ಮಾರ್ಚ್ ತಿಂಗಳು ಎಂದರೆ ಪರೀಕ್ಷೆಯ ಸೀಸನ್ (Exam Season) ಪ್ರಾರಂಭವಾದಂತೆ. SSLC, PUC, ಜೊತೆಗೆ CET, JEE ಗಳಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು (Students) ತಯಾರಿ ನಡೆಸುತ್ತಾರೆ. ಇಂತಹ ಸಮಯದಲ್ಲಿ ಮಕ್ಕಳು ಧೈರ್ಯ ಕೆಡುವುದು, ಒತ್ತಡಕ್ಕೆ ಸಿಲುಕುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಶಾಲೆ ತಮ್ಮ ರ‍್ಯಾಂಕಿಂಗ್ ಸಲುವಾಗಿ ಮಕ್ಕಳಿಗೆ ಒತ್ತಡ ಹಾಕಿದರೆ, ಪೋಷಕರು ಹೆಚ್ಚಿನ ಅಂಕ ಪಡೆಯಲು ಮಕ್ಕಳ ಮೇಲೆ ಒತ್ತಡ ಹೇರುತ್ತಾರೆ. ಇದೀಗ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಜೊತೆಗೆ ಪೋಷಕರೂ ಯಾವ ರೀತಿ ಪರೀಕ್ಷೆಯ ತಯಾರಿ ಮಾಡಬೇಕು ಎಂದು ಬಾಳಿಲ ವಿದ್ಯಾಬೋಧಿನಿ ಶಾಲೆಯ ನಿವೃತ್ತ ಶಿಕ್ಷಕ ಹಾಗೂ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಪಿ.ಎನ್ ಭಟ್ ಅವರು ಕೆಲವು ಸಲಹೆಗಳನ್ನು ನೀಡಿದ್ದಾರೆ.
ಪರಿಕ್ಷೆಯನ್ನು ಸಾಮಾನ್ಯವಾಗಿ ಯುದ್ಧಕ್ಕೆ ಹೋಲಿಸುತ್ತಾರೆ. ಪರೀಕ್ಷೆಯನ್ನು ಎದುರಿಸುವುದು ಏನು ಹೇಳುತ್ತಾರೆ. ಆದರೆ ಪರೀಕ್ಷೆಯನ್ನು ಬರ ಮಾಡಿಕೊಳ್ಳಬೇಕು. ಪರೀಕ್ಷೆ ಎಂಬುದು ಯುದ್ಧವಲ್ಲ ಅದನ್ನು ಒಂದು ಹಬ್ಬದಂತೆ ಕಾಣಬೇಕು. ಹಬ್ಬ, ಅಥವಾ ಉತ್ಸವಕ್ಕೆ ನಾವು ಹೇಗೆ ಕೆಲವು ತಿಂಗಳು ಮುಂಚೆಯೇ ತಯಾರಿ ಶುರು ಮಾಡುತ್ತೇವೋ ಅದೇ ರೀತಿ ಪರೀಕ್ಷೆಯನ್ನು ಪರಿಗಣಿಸಬೇಕು.
ಬೋರ್ಡ್ ಪರೀಕ್ಷೆ ಅಥವಾ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ವಿದ್ಯಾರ್ಥಿಗಳು ತಮ್ಮ ಶಾಲೆಯಲ್ಲದೆ ತಮಗೆ ನಿಗದಿಪಡಿಸಿರುವ ಶಾಲೆಯಲ್ಲಿ ಬರೆಯುತ್ತಾರೆ. ಉತ್ತರ ಪತ್ರಿಕೆಯನ್ನು ತಮಗೆ ತಿಳಿಯದೆ ಇರುವ ಶಿಕ್ಷಕರು ತಿದ್ದುತ್ತಾರೆ, ಹೀಗಿರುವಾಗ ವಿದ್ಯಾರ್ಥಿಗಳು ಆತಂಕಕ್ಕೆ ಒಳಗುಗುವುದು ಸಹಜ. ಆದರೆ ಪ್ರತಿ ವಿದ್ಯಾರ್ಥಿಯು ಧನಾತ್ಮಕ ಚಿಂತನೆಯನ್ನು ರೂಡಿಸಿಕೊಳ್ಳಬೇಕು. “ಪರೀಕ್ಷೆಯಲ್ಲಿ ಬರುವ ಸಾಕಷ್ಟು ಉತ್ತರಗಳು ನನಗೆ ತಿಳಿದಿರುತ್ತದೆ. ಪರೀಕ್ಷೆಗೆ ನಾನು ನನ್ನ ಶಕ್ತಿ ಮೀರಿ ತಯಾರಾಗಿದ್ದೇನೆ ಹಾಗಾಗಿ ನನಗೆ ಪರೀಕ್ಷೆ ಸುಲಭವಾಗಿರುತ್ತದೆ.” ಈ ರೀತಿಯ ಪಾಸಿಟಿವ್ ಆಲೋಚನೆಗಳನ್ನು ವಿದ್ಯಾರ್ಥಿ ಹೊಂದಿರಬೇಕು.
