ಬೆಂಗಳೂರು, ಸೆಪ್ಟೆಂಬರ್ 7: ಎಸ್ಎಸ್ಎಲ್ಸಿ (SSLC) ಹಾಗೂ ಪಿಯುಸಿ (PUC) ಪರೀಕ್ಷಾ ವಿಧಾನದಲ್ಲಿ ರಾಜ್ಯ ಸರ್ಕಾರ ಘೋಷಿಸಿರುವ ಬದಲಾವಣೆಯ ಬಗ್ಗೆ ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಇನ್ನೂ ಸ್ಪಷ್ಟ ಚಿತ್ರಣ ದೊರೆತಿಲ್ಲ. 2023-24ನೇ ಶೈಕ್ಷಣಿಕ ವರ್ಷದಿಂದ ಹೊಸ ನಿಯಮಾವಳಿಗಳು ಜಾರಿಗೆ ಬರುತ್ತಿದ್ದು, ಮೂರು ವಾರ್ಷಿಕ ಪರೀಕ್ಷೆಗಳನ್ನು ಅಧಿಕಾರಿಗಳು ಹೇಗೆ ಜಾರಿಗೊಳಿಸುತ್ತಾರೆ ಎಂಬುದು ಖಚಿತವಾಗಿಲ್ಲ. ವಿದ್ಯಾರ್ಥಿಗಳ ಹೊರೆಯನ್ನು ಕಡಿಮೆ ಮಾಡಲು ಸರ್ಕಾರವು ಇನ್ನೂ ಉತ್ತಮ ವಿಧಾನಗಳನ್ನು ಪರಿಗಣಿಸಬಹುದಾಗಿತ್ತು ಮತ್ತು ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಪರಿಣತರೊಂದಿಗೆ ಚರ್ಚಿಸಬೇಕಾಗಿತ್ತು ಎಂದು ಶಿಕ್ಷಣ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಹೆಚ್ಚು ಸಂಖ್ಯೆಯ ಪರೀಕ್ಷೆಗಳನ್ನು ನಡೆಸುವುದರಿಂದ ವಿದ್ಯಾರ್ಥಿಗಳಿಗೆ ಪ್ರಯೋಜನವಾಗವುದಿಲ್ಲ. ಸಮಗ್ರ ಮತ್ತು ನಿರಂತರ ಕಲಿಕೆಯ ವಿಧಾನಗಳ ಮೂಲಕ ಹೆಚ್ಚಿನದನ್ನು ಕಲಿಯಲು ನಾವು ಅವರನ್ನು ಸಕ್ರಿಯಗೊಳಿಸಬೇಕಾಗಿದೆ ಎಂದು ಶಿಕ್ಷಣತಜ್ಞ ನಿರಂಜನ್ ಆರಾಧ್ಯ ಹೇಳಿದ್ದಾರೆ. ಕರ್ನಾಟಕದ ಹಲವು ಭಾಗಗಳಲ್ಲಿ 1:75 ರಷ್ಟಿರುವ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿ-ಶಿಕ್ಷಕರ ಅನುಪಾತವನ್ನು ಸುಧಾರಿಸಲು ಸರ್ಕಾರವು ಕ್ರಮ ಕೈಗೊಳ್ಳಬಹುದಿತ್ತು ಮತ್ತು ಪರೀಕ್ಷೆಗಳನ್ನು ಸಂಪೂರ್ಣವಾಗಿ ತೆಗೆದುಹಾಕಬಹುದು ಎಂದು ಅವರು ಅಭಿಪ್ರಾಯಪಟ್ಟಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.
ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಾರೆ ಎಂದು ಘೋಷಿಸುವುದಕ್ಕಾಗಿ ವ್ಯವಸ್ಥೆ ರೂಪಿಸಿವುದು ಶಿಕ್ಷಣವನ್ನು ನೀಡುವುದಿಲ್ಲ ಮತ್ತು ದೀರ್ಘಾವಧಿಯಲ್ಲಿ ಯಾವುದೇ ಸಹಾಯ ಮಾಡುವುದಿಲ್ಲ ಎಂದು ಅವರು ಹೇಳಿದ್ದಾರೆ.
