ಪ್ರಯತ್ನ ಯಶಸ್ಸಿಗೆ ಸೋಪಾನ: 2 ಬಾರಿ ಪಿಯುಸಿ ಫೇಲ್ ಆಗಿದ್ದ ಕರುನಾಡಿನ ಶಾಂತಪ್ಪ ಯುಪಿಎಸ್‌ಸಿ ಪಾಸ್
ಜೀವನದಲ್ಲಿ ಒಂದು ನಿರ್ದಿಷ್ಟ ಗುರಿ, ಸಾಧಿಸಬಲ್ಲೆನೆಂಬ ಛಲದೊಂದಿಗೆ ಮುನ್ನಡೆಯಿರಿ ಯಶಸ್ಸು ನಿಮ್ಮದಾಗುತ್ತದೆ ಎನ್ನುವ ನಾಣ್ಣುಡಿಗಳು ಸುಳ್ಳಾಗುವುದಿಲ್ಲ. ಹೌದು..ಎರಡು ಪಿಯುಸಿಯಲ್ಲಿ ಬಾರಿ ಫೇಲ್ ಆಗಿ ಬಳಿಕ ಸತತ ಪ್ರಯತ್ನದಿಂದ ಸಬ್ಇನ್ಸ್ಪೆಕ್ಟರ್ ಆಗಿ ಇದೀಗ ಕನ್ನಡದಲ್ಲೇ ಯುಪಿಎಸ್‌ಸಿ ಪರೀಕ್ಷೆಯನ್ನು ಪಾಸ್ ಮಾಡಿದ್ದಾರೆ. ಹಾಗಾದ್ರೆ, ಯಾರು ಅವರು? ಈಗ ಸನ್ಇನ್ಸ್ಪೆಕ್ಟರ್ ಆಗಿ ಎಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನುವ ವಿವರ ಇಲ್ಲಿದೆ.
ಬೆಂಗಳೂರು/ಬಳ್ಳಾರಿ, (ಏಪ್ರಿಲ್ 16) 2023ರ ಸೆಪ್ಟೆಂಬರ್ 15 ರಿಂದ 24 ರ ನಡುವೆ ನಡೆದಿದ್ದ ನಾಗರೀಕ ಸೇವೆಗಳ ಅಂತಿಮ ಪರೀಕ್ಷೆ ಫಲಿತಾಂಶ(UPSC Civil Services 2023 Result) ಪ್ರಕಟವಾಗಿದೆ. ಒಟ್ಟು 1016 ಅಭ್ಯರ್ಥಿಗಳು ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು, ಅವರನ್ನು ಕೇಂದ್ರ ವಿವಿಧ ಸೇವೆಗಳಿಗೆ ಶಿಫಾರಸು ಮಾಡಲಾಗಿದೆ ಎಂದು ಲೋಕಸೇವ ಆಯೋಗ ತಿಳಿಸಿದೆ. ಇದರಲ್ಲಿ ನಮ್ಮ ಕರ್ನಾಟಕದ ಶಾಂತಪ್ಪ ಜಡೆಮ್ಮನವರ್ (Shantappa Jademmanavar)ಎನ್ನುವರು ಕನ್ನಡದಲ್ಲೇ ಯುಪಿಎಸ್‌ಸಿ ಪರೀಕ್ಷೆ ಪಾಸ್ ಮಾಡಿ ಸೈ ಎನಿಸಿಕೊಂಡಿದ್ದಾರೆ. ಹೌದು….ಬಳ್ಳಾರಿ ಮೂಲಕ ಶಾಂತಪ್ಪ ಅವರು ಪಿಯುಸಿಯಲ್ಲಿ ಎರಡು ಬಾರಿ ಫೇಲ್ ಆಗಿದ್ದವರು. ಆದರೂ ತಮ್ಮ ಗುರಿ, ಛಲ ಕೈಬಿಡದ ಶಾಂತಪ್ಪ ಪಿಯುಸಿ ತೇರ್ಗಡೆಯಾಗಿ ಇನ್‌ಸ್ಪೆಕ್ಟರ್ ಹುದ್ದೆಗೆ ಏರಿದ್ದಾರೆ. ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ಶಾಂತಪ್ಪ ಯುಪಿಎಸ್‌ಸಿ ಪರೀಕ್ಷೆಯಲ್ಲೂ ಸಹ ಪಾಸಾಗಿದ್ದಾರೆ.
ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದಿದ್ದ ಶಾಂತಪ್ಪ ಅವರು 644 ರ್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ. ಬಳ್ಳಾರಿ ಮೂಲದವರಾದ ಶಾಂತಪ್ಪ ಜಡೆಮ್ಮನವರ್ ಪಿಯುಸಿಯಲ್ಲಿ 2 ಬಾರಿ ಫೇಲ್ ಆಗಿದ್ದರು. ಬಳಿಕ ಸತತ ಪ್ರಯತ್ನದಿಂದ ಪಿಯುಸಿ ಪಾಸ್ ಮಾಡಿಕೊಂಡು ಬಳಿಕ ಪದವಿ ಮುಗಿಸಿ ಅದರ ಮೇಲೆ 2015ರಲ್ಲಿ PSI ಹುದ್ದೆಗೆ ಆಯ್ಕೆಯಾಗಿದ್ದರು. ಸದ್ಯ ಇವರು ಬೆಂಗಳೂರಿನ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ: UPSC Exam Result 2023: ಯುಪಿಎಸ್‌ಸಿ ಫಲಿತಾಂಶ ಪ್ರಕಟ, ಆದಿತ್ಯ ಶ್ರೀವಾಸ್ತವ ದೇಶಕ್ಕೆ ಟಾಪರ್
ಜ್ಞಾನವು ವ್ಯಕ್ತಿಯಲ್ಲಿ ವಿವೇಕವನ್ನು ಮೂಡಿಸುತ್ತದೆ. ಆದರೆ, ಅಂಥ ಜ್ಞಾನ ಪಡೆದರಷ್ಟೇ ಸಾಲದು. ಅದನ್ನು ವಿವೇಚನೆಯಿಂದ ಬಳಸಿಕೊಳ್ಳುವ ಕಲೆಯೂ ತಿಳಿದಿರಬೇಕು. ಒಂದು ದೃಢ ನಿರ್ಧಾರ, ನಿರ್ದಿಷ್ಟ ಗುರಿ, ಆತ್ಮವಿಶ್ವಾಸ, ಸಾಧಿಸಬೇಕೆಂಬ ಛಲದ ಜತೆಗೆ ನಿರಂತರ ಪ್ರಯತ್ನಶೀಲರಾದವರಿಗೆ ಯಶಸ್ಸು ಒಲಿಯುವುದು ಖಂಡಿತ ಎನ್ನುವುದಕ್ಕೆ ಶಾಂತಪ್ಪ ಉದಾಹರಣೆಯಾಗಿದ್ದಾರೆ.
ಯಾರೂ ಈ ಶಾಂತಪ್ಪ ಜಡೆಮ್ಮನವರ್?
ಬಳ್ಳಾರಿ ಜಿಲ್ಲೆ ಕುರಗೋಡು ತಾಲೂಕಿನ ಪುಟ್ಟ ಹಳ್ಳಿಯಲ್ಲಿ ಹುಟ್ಟಿದ ಶಾಂತಪ್ಪ, ಹುಟ್ಟಿದ ವರ್ಷದೊಳಗೆ ತಂದೆಯನ್ನು ಕಳೆದುಕೊಂಡರು. ಅಮ್ಮ ಇದ್ದ ಸ್ವಲ್ಪ ಹೊಲದಲ್ಲಿ ಕೆಲಸ ಮಾಡುವ ಜತೆಗೆ ಕೂಲಿ ಮಾಡುತ್ತಿದ್ದರು. ಸರ್ಕಾರಿ ಶಾಲೆಗಳಲ್ಲಿ ಓದಿಕೊಂಡು ಬಂದ ಶಾಂತಪ್ಪ ಸರ್ಕಾರಿ ಸೇವೆಗೆ ಸೇರುವ ಗರಿ ಹೊಂದಿದ್ದರು. ಆದ್ರೆ, ಪಿಯುಸಿಯಲ್ಲಿ ಎರಡು ಬಾರಿ ಅನುತ್ತೀರ್ಣರಾಗಿದ್ದರು. ಆದರೂ ಛಲ ಬಿಡಿದ ಶಾಂತಪ್ಪ ಸತತ ಪ್ರಯತ್ನ ಮಾಡಿ ಪದವಿ ಮಗುಸಿಕೊಂಡು ಬಳಿಕ ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಮನಸು ಮಾಡಿದ್ದರು. ಕೊನೆಗೆ ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಪಾಸ್ ಆಗಿದ್ದರು. ಶಾಂತಪ್ಪ ಜಡೆಮ್ಮನವರು ಪೊಲೀಸ್ ಇಲಾಖೆಯಲ್ಲಿಯೇ ಇದ್ದು ಮಾಡುತ್ತಿರುವ ಸಮಾಜ ಸೇವೆಗೆ ಪೊಲೀಸ್ ಇಲಾಖೆಯಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ. ಸದ್ಯ ವಿಧಾನಸೌಧ ಭದ್ರತಾ ವಿಭಾಗದಲ್ಲಿ ಪಿಎಸ್ಐ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಆರು ಕೆಲಸ ಸಿಕ್ಕಿದ್ರೂ ಆಯ್ಕೆ ಮಾಡಿಕೊಂಡಿದ್ದು ಪಿಎಸ್ಐ
