AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಭಿಯಾನಕ್ಕೆ ಕ್ಯಾರೇ ಎನ್ನದ ಬಿಬಿಎಂಪಿ, ಸ್ವಂತ ಖರ್ಚಿನಲ್ಲೇ ಮೊಬೈಲ್ ಶೌಚಾಲಯ ನಿರ್ಮಾಣ ಮಾಡಿದ ಪಿಎಸ್​ಐ!

ಅಭಿಯಾನಕ್ಕೂ ಜಗ್ಗದ ಬಿಬಿಎಂಪಿಗೆ ಸೆಡ್ಡು ಹೊಡೆದ ಪಿಎಸ್​ಐ ಶಾಂತಪ್ಪ ಅವರು ಬೆಂಗಳೂರಿನ ಗೊರಗುಂಟೆಪಾಳ್ಯದಲ್ಲಿ ತಮ್ಮ ಸ್ವಂತ ಹಣದಲ್ಲೇ ಮೊಬೈಲ್ ಶೌಚಾಲಯವನ್ನು ನಿರ್ಮಾಣ ಮಾಡಿ ಗಮನಸೆಳೆದಿದ್ದಾರೆ. ಇವರ ಕಾರ್ಯ ಜನಮೆಚ್ಚುಗೆ ಪಾತ್ರವಾಗಿದೆ.

ಅಭಿಯಾನಕ್ಕೆ ಕ್ಯಾರೇ ಎನ್ನದ ಬಿಬಿಎಂಪಿ, ಸ್ವಂತ ಖರ್ಚಿನಲ್ಲೇ ಮೊಬೈಲ್ ಶೌಚಾಲಯ ನಿರ್ಮಾಣ ಮಾಡಿದ ಪಿಎಸ್​ಐ!
ಮೊಬೈಲ್ ಶೌಚಾಲಯ
TV9 Web
| Edited By: |

Updated on: Jun 17, 2022 | 2:31 PM

Share

ಕೆಲವೊಮ್ಮೆ ಸರ್ಕಾರ ಅಥವಾ ಸ್ಥಳೀಯ ಆಡಳಿತವು ಜನಸಾಮಾನ್ಯರ ಸಮಸ್ಯೆಗೆ ಕಿವಿಕೊಡುವುದೇ ಇಲ್ಲ. ಈ ವೇಳೆ ವಿಧಿ ಇಲ್ಲದೆ ಮಾಡಬೇಕಾದ ಕೆಲಸವನ್ನು ಜನರೇ ಕೂಡಿ ಮಾಡುತ್ತಾರೆ. ಅದೇ ರೀತಿ ಬೆಂಗಳೂರು ನಗರದ ಗೊರಗುಂಟೆಪಾಳ್ಯದಲ್ಲಿನ ಶೌಚಾಲಯದ ಸಮಸ್ಯೆಗೆ ಬಿಬಿಎಂಪಿ ಸ್ಪಂದಿಸಲೇ ಇಲ್ಲ. ಇದೇ ಕಾರಣಕ್ಕೆ ಪಿಎಸ್​ಐ (PSI) ಒಬ್ಬರು ತನ್ನ ಸ್ವಂತ ಖರ್ಚಿನಲ್ಲೇ  ಮೊಬೈಲ್ ಶೌಚಾಲಯ (mobile toilet)ವನ್ನು ನಿರ್ಮಾಣ ಮಾಡಿ ಗಮನಸೆಳೆದಿದ್ದಾರೆ.

ಇದನ್ನೂ ಓದಿ: ಭೂಸ್ವಾಧೀನ ಮಾಡಿಕೊಂಡ ಜಮೀನು ಮಾರುಕಟ್ಟೆ ದರದಲ್ಲಿ ಖರೀದಿಸುವಂತೆ ಸಚಿವ ಮುರುಗೇಶ್​ ನಿರಾಣಿಗೆ ರೈತರ ಒತ್ತಾಯ

ಗೊರಗುಂಟೆಪಾಳ್ಯದ ಬಸ್​ ನಿಲ್ದಾಣದ ಬಳಿ ಅರ್ಜೆಂಟಾಗಿ ಬಂದರೂ ಹೋಗಲು ಶೌಚಾಲಯವಿಲ್ಲದೆ ಪ್ರಯಾಣಿಕರು ಸಮಸ್ಯೆಯನ್ನು ಎದುರಿಸುತ್ತಿದ್ದರು. ಈ ಬಗ್ಗೆ ಬಿಬಿಎಂಪಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಬಿಬಿಎಂಪಿಯ ಗಮನ ಸೆಳೆಯುವ ನಿಟ್ಟಿನಲ್ಲಿ ಕೊನೆಯ ಪ್ರಯತ್ನವೆಂಬಂತೆ 100 ದಿನಗಳ ಕಾಲ ಶೌಚಾಲಯ ನಿರ್ಮಾಣಕ್ಕೆ ಅಭಿಯಾನ ಆರಂಭಿಸಲಾಯಿತು. ಆದರೂ ಬಿಬಿಎಂಪಿ ಕ್ಯಾರೇ ಎಂದಿಲ್ಲ. ಇನ್ನು ಕಾದರೂ ಪ್ರಯೋಜನವಿಲ್ಲ ಎಂದು ಅರಿತ ಪೊಲೀಸ್ ಸಬ್​ಇನ್ಸ್ಪೆಕ್ಟರ್ ಶಾಂತಪ್ಪ ಜಡೆಮ್ಮನವರ್ ಮತ್ತು ತಂಡದವರು ಮೊಬೈಲ್ ಶೌಚಾಲಯ ನಿರ್ಮಾಣಕ್ಕೆ ಮುಂದಾಗಿದ್ದಾರೆ.

