CET Exam: ನಾಳೆಯಿಂದ ಸಿಇಟಿ ಪರೀಕ್ಷೆ ಆರಂಭ: 2.11 ಲಕ್ಷ ವಿದ್ಯಾರ್ಥಿಗಳು ನೋಂದಣಿ, ಹಿಜಾಬ್​ಗೆ ಇಲ್ಲ ಅವಕಾಶ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jun 15, 2022 | 1:22 PM

Karnataka CET Exam 2022: ಜೂನ್ 16, 17 ಮತ್ತು 18ರಂದು ನಡೆಯಲಿರುವ ಸಿಇಟಿ ಪರೀಕ್ಷೆಯನ್ನು ನೀಟ್ ಮಾದರಿಯಲ್ಲಿ ನಿರ್ವಹಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಗತ್ಯ ಸಿದ್ಧತೆ ಮಾಡಿಕೊಂಡಿದೆ.

CET Exam: ನಾಳೆಯಿಂದ ಸಿಇಟಿ ಪರೀಕ್ಷೆ ಆರಂಭ: 2.11 ಲಕ್ಷ ವಿದ್ಯಾರ್ಥಿಗಳು ನೋಂದಣಿ, ಹಿಜಾಬ್​ಗೆ ಇಲ್ಲ ಅವಕಾಶ
ಸಂಗ್ರಹ ಚಿತ್ರ
Follow us on

ಬೆಂಗಳೂರು: ರಾಜ್ಯದಲ್ಲಿ ನಾಳೆಯಿಂದ (ಜೂನ್ 16) ಮೂರು ದಿನಗಳ ಕಾಲ ಸಾಮಾನ್ಯ ಪ್ರವೇಶ ಪರೀಕ್ಷೆ (Common Entrance Test – CET) ಪರೀಕ್ಷೆಗಳು ನಡೆಯಲಿವೆ. ಜೂನ್ 16, 17 ಮತ್ತು 18ರಂದು ನಡೆಯಲಿರುವ ಸಿಇಟಿ ಪರೀಕ್ಷೆಯನ್ನು ನೀಟ್ ಮಾದರಿಯಲ್ಲಿ ನಿರ್ವಹಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಹಿಜಾಬ್​ ಧರಿಸಿ ಬಂದವರಿಗೆ ಸಿಇಟಿ ಪರೀಕ್ಷೆ ಬರೆಯಲು ಅವಕಾಶ ಇಲ್ಲ ಎಂದು ಪ್ರಾಧಿಕಾರವು ಸ್ಪಷ್ಟಪಡಿಸಿದೆ. ಈ ಬಾರಿ 2.11 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಜೂನ್ 16ರಂದು ಜೀವಶಾಸ್ತ್ರ ಹಾಗೂ ಗಣಿತ ಪರೀಕ್ಷೆ (Biology, Mathematics), ಜೂನ್ 17ರಂದು ಭೌತಶಾಸ್ತ್ರ, ರಸಾಯನಶಾಸ್ತ್ರ (Physic, Chemistry) ಪರೀಕ್ಷೆಗಳು ನಡೆಯಲಿವೆ. ಜೂನ್ 18ರಂದು ಹೊರನಾಡ ಕನ್ನಡಿಗರಿಗೆ ಕನ್ನಡ ಪರೀಕ್ಷೆ ನಡೆಯಲಿದೆ.

ಯಾವುದೇ ಧರ್ಮ ಸೂಚಕ ವಸ್ತ್ರ ಧರಿಸಿ ಸಿಇಟಿ ಪರೀಕ್ಷೆಗೆ ಬರುವಂತಿಲ್ಲ ಎಂದು ಪ್ರಾಧಿಕಾರವು ಸ್ಪಷ್ಟಪಡಿಸಿದೆ. ಈ ಬಾರಿ 2.11 ಲಕ್ಷ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಈ ಪೈಕಿ 1.4 ಲಕ್ಷ ಪುರುಷ ವಿದ್ಯಾರ್ಥಿಗಳು, 1.7 ಲಕ್ಷ ಮಹಿಳಾ ವಿದ್ಯಾರ್ಥಿಗಳು. ಪರೀಕ್ಷಾ ಕೇಂದ್ರಗಳ ಬಳಿ ಜಾಮರ್, ಮೆಟಲ್ ಡಿಟೆಕ್ಟರ್​ಗಳನ್ನು ಅಳವಡಿಸಲಾಗಿದೆ. ಪರೀಕ್ಷಾ ಕೇಂದ್ರದ ಸುತ್ತಲ 200 ಮೀಟರ್ ವ್ಯಾಪ್ತಿಯಲ್ಲಿ 144ನೇ ವಿಧಿಯ ಅನ್ವಯ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಪರೀಕ್ಷಾ ಅವಧಿಯಲ್ಲಿ ಪರೀಕ್ಷಾ ಕೇಂದ್ರದ ಸುತ್ತ ಜೆರಾಕ್ಸ್ ಅಂಗಡಿಗಳಿಗೆ ಬೀಗ ಹಾಕಬೇಕು ಎಂದು ಸೂಚಿಸಲಾಗಿದೆ.

