ಕೆಇಎ ಪರೀಕ್ಷೆಗಳಿಗೆ ಹಿಜಾಬ್​ ಜತೆಗೆ ತಾಳಿ, ಕಾಲುಂಗರಕ್ಕೂ ಅವಕಾಶ: ಹೊಸ ವಸ್ತ್ರ ಸಂಹಿತೆ ಜಾರಿ

|

Updated on: Nov 15, 2023 | 7:49 AM

ತಲೆ ಹೊದಿಕೆಯನ್ನು ಧರಿಸಿಕೊಂಡು ಬರುವ ಅಭ್ಯರ್ಥಿಗಳಿಗೆ ನಾವು ಈ ಸೂಚನೆಯನ್ನು ನೀಡಿದ್ದೇವೆ. ಇಂತಹ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಒಂದು ಗಂಟೆ ಮುಂಚೆ ಬರಬೇಕು. ಕೇಂದ್ರದಲ್ಲಿ ಸಂಪೂರ್ಣ ಪರೀಕ್ಷೆ ಮಾಡಿದ ನಂತರವೇ ಕೊಠಡಿಯೊಳಗಡೆ ಪ್ರವೇಶಿಸಲು ಅನುಮತಿ ನೀಡಲಾಗುವುದು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಸ್ಪಷ್ಟನೆ ನೀಡಿದ್ದಾರೆ.

ಕೆಇಎ ಪರೀಕ್ಷೆಗಳಿಗೆ ಹಿಜಾಬ್​ ಜತೆಗೆ ತಾಳಿ, ಕಾಲುಂಗರಕ್ಕೂ ಅವಕಾಶ: ಹೊಸ ವಸ್ತ್ರ ಸಂಹಿತೆ ಜಾರಿ
ಕೆಇಎ
Follow us on

ಬೆಂಗಳೂರು ನ.15: ನವೆಂಬರ್​​ 18 ಮತ್ತು 19 ರಂದು ವಿವಿಧ ನಿಗಮ ಮಂಡಳಿಗಳಿಗಳಿಗೆ (Boards and Corporations) ನಡೆಯಲಿರುವ ನೇಮಕಾತಿ ಪರೀಕ್ಷೆಗಳಿಗೆ (Exam) ಬಾಯಿ, ಕಿವಿ ಹಾಗೂ ತಲೆ ಮುಚ್ಚುವ ವಸ್ತ್ರ ಧರಿಸಿಕೊಂಡು ಬರುವಂತಿಲ್ಲ ಎಂಬ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸುತ್ತೋಲೆ ಮುಸ್ಲಿಂ ಮಹಿಳಾ ಅಭ್ಯರ್ಥಿಗಳಲ್ಲಿ ಗೊಂದಲ ಮೂಡಿಸಿದೆ. ಹಿಜಾಬ್​​ಗು ಅವಕಾಶ ಇಲ್ಲವೇ ಎಂಬ ಪ್ರಶ್ನೆ ಉದ್ಭವಿಸಿತ್ತು. ಇದೀಗ ಪ್ರಾಧಿಕಾರ ಈ ಕುರಿತು ಸ್ಪಷ್ಟನೆ ನೀಡಿದ್ದು, ಈ ಹಿಂದಿನಂತೆ ಪರೀಕ್ಷಾ ಕೊಠಡಿಯೊಳಗೆ ಹಿಜಾಬ್​ಗೆ ಅವಕಾಶ ನಿಡಲಾಗಿದೆ ಎಂದು ಹೇಳಿದೆ.

ಈ ಪ್ರಾಧಿಕಾರದ ಅಧಿಕೃತ ವೆಬ್​​ಸೈಟ್​ ಪ್ರಕಟಣೆ ಪ್ರಕಾರ: ನವೆಂಬರ್​​ 18 ಮತ್ತು 19 ರಂದು ನಡೆಯಲಿರುವ ಎರಡನೇ ಹಂತದ ನೇಮಕಾತಿ ಪರೀಕ್ಷೆಗಳಿಗೆ