
ಬೆಂಗಳೂರು, ಜನವರಿ 20: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ (Karnataka Education Department) ಬಿಗ್ ಶಾಕ್ ನೀಡಿದ್ದು, ಈವರೆಗೆ ನೀಡುತ್ತಿದ್ದ ಸ್ಟಡಿ ಹಾಲಿಡೇಗೆ (Study holiday) ಬ್ರೇಕ್ ಹಾಕಿದೆ. ಪಿಯು ಫಲಿತಾಂಶ ಸುಧಾರಣೆ ಉದ್ದೇಶದಿಂದ ಈ ಮಹತ್ವದ ನಿರ್ಧಾರ ಕೈಗೊಂಡಿರುವುದಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ. ಇನ್ನು ಮುಂದೆ ಪರೀಕ್ಷೆ ಮುಗಿಯುವವರೆಗೂ ಪಿಯು ವಿದ್ಯಾರ್ಥಿಗಳು ಕಡ್ಡಾಯವಾಗಿ ಕಾಲೇಜಿಗೆ ಹಾಜರಾಗಬೇಕಾಗುತ್ತದೆ.
ಈವರೆಗೆ ಪೂರ್ವಸಿದ್ಧತಾ ಪರೀಕ್ಷೆ ಮುಗಿದ ಬಳಿಕ ಸುಮಾರು ಒಂದು ತಿಂಗಳ ಕಾಲ ವಿದ್ಯಾರ್ಥಿಗಳಿಗೆ ಸ್ಟಡಿ ಹಾಲಿಡೇ ನೀಡಲಾಗುತ್ತಿತ್ತು. ಆದರೆ ಈ ವ್ಯವಸ್ಥೆಯಿಂದ ನಿರೀಕ್ಷಿತ ಫಲಿತಾಂಶ ಸಿಗುತ್ತಿಲ್ಲ ಎಂಬ ಕಾರಣದಿಂದ ಇಲಾಖೆ ಹೊಸ ಮಾರ್ಗಸೂಚಿ ಹೊರಡಿಸಿದೆ. ಫೆಬ್ರವರಿ 26ರವರೆಗೆ ಕಾಲೇಜುಗಳನ್ನು ನಡೆಸಲು ಇಲಾಖೆ ನಿರ್ಧರಿಸಿದ್ದು, ವಿದ್ಯಾರ್ಥಿಗಳನ್ನು ಕಾಲೇಜಿನಲ್ಲಿ ಉಪಾನ್ಯಾಸಕರ ನೇತೃತ್ವದಲ್ಲಿಯೇ ಮುಖ್ಯ ಪರೀಕ್ಷೆಗೆ ಸಿದ್ಧಪಡಿಸುವಂತೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ ಶಾಲಾ ಮಕ್ಕಳಿಗೆ ಈ ಬಾರಿ ಶೂ ಬದಲು ಚಪ್ಪಲಿ ಭಾಗ್ಯ? ಶಿಕ್ಷಣ ಇಲಾಖೆಯಿಂದ ಹೊಸ ಪ್ಲಾನ್!
ಉಪನ್ಯಾಸಕರ ನೇತೃತ್ವದಲ್ಲಿ ಗ್ರೂಪ್ ಸ್ಟಡಿ ವ್ಯವಸ್ಥೆ ಜಾರಿಗೊಳಿಸಲು ಇಲಾಖೆ ಮುಂದಾಗಿದೆ. ಪಠ್ಯ ಪುನರವಲೋಕನ, ಅನುಮಾನ ನಿವಾರಣೆ, ಪ್ರಶ್ನೋತ್ತರ ಚರ್ಚೆಗಳ ಮೂಲಕ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಜ್ಜುಗೊಳಿಸಬೇಕು ಎಂದು ಕಾಲೇಜುಗಳಿಗೆ ಸೂಚಿಸಲಾಗಿದೆ. ಜೊತೆಗೆ ಉಪನ್ಯಾಸಕರು ಕೂಡ ಪರೀಕ್ಷೆ ಮುಗಿಯುವವರೆಗೂ ಕಡ್ಡಾಯವಾಗಿ ಕಾಲೇಜಿಗೆ ಹಾಜರಾಗಬೇಕು ಎಂದು ಆದೇಶಿಸಲಾಗಿದೆ. ಈ ಹೊಸ ಕ್ರಮದಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಾಗಲಿದೆ ಹಾಗೂ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಸುಧಾರಣೆ ಕಾಣಬಹುದು ಎಂಬ ವಿಶ್ವಾಸವನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ವ್ಯಕ್ತಪಡಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:19 am, Tue, 20 January 26