486 ಕೇಂದ್ರಗಳು

ಸಿಇಟಿ ಪರೀಕ್ಷೆ ಕುರಿತು ಸಚಿವ ಸಿ.ಎನ್.ಅಶ್ವತ್ಥನಾರಾಯಣ ಮಾಧ್ಯಮಗೋಷ್ಠಿಯಲ್ಲಿ ವಿವರ ನೀಡಿದರು. ಕಳೆದ ವರ್ಷ ಕೋವಿಡ್ ಹಿನ್ನೆಲೆಯಲ್ಲಿ ಗಡಿ ಭಾಗದ 6 ಜಿಲ್ಲೆಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಈ ಬಾರಿಯೂ ಅದೇ ರೀತಿ ಪರೀಕ್ಷೆ ನಡೆಯಲಿದೆ. 486 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಈ ಪೈಕಿ ಬೆಂಗಳೂರಿನಲ್ಲಿ 87, ಇತರ ಜಿಲ್ಲೆಗಳಲ್ಲಿ 399 ಕೇಂದ್ರಗಳು ಇರುತ್ತವೆ. ಕಳೆದ ವರ್ಷಕ್ಕಿಂದ ಈ ಬಾರಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಣಿ ಮಾಡಿಕೊಂಡಿದ್ದಾರೆ. ಒಟ್ಟು 486 ವೀಕ್ಷಕರು, 972 ವಿಶೇಷ ಜಾಗೃತ ದಳದ ಸದಸ್ಯರು, 486 ಪ್ರಶ್ನೆಪತ್ರಿಕೆ ಪಾಲಕರು, ಸುಮಾರು 9600 ಕೊಠಡಿ ಮೇಲ್ವಿಚಾರಕರು ಸೇರಿದಂತೆ ಒಟ್ಟು 20,483 ಸಿಬ್ಬಂದಿಯನ್ನು ಪರೀಕ್ಷಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಈ ಬಾರಿ ಒಟ್ಟು 2,16,525 ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಗೆ ನೊಂದಣಿ ಮಾಡಿಕೊಂಡಿದ್ದಾರೆ ಎಂದು ಹೇಳಿದರು.

ಹಾಲ್ ಟಿಕೆಟ್ ಮತ್ತು ಡೌನ್​ಲೋಡ್​ಗೆ 4 ಬಾರಿ ಸಮಯ ವಿಸ್ತರಣೆ ಮಾಡಲಾಗಿದೆ. ಎಲ್ಲರಿಗೂ ಪ್ರವೇಶ ಪತ್ರ ತಲುಪಿದೆ. ಹೊರನಾಡು ಮತ್ತು ಗಡಿನಾಡು ಅಭ್ಯರ್ಥಿಗಳಿಗೆ ಕನ್ನಡ ಭಾಷೆ ಪರೀಕ್ಷೆಯನ್ನು ಬೆಂಗಳೂರು, ಬೀದರ್, ವಿಜಯಪುರ, ಬಳ್ಳಾರಿ, ಬೆಳಗಾವಿ ಮತ್ತು ಮಂಗಳೂರು ಕೇಂದ್ರಗಳಲ್ಲಿ ನಡೆಸಲಾಗುವುದು. ಕನ್ನಡ ಭಾಷೆ ಪರೀಕ್ಷೆಗೆ ಒಟ್ಟು 1,708 ಅಭ್ಯರ್ಥಿಗಳು ನೊಂದಣಿ ಮಾಡಿಕೊಂಡಿದ್ದಾರೆ. ಸಿಇಟಿ ಪರೀಕ್ಷೆ ನಡೆದ ಒಂದು ತಿಂಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಸಹಾಯಕ ಪ್ರಾಧ್ಯಾಪಕ ಪರೀಕ್ಷೆ ವಿಚಾರ ನ್ಯಾಯಾಲಯದಲ್ಲಿರುವುದರಿಂದ ಸದ್ಯಕ್ಕೆ ಈ ಬಗ್ಗೆ ಚರ್ಚಿಸುವುದು ಸೂಕ್ತವಲ್ಲ ಎಂದು ಹೇಳಿದರು.

ಸಿಇಟಿ ಪರೀಕ್ಷಾ ವೇಳಾಪಟ್ಟಿ

ಜೂನ್ 16: ಬೆಳಿಗ್ಗೆ 10.30 ರಿಂದ11.30 ಜೀವಶಾಸ್ತ್ರ, ಮಧ್ಯಾಹ್ನ 2.30 ರಿಂದ 3.30 ಗಣಿತ.
ಜೂನ್ 17: ಬೆಳಿಗ್ಗೆ 10.30 ರಿಂದ11.30 ಭೌತಶಾಸ್ತ್ರ, ಮಧ್ಯಾಹ್ನ 2.30ರಿಂದ 3.30 ರಸಾಯನಶಾಸ್ತ್ರ.
ಜೂನ್ 18: ಬೆಳಿಗ್ಗೆ 10.30 ರಿಂದ11.30 ಹೊರನಾಡ ಕನ್ನಡಿಗರಿಗೆ ಕನ್ನಡ ಪರೀಕ್ಷೆ.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:21 pm, Wed, 15 June 22