School Reopen: ಶಾಲಾ ಮಕ್ಕಳು ಇಂದಿನಿಂದ ತಂಡೋಪಾದಿಯಲಿ ಮರಳಿ ಶಾಲೆಗೆ, ಯಾವ ಜಿಲ್ಲೆಗಳಲ್ಲಿ ಸ್ಕೂಲ್ ರೀಓಪನ್ ಇಲ್ಲ!?

Karnataka School Reopening: ಇಂದು 9 ರಿಂದ 12 ನೇ ತರಗತಿಗಳಿಗೆ ಶಾಲೆ ಆರಂಭವಾಗಲಿದ್ದು, ಹಂತ ಹಂತವಾಗಿ ಭೌತಿಕ ತರಗತಿಗಳನ್ನು ಶುರುಮಾಡಲು ಶಿಕ್ಷಣ ಇಲಾಖೆ ಮುಂದಾಗಿದೆ. ಡೇಂಜರ್ ಝೋನ್ ಜಿಲ್ಲೆಗಳನ್ನು ಹೊರತುಪಡಿಸಿ ಬೇರೆಡೆ ಶಾಲೆ ತೆರೆಯಲಾಗುತ್ತಿದೆ.

School Reopen: ಶಾಲಾ ಮಕ್ಕಳು ಇಂದಿನಿಂದ ತಂಡೋಪಾದಿಯಲಿ ಮರಳಿ ಶಾಲೆಗೆ, ಯಾವ ಜಿಲ್ಲೆಗಳಲ್ಲಿ ಸ್ಕೂಲ್ ರೀಓಪನ್ ಇಲ್ಲ!?
ಸಂಗ್ರಹ ಚಿತ್ರ
TV9kannada Web Team

| Edited By: sadhu srinath

Aug 23, 2021 | 8:19 AM

ಬೆಂಗಳೂರು: ಕೊರೊನಾ ದೆಸೆಯಿಂದ ಕಳೆದ ಒಂದೂವರೆ ವರ್ಷಕ್ಕೂ ಅಧಿಕ ಸಮಯದಿಂದ ಸೊರಗಿ ಹೋಗಿರುವ ಶಿಕ್ಷಣ ಪದ್ಧತಿಗೆ ಶಕ್ತಿ ತುಂಬಲು ಸರ್ಕಾರ ಹರಸಾಹಸಪಡುತ್ತಿದೆ. ಆ ಪ್ರಯತ್ನದ ಮೊದಲ ಭಾಗವಾಗಿ ಕೊವಿಡ್​ 19 ಆತಂಕದ ನಡುವೆಯೂ ಇಂದಿನಿಂದ (ಆಗಸ್ಟ್​ 23) ಶಾಲೆಗಳನ್ನು ತೆರೆಯಲು (School Reopening) ಕರ್ನಾಟಕದಲ್ಲಿ ಸಿದ್ಧತೆಗಳು ನಡೆದಿವೆ. 9 ರಿಂದ 12 ನೇ ತರಗತಿಗಳಿಗೆ ಶಾಲೆ ಆರಂಭವಾಗಲಿದ್ದು, ಹಂತ ಹಂತವಾಗಿ ಭೌತಿಕ ತರಗತಿಗಳನ್ನು ಶುರುಮಾಡಲು ಶಿಕ್ಷಣ ಇಲಾಖೆ ಮುಂದಾಗಿದೆ. ಡೇಂಜರ್ ಝೋನ್ ಜಿಲ್ಲೆಗಳನ್ನು ಹೊರತುಪಡಿಸಿ ಬೇರೆಡೆ ಶಾಲೆ ತೆರೆಯಲಾಗುತ್ತಿದೆ.

ಈ ಬಗ್ಗೆ ಮಾತನಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai), ಶಾಲೆ ಆರಂಭಕ್ಕೆ ಸಂಬಂಧಿಸಿದಂತೆ ಸರ್ಕಾರಿ, ಖಾಸಗಿ ಶಾಲೆಗಳಿಗೆ ಮಾರ್ಗಸೂಚಿ (Guidelines) ನೀಡಲಾಗಿದೆ. ಶಿಕ್ಷಕರಿಗೆ ಕೊವಿಡ್ ಲಸಿಕೆಯನ್ನು (Corona Vaccine) ನೀಡಲಾಗಿದೆ. ಪೋಷಕರ ಸಮ್ಮತಿ ಪಡೆದು ಮಕ್ಕಳು ಯಾವುದೇ ಆತಂಕ ಇಲ್ಲದೆ ಶಾಲೆಗೆ ಬರಬಹುದು ಎಂದು ತಿಳಿಸಿದ್ದಾರೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಂತಹಂತವಾಗಿ ಶಾಲೆ ಆರಂಭ ಮಾಡಲಾಗುತ್ತಿದೆ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಪೋಷಕರೂ ಸಹ ಕೊವಿಡ್ ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು. ಉಳಿದಂತೆ ಯಾವುದೇ ಗೊಂದಲ ಇಲ್ಲ. ಮಾರ್ಗಸೂಚಿ ಅನ್ವಯ ತರಗತಿಗಳು ನಡೆಯಲಿವೆ ಎಂದು ಮಾಹಿತಿ ನೀಡಿದ್ದಾರೆ.

