ಬೆಂಗಳೂರು, (ಮಾರ್ಚ್ 22) : 5, 8, 9ನೇ ತರಗತಿಗೆ ಮೌಲ್ಯಾಂಕನ ಪರೀಕ್ಷೆ (Moulyankana Exams) ನಡೆಸಲು ಕರ್ನಾಟಕ ಶಿಕ್ಷಣ ಇಲಾಖೆ (Karnataka education department, ) ವೇಳಾಪಟ್ಟಿ ಪ್ರಕಟಿಸಿದೆ. ಮಾರ್ಚ್ 25 ರಿಂದ ಬಾಕಿ ವಿಷಯಗಳಿಗೆ 28ರ ವರೆಗೆ ಪರೀಕ್ಷೆಗಳು ನಡೆಯಲಿವೆ. ಎಸ್ಎಸ್ಎಲ್ಸಿ ಪರೀಕ್ಷೆ ಇಲ್ಲದ ದಿನ ಬೆಳಿಗ್ಗೆ ಬೋರ್ಡ್ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಪ್ಲಾನ್ ಮಾಡಿದೆ. ಇನ್ನು, ಉಳಿದ ದಿನ ಮಧ್ಯಾಹ್ನ ಅವಧಿಯಲ್ಲೇ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ.
ಮಾರ್ಚ್ 25ನೇ ತಾರೀಕಿನಿಂದ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಗಳು ಆರಂಭವಾಗುತ್ತಿದ್ದು, ಎಸ್ಎಸ್ಎಲ್ಸಿ ಪರೀಕ್ಷೆಗಳಿರುವ ದಿನಾಂಕ 25-3-24ರ ಸೋಮವಾರ ಮತ್ತು 27-3-24ರ ಬುಧವಾರದಂದು ಮಧ್ಯಾಹ್ನದ ಅವಧಿಯಲ್ಲಿ ಹಾಗೂ ಎಸ್ಎಸ್ಎಲ್ಸಿ ಪರೀಕ್ಷೆಗಳು ಇಲ್ಲದಿರುವ ದಿನಾಂಕ 26-3-24 ರ ಮಂಗಳವಾರ ಮತ್ತು 28-3-24 ರ ಗುರುವಾರದಂದು ಬೆಳಗಿನ ಅವಧಿಯಲ್ಲಿ 5, 8 ಮತ್ತು 9ನೇ ತರಗತಿಯ ಮೌಲ್ಯಾಂಕವನ್ನು ನಡೆಸಲಾಗುತ್ತದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
ಇದನ್ನೂ ಓದಿ: 5, 8, 9 ಮತ್ತು 11ನೇ ತರಗತಿ ಬೋರ್ಡ್ ಪರೀಕ್ಷೆಗೆ ಹೈಕೋರ್ಟ್ ಅಸ್ತು
ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 5, 8 ಮತ್ತು 9ನೇ ತರಗತಿಗಳ ವಿದ್ಯಾರ್ಥಿಗಳಿಗೆ 2023-24ನೇ ಸಾಲಿನ ಸಂಕಲನಾತ್ಮಕ ಮೌಲ್ಯಮಾಪನ-2 (SA-2) ಮೌಲ್ಯಾಂಕನ ನಡೆಸುವ ಸಂಬಂಧ ಮಾನ್ಯ ಸರ್ವೋಚ್ಛ ನ್ಯಾಯಾಲಯದಲ್ಲಿ ಎಸ್.ಎಲ್.ಪಿ ಸಂಖ್ಯೆ: 6256/2024, ಎಸ್.ಎಲ್.ಪಿ ಸಂಖ್ಯೆ: 6257/2024 ಮತ್ತು ಡೈರಿ ಸಂಖ್ಯೆ: 11192/2024 ದಾವೆಗಳನ್ನು ಹೂಡಿದ್ದು, ಸದರಿ ದಾವೆಗಳನ್ನು ವಿಚಾರಣೆ ನಡೆಸಿ, ಈ ಹಿಂದೆ ರಾಜ್ಯ ಉಚ್ಛ ನ್ಯಾಯಾಲಯದ ದ್ವಿಸದಸ್ಯ ಪೀಠವು ಮೌಲ್ಯಾಂಕನವನ್ನು ಮುಂದುವರೆಸುವಂತೆ ನೀಡಿದ್ದ ಮಧ್ಯಂತರ ತೀರ್ಪನ್ನು ರದ್ದುಪಡಿಸಿರುತ್ತದೆ ಮತ್ತು ಪ್ರಕರಣವನ್ನು ರಾಜ್ಯ ಉಚ್ಛ ನ್ಯಾಯಾಲಯ ವಿಭಾಗೀಯ ಪೀಠಕ್ಕೆ ರವಾನಿಸಿತ್ತು.
ಈ ಹಿನ್ನೆಲೆಯಲ್ಲಿ ದಿನಾಂಕ: 13-3-2024ರಿಂದ ನಡೆಯಬೇಕಾಗಿದ್ದ 5.8 ಮತ್ತು 9ನೇ ತರಗತಿಗಳ SA-2 ಮೌಲ್ಯಾಂಕನವನ್ನು ಮುಂದಿನ ಆದೇಶದವರೆಗೆ ಮುಂದೂಡುವಂತೆ ಶಾಲೆಗಳಿಗೆ ಸೂಚಿಸಲಾಗಿತ್ತು. ಮುಂದುವರೆದು, ರಾಜ್ಯ ಘನ ಉಚ್ಛ ನ್ಯಾಯಾಲಯದ ವಿಭಾಗೀಯ ಪೀಠವು ಸದರಿ ದಾವೆಯ ಪ್ರಕರಣವನ್ನು ವಿಚಾರಣೆ ನಡೆಸಿ ದಿನಾಂಕ: 22-3-2024ರಂದು ಅಂತಿಮ ತೀರ್ಪು ನೀಡಿದ್ದು, 5, 8 ಮತ್ತು 9ನೇ ತರಗತಿಗಳು 2023-24ನೇ ಸಾಲಿನ ಸಂಕಲನಾತ್ಮಕ ಮೌಲ್ಯಮಾಪನ-2 (SA-2) ಮೌಲ್ಯಾಂಕನ ಕಾರ್ಯವನ್ನು ಉಳಿದ ವಿಷಯಗಳಿಗೆ ಮುಂದುವರೆಸಲು ಸೂಚಿಸಿ ಆದೇಶಿಸಿರುತ್ತದೆ. ಅದರಂತೆ ಸದರಿ ಮೌಲ್ಯಾಂಕನ ಕಾರ್ಯವನ್ನು ವಿದ್ಯಾರ್ಥಿಗಳ ಅಭ್ಯಾಸದ ಹಿತದೃಷ್ಟಿಯಿಂದ ದಿನಾಂಕ: 25-3-2024ರಿಂದ ಪ್ರಾರಂಭಿಸಲು ಕ್ರಮವಹಿಸಲಾಗಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.