2nd PUC Exam: ದ್ವಿತೀಯ ಪಿಯು ಗಣಿತ ಪರೀಕ್ಷೆಗೆ 12 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಗೈರು

ಕರ್ನಾಟಕದಲ್ಲಿ ಮಾರ್ಚ್ 3 ರಂದು ನಡೆದ ದ್ವಿತೀಯ ಪಿಯುಸಿ ಗಣಿತ ಪರೀಕ್ಷೆಗೆ 12,533 ವಿದ್ಯಾರ್ಥಿಗಳು ಗೈರುಹಾಜರಾಗಿದ್ದಾರೆ. ಪರೀಕ್ಷೆ ವೇಳೆ ಯಾವುದೇ ಅಕ್ರಮಗಳು ನಡೆದಿರುವ ಬಗ್ಗೆ ವರದಿಯಾಗಿಲ್ಲ. ಮೂರು ಪರೀಕ್ಷೆಗಳ ಅವಕಾಶದಿಂದಾಗಿ ಗೈರುಹಾಜರಾತಿ ಹೆಚ್ಚಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಂಗಳೂರು ದಕ್ಷಿಣದಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ಗೈರುಹಾಜರಾಗಿದ್ದಾರೆ.

2nd PUC Exam: ದ್ವಿತೀಯ ಪಿಯು ಗಣಿತ ಪರೀಕ್ಷೆಗೆ 12 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಗೈರು
ಸಾಂದರ್ಭಿಕ ಚಿತ್ರ

Updated on: Mar 04, 2025 | 1:08 PM

ಬೆಂಗಳೂರು, ಮಾರ್ಚ್ 4: ಸೋಮವಾರ ನಡೆದ ದ್ವಿತೀಯ ಪಿಯುಸಿ ಗಣಿತ ಪರೀಕ್ಷೆಗೆ ಕರ್ನಾಟಕದಾದ್ಯಂತ 12,533 ವಿದ್ಯಾರ್ಥಿಗಳು ಗೈರುಹಾಜರಾಗಿದ್ದಾರೆ. ಯಾವುದೇ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ಎಸಗಿದ ಅಥವಾ ದುಷ್ಕೃತ್ಯ ಎಸಗಿದ ಪ್ರಕರಣಗಳು ವರದಿಯಾಗಿಲ್ಲ. 2024 ರ ಪರೀಕ್ಷೆಗಳಿಂದ ಜಾರಿಗೆ ತರಲಾದ ಪರೀಕ್ಷೆಗಳ ವೆಬ್ ಸ್ಟ್ರೀಮಿಂ ಹಾಗೂ ಇತರ ಕಟ್ಟುನಿಟ್ಟಿನ ಕ್ರಮಗಳು ಅಕ್ರಮವನ್ನು ತಟೆಗಟ್ಟುವಲ್ಲಿ ನೆರವಾಗಿವೆ ಎಂದು ಅಧಿಕಾರಿಗಳು ಅಬಿಪ್ರಾಯಪಟ್ಟಿದ್ದಾರೆ.

ಮೂರು ಪರೀಕ್ಷೆಗಳ ಆಯ್ಕೆ ಇರುವುದರಿಂದ ಗೈರುಹಾಜರಾದವರ ಸಂಖ್ಯೆ ಹೆಚ್ಚಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿದ್ಯಾರ್ಥಿಗಳು ಪರೀಕ್ಷಾ ತಯಾರಿಯ ಬಗ್ಗೆ ವಿಶ್ವಾಸ ಹೊಂದಿಲ್ಲದಿದ್ದರೆ ಇನ್ನೂ ಎರಡು ಪರೀಕ್ಷೆಗಳಿಗೆ ಹಾಜರಾಗಲು ಅವಕಾಶವಿರುವುದರಿಂದ, ಅವರು ಪರೀಕ್ಷೆಗಳಿಗೆ ಗೈರಾಗುತ್ತಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.

ಯಾವ ಜಿಲ್ಲೆಯಲ್ಲಿ ಎಷ್ಟು ವಿದ್ಯಾರ್ಥಿಗಳು ಗೈರು?

ಬೆಂಗಳೂರು ದಕ್ಷಿಣದಿಂದ ಅತಿ ಹೆಚ್ಚು ವಿದ್ಯಾರ್ಥಿಗಳು (1,510) ಗೈರುಹಾಜರಾಗಿದ್ದು, ರಾಯಚೂರು ಜಿಲ್ಲೆಯಲ್ಲಿ 1,058 ಮತ್ತು ವಿಜಯಪುರ 1,010 ಮಂದಿ ಗೈರಾಗಿದ್ದರು. ಬೆಂಗಳೂರು ಗ್ರಾಮಾಂತರದಲ್ಲಿ 79, ಚಾಮರಾಜನಗರದಲ್ಲಿ 80 ಮತ್ತು ಹಾಸನದಲ್ಲಿ119 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರುಹಾಜರಾಗಿದ್ದರು.