ಮಾರ್ಗಸೂಚಿಯಲ್ಲಿ ಏನೇನಿದೆ? ಶಾಲೆ ಆರಂಭಕ್ಕೆ ಶಿಕ್ಷಣ ಇಲಾಖೆ ಮಾರ್ಗಸೂಚಿ ನೀಡಿದ್ದು, ಯಾವೆಲ್ಲಾ ನಿಯಮಗಳನ್ನು ಪಾಲಿಸಬೇಕು ಎಂದು ತಿಳಿಸಿದೆ. ಅದರಂತೆ ಪ್ರಮುಖ ನಿಯಮಗಳು ಇಂತಿವೆ:

1. ಶಾಲೆಯಲ್ಲಿ ಎರಡಕ್ಕಿಂತ ಹೆಚ್ಚು ವಿದ್ಯಾರ್ಥಿಗಳಲ್ಲಿ ಸೋಂಕು ಕಂಡು ಬಂದರೆ ಒಂದು ವಾರ ಶಾಲೆ ಸೀಲ್​ಡೌನ್ 2. ಶೇ. 2ಕ್ಕಿಂತ ಹೆಚ್ಚು ಪಾಸಿಟಿವಿಟಿ ಪ್ರಮಾಣ ಇರುವ ಜಿಲ್ಲೆಗಳಲ್ಲಿ ಶಾಲೆ ತೆರೆಯುವಂತಿಲ್ಲ 3. ಕೊರೊನಾ ಲಕ್ಷಣ ಕಂಡು ಬರುವ ಮಗುವನ್ನು ಶಾಲೆಗೆ ಕಳುಹಿಸುವಂತಿಲ್ಲ 4. ಶಿಕ್ಷಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಮಾಸ್ಕ್ ಧರಿಸುವುದು ಕಡ್ಡಾಯ 5. ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿ ಕಡ್ಡಾಯವಾಗಿ ಕೊರೊನಾ ಲಸಿಕೆ ಪಡೆದಿರಬೇಕು 6. ವಿದ್ಯಾರ್ಥಿಗಳು ತಮ್ಮ ಪೋಷಕರಿಂದ ಒಪ್ಪಿಗೆ ಪತ್ರ ಪಡೆದು ಶಾಲೆಗೆ ಬರಬೇಕು 7. ವಸತಿ ಶಾಲೆ ಹಾಗೂ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕೆ 72 ಗಂಟೆಗಳ ಅಂತರದಲ್ಲಿ ಪಡೆದ ಕೊವಿಡ್ ನೆಗೆಟಿವ್ ವರದಿ ಸಲ್ಲಿಸಬೇಕು 8. ಶಾಲೆ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಕಡ್ಡಾಯ ಇಲ್ಲ 9. ಆನ್ ಲೈನ್ ಹಾಗೂ ಆಫ್ ಲೈನ್ ಎರಡಕ್ಕೂ ಅವಕಾಶ ಸಾಧ್ಯತೆ 10. ಕೊಠಡಿಯಲ್ಲಿ 20 ವಿದ್ಯಾರ್ಥಿಗಳಿಗೆ ಮಾತ್ರ ಕಲಿಕೆಗೆ ಅವಕಾಶ ಅಥವಾ ಕೊಠಡಿಯ ವಿಶಾಲತೆ ಆಧಾರದ ಮೇಲೆ ನಿರ್ಧಾರ 11. ಶಾಲಾ ವಾಹನಗಳಲ್ಲಿಯೂ ಸಹ ಸಾಮಾಜಿಕ ಅಂತರ ಕಾಪಾಡಬೇಕು 12. ಕೊಠಡಿಗಳಲ್ಲಿ ಎಲ್ಲ ವಸ್ತುಗಳನ್ನು ಸ್ಯಾನಿಟೈಸ್ ಮಾಡಬೇಕು 13. ಮಕ್ಕಳ ಆಗಮನ ಮತ್ತು ನಿರ್ಗಮನದ ದಾರಿ ಪ್ರತ್ಯೇಕವಾಗಿ ಮಾಡಬೇಕು 14. ಶಾಲೆಯಲ್ಲಿ ಸಾಮಾಜಿಕ ಅಂತರ ಕಾಪಾಡಲು ಸೂಕ್ತ ಕ್ರಮಗಳನ್ನು ಅನುಸರಿಸಬೇಕು 15. ಶಾಲೆಯ ಅವರಣದಲ್ಲಿ ಬಾಕ್ಸ್ ನಿರ್ಮಾಣ ಮಾಡಬೇಕು 16. ವಿದ್ಯಾರ್ಥಿಗಳು ಸಾಮಾಜಿಕ ಅಂತರದೊಂದಿಗೆ ಶಾಲೆ ಪ್ರವೇಶ ಮಾಡಬೇಕು 17. ಶಾಲಾ ಪ್ರವೇಶಕ್ಕೆ ಮೊದಲು ಥರ್ಮಲ್ ಸ್ಕ್ಯಾನಿಂಗ್ ಮಾಡಬೇಕು 18. ಪಿಯು ಕಾಲೇಜುಗಳಲ್ಲಿ ವಾರದ ಮೊದಲ ದಿನ ಶೇ.50ರಷ್ಟು ವಿದ್ಯಾರ್ಥಿಗಳಿಗೆ ಹಾಗೂ ನಂತರದ ಮೂರು ದಿನ ಉಳಿದ ಶೇ.50ರಷ್ಟು ವಿದ್ಯಾರ್ಥಿಗಳಿಗೆ ಭೌತಿಕ ತರಗತಿ ನಡೆಸಬೇಕು.