ಎಸ್ಎಸ್ಎಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ವರ್ಷಕ್ಕೆ ಮೂರು ಪರೀಕ್ಷೆಗಳನ್ನು ನಡೆಸಲು ತೀರ್ಮಾನಿಸಲಾಗಿದೆ. ಶೈಕ್ಷಣಿಕ ಪ್ರಗತಿ, ಅರ್ಥಪೂರ್ಣ ಕಲಿಕೆ, ಜ್ಞಾನಧಾರಣೆ ವೃದ್ಧಿಸುವ ಉದ್ದೇಶದಿಂದ ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು (ಕೆಎಸ್‌ಇಎಬಿ) ಘೋಷಿಸಿತ್ತು. ಜತೆಗೆ, 3 ಪರೀಕ್ಷೆಗಳ ವೇಳಾಪಟ್ಟಿಯನ್ನೂ ಬಿಡುಗಡೆ ಮಾಡಿತ್ತು.
ಹೊಸ ವ್ಯವಸ್ಥೆಯು ಮೊದಲ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳ ದೃಷ್ಟಿಯಿಂದ ಸಕಾರಾತ್ಮಕ ಕ್ರಮವಾಗಿದೆ. ಆದಾಗ್ಯೂ, ಇದು ಇತರ ವಿದ್ಯಾರ್ಥಿಗಳ ಕಾರ್ಯಕ್ಷಮತೆಯನ್ನು ಸುಧಾರಿಸಲು ಹೆಚ್ಚಿನ ಒತ್ತಡಕ್ಕೆ ಕಾರಣವಾಗುತ್ತದೆ. ಉತ್ತಮ ಅಂಕಗಳನ್ನು ಪಡೆಯಲು ಪಾಲಕರು ಹೆಚ್ಚಿನ ಒತ್ತಡವನ್ನು ಹೇರುತ್ತಾರೆ ಎಂದು ಕರ್ನಾಟಕ (ಕೆಎಎಂಎಸ್) ಆಂಗ್ಲ ಮಾಧ್ಯಮ ಶಾಲೆಗಳ ಪ್ರಧಾನ ಕಾರ್ಯದರ್ಶಿ ಅಸೋಸಿಯೇಟೆಡ್ ಮ್ಯಾನೇಜ್‌ಮೆಂಟ್ ಶಶಿಕುಮಾರ್ ಡಿ ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ. ಎರಡು ವಾರ್ಷಿಕ ಪರೀಕ್ಷೆಗಳು ಉತ್ತಮ ನೀತಿಯಾಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಕರ್ನಾಟಕ SSLC-PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್, ಪರೀಕ್ಷಾ ವ್ಯವಸ್ಥೆಯಲ್ಲಿ ಬದಲಾವಣೆ
‘ಸಪ್ಲಿಮೆಂಟರಿ ಸಿಸ್ಟಮ್’ ಮೂಲಕ ಪರೀಕ್ಷೆಗಳಲ್ಲಿ ಪಾಸಾಗಲು ಸಾಧ್ಯವಾಗದ ಕೆಲವು ವಿದ್ಯಾರ್ಥಿಗಳಲ್ಲಿ ಹೊಸ ವ್ಯವಸ್ಥೆಯು ಆತ್ಮವಿಶ್ವಾಸವನ್ನು ಹೆಚ್ಚಿಸಲಿದೆ ಎಂದು ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಎಂಇಎಸ್ ಶಿಕ್ಷಕರ ಮಹಾವಿದ್ಯಾಲಯದ ಮಾಜಿ ಪ್ರಾಂಶುಪಾಲರಾದ ಗಣೇಶ ಭಟ್ಟ ಮಾತನಾಡಿ, ಇದು ಸ್ವಾಗತಾರ್ಹ ನಡೆಯಾಗಿದೆ. ಇದರಿಂದ, ಸಪ್ಲಿಮೆಂಟರಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು ಎಂಬ ಕೀಳರಿಮೆ ವಿದ್ಯಾರ್ಥಿಗಳಲ್ಲಿ ಇಲ್ಲವಾಗಲಿದೆ ಎಂದು ಹೇಳಿದ್ದಾರೆ. ಆದಾಗ್ಯೂ, ಸೀಮಿತ ಸಮಯದ ಚೌಕಟ್ಟಿನೊಳಗೆ ಮೂರು ಪರೀಕ್ಷೆಗಳನ್ನು ಮತ್ತು ಮರುಮೌಲ್ಯಮಾಪನವನ್ನು ನಡೆಸುವುದು ಮಂಡಳಿಗೆ ಹೆಚ್ಚಿನ ಹೊರೆಯಾಗಲಿದೆ ಎಂದು ಅವರು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