ಯುದ್ಧ ಯಾರಿಗೂ ಬೇಕಾಗಿಲ್ಲ ಎಂಬುದನ್ನು ವ್ಲಾದಿಮಿರ್​ ಪುಟಿನ್​ಗೆ ಅರ್ಥ ಮಾಡಿಸಿ; ಪ್ರಧಾನಿ ಮೋದಿಗೆ ಉಕ್ರೇನ್​ ವಿದೇಶಾಂಗ ಸಚಿವರ ಮನವಿ

ಯುದ್ಧ ಯಾರಿಗೂ ಬೇಕಾಗಿಲ್ಲ ಎಂಬುದನ್ನು ವ್ಲಾದಿಮಿರ್​ ಪುಟಿನ್​ಗೆ ಅರ್ಥ ಮಾಡಿಸಿ; ಪ್ರಧಾನಿ ಮೋದಿಗೆ ಉಕ್ರೇನ್​ ವಿದೇಶಾಂಗ ಸಚಿವರ ಮನವಿ
ಪ್ರಧಾನಿ ನರೇಂದ್ರ ಮೋದಿ

ಈ ಯುದ್ಧದಲ್ಲಿ ಆಸಕ್ತಿ ಹೊಂದಿರುವ ಇಡೀ ಭೂಮಿಯಲ್ಲಿರುವ ಏಕೈಕ ವ್ಯಕ್ತಿಯೆಂದರೆ ಅದು ರಷ್ಯಾ ಅಧ್ಯಕ್ಷ ವ್ಲಾದಿಮಿರ್​ ಪುಟಿನ್​ ಮಾತ್ರ. ಉಳಿದಂತೆ ಯಾರಿಗೂ ಯುದ್ಧ ಬೇಕಾಗಿಲ್ಲ. ರಷ್ಯಾದ ಜನರಿಗೂ ಈ ಯುದ್ಧ ನಡೆಸುವುದು ಇಷ್ಟವಿಲ್ಲ ಎಂದು ಕುಲೆಬಾ ಹೇಳಿದ್ದಾರೆ.

TV9kannada Web Team

| Edited By: Lakshmi Hegde

Mar 06, 2022 | 11:16 AM

ರಷ್ಯಾ-ಉಕ್ರೇನ್​ ಯುದ್ಧ(Russia-Ukraine War) ಶುರುವಾಗಿ ಎರಡು ವಾರ ಸಮೀಪಿಸುತ್ತಿದೆ. ಯುದ್ಧ ನಿಲ್ಲಲಿ ಎಂಬುದು ಅನೇಕರ ಪ್ರಾರ್ಥನೆ. ವಿಶ್ವದ ಹಲವು ರಾಷ್ಟ್ರಗಳ ಒತ್ತಾಯ. ಏನೇ ಆದರೂ ಯುದ್ಧ ನಿಲ್ಲಿಸುವುದು ರಷ್ಯಾ ಅಧ್ಯಕ್ಷ ಪುಟಿನ್​ ಕೈಯಲ್ಲೇ ಇದೆ ಎಂಬುದು ಪ್ರತಿಯೊಬ್ಬರಿಗೂ ಅರ್ಥವಾದ ಸತ್ಯ. ಈ ಮಧ್ಯೆ, ಹೇಗಾದರೂ ಸರಿ ರಷ್ಯಾ-ಉಕ್ರೇನ್​ ಯುದ್ಧ ನಿಲ್ಲಿಸಿ ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ (PM Narendra Modi) ಮನವಿ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ. ಆ ಸಾಲಿಗೆ ಈಗ ಉಕ್ರೇನ್​ ವಿದೇಶಾಂಗ ವ್ಯವಹಾರಗಳ ಸಚಿವ ಡಿಮಿಟ್ರೋ ಕುಲೆಬಾ ಸೇರ್ಪಡೆಯಾಗಿದ್ದಾರೆ. ‘ಪುಟಿನ್​​ ಅವರಿಗೆ ಹೇಗಾದರೂ ಅರ್ಥ ಮಾಡಿಸಿ, ಈ ಯುದ್ಧ ಎಲ್ಲರ ಹಿತಾಸಕ್ತಿಗೆ ವಿರುದ್ದವಾಗಿ ನಡೆಯುತ್ತಿದೆ ಎಂಬುದನ್ನು ಅವರಿಗೆ ಮನದಟ್ಟು ಮಾಡಿಸಿ’ ಎಂದು ಹೇಳಿದ್ದಾರೆ. ದೂರದರ್ಶನದ ಮೂಲಕ ಭಾಷಣ ಮಾಡಿದ ಅವರು, ಪ್ರಧಾನಿ ಮೋದಿಗೆ ಮಾತ್ರವಲ್ಲದೆ ಇಡೀ ಭಾರತೀಯರಿಗೆ ಈ ನನ್ನ ಸಂದೇಶ ಎಂದೂ ಹೇಳಿದ್ದಾರೆ. ಹಾಗೇ, ಉಳಿದ ಕೆಲವು ದೇಶಗಳನ್ನೂ ಉಲ್ಲೇಖಿಸಿದ್ದಾರೆ.

ಈ ಯುದ್ಧದಲ್ಲಿ ಆಸಕ್ತಿ ಹೊಂದಿರುವ ಇಡೀ ಭೂಮಿಯಲ್ಲಿರುವ ಏಕೈಕ ವ್ಯಕ್ತಿಯೆಂದರೆ ಅದು ರಷ್ಯಾ ಅಧ್ಯಕ್ಷ ವ್ಲಾದಿಮಿರ್​ ಪುಟಿನ್​ ಮಾತ್ರ. ಉಳಿದಂತೆ ಯಾರಿಗೂ ಯುದ್ಧ ಬೇಕಾಗಿಲ್ಲ. ರಷ್ಯಾದ ಜನರಿಗೂ ಈ ಯುದ್ಧ ನಡೆಸುವುದು ಇಷ್ಟವಿಲ್ಲ. ಹೀಗಿರುವಾಗ ಪ್ರಧಾನಿ ನರೇಂದ್ರ ಮೋದಿ ದಯವಿಟ್ಟು ಪುಟಿನ್​ ಜತೆ ಮಾತನಾಡಿ ಯುದ್ಧ ನಿಲ್ಲುವಂತೆ ಮಾಡಬೇಕು ಎಂದು ನಾವು ಮನವಿ ಮಾಡುತ್ತೇವೆ ಎಂದು ಹೇಳಿದ ಕುಲೆಬಾ, ಉಕ್ರೇನಿಯನ್​ ಕೃಷಿ ಉತ್ಪನ್ನಗಳಿಗೆ ಭಾರತವೂ ಕೂಡ ಬಹುದೊಡ್ಡಮಟ್ಟದ ಗ್ರಾಹಕ. ಆದರೆ ಹೀಗೆ ಯುದ್ಧ ನಡೆಯುತ್ತಿದ್ದರೆ ನಮಗೆ ಹೊಸ ಬೆಳೆ ತೆಗೆಯುವುದು ತುಂಬ ಕಷ್ಟ. ಭಾರತದೊಂದಿಗೆ ಇನ್ನೂ ಹಲವು ದೇಶಗಳು ನಮ್ಮ ಗ್ರಾಹಕರಾಗಿವೆ. ಹೀಗಾಗಿ ಭಾರತ ಮತ್ತು ಜಾಗತಿಕ ಆಹಾರ ಸುರಕ್ಷತೆ ದೃಷ್ಟಿಯಿಂದಲೂ ಈ ಯುದ್ಧ ಕೂಡಲೇ ನಿಲ್ಲಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇನ್ನು ರಷ್ಯಾ ಅಧ್ಯಕ್ಷನೊಂದಿಗೆ ಉತ್ತಮ ಸಂಬಂಧಹೊಂದಿರುವ ಭಾರತ, ಚೀನಾ, ನೈಜೀರಿಯಾ ಸೇರಿ ಇನ್ನಿತರ ರಾಷ್ಟ್ರಗಳಿಗೆ ಯುದ್ಧ ನಿಲ್ಲಿಸಲು ಸಹಾಯ ಮಾಡುವಂತೆ ಕೇಳಿಕೊಂಡಿರುವ ಉಕ್ರೇನ್​ ಸಚಿವ ಕುಲೆಬಾ, ರಷ್ಯಾ ಮೇಲಿನ ನಿರ್ಬಂಧಗಳನ್ನು ಹೆಚ್ಚಿಸಿ. ಆ ದೇಶ ಯುದ್ಧದ ನಿಯಮ ಉಲ್ಲಂಘಿಸುತ್ತಿದೆ. ಈಗ ಕದನ ವಿರಾಮವನ್ನೂ ಉಲ್ಲಂಘನೆ ಮಾಡಿದೆ ಎಂದು ಆರೋಪಿಸಿದ್ದಾರೆ. ಉಕ್ರೇನ್​ನಲ್ಲಿರುವ ಇತರ ದೇಶಗಳ ನಾಗರಿಕರು, ನಮ್ಮ ನಾಗರಿಕರನ್ನು ಇಲ್ಲಿಂದ ಸ್ಥಳಾಂತರ ಮಾಡಲು ಅವಕಾಶ ಮಾಡಿಕೊಡಿ ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಯುದ್ಧದಿಂದ ಬಸವಳಿದ ವನ್ಯಜೀವಿಗಳು; ಉಕ್ರೇನ್​ ಬಿಟ್ಟು ಎರಡು ದಿನ ಪ್ರಯಾಣಿಸಿ ಪೋಲ್ಯಾಂಡ್ ಸೇರಿಕೊಂಡು ಸಿಂಹ, ಹುಲಿಗಳು​

Follow us on

Related Stories

Most Read Stories

Click on your DTH Provider to Add TV9 Kannada