಮಾಡಿದರೆ ಯಾರಿಗೂ ತೊಂದರೆಯಾಗದೆ ಪರೀಕ್ಷೆ ನಿರ್ವಿಘ್ನವಾಗಿ ನಡೆಯುವಂತೆ ಆಗುತ್ತದೆ. ಅದು ಬಿಟ್ಟು ವಿದ್ಯಾರ್ಥಿಗಳಿಗೆ ಯಾಕೆ ಈ ಶಿಕ್ಷೆ ಅಂತಾ ಎಲ್ಲಡೆ ತೀವ್ರ ವಿರೋಧ ಕೇಳಿ ಬರ್ತಿದೆ. ಆದ್ರೆ ಈ ಬಗ್ಗೆ ಪ್ರತಿಕ್ರಿಯೇ ನೀಡಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಿರ್ದೇಶಕಿ ರಮ್ಯಾ, ಕೆಲವು ವಿದ್ಯಾರ್ಥಿಗಳು ತಡವಾಗಿ ಶುಲ್ಕ ಪಾವತಿಸಿದ್ದಾರೆ. ಹೀಗಾಗಿ ಈ ಸಮಸ್ಯೆಯಾಗಿದೆ. ಅದು ಬಿಟ್ರೆ ಬೇರೆಯಾವುದೆ ಸಮಸ್ಯೆ ಇಲ್ಲ ನಾವು ಸುರಕ್ಷಿತವಾಗಿ ಪರೀಕ್ಷೆ ನಡೆಸಲು ಸಕಲ ಸಿದ್ಧತೆ ಮಾಡಿದ್ದೇವೆ ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