ದೆಹಲಿ: ದಸರಾ ಬಳಿಕ 1ರಿಂದ 5 ತರಗತಿ ಆರಂಭದ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದು ದೆಹಲಿಯಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. ಪ್ರಾಥಮಿಕ ಶಾಲೆ ಆರಂಭ ಬಗ್ಗೆ ಚರ್ಚೆ ನಡೆಸಲಾಗುವುದು. 1-12 ವರ್ಷದೊಳಗಿನ ಮಕ್ಕಳಲ್ಲಿ ಹೆಚ್ಚು ರೋಗ ನಿರೋಧಕ ಶಕ್ತಿ ಇರುತ್ತದೆ. ಹೀಗಾಗಿ 1-5 ತರಗತಿಗನ್ನು ಶುರು ಮಾಡಬೇಕು. ಪೋಷಕರ ಅಭಿಪ್ರಾಯದ ಆಧಾರದ ಮೇಲೆ ಕಾಲೇಜು ಶುರು ಮಾಡಿ ಬಳಿಕ ಹಂತ ಹಂತವಾಗಿ ಹೈಸ್ಕೂಲ್ವರೆಗೂ ಶಾಲೆಗಳನ್ನು ಆರಂಭಿಸಿದೆ. ದಸರಾ ಬಳಿಕ ಸಭೆಗಳನ್ನು ನಡೆಸಿ ಪ್ರಾಥಮಿಕ ಶಾಲೆಗಳನ್ನು ಆರಂಭಿಸುವ ಬಗ್ಗೆ ತಿರ್ಮಾನ ಮಾಡಲಿದ್ದೇವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇದೇ ವೇಳೆ ಅವರು ರೂಪಾಂತರಿ ಕೊರೊನಾ ಸೋಂಕಿನ ಅಪಾಯದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸೆರೋ ಸಮೀಕ್ಷೆ ಪ್ರಕಾರ ರಾಜ್ಯದ ಶೇ.60ರಷ್ಟು ಜನರಲ್ಲಿ ರೋಗನಿರೋಧಕ ಶಕ್ತಿ ಇದೆ. ಕೆಲವು ಕಡೆ ಶೇ.70ಕ್ಕೂ ಹೆಚ್ಚು ರೋಗನಿರೋಧಕ ಶಕ್ತಿ ಇದೆ. ರೂಪಾಂತರಿ ಕೊರೊನಾ ಬಗ್ಗೆ ಈಗಲೇ ಹೇಳುವುದು ಕಷ್ಟ. ನವೆಂಬರ್ ಅಥವಾ ಡಿಸೆಂಬರ್‌ವರೆಗೂ ಕಾದು ನೋಡಬೇಕು ಎಂದು ಅವರು ಇದೇ ವೇಳೆ ತಿಳಿಸಿದ್ದಾರೆ.
ಬೊಮ್ಮಾಯಿ ಸರ್ಕಾರವನ್ನು ಶ್ಲಾಘಿಸಿದ ಸಚಿವ ಸುಧಾಕರ್:
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರವು ಆಲೋಚನೆ ಹಾಗೂ ದೂರದೃಷ್ಟಿಯಿಂದ ಕೂಡಿದೆ ಎಂದು ದೆಹಲಿಯಲ್ಲಿ ಆರೋಗ್ಯ ಖಾತೆ ಸಚಿವ ಡಾ.ಕೆ.ಸುಧಾಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘‘ಪ್ರತಿಯೊಬ್ಬರನ್ನು ಆತ್ಮೀಯತೆಯಿಂದ ಸಿಎಂ ಮಾತನಾಡಿಸುತ್ತಾರೆ. ಅಹವಾಲುಗಳಿಗೆ ತೀಕ್ಷ್ಣವಾಗಿ ಬೊಮ್ಮಾಯಿ ಪ್ರತಿಕ್ರಿಯೆ ನೀಡುತ್ತಾರೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಸ್ಥಾನ ತುಂಬುತ್ತಾರೆಯೇ ಎಂಬ ಕುತೂಹಲ ಇತ್ತು. ಸಿಎಂ ಬೊಮ್ಮಾಯಿ ಕಾರ್ಯವೈಖರಿ ಸ್ಪಷ್ಟ ಉತ್ತರ ನೀಡಿದೆ. ಒಳ್ಳೆಯ ಅಭಿಪ್ರಾಯ ರಾಜ್ಯ ಸರ್ಕಾರದ ಮೇಲೆ ಮೂಡಿದೆ’’ ಎಂದು ಅವರು ನುಡಿದಿದ್ದಾರೆ.
ಇದೇ ವೇಳೆ ಅವರು ವಿಪಕ್ಷ ನಾಯಕ ಸಿದ್ಧರಾಮಯ್ಯನವರ ಕುರಿತು ಮಾತನಾಡಿದ್ದಾರೆ. ‘‘ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತಿದ್ದರು. ಆ ಸಮಯದಲ್ಲಿ 2-3 ದಿನ ಅವರು ಅವರಾಗಿ ಇರಲಿಲ್ಲ. ಮೈತ್ರಿ ಸರ್ಕಾರ ರಚನೆ ವೇಳೆ ಏನಾಗುತ್ತಿತ್ತೆಂದು ಗೊತ್ತಿರಲಿಲ್ಲ. ನಾನು ಗೆದ್ದು ದೇವನಹಳ್ಳಿಗೆ ಬರುವ ವೇಳೆಗೆ ಸಿಎಂ ಆಯ್ಕೆಯಾಗಿತ್ತು. JDS ವಿರುದ್ಧ ಗೆದ್ದು ಅವರ ಜತೆ ಹೇಗೆ ಸರ್ಕಾರ ಮಾಡಲಿ’’ ಎಂದು ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಇದನ್ನೂ ಓದಿ:
ಬಹಿರಂಗ ಹೇಳಿಕೆ ನೀಡದಂತೆ ಜೆಡಿಎಸ್ ಶಾಸಕರಿಗೆ ಹೆಚ್ ಡಿ ಕುಮಾರಸ್ವಾಮಿ ಸೂಚನೆ
ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಹರಿಯಾಣ ಸರ್ಕಾರ
ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ₹ 3,000 ಕೋಟಿ ಅನುದಾನ ನೀಡಲು ಬದ್ಧ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Published On - 12:58 pm, Sun, 3 October 21