ಇನ್ನು ಶಾಂತಪ್ಪ ಈವರೆಗೂ ಸುಮಾರು ಐದಾರು ಸರ್ಕಾರಿ ಕೆಲಸ ಗಿಟ್ಟಿಸಿಕೊಂಡಿದ್ದಾರೆ. ಅವರಿಗೆ ಮೊದಲು ಸಿಕ್ಕಿದ್ದು ಕೆನರಾ ಬ್ಯಾಂಕ್‌ನಲ್ಲಿ ಕೆಲಸ. ಆದರೆ, ಬ್ಯಾಂಕ್ ಉದ್ಯೋಗ ಇಷ್ಟವಿಲ್ಲದಿದ್ದರಿಂದ ಆ ಕೆಲಸಕ್ಕೆ ಹೋಗಲಿಲ್ಲ. ಆ ನಂತರ ಎರಡು ಬಾರಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಂದರ್ಶನಕ್ಕೆ ಹೋಗಿ ಬಂದಿದ್ದರಂತೆ. ಅದೇ ರೀತಿ ಕೆಪಿಎಸ್‌ಸಿ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ ಎರಡು ಬಾರಿ ಸಂದರ್ಶನಕ್ಕೆ ಹೋಗಿ ಬಂದಿದ್ದರು. ಜನರ ಕಷ್ಟಕ್ಕೆ ನೇರವಾಗಿ ಸ್ಪಂದಿಸುವ ಸಲುವಾಗಿ ಪಿಎಸ್ಐ ಹುದ್ದೆ ಅಯ್ಕೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಅಭಿಯಾನಕ್ಕೆ ಕ್ಯಾರೇ ಎನ್ನದ ಬಿಬಿಎಂಪಿ, ಸ್ವಂತ ಖರ್ಚಿನಲ್ಲೇ ಮೊಬೈಲ್ ಶೌಚಾಲಯ ನಿರ್ಮಾಣ ಮಾಡಿದ ಪಿಎಸ್ಐ!
ಸಾಮಾಜಿಕ ಕಾರ್ಯದಲ್ಲೂ ಎತ್ತಿದ ಕೈ
ಹೌದು…ಇವರು ಕೇವಲ ಪೊಲೀಸ್ ಮಾತ್ರವಲ್ಲ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ವಿರಾಮದ ಸಮಯದಲ್ಲಿ ಬಡ, ನಿರ್ಗತಿಕ ಮಕ್ಕಳಿಗೆ ಶಿಕ್ಷಣ ಹೇಳಿಕೊಡುವುದು, ಅವರಿಗೆ ಸೂರು, ಟಾಯ್ಲೆಟ್ ಕಟ್ಟಿಸಿಕೊಟ್ಟಿದ್ದಾರೆ. ಬಡತನದ ಹಿನ್ನೆಲೆಯಿಂದ ಬಂದ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ತನ್ನ ಮಾನವೀಯ ಕೆಲಸಗಳಿಂದ ಬೆಂಗಳೂರಿನಲ್ಲಿ ‘ಸಾಮಾಜಿಕ ಕಳಕಳಿಯ ಹೀರೋ’ ಆಗಿ ಜನ ಮನ್ನಣೆ ಗಳಿಸಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ಶ್ರೀಮಂತರ ಮಕ್ಕಳಿಗೆ ಆನ್ ಲೈನ್ ನಲ್ಲಿ ಶಿಕ್ಷಣ ಸಿಗುತಿತ್ತು. ಆದರೆ ಈ ಬಡ ಮಕ್ಕಳಿಗೆ ಅತ್ತ ಆನ್ ಲೈನ್ ಶಿಕ್ಷಣವೂ ಇಲ್ಲ, ಇತ್ತ ಶಾಲೆಯೂ ಇರಲಿಲ್ಲ. ಹೀಗಾಗಿ ಪಿಎಎಸ್ಐ ಶಾಂತಪ್ಪ ಅವರು ಬಡ ನಿರ್ಗತಿಕ ಮಕ್ಕಳಿಗೂ ಸಹ ಪಾಠ ಮಾಡಿದ್ದಾರೆ. ಗಣಿತ, ಸಾಮಾನ್ಯ ಜ್ಞಾನ ಮತ್ತು ಮೌಲ್ಯಾಧಾರಿತ ಶಿಕ್ಷಣ ಹೀಗೆ ಪ್ರಮುಖವಾಗಿ ಮೂರು ವಿಷಯಗಳನ್ನು ಹೇಳಿಕೊಡುತ್ತಾರೆ. ಸದ್ಯ ಇವರ ಬಳಿ ಸುಮಾರು 50 ಮಕ್ಕಳು ಕಲಿಯುತ್ತಿದ್ದಾರೆ.
