ಭಾರತದ ವಿದ್ಯಾರ್ಥಿಗಳು ವಿದೇಶಗಳಲ್ಲಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಓದುತ್ತಿದ್ದಾರೆ. ವಿಶ್ವದ ವಿವಿಧ ದೇಶಗಳಲ್ಲಿ ಒಟ್ಟು 11,33,749 ವಿದ್ಯಾರ್ಥಿಗಳು ವಿದೇಶಗಳಲ್ಲಿದ್ದಾರೆ. ಯಾವ ದೇಶದಲ್ಲಿ ಎಷ್ಟು ಮಂದಿ ಓದುತ್ತಿದ್ದಾರೆ ಎಂಬ ಮಾಹಿತಿ ಇಲ್ಲಿದೆ. ಕೆನಡಾದಲ್ಲಿ 2,15,720, ಅಮೆರಿಕದಲ್ಲಿ 1,67,582, ಮೆಕ್ಸಿಕೊದಲ್ಲಿ 150, ಬ್ರೆಜಿಲ್ನಲ್ಲಿ 4, ಬ್ರಿಟನ್ನಲ್ಲಿ 44,465, ಐರ್ಲೆಂಡ್ 5000, ಪೊಲೆಂಡ್ 4000, ಫ್ರಾನ್ಸ್ 10,000, ಟರ್ಕಿ 48, ಇರಾನ್ 1700, ಇಟಲಿ 4634, ಈಜಿಪ್ಟ್ 356, ಸೂಡಾನ್ 10, ಸೌದಿ ಅರೇಬಿಯಾ 80,800, ಅರಬ್ ಸಂಯುಕ್ತ ಸಂಸ್ಥಾನ (ಯುಎಇ) 2,19,000, ಒಮಾನ್ 43,600, ಕಜಕಸ್ತಾನ್ 5300, ಉಕ್ರೇನ್ 18,000, ಕಿರ್ಗಿಸ್ತಾನ್ 10,000, ನೇಪಾಳ್ 2200, ಬಾಂಗ್ಲಾದೇಶ 5200, ರಷ್ಯಾ 16,500, ಚೀನಾ 23,000, ಮಲೇಷಿಯಾ 2000, ಸಿಂಗಾಪುರ 2500, ಫಿಲಿಪ್ಪೀನ್ಸ್ 15,000, ಜಪಾನ್ 1694, ದಕ್ಷಿಣ ಕೊರಿಯಾ 592, ಇಂಡೋನೇಷಿಯಾ 8, ಆಸ್ಟ್ರೇಲಿಯಾ 92,383, ನ್ಯೂಜಿಲೆಂಡ್ 30,000.
ಗುಣಮಟ್ಟದ ಶಿಕ್ಷಣಕ್ಕೆ ಉಕ್ರೇನ್ ನೆಚ್ಚಿನ ತಾಣ
ಉಕ್ರೇನ್‌ನ ಶಿಕ್ಷಣ ಮತ್ತು ವಿಜ್ಞಾನ ಸಚಿವಾಲಯದ ಮಾಹಿತಿಯ ಪ್ರಕಾರ, ಸುಮಾರು 80,000 ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಉಕ್ರೇನ್‌ನಲ್ಲಿರುವ ಒಟ್ಟು ವಿದೇಶಿ ವಿದ್ಯಾರ್ಥಿಗಳ ಕಾಲು ಭಾಗದಷ್ಟು ಭಾರತೀಯರು ಇದ್ದಾರೆ. ಉಕ್ರೇನ್‌ನಲ್ಲಿ ಹೆಚ್ಚಿನ ಭಾರತೀಯ ವಿದ್ಯಾರ್ಥಿಗಳು ವೈದ್ಯಕೀಯ ಅಧ್ಯಯನವನ್ನು ನಡೆಸುತ್ತಿದ್ದಾರೆ. ಇದಕ್ಕೆ ಒಂದು ಪ್ರಮುಖ ಕಾರಣವೆಂದರೆ ಉಕ್ರೇನ್ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಲು ಹೆಸರುವಾಸಿಯಾಗಿದೆ. ವೈದ್ಯಕೀಯದಲ್ಲಿ ಹೆಚ್ಚಿನ ಸಂಖ್ಯೆಯ ಪದವಿ ಮತ್ತು ಸ್ನಾತಕೋತ್ತರ ವಿಶೇಷತೆಗಳನ್ನು ಹೊಂದಿರುವ ಉಕ್ರೇನ್ ತನ್ನ ಖಂಡದಲ್ಲಿ ನಾಲ್ಕನೇ ಸ್ಥಾನದಲ್ಲಿದೆ ಎಂದು ವರದಿಯಾಗಿದೆ.