ಪಿಎಸ್​ಐ ಮತ್ತು ತಂಡದವರು ತಮ್ಮ ಸ್ವಂತ ಖರ್ಚಿನಲ್ಲೇ ಗೊರಗುಂಟೆಪಾಳ್ಯ ಬಸ್​ ನಿಲ್ದಾಣದ ಬಳಿ ಮೊಬೈಲ್ ಶೌಚಾಲಯವನ್ನು ನಿರ್ಮಾಣ ಮಾಡಿ ಸಾರ್ವಜನಿಕರ ಬಳಕೆಗೆ ಅನುವು ಮಾಡಿಕೊಟ್ಟಿದ್ದಾರೆ. ಈ ಶೌಚಾಲಯವನ್ನು ಉದ್ಘಾಟಿಸಲು ಯಾವುದೇ ಅಧಿಕಾರಿಗಳನ್ನು ಕರೆಯದೆ ಓರ್ವ ಮಂಗಳಮುಖಿಯಿಂದ ಉದ್ಘಾಟಿಸಿರುವುದು ಗಮನಾರ್ಹವಾಗಿದೆ. ಸಮಾಜದಿಂದ ದೂರವಿಡುವ ಈ ಕಾಲದಲ್ಲಿ ತಮ್ಮನ್ನು ಆಹ್ವಾನಿಸಿ ಉದ್ಘಾಟಿಸಿರುವುದಕ್ಕೆ ಮಂಗಳಮುಖಿಯೊಬ್ಬರು ಭಾವುಕರಾಗಿದ್ದಾರೆ.

ಇದನ್ನೂ ಓದಿ: ಜಿದ್ದಾಜಿದ್ದಿಗೆ ಬಿದ್ದ ಬಿಬಿಎಂಪಿ Vs ವಕ್ಫ್ ಬೋರ್ಡ್: ಬಿಬಿಎಂಪಿಗೆ ನಾವು ಯಾಕೆ ದಾಖಲೆ ಕೊಡಬೇಕು? ಎಂದ ವಕ್ಫ್ ಬೋರ್ಡ್ ಅಧ್ಯಕ್ಷ

ಮೊಬೈಲ್ ಶೌಚಾಲಯ ನಿರ್ಮಾಣ ಕಾರ್ಯಕ್ಕೆ ಪೊಲೀಸ್ ಇಲಾಖೆ ಮತ್ತು ಸಿಬ್ಬಂದಿ, ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಶಾಂತಪ್ಪ, ಬೇರೆ ಬೇರೆ ಜಿಲ್ಲೆಗಳಿಂದ ಜನ ಬಸ್​ ಮೂಲಕ ಬರುವ ಹಾಗೂ ಹತ್ತುವ ಸ್ಥಳ ಇದಾಗಿದೆ. ಇಲ್ಲಿ ಶೌಚಾಲಯದ ವ್ಯವಸ್ಥೆ ಇಲ್ಲವಾಗಿದ್ದರಿಂದ ಪ್ರಯಾಣಿಕರು ಯಾತನೆ ಅನುಭವಿಸುತ್ತಿದ್ದರು. ಕೆಲವರು ರಸ್ತೆಬದಿ ಮೂತ್ರ ವಿಸರ್ಜನೆ ಮಾಡುತ್ತಿದ್ದರು. ಇದರಿಂದಾಗಿ ದುರ್ನಾತ ಬೀರುತ್ತಿತ್ತು. ಈ ಸಮಸ್ಯೆ ನಿವಾರಣೆಗಾಗಿ ಶೌಚಾಲಯ ನಿರ್ಮಾಣ ಮಾಡಲಾಗಿದೆ ಎಂದರು.

ಹೇಗಿದೆ ಶೌಚಾಲಯ?

ಸಾರ್ವಜನಿಕರ ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ಪಿಎಸ್​ಐ ಶಾಂತಪ್ಪ ಮತ್ತು ತಂಡದವರು ನಿರ್ಮಾಣ ಮಾಡಿದ ಮೊಬೈಲ್ ಶೌಚಾಲಯದಲ್ಲಿ 10 ಶೌಚಾಲಯಗಳಿವೆ. ಇದು ತುಂಬಿದ ನಂತರ ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ವ್ಯವಸ್ಥೆ ಮಾಡಲಾಗಿದೆ. ಇದರ ಜವಾಬ್ದಾರಿಯನ್ನು ಕೆಲವು ಸ್ವಯಂಸೇವಕರು ವಹಿಸಿಕೊಂಡಿದ್ದು, ಇವರ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚೆಗೆ ವ್ಯಕ್ತಪಡಿಸುತ್ತಿದ್ದಾರೆ.

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