ಇದನ್ನೂ ಓದಿ
ಈ ಬಾರಿ ಎಸ್​ಎಸ್​ಎಲ್​ಸಿ ಪರೀಕ್ಷೆ ಪಾಸಾಗಬೇಕಿದ್ದರೆ ಶೇ 35 ಅಂಕ ಗಳಿಸಲೇಬೇಕು
ಪರೀಕ್ಷೆ ಬರೆಯುವ ಎಸ್ಎಸ್ಎಲ್​ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ
ದ್ವಿತೀಯ ಪಿಯು ಲಿಖಿತ ಪರೀಕ್ಷೆಯಲ್ಲಿ ಮಹತ್ವದ ಬದಲಾವಣೆ
ಸರ್ಕಾರಿ ಶಾಲಾ ಮಕ್ಕಳ ಹಾಜರಾತಿಗೆ ಇನ್ಮುಂದೆ ಫೇಸಿಯಲ್ ಅಟೆಂಡೆನ್ಸ್..!

ಗಣಿತ ಪರೀಕ್ಷೆ ಕಷ್ಟಕರವಾಗಿಲ್ಲ ಎಂದು ಪರೀಕ್ಕ್ಷೆ ಬರೆದ ವಿದ್ಯಾರ್ಥಿಗಳು ಹೇಳಿದ್ದಾರೆ. ಆದರೆ ಕೆಲವು ಪ್ರಶ್ನೆಗಳು ಸ್ವಲ್ಪ ಜಟಿಲವಾಗಿದ್ದವು. ಕೆಲವು ಪ್ರಶ್ನೆಗಳು ತುಂಬಾ ಜಟಿಲವಾಗಿದ್ದವು ಮತ್ತು ಹೆಚ್ಚಿನ ಸಮಯ ಬೇಕಾಯಿತು ಎಂದು ವಿದ್ಯಾರ್ಥಿ ಚಂದನ್ ಬಿಆರ್ ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ.

ಒಟ್ಟಾರೆಯಾಗಿ ಗಣಿತ ಪತ್ರಿಕೆಯಲ್ಲಿ ಅಂಕ ಗಳಿಸುವುದು ಸುಲಭವಾಗಿತ್ತು. ಕೆಲವು ಒಂದು ಅಂಕ ಮತ್ತು ಎರಡು ಅಂಕಗಳ ಪ್ರಶ್ನೆಗಳು ತುಂಬಾ ಜಟಿಲವಾಗಿದ್ದವು ಮತ್ತು ಅವುಗಳಿಗೆ ಉತ್ತರಿಸಲು ಹೆಚ್ಚಿನ ಶ್ರಮ ಅಗತ್ಯವಾಯಿತು ಎಂದು ಮತ್ತೊಬ್ಬ ವಿದ್ಯಾರ್ಥಿ ರೋಹಿತ್ ಕೆ ಹೇಳಿರುವುದನ್ನೂ ವರದಿ ಉಲ್ಲೇಖಿಸಿದೆ.

ಇದನ್ನೂ ಓದಿ: 25 ಸಾವಿರ ಪಿಯು ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಣ ಇಲಾಖೆಯಿಂದ ಉಚಿತ ನೀಟ್ ಕೋಚಿಂಗ್

ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1 ಶನಿವಾರದಿಂದ (ಮಾರ್ಚ್​ 01) ಆರಂಭವಾಗಿದೆ. ಮಾರ್ಚ್ 20ರವರೆಗೆ ಪರೀಕ್ಷೆ ನಡೆಯಲಿದ್ದು, ಒಟ್ಟು 1171 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದೆ. 7,13,862 ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. 6,61,474 ಹೊಸ ವಿದ್ಯಾರ್ಥಿಗಳು, 34,071 ಪುನರಾವರ್ತಿತ ವಿದ್ಯಾರ್ಥಿಗಳು, 18,317 ಖಾಸಗಿ ಕಾಲೇಜುಗಳ ವಿದ್ಯಾರ್ಥಿಗಳು ದ್ವಿತೀಯ ಪಿಯು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ.

ಹಿಂದಿನ ವರ್ಷಕ್ಕೆ ಹೋಲಿಸಿದರೆ, ದ್ವಿತೀಯ ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎರಡಕ್ಕೂ ಹೆಸರು ನೋಂದಾಯಿಸಿಕೊಂಡ ವಿದ್ಯಾರ್ಥಿಗಳ ಸಂಖ್ಯೆ ಈ ವರ್ಷ ಹೆಚ್ಚಾಗಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