ಬೋಧನಾ ಶುಲ್ಕವೂ ಕಡಿಮೆ
ಉಕ್ರೇನ್‌ನಲ್ಲಿರುವ ಖಾಸಗಿ ವೈದ್ಯಕೀಯ ಕಾಲೇಜುಗಳ ಬೋಧನಾ ಶುಲ್ಕವು ಭಾರತದ ಕಾಲೇಜುಗಳಿಗೆ ಹೋಲಿಸಿದರೆ ಬಹಳ ಕಡಿಮೆ ಇದೆ. ಈ ಕಾರಣಕ್ಕೆ ಉಕ್ರೇನ್ಗೆ ತೆರಳಿ ವೈದ್ಯಕೀಯ ಶಿಕ್ಷಣ ಪಡೆಯುವ ಭಾರತೀಯರ ಸಂಖ್ಯೆ ಹೆಚ್ಚಾಗುತ್ತಿದೆ.
ಮಾನ್ಯತೆ ಪಡೆದ ಕಾಲೇಜುಗಳು
ಉಕ್ರೇನಿಯನ್ ಕಾಲೇಜುಗಳು ವಿಶ್ವ ಆರೋಗ್ಯ ಮಂಡಳಿಯಿಂದ ಗುರುತಿಸಲ್ಪಟ್ಟಿವೆ. ಉಕ್ರೇನಿಯನ್ ವೈದ್ಯಕೀಯ ಪದವಿಗಳನ್ನು ಪಾಕಿಸ್ತಾನದ ವೈದ್ಯಕೀಯ ಮತ್ತು ದಂತ ಕೌನ್ಸಿಲ್, ಯುರೋಪಿಯನ್ ಕೌನ್ಸಿಲ್ ಆಫ್ ಮೆಡಿಸಿನ್ ಮತ್ತು ಇಂಗ್ಲೆಂಡ್ನ ಜನರಲ್ ಮೆಡಿಕಲ್ ಕೌನ್ಸಿಲ್, ಇತರರಿಂದಲೂ ಗುರುತಿಸಲ್ಪಟ್ಟಿದೆ.
ಪ್ರವೇಶ ಪರೀಕ್ಷೆ ಇಲ್ಲ
ಭಾರತೀಯ ವಿದ್ಯಾರ್ಥಿಗಳು ಉಕ್ರೇನ್ಗೆ ಹೋಗಿ ವಿದ್ಯಾಭ್ಯಾಸ ಮಾಡಲು ಕಾರಣವೆಂದರೆ, ಇಲ್ಲಿನ ಹಲವಾರು ಪ್ರಸಿದ್ಧ ವೈದ್ಯಕೀಯ ಶಾಲೆಗಳು ಸೀಟು ಒದಗಿಸಲು ಪ್ರವೇಶ ಪರೀಕ್ಷೆ ಮಾಡುವುದಿಲ್ಲ. ಇತ್ತೀಚೆಗೆ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ವಿದೇಶದಲ್ಲಿ ವೈದ್ಯಕೀಯ ವ್ಯಾಸಂಗ ಮಾಡುವ ಸುಮಾರು ಶೇ. 90ರಷ್ಟು ಭಾರತೀಯರು ಭಾರತದಲ್ಲಿ ಅರ್ಹತಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಉಕ್ರೇನ್ ಸೈನಿಕರು ನಮ್ಮ ತಲೆ ಮೇಲೆ ಗನ್ ಇಟ್ಟು ಪ್ರಶ್ನಿಸಿದ್ದರು; ಬೆಂಗಳೂರಿನಲ್ಲಿ ಕಣ್ಣೀರು ಹಾಕಿದ ವಿದ್ಯಾರ್ಥಿನಿ