ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ₹ 3,000 ಕೋಟಿ ಅನುದಾನ ನೀಡಲು ಬದ್ಧ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
CM Basavaraj Bommai: ಸಿಎಂ ಬಸವರಾಜ ಬೊಮ್ಮಾಯಿ ಬಳ್ಳಾರಿಯಲ್ಲಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಕುರಿತು ಮಾತನಾಡಿದ್ದಾರೆ. ಇದೇ ವೇಳೆ ಅವರು ಈಗ ನೀಡುತ್ತಿರುವ ಅನುದಾನವನ್ನು ಹೆಚ್ಚಿಸಲು ಬದ್ಧರಿದ್ದೇವೆ ಎಂದು ಘೋಷಿಸಿದ್ದಾರೆ.
ಬಳ್ಳಾರಿ: ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಪರಿಕಲ್ಪನೆ ತಮಗೆ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನುಡಿದಿದ್ದಾರೆ. ಬಳ್ಳಾರಿಯ SK ಮೋದಿ ನ್ಯಾಷನಲ್ ಸ್ಕೂಲ್ ಉದ್ಘಾಟಿಸಿ ಅವರು ಮಾತನಾಡಿದ್ದಾರೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡುತ್ತೇವೆ. ಕೊಡುವ ಸಮರ್ಪಕವಾಗಿ ಅನುದಾನ ಬಳಕೆಯಾಗಬೇಕು. ಪ್ರಸ್ತುತ ನೀಡುತ್ತಿರುವ ₹ 1500 ಕೋಟಿ ರೂಪಾಯಿ ಅನುದಾನದ ಬದಲಿಗೆ, ₹ 3000 ಕೋಟಿ ಅನುದಾನ ನೀಡಲು ಬದ್ಧರಿದ್ದೇವೆ. ಹಣ ಬಿಡುಗಡೆ ಮಾಡುವುದು ತಮ್ಮ ಜವಾಬ್ದಾರಿ ಎಂದು ಅವರು ಘೋಷಿಸಿದ್ದಾರೆ.
ಕಲ್ಯಾಣ ಕರ್ನಾಟಕ ಅಭಿವೃದ್ಧಿಯಲ್ಲಿ ಬಳ್ಳಾರಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಸಿಎಂ ಆಶಾಭಾವ ವ್ಯಕ್ತಪಡಿಸಿದ್ದಾರೆ. ‘‘ಬಳ್ಳಾರಿಯ ನೈಸರ್ಗಿಕ ಸಂಪತ್ತಿನ ಅಭಿವೃದ್ಧಿ ನಿರಂತರವಾಗಿರಬೇಕು. ಮುಂದಿನ ಜನಾಂಗದವರೆಗೂ ನೈಸರ್ಗಿಕ ಸಂಪತ್ತು ಇರಬೇಕು. ಅಭಿವೃದ್ಧಿ ನಕ್ಷೆಯಲ್ಲಿ ಬಳ್ಳಾರಿ ಮಹತ್ವದಾಗಿರುತ್ತದೆ. ವೀರಶೈವ ವಿದ್ಯಾವರ್ಧಕ ಸಂಘದ ಕಾಲೇಜು ಶಿಕ್ಷಕರ ಹುದ್ದೆ ಭರ್ತಿಗೆ ಮನವಿ ಮಾಡಿದ್ದಾರೆ. ಮೆಡಿಕಲ್ ಕಾಲೇಜ್ ಬಹುದಿನಗಳ ಬೇಡಿಕೆ ಇದೆ. ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ’’ ಎಂದು ಸಿಎಂ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.
