300 ವರ್ಷ ಹಳೆಯ ಮತ್ಸ್ಯಕನ್ಯೆ ರೂಪದ ಮಮ್ಮಿ ಪತ್ತೆ: ಅಚ್ಚರಿಗೊಂಡ ವಿಜ್ಞಾನಿಗಳು
ಜಪಾನ್ ವಿಜ್ಞಾನಿಗಳಿಗೆ 300 ವರ್ಷ ಹಳೆಯ ಮತ್ಸ್ಯಕನ್ಯೆ ರೂಪದಲ್ಲಿರುವ ಮಮ್ಮಿಯೊಂದು ದೊರಕಿದ್ದು ಅಧ್ಯಯನ ನಡೆಸುತ್ತಿದ್ದಾರೆ. ಸದ್ಯ ಮತ್ಸ್ಯಕನ್ಯೆ ಆಕಾರದಲ್ಲಿರುವ ಮಮ್ಮಿಯನ್ನು ಕಂಡು ವಿಜ್ಞಾನಿಗಳೇ ದಿಗ್ಭ್ರಮೆಗೊಂಡಿದ್ದಾರೆ.
ಸತ್ತ ಮೇಲೆ ದೇಹವನ್ನು ಶೇಖರಿಸಿಡುವ ಪದ್ಧತಿ ಜಪಾನ್ನಲ್ಲಿದೆ. ಇದನ್ನು ಮಮ್ಮಿಗಳು (Mummy) ಎಂದು ಕರೆಯುತ್ತಾರೆ. ಇದೀಗ ಜಪಾನ್ (Japan) ವಿಜ್ಞಾನಿಗಳಿಗೆ 300 ವರ್ಷ ಹಳೆಯ ಮತ್ಸ್ಯಕನ್ಯೆ (mermaid) ರೂಪದಲ್ಲಿರುವ ಮಮ್ಮಿಯೊಂದು ದೊರಕಿದ್ದು ಅಧ್ಯಯನ ನಡೆಸುತ್ತಿದ್ದಾರೆ. ಸದ್ಯ ಮತ್ಸ್ಯಕನ್ಯೆ ಆಕಾರದಲ್ಲಿರುವ ಮಮ್ಮಿಯನ್ನು ಕಂಡು ವಿಜ್ಞಾನಿಗಳೇ ದಿಗ್ಭ್ರಮೆಗೊಂಡಿದ್ದಾರೆ. 12 ಇಂಚಿನ ಈ ನಿಗೂಢ ಜೀವಿಯ ಮಮ್ಮಿಯು 1736 ಮತ್ತು 1741 ರ ನಡುವೆ ಜಪಾನಿನ ಶಿಕೋಕು ದ್ವೀಪದ ಪೆಸಿಫಿಕ್ ಮಹಾಸಾಗರದಲ್ಲಿ ಸಿಕ್ಕಿಬಿದ್ದಿದೆ ಎಂದು ಹೇಳಲಾಗಿದೆ. ಆದರೆ ಈಗ ಅದು ಜಪಾನ್‌ನ ಅಸಾಕುಚಿ ನಗರದ ದೇವಾಲಯದಲ್ಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ . ಸದ್ಯ ಈ ವಿಚಿತ್ರ ಆಕೃತಿಯ ಜೀವಿಯ ಮಮ್ಮಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಜಗತ್ತಿನಾದ್ಯಂತ ವೈರಲ್ ಆಗಿದೆ. ಇದೆಂತಹ ಜೀವಿ ಎಂದು ನೆಟ್ಟಿಗರು ಅಚ್ಚರಿಪಟ್ಟಿದ್ದಾರೆ.
ಜಪಾನ್‌ನ ಅಸಾಹಿ ಶಿಂಬುನ್ ಪತ್ರಿಕೆಯ ವರದಿಯ ಪ್ರಕಾರ, ಪೆಸಿಫಿಕ್ ಮಹಾಸಾಗರದಲ್ಲಿ ಮೀನುಗಾರಿಕಾ ಬಲೆಯಲ್ಲಿ ಸಿಕ್ಕಿಬಿದ್ದಿದೆ ಎಂದು ಹೇಳುವ ಪತ್ರದೊಂದಿಗೆ ಮಮ್ಮಿಯನ್ನು ಪೆಟ್ಟಿಗೆಯಲ್ಲಿ ಕಾಯ್ದಿರಿಸಲಾಗಿದೆ. ಒಣಗಿದ ಮತ್ಸ್ಯಕನ್ಯೆಯನ್ನು ಈ ಹಿಂದೆ ಜಪಾನ್‌ನ ಒಂದು ಕುಟುಂಬವು ಇಟ್ಟುಕೊಂಡಿತ್ತು. ಹಲವು ವರ್ಷಗಳ ನಂತರ ಅದನ್ನು ದೇವಸ್ಥಾನ ಸ್ವಾಧೀನಪಡಿಸಿಕೊಂಡಿತು. ಅದಕ್ಕೂ ಮೊದಲು ಕುಟುಂಬ ಅದನ್ನು ಮತ್ತೊಬ್ಬರಿಗೆ ವರ್ಗಾಯಿಸಿತ್ತು ಎಂದು ವರದಿ ಹೇಳಿದೆ.
ಮಮ್ಮಿಯು ಮೊನಚಾದ ಹಲ್ಲುಗಳು, ನಗುವ ಮುಖ, ಎರಡು ಕೈಗಳು ಮತ್ತು ತಲೆ ಮತ್ತು ಹುಬ್ಬಿನ ಮೇಲೆ ಕೂದಲನ್ನು ಹೊಂದಿದೆ. ಮಮ್ಮಿಯ ಮೇಲಿನ ಅರ್ಧಭಾಗದಲ್ಲಿ ಮಾನವನ ದೇಹದಂತೆ ಕಂಡುಬರುತ್ತದೆ . ಆದರೆ ಕೆಳಗಿನ ಅರ್ಧಭಾಗದಲ್ಲಿ ಮೀನಿನ ಲಕ್ಷಣಗಳನ್ನು ಹೊಂದಿದೆ. ಹೀಗಾಗಿ ಅದನ್ನು ಮತ್ಸ್ಯಕನ್ಯೆ ಇರಬಹುದು ಎಂದು ಗುರುತಿಸಲಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಇದನ್ನು ಹೊರತುಪಡಿಸಿ ಉಳಿದ ಯಾವುದೇ ಮಾಹಿತಿಗಳನ್ನು ವಿಜ್ಞಾನಿಗಳು ಹಂಚಿಕೊಂಡಿಲ್ಲ. ಸದ್ಯ ಮಮ್ಮಿಯನ್ನು ಕುರಾಶಿಕಿ ವಿಜ್ಞಾನ ಮತ್ತು ಕಲಾ ವಿಶ್ವವಿದ್ಯಾಲಯವು ಸಿಟಿ ಸ್ಕ್ಯಾನಿಂಗ್ ಮೂಲಕ ಅಧ್ಯಯನ ನಡೆಸುತ್ತಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:
ಜಾಮೂನ್ ಪರೋಟ ತಿಂದಿದ್ದೀರಾ? ಫುಡ್ ಬ್ಲಾಗರ್ ಹಂಚಿಕೊಂಡ ವಿಡಿಯೋ ನೋಡಿ ಬಾಯಲ್ಲಿ ನೀರೂರಿಸಿಕೊಂಡ ನೆಟ್ಟಿಗರು