ಗೊರಗುಂಟೆಪಾಳ್ಯದಲ್ಲಿ ಮೊಬೈಲ್ ಟಾಯ್ಲೆಟ್
ಪಿಎಸ್ಐ ಶಾಂತಪ್ಪ ಅವರ ತಾಯಿ ಬೆಂಗಳೂರಿಗೆ ಬಂದಿದ್ದರಂತೆ. ಗೊರಗುಂಟೆ ಪಾಳ್ಯದಲ್ಲಿ ಬಸ್ ಇಳಿದಾಗ ಮೂತ್ರ ಹೋಗಬೇಕೆಂದು ಕೇಳಿದ್ದಾರೆ. ಅಲ್ಲಿ ಮೂತ್ರ ವಿರ್ಸಜನೆಗೆ ಜಾಗ ನೋಡಿದಾಗ ಶಾಂತಪ್ಪನಿಗೆ ಎಲ್ಲೂ ಕಾಣಲಿಲ್ಲ. ಬಳಿಕ ಸಮೀಪದ ಖಾಸಗಿ ಆಸ್ಪತ್ರೆಯ ಶೌಚಾಲಯಕ್ಕೆ ಕರೆದುಕೊಂಡು ಹೋಗಿ ಬಂದಿದ್ದಾರೆ. ಸದಾ ಪ್ರಯಾಣಿಕರಿಂದ ಗಿಜಿಗುಡುವ ಗೊರಗುಂಟೆ ಪಾಳ್ಯದಲ್ಲಿ ಒಂದು ಶೌಚಾಲಯ ಇಲ್ಲವಲ್ಲ ಎಂದು ಬೇಸರಗೊಂಡಿದ್ದ ಶಾಂತಪ್ಪ ಜಡೆಮ್ಮನವರ್, ಗೊರಗುಂಟೆ ಪಾಳಯದಲ್ಲಿ ಸಾರ್ವಜನಿಕ ಶೌಚಾಲಯ ಕಟ್ಟಿಕೊಡಿ ಎಂದು ಆನ್‌ಲೈನ್ ಅಭಿಯಾನ ಆರಂಭಿಸಿದ್ದರು. ನೂರು ದಿನ ಅಭಿಯಾನ ನಡೆದರೂ ಬಿಬಿಎಂಪಿಯಾಗಲೀ, ಸ್ಥಳೀಯ ಜನಪ್ರತಿನಿಧಿಗಳಾಗಲೀ ತಲೆ ಕೆಡಿಸಿಕೊಳ್ಳಲಿಲ್ಲ. ಅಂತಿಮವಾಗಿ ತನ್ನ ಅಭಿಯಾನಕ್ಕೆ ಬೆಂಬಲ ನೀಡಿದವರ ನೆರವುನಿಂದಲೇ ಅಭಿಯಾನದ ನೂರನೇ ದಿನಕ್ಕೆ ಶಾಂತಪ್ಪ ಅವರೇ ಸ್ವತಃ ಮೊಬೈಲ್ ಟಾಯ್ಲೆಟ್ ಕಟ್ಟಿಸಿ ಮಾನವೀಯತೆ ಮೆರೆದಿದ್ದಾರೆ. ಶಾಂತಪ್ಪ ಅವರು ಸಾರ್ವಜನಿಕರಿಗೆ ಕಲ್ಪಿಸಿರುವ ಮೊಬೈಲ್ ಟಾಯ್ಲೆಟ್ , ಅವರ ಸಾಮಾಜಿಕ ಕಳಕಳಿ ಇದೀಗ ಬೆಂಗಳೂರಿನಲ್ಲಿ ಸದ್ದು ಮಾಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:08 pm, Tue, 16 April 24