ಈಗಾಗಲೇ ಪರೀಕ್ಷೆಗಳು ಪ್ರಾರಂಭವಾಗಿರುವುದರಿಂದ ವಿದ್ಯಾರ್ಥಿಗಳಿಗೆ ಕೊನೆ ಕ್ಷಣದ ತಯಾರಿಗಳನ್ನು ಮಾಡಲು ಅವಕಾಶವಿದೆ. ಇಂತಹ ಸಮಯದಲ್ಲಿ ನೀವು ಈಗಾಗಲೇ ಏನು ಓದಿರುತ್ತೀರೋ ಅದನ್ನು ಸಂಕ್ಷಿಪ್ತವಾಗಿ ಬರೆದಿರಬೇಕು, ಹಾಗು ಅದನ್ನು ಈ ಸಮಯದಲ್ಲಿ ಓದಬೇಕು. ಅಂದರೆ ಉದಾಹರಣೆಗೆ 10 ಪುಟಗಳ ಒಂದು ಅಧ್ಯಾಯವನ್ನು ನೀವು 2 ಪುಟಗಳ ಒಳಗೆ ಸಂಕ್ಷಿಪ್ತವಾಗಿ ಬರೆದು ತಯಾರಿಸಿರಬೇಕು. ಎಲ್ಲ ವಿಷಯಗಳಿಗೂ ಈ ರೀತಿಯ ಸಂಕ್ಷಿಪ್ತವಾದ ಟಿಪ್ಪಣಿಗಳನ್ನು ತಯಾರಿಸುವ ಅಭ್ಯಾಸ ಬೆಳೆಸಿಕೊಳ್ಳಿ. ಈಗಾಗಲೇ ನಿಮಗೆ ಸುಲಭವಿರುವ ವಿಷಯವನ್ನು ಪುನಃ ಪುನಃ ಓದಿ ಸಮಯ ಹಾಳು ಮಾಡಬೇಡಿ.
ವಿದ್ಯಾರ್ಥಿಗಳು ಮೊದಲು ಮಾದರಿ ಪ್ರಶ್ನೆ ಪತ್ರಿಕೆಯನ್ನು ಓದಿರಬೇಕು. ಪ್ರಶ್ನೆ ಪತ್ರಿಕೆಯ ಮಾದರಿ ವಿದ್ಯಾರ್ಥಿಗಳಿಗೆ ಕಾರಗತವಾಗಿರಬೇಕು. ಅಂದರೆ ಎಷ್ಟು ಬಹು ಆಯ್ಕೆಯ ಪ್ರಶ್ನೆಗಳಿವೆ, 1 ಅಂಕ, 5 ಅಂಕ, 12 ಅಂಕದ ಪ್ರಶ್ನೆಗಳಿವೆ ಎಂಬುದು ತಿಳಿದಿರಬೇಕು. ಇದಕ್ಕೆ ಅನುಗುಣವಾಗಿ ಸಮಯವನ್ನು ವಿಭಜಿಸಿ ಪರೀಕ್ಷೆಯನ್ನು ಬರೆಯುವುದನ್ನು ವಿದ್ಯಾರ್ಥಿಗಳು ಮಾದರಿ ಪ್ರಶ್ನೆ ಪತ್ರಿಕೆಗಳ ಮೂಲಕ ಕಲಿತಿರಬೇಕು. ಪರೀಕ್ಷೆಯ ಹಿಂದಿನ ದಿನ ಟೆಕ್ಸ್ಟ್ ಬುಕ್ ಹಾಗು ನೋಟ್ಸ್ ಅನ್ನು ಮಾತ್ರ ಓದುವುದು ಉತ್ತಮ.
ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ 30 ನಿಮಿಷದ ಮೊದಲೇ ತಲುಪಿ, ಕನಿಷ್ಠ 15 ನಿಮಿಷದ ಮೊದಲು ತಮ್ಮ ಕೊಠಡಿಯಲ್ಲಿ ಕುಳಿತಿರಬೇಕು. ಪ್ರಶ್ನೆ ಪತ್ರಿಕೆ ಸಿಕ್ಕಿದ ತಕ್ಷಣ ಅದನ್ನು ಓದಲು ಸಮಯ ತೆಗೆದುಕೊಳ್ಳಿ. ಯಾವುದಾದರು ಪ್ರಶ್ನೆಗಳಿಗೆ ಉತ್ತರ ತಿಳಿದಿಲ್ಲದಿದ್ದಲ್ಲಿ ಪ್ಯಾನಿಕ್ ಆಗಬೇಡಿ. ಪ್ರಶ್ನೆ ಪತ್ರಿಕೆಯ ಕ್ರಮ ಸಂಖ್ಯೆಯ ಪ್ರಕಾರ ಉತ್ತರ ಬರೆಯಿರಿ. ಉತ್ತರ ತಿಳಿದಿಲ್ಲದಿದ್ದಲ್ಲಿ ಅದಕ್ಕೆ ಬೇಕಾಗುವಷ್ಟು ಜಾಗವನ್ನು ಬಿಟ್ಟು ಮುಂದಿನ ಪ್ರಶೆಯನ್ನು ಉತ್ತರಿಸಿ. ಎಕ್ಸ್ಟ್ರಾ ಶೀಟ್ ಬೇಕಿದ್ದಲ್ಲಿ ಕೇಳಿ ಪಡೆಯಿರಿ, ಹಿಂಜರಿಕೆ ಬೇಡ. ಪರೀಕ್ಷೆ ಮುಗಿದ ಬಳಿಕ ಅದರ ಬಗ್ಗೆ ಚರ್ಚಿಸುವ ಬದಲು ಕೊಂಚ ಸಮಯ ಒಳ್ಳೆ ನಿದ್ದೆ ಮಾಡಿ ಮುಂದಿನ ಪರೀಕ್ಷೆಗೆ ತಯಾರಿ ನಡೆಸಿ.
SSLC, PUC ಅಲ್ಲಿ ತಪ್ಪು ಉತ್ತರಕ್ಕೆ ಯಾವುದೇ ನಕಾರಾತ್ಮಕ ಅಂಕ ಇಲ್ಲದೆ ಇರುವುದರಿಂದ ಗೊತ್ತಿಲ್ಲದ ಪ್ರಶ್ನೆಗೆ ಉತ್ತರಿಸಿ. ಪ್ರತಿ ವರ್ಷ ಸಾಮಾನ್ಯವಾಗಿ ಪ್ರಶ್ನೆ ಪತ್ರಿಕೆಯಲ್ಲಿ 2 ರಿಂದ 5 ಅಂಕದವರೆಗೂ ತಪ್ಪು ಪ್ರಶ್ನೆಗಳು ಇರುತ್ತದೆ. ಹಾಗಾಗಿ ಈ ಪ್ರಶ್ನೆಗಳಿಗೆ ನೀವು ತಪ್ಪು ಉತ್ತರ ನೀಡಿದ್ದರೂ ನಿಮಗೆ ಗ್ರೇಸ್ ಮಾರ್ಕ್ಸ್ ಸಿಗುತ್ತದೆ.