ಪ್ರಿಯ ವಿದ್ಯಾರ್ಥಿಗಳೇ, ಚಾಚೂ ತಪ್ಪದೇ ಈ ನಿಯಮಗಳನ್ನು ಪಾಲಿಸಿ ಸಾಮಾಜಿಕ ಅಂತರ ಕಾಪಾಡುವುದರ ಜೊತೆ ಆಗಾಗ ಕೈ ತೊಳೆಯಬೇಕು. ಯೋಗ, ಪ್ರಾಣಾಯಾಮ, ವ್ಯಾಯಾಮವನ್ನು ರೂಢಿ ಮಾಡಿಕೊಳ್ಳಬೇಕು. ಮನೆಯಿಂದಲೇ ಊಟದ ಡಬ್ಬಿ ಹಾಗೂ ಕಾಯಿಸಿ ಆರಿಸಿದ ನೀರನ್ನು ತರಬೇಕು. ಬಿಸಿಯಾದ ಆಹಾರ ಪದಾರ್ಥ ಸೇವಿಸಬೇಕು. ಪೆನ್, ನೋಟ್ ಬುಕ್, ನೀರಿನ ಬಾಟಲ್ ಸೇರಿದಂತೆ ಯಾವುದೇ ವಸ್ತುವನ್ನು ಸಹಪಾಠಿಗಳೊಂದಿಗೆ ಹಂಚಿಕೊಳ್ಳಬಾರದು.

ಈ ಕೆಳಗಿನ 5 ಜಿಲ್ಲೆಗಳಲ್ಲಿ ಶಾಲೆ ಆರಂಭ ಇಲ್ಲ ರಾಜ್ಯದಲ್ಲಿ ಡೇಂಜರ್ ಝೋನ್ ಜಿಲ್ಲೆಗಳನ್ನು ಹೊರತುಪಡಿಸಿ ಬೇರೆಡೆ ಶಾಲೆ ತೆರೆಯಲಾಗುತ್ತಿದ್ದು, ಶೇ.2 ಕ್ಕಿಂತ ಹೆಚ್ಚು ಪಾಸಿಟಿವಿಟಿ ಪ್ರಮಾಣ ಇರುವ ಜಿಲ್ಲೆಗಳಾದ ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು, ಉಡುಪಿ, ಹಾಸನ ಬಿಟ್ಟು ಮಿಕ್ಕೆಲ್ಲಾ ಕಡೆಗಳಲ್ಲೂ ಇಂದಿನಿಂದ 9 ರಿಂದ 12 ನೇ ತರಗತಿಗಳಿಗೆ ಮೊದಲ ಹಂತದಲ್ಲಿ ಶಾಲೆ ಶುರುವಾಗಲಿದೆ.

ಇದನ್ನೂ ಓದಿ: Karnataka School Reopening: ಶಾಲೆ ಆರಂಭ; ಮಕ್ಕಳು, ಪೋಷಕರಿಗೆ ಕಿವಿಮಾತು ಹೇಳಿದ ಸಿಎಂ ಬೊಮ್ಮಾಯಿ 

BMTC: 9-12ನೇ ತರಗತಿಯ ವಿದ್ಯಾರ್ಥಿಗಳಿಗೆ ಬಿಎಂಟಿಸಿ ಬಸ್​ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada