ರೈಲಲ್ಲಿ ಹಣ್ಣು ಮಾರಿ ಜೀವನ ನಡೆಸುತ್ತಿದ್ದ ಇಂಜಿನಿಯರಿಂಗ್ ಪದವೀಧರೆಗೆ ಥಳಿಸಿದ ಆರ್ಪಿಎಫ್ ಕಾನ್ಸ್ಟೆಬಲ್; ಎಫ್ಐಆರ್ ದಾಖಲು
ನನ್ನ ಬಳಿ ಟಿಕೆಟ್ ಇರಲಿಲ್ಲ. ಅದನ್ನೇ ರೈಲಿನಲ್ಲಿರುವ ಟಿಟಿಇ ಕೇಳಿದ್ದರೆ ನಾನು ವಿರೋಧಿಸುತ್ತಿರಲಿಲ್ಲ. ಆದರೆ ಈ ಆರ್ಪಿಎಫ್ ಕಾನ್ಸ್ಟೆಬಲ್ ನನಗೆ ಥಳಿಸಿದ್ದಾರೆ ಎಂದು ಮಹಿಳೆ ಹೇಳಿದ್ದಾರೆ.
ಜೀವನ ನಿರ್ವಹಣೆಗಾಗಿ ರೈಲುಗಳಲ್ಲಿ ಹಣ್ಣು ಮಾರಾಟ ಮಾಡುತ್ತಿದ್ದ ಮಹಿಳಾ ಇಂಜಿನಿಯರ್ ಒಬ್ಬರಿಗೆ ರೈಲ್ವೆ ಸಂರಕ್ಷಣಾ ಪಡೆ (RPF) ಕಾನ್ಸ್ಟೆಬಲ್ ಥಳಿಸಿದ್ದಾರೆ. ಮಹಿಳೆ ಟಿಕೆಟ್ ಇಲ್ಲದೆ ಪ್ರಯಾಣ ಮಾಡಿದ್ದಾರೆ ಎಂಬ ಕಾರಣಕ್ಕೆ ಹೊಡೆದಿದ್ದಾರೆ. ಮಹಿಳೆ ರೂರ್ಕೆಲಾದ ಸರ್ಕಾರಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಅಕ್ಟೋಬರ್ 1 ರಂದು ತನ್ನ ಮೇಲೆ ಹಲ್ಲೆ ನಡೆದಿದ್ದಾಗಿ ಹೇಳಿಕೊಂಡಿದ್ದಾರೆ.
ಮಹಿಳೆಯ ಹೆಸರು ಅನಿತಾರಾಜ್ ಶಿರಹಟ್ಟಿ. ಇವರು ಇಂಜಿನಿಯರಿಂದ ಪದವಿ ಮುಗಿಸಿದ್ದರೂ, ಎಲ್ಲಿಯೂ ಕೆಲಸ ಸಿಗದೆ, ಜೀವನನಿರ್ವಹಣೆಗಾಗಿ ರೈಲಿನಲ್ಲಿ ಹಣ್ಣು ಮಾರಾಟ ಮಾಡುತ್ತಿದ್ದರು. ಒಡಿಶಾದ ಪಾಂಪೋಶ್ ರೈಲ್ವೆ ಸ್ಟೇಶನ್ನಲ್ಲಿ ಈ ಘಟನೆ ನಡೆದಿದೆ ಎಂದು ಆಕೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಹಾಗೇ, ತಾನು ಗುಂಡಿಯಾದಿಂದ ಕೋಲ್ಕತ್ತದ ಹೌರಾಹ್ಗೆ ಗೀತಾಂಜಲಿ ಎಕ್ಸ್ಪ್ರೆಸ್ನಲ್ಲಿ ಹೋಗುತ್ತಿದ್ದೆ. ನನ್ನ ಬಳಿ ಹಣವಿರಲಿಲ್ಲ..ಟಿಕೆಟ್ ತೆಗೆದುಕೊಂಡಿರಲಿಲ್ಲ. ಹೀಗಾಗಿ ಆರ್ಪಿಎಫ್ ಕಾನ್ಸ್ಟೆಬಲ್ ನನಗೆ ಹೊಡೆದಿದ್ದಾರೆ. ತಲೆಗೆ ಗಾಯವಾಗಿದೆ ಎಂದು ಹೇಳಿದ್ದಾರೆ. ಹಾಗೇ ತಾನು ಕರ್ನಾಟಕದ ಧಾರವಾಡದ ಕಾಲೇಜೊಂದರಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದಾಗಿಯೂ ತಿಳಿಸಿದ್ದಾರೆ.
ನನ್ನ ಬಳಿ ಟಿಕೆಟ್ ಇರಲಿಲ್ಲ. ಅದನ್ನೇ ರೈಲಿನಲ್ಲಿರುವ ಟಿಟಿಇ ಸಿಬ್ಬಂದಿ ಕೇಳಿದ್ದರೆ ನಾನು ವಿರೋಧಿಸುತ್ತಿರಲಿಲ್ಲ. ಆದರೆ ಈ ಆರ್ಪಿಎಫ್ ಕಾನ್ಸ್ಟೆಬಲ್ ನನಗೆ ಥಳಿಸಿದ್ದಾರೆ. ನನ್ನ ಮೈಮುಟ್ಟಲು, ಹೊಡೆಯಲು ಅವರಿಗೆ ಅಧಿಕಾರ ಕೊಟ್ಟಿದ್ಯಾರು ಎಂದು ಪ್ರಶ್ನಿಸಿದ್ದಾರೆ. ಅಂದಹಾಗೆ ಈ ಕಾನ್ಸ್ಟೆಬಲ್ ಜಮ್ಶೆಡ್ಪುರದ ಆರ್ಪಿಎಫ್ ಯುನಿಟ್ನವರು ಎನ್ನಲಾಗಿದೆ.
ಆರ್ಪಿಎಫ್ ಕಾನ್ಸ್ಟೆಬಲ್ ವಿರುದ್ಧ ಪ್ರಕರಣ ರೂರ್ಕೆಲಾದ ಸರ್ಕಾರಿ ರೈಲ್ವೆ ಪೊಲೀಸ್ ಠಾಣೆ (GRP) ಯ ಅಧಿಕಾರಿ ರಂಜನ್ ಪಟ್ನಾಯಕ್ ಘಟನೆ ಬಗ್ಗೆ ಮಾಹಿತಿ ನೀಡಿದ್ದು, ಗಾಯಗೊಂಡ ಮಹಿಳೆ ಪ್ರಥಮ ಚಿಕಿತ್ಸೆ ನೀಡಲಾಗಿದೆ ಮತ್ತು ಆಕೆಯ ಮೇಲೆ ಹಲ್ಲೆ ನಡೆಸಿದ ಆರ್ಪಿಎಫ್ ಕಾನ್ಸ್ಟೆಬಲ್ ವಿರುದ್ಧ ಕೇಸ್ ದಾಖಲಾಗಿದೆ ಎಂದು ತಿಳಿಸಿದ್ದಾರೆ.