ವ್ಯಾಪಾರದಲ್ಲಿನ ಬ್ಯಾಲೆನ್ಸ್ ಶೀಟ್ನಂತೆ ಬದುಕಿನಲ್ಲಿಯೂ ಬ್ಯಾಲೆನ್ಸ್ ಶೀಟ್ ಇದೆ.ದುಡಿದ ಹಣ ಸಮಾಜಕ್ಕೆ ಕೊಟ್ಟರೆ ಬ್ಯಾಲೆನ್ಸ್‌ಶೀಟ್ ಪೂರ್ಣವಾಗುತ್ತದೆ ಎಂದು ಸಿಎಂ ಬೊಮ್ಮಾಯಿ ಇದೇ ವೇಳೆ ನುಡಿದಿದ್ದಾರೆ. ವ್ಯಾಪಾರದಲ್ಲಿ ಲಾಭ-ನಷ್ಟ ಇದೆ, ಆದರೆ ಪಾಪ ಪುಣ್ಯವಿಲ್ಲ. ಆದರೆ ಬದುಕಿನಲ್ಲಿ ಪಾಪ ಪುಣ್ಯ ಇದೆ ಎಂದು ಅವರು ನುಡಿದಿದ್ದಾರೆ. ಇದೇ ರೀತಿ ಎಸ್ಕೆ ಮೋದಿಯವರ ಬ್ಯಾಲೆನ್ಸ್ ಶೀಟ್ ಪೂರ್ಣವಾಗಿದೆ ಎಂದ ಅವರು, ಎಸ್ಕೆ ಮೋದಿ ಹಾಗೂ ಅವರ ಪತ್ನಿಯ ಕಾರ್ಯವನ್ನು ಶ್ಲಾಘಿಸಿದ್ದಾರೆ.
ಮೇಕೆದಾಟು ಜಾರಿ ಮಾಡುವುದು ನಿಶ್ಚಿತ; ಸಿಎಂ ಬೊಮ್ಮಾಯಿ: ಬಳ್ಳಾರಿ: ಮೇಕೆದಾಟು ಯೋಜನೆಗೆ ಅವಕಾಶ ನೀಡುವ ವಿಚಾರಕ್ಕೆ ಸಂಬಂಧಪಟ್ಟಂತೆ ಬಳ್ಳಾರಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿದ್ದಾರೆ. ಯೋಜನೆಗೆ ತಮಿಳುನಾಡು ಸರ್ಕಾರದ ಅನುಮತಿ ಬೇಕಿಲ್ಲ ಎಂದಿರುವ ಅವರು, ‘‘ರಾಜಕೀಯ ಕಾರಣಗಳಿಗಾಗಿ ಮೇಕೆದಾಟು ಬಗ್ಗೆ ಪ್ರಸ್ತಾಪ ಮಾಡುತ್ತಿದ್ದಾರೆ. ಯೋಜನೆಗೆ ಅನುಮತಿ ನೀಡುವುದು ಕೇಂದ್ರ ಸರ್ಕಾರ.ಹಾಗಾಗಿ ಮೇಕೆದಾಟು ಯೋಜನೆ ಜಾರಿಮಾಡುವುದು ನಿಶ್ಚಿತ ಎಂದು ಅವರು ತಿಳಿಸಿದ್ದಾರೆ.’’
ಉಪಚುನಾವಣೆಗೆ ಇಂದು ಅಭ್ಯರ್ಥಿ ಆಯ್ಕೆ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ: ಬಳ್ಳಾರಿ: ಅ.30ರಂದು ಸಿಂದಗಿ, ಹಾನಗಲ್ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದು ನಿಶ್ಚಿತ ಎಂದು ಅವರು ಬಳ್ಳಾರಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಭ್ಯರ್ಥಿಗಳ ಆಯ್ಕೆಯ ಕುರಿತಂತೆ, ಇಂದು ಸಂಜೆ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ನಡೆಸುತ್ತೇವೆ. ಹೆಸರನ್ನು ಆಯ್ಕೆ ಮಾಡಿ, ಕೇಂದ್ರೀಯ ಚುನಾವಣಾ ಸಮಿತಿಗೆ ಕಳಿಸುತ್ತೇವೆ. ಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿ ಪಟ್ಟಿ ಪ್ರಕಟಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ:
ರಾಜ್ಯದಲ್ಲಿ ಬೊಮ್ಮಾಯಿ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ: ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್
ಪೊಲೀಸರೆಂದು ಹೆದರಿಸಿ ಹಣ ವಸೂಲಿ! ಕೊಪ್ಪಳದಲ್ಲಿ ಇಬ್ಬರು ಬಂಧನ
Published On - 11:57 am, Sun, 3 October 21