ಹೊಸ ಜಾಗ, ಹೊಸ ಜನರ ನಡುವೆ ಪರೀಕ್ಷೆ ಬರೆಯುವಾಗ ಕೆಲವು ವಿದ್ಯಾರ್ಥಿಗಳಿಗೆ ಭಯವಾಗಬಹುದು. ಇಂತವರು ತಮ್ಮ ಪೋಷಕರ ಜೊತೆ ಪರೀಕ್ಷಾ ಕೇಂದ್ರಗಳಿಗೆ ಮೊದಲೇ ಭೇಟಿ ನೀಡಿ ಒಮ್ಮೆ ಅಲ್ಲಿಯ ವಾತಾವರಣ, ಕೊಠಡಿಗಳು ಇವೆಲ್ಲವನ್ನೂ ಪರಿಚಿತ ಮಾಡಿಕೊಳ್ಳಿ . ಇದರಿಂದ ನಿಮಗೆ ಪರೀಕ್ಷೆಯ ದಿನ ಆತಂಕವಾಗುವುದಿಲ್ಲ.
ಇದನ್ನೂ ಓದಿ: ಪರೀಕ್ಷೆಯ ಒತ್ತಡವನ್ನು ನಿವಾರಿಸುವುದು ಹೇಗೆ? ಇಲ್ಲಿದೆ ಸಖತ್ ಟಿಪ್ಸ್
ಪರೀಕ್ಷೆಯ ನಂತರ ವಿದ್ಯಾರ್ಥಿಗಳು ಪುಸ್ತಕವನ್ನು ಬದಿಗಿಟ್ಟು, ನೀವು ಇಷ್ಟಪಡುವ ಕೆಲಸವನ್ನು ಮಾಡಿ. ಕುಟುಂಬದವರ ಜೊತೆ ಕುಳಿತು ಮಾತನಾಡಿ. ಪರೀಕ್ಷೆ, ಫಲಿತಾಂಶ ಇದ್ಯಾವುದರ ಬಗ್ಗೆಯೂ ಚಿಂತಿಸಬೇಡಿ. ನಿಮಗೆ ಇಷ್ಟವಾದ ಒಂದು ಹವ್ಯಾಸವನ್ನು (ಅಡುಗೆ, ಗಾಡಿ ರಿಪೇರಿ, ಕವನ, ಕವಿತೆ ಬರೆಯುವುದು, ಇತ್ಯಾದಿ) ಬೆಳೆಸಿಕೊಳ್ಳಿ. ಅದರಲ್ಲೇ ನೀವು ಮುಂದೆ ಜೀವನವನ್ನು ಕಟ್ಟಿಕೊಳ್ಳಬಹುದು. ರಜೆಯಲ್ಲಿ ಕೆಲಸಕ್ಕೆ ಹೋಗಿ, ಯಾವ ಕೆಲಸದಲ್ಲೂ ಮೇಲು-ಕೀಳು ಎಂಬ ಭೇದವಿಲ್ಲ. ಊರಿಗೆ ಹೋದರೆ ತೋಟದ ಕೆಲಸ ಮಾಡಿ ಅಥವಾ ಫ್ರೀಲಾನ್ಸಿಂಗ್ ಮಾಡಬಹುದು ಇದರಲ್ಲಿ ಬರುವ ಹಣವನ್ನು ನಿಮ್ಮ ಮುಂದಿನ ವಿದ್ಯಾಭ್ಯಾಸಕ್ಕಾಗಿ ಬಳಸಿ.
ಶಿಕ್ಷಕರು ಹಾಗು ಪೋಷಕರು ಮಕ್ಕಳ ಮೇಲೆ ಒತ್ತಡ ಹೇರಬೇಡಿ. ಮಕ್ಕಳನ್ನು ಪ್ರತ್ಯೇಕ ಕೋಣೆಯಲ್ಲಿ ಕೂತು ಓದಲು ಬಿಡಬೇಡಿ. ನೀವು ಮಕ್ಕಳೊಡನೆ ಕುಳಿತು ಓದುವುದನ್ನು ಅಭ್ಯಾಸ ಮಾಡಿ. ಪರೀಕ್ಷೆ ಕೇವಲ ನಿಮ್ಮ ಮಕ್ಕಳಿಗೆ ಸೀಮಿತವಾದದ್ದಲ್ಲ, ಮಕ್ಕಳಿಗೆ ಓದುವ ವಾತಾವರಣವನ್ನು ನೀವು ಕಲ್ಪಿಸಿ. ಮಕ್ಕಳಿಗೆ ಓದಲು ಹೇಳಿ ನೀವು ಟಿವಿ ನೋಡುವುದು, ನಿದ್ದೆ ಮಾಡುವುದು ಮಾಡಿದರೆ ಮಕ್ಕಳಿಗೆ ಓದಿನ ಕಡೆ ಗಮನ ಹರಿಸುವುದು ಕಷ್ಟವಾಗುತ್ತದೆ. ಹಾಗಾಗಿ ನೀವು ಪರೀಕ್ಷೆ ಬರೆಯುತ್ತಿದ್ದೀರಿ ಎಂಬ ಭಾವನೆಯನ್ನು ಬೆಳೆಸಿಕೊಳ್ಳಿ.
