ಬೆಂಗಳೂರು: ಕರ್ನಾಟಕ 2nd ಪಿಯುಸಿ ಫಲಿತಾಂಶ 2022: ಕರ್ನಾಟಕ ಪಿಯು ಬೋರ್ಡ್ 2021-22ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟಿಸಿದ್ದು, ವಿಜ್ಞಾನ ವಿಭಾಗದಲ್ಲಿ ನಾಲ್ವರು, ವಾಣಿಜ್ಯ ವಿಭಾಗದಲ್ಲಿ ನಾಲ್ವರು ಹಾಗೂ ಕಲಾ ವಿಭಾಗದಲ್ಲಿ ಇಬ್ಬರು ಅತ್ಯಧಿಕ ಅಂಕಗಳನ್ನು ಪಡೆದು ಟಾಪರ್ಸ್ಗಳಾಗಿ ಹೊರಹೊಮ್ಮಿದ್ದಾರೆ. ಅಲ್ಲದೆ 91,106 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ನಲ್ಲಿ ಪಾಸ್ ಆಗಿದ್ದಾರೆ. ಮಲ್ಲೇಶ್ವರದ ಪಿಯೂ ಬೋರ್ಡ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಚಿವ ಬಿ.ಸಿ.ನಾಗೇಶ್ ಅವರು ಫಲಿತಾಂಶ ಪ್ರಕಟಿಸಿದ್ದಾರೆ.
ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದ 6,84,255 ವಿದ್ಯಾರ್ಥಿಗಳ ಪೈಕಿ 6,83,563 ವಿದ್ಯಾರ್ಥಿಗಳು ಹಾಜರಾಗಿದ್ದು, ಶೇ.61.88ರಷ್ಟು ಅಂದರೆ 4,02,697 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಬಾರಿ ಹೆಚ್ಚು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದಾರೆ. ಪ್ರತಿಬಾರಿಯಂತೆ ಈ ಬಾರಿಯ ಪರೀಕ್ಷೆಯಲ್ಲೂ ಬಾಲಕೀಯರೇ ಮೇಲುಗೈ ಸಾಧಿಸಿದ್ದಾರೆ. ಪರೀಕ್ಷೆ ಬರೆದ 3,37,006 ಬಾಲಕಿಯರ ಪೈಕಿ 2,31,586 ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದು, ಶೇಕಡಾವಾರು ನೋಡುವುದಾದರೆ 68.72ರಷ್ಟು ವಿದ್ಯಾರ್ಥಿನಿಯರು ಪಾಸ್ ಆಗಿದ್ದಾರೆ. ಪರೀಕ್ಷೆ ಬರೆದ 3,46,557 ಬಾಲಕರ ಪೈಕಿ 1,91,380 ಮಕ್ಕಳು ಪಾಸ್ ಆಗಿದ್ದು, ಶೇಕಡಾವಾರು ನೋಡುವುದಾದರೆ 55.22% ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ದಕ್ಷಿಣ ಕನ್ನಡ ಫಸ್ಟ್, ಚಿತ್ರದುರ್ಗ ಲಾಸ್ಟ್
ಪಿಯುಸಿ ಪರೀಕ್ಷೆಯಲ್ಲಿ ದಕ್ಷಣಕನ್ನಡ ಜಿಲ್ಲೆ ಶೇ.88.02ರಷ್ಟರೊಂದಿಗೆ ಮೊದಲ ಸ್ಥಾನ ಪಡೆದುಕೊಂಡರೆ, ಇದರ ಪಕ್ಕದ ಜಿಲ್ಲೆ ಉಡುಪಿ 2ನೇ ಸ್ಥಾನ ಪಡೆದುಕೊಂಡಿದ್ದು, ವಿಜಯಪುರ 3ನೇ ಸ್ಥಾನ, ಬೆಂಗಳೂರು ದಕ್ಷಣ 4ನೇ ಸ್ಥಾನ, ಉತ್ತರ ಕನ್ನಡ 5ನೇ ಸ್ಥಾನ, ಚಿತ್ರದುರ್ಗ ಜಿಲ್ಲೆ (ಶೇ.49.31) ಕೊನೆಯ ಸ್ಥಾನ ಪಡೆದುಕೊಂಡಿದೆ.
ನಗರವನ್ನು ಮೀರಿಸಿದ ಗ್ರಾಮೀಣ ವಿದ್ಯಾರ್ಥಿಗಳು
ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಗ್ರಾಮೀಣ ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ತಂದುಕೊಟ್ಟಿದ್ದು, ನಗರದ ವಿದ್ಯಾರ್ಥಿಗಳನ್ನು ಹಿಂದಿಕ್ಕಿದ್ದಾರೆ. ನಗರಪ್ರದೇಶದಲ್ಲಿ ಶೇ.61.78 ರಷ್ಟು ಫಲಿತಾಂಶ ಬಂದಿದ್ದು, ಗ್ರಾಮಾಂತರದಲ್ಲಿ ಶೇ.62.18 ರಷ್ಟು ಫಲಿತಾಂಶ ಬಂದಿದೆ.
ಕಲಾ, ವಾಣಿಜ್ಯ ಸೈನ್ಸ್ ವಿಭಾಗದ ಟಾಪರ್ಸ್
ಕಲಾ ವಿಭಾಗದಲ್ಲಿ ಬಳ್ಳಾರಿಯ ಶ್ವೇತಾ ಭೀಮಶಂಕರ ಬೈರಗೊಂಡ ಮತ್ತು ಕೊಟ್ಟೂರಿನ ಸಹನಾ ಮಡಿವಾಳರ್ ಅವರು ಕಲಾ ವಿಭಾಗದಲ್ಲಿ 600 ಅಂಕಗಳಲ್ಲಿ ತಲಾ 594 ಅಂಕಗಳೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಮಾನವ ವಿನಯ್ ಕೇಜ್ರಿವಾಲ್, ನೀಲು ಸಿಂಗ್, ಆಕಾಶ್ ದಾಸ್, ನೇಹಾ.ಬಿ.ಆರ್ ಅವರು 600 ಅಂಕಗಳಲ್ಲಿ ತಲಾ 596 ಅಂಕಗಳೊಂದಿಗೆ ಟಾಪರ್ಸ್ಗಳಾಗಿ ಹೊರಹೊಮ್ಮಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಸಿಮ್ರಾನ್ ಶೇಷರಾವ್, ಇಲಂ ಮೊಹಮ್ಮದ್ ರಫೀಕ್, ಸಾಯಿ ಚಿರಾಗ್, ಶ್ರೀಕೃಷ್ಣ ಪೇಜತಾಯ, ಭವ್ಯಾ ನಾಯರ್ ಅವರು 600 ಅಂಕಗಳಲ್ಲಿ ತಲಾ 597 ಅಂಕಗಳನ್ನು ಪಡೆದು ಟಾಪರ್ಸ್ಗಳಾಗಿ ಹೊರಹೊಮ್ಮಿದ್ದಾರೆ.
ಕಳೆದ ಎಪ್ರಿಲ್ 23 ರಿಂದ ಮೇ 18ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆಗಾಗಿ ಒಟ್ಟು 6,84,255 ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಣಿ ಮಾಡಿಕೊಂಡಿದ್ದರು. ಈ ಪೈಕಿ 3,46,936 ಬಾಲಕರು ಹಾಗೂ 3,37,319 ಬಾಲಕಿಯರು ದಾಖಲಾಗಿದ್ದರು. ರಾಜ್ಯಾದ್ಯಂತ ಒಟ್ಟು 1,076 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಕಲಾ ವಿಭಾಗಕ್ಕೆ 2,28,167 ಮಂದಿ, ವಾಣಿಜ್ಯ ವಿಭಾಗಕ್ಕೆ 2,45,519 ಮಂದಿ ಮತ್ತು ವಿಜ್ಞಾನ ವಿಭಾಗದಲ್ಲಿ 2,10,569 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
ಶಿಕ್ಷಣದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