ಮಕ್ಕಳಿಗೆ ಫೇಲ್ ಆಗಿಯೂ ಅದೆಷ್ಟೋ ಜನ ಐಎಎಸ್, ಐಪಿಎಸ್ ಅಧಿಕಾರಿಗಳಾಗಿರುವ ಉದಾಹರಣೆಯನ್ನು ನೀಡಿ. ಫೇಲ್ ಆದರೆ ಅದೇ ಜೀವನದ ಕೊನೆಯಲ್ಲ ಎಂಬುದನ್ನು ಮನವರಿಕೆ ಮಾಡಿ. ಉತ್ತಮ ಅಂಕ ಬೇಕಾಗಿರುವುದು ಕೇವಲ ಉತ್ತಮ ಕಾಲೇಜು ಮತ್ತು ಮಕ್ಕಳು ಬಯಸುವ ಕೋರ್ಸ್ನಲ್ಲಿ ಸೀಟ್ ಸುಗುವುದಕ್ಕೆ ಮಾತ್ರ. ಹಾಗಾಗಿ ಅವರಿಗೆ ಒತ್ತಡ ಹಾಕದೆ ಮಕ್ಕಳ ಆತ್ಮ ವಿಶ್ವಾಸವನ್ನು ಕುಗ್ಗಿಸದೆ, ಅವರಿಗೆ ಓದುವ ವಾತಾವರಣವನ್ನು ಕಲ್ಪಿಸುವುದು ನಿಮ್ಮ ಜವಾಬ್ದಾರಿ.
ಪರೀಕ್ಷೆ ಜೀವನದ ಮೈಲಿಗಲ್ಲೇ ಹೊರತು, ಅದುವೇ ಜೀವನವಲ್ಲ. ಪರೀಕ್ಷೆ ಎಂಬುದು ಜೀವನದ ಒಂದು ಭಾಗ, ಪರೀಕ್ಷೆಯಲ್ಲಿ ಫೇಲ್ ಆದರೆ ಜೀವನದಲ್ಲಿ ಫೇಲ್ ಆಗಿದ್ದೀರಿ ಎಂಬ ಅರ್ಥವಲ್ಲ. ಫೇಲ್ ಆದರೆ ಸಪ್ಲಿಮೆಂಟರಿ ಬರೆಯಬಹುದು. ಅಥವಾ ಐಟಿಐ ಅಂತಹ ಕೋರ್ಸ್ ಮಾಡಬಹುದು. ಯಾವುದೇ ಕೆಟ್ಟ ಆಲೋಚನೆ ಮಾಡದೆ ಮುಂದಿನ ಹೆಜ್ಜೆಯ ಬಗ್ಗೆ ಗಮನ ಹರಿಸಿ. ದೇವರು ಒಂದು ಬಾಗಿಲನ್ನು ಮುಚ್ಚಿದರೆ ಬೇರೆ ಬಾಗಿಲು ತೆರೆದಿರುತ್ತಾನೆ. ಮುಚ್ಚಿರುವ ಬಾಗಿಲನ್ನು ಬಡಿಯುವ ಬದಲು ಸುತ್ತಲಿರುವ ಅನೇಕ ಬಾಗಿಲನ ಕಡೆ ಗಮನ ಹರಿಸಿ.
Published On - 5:38 pm, Thu, 16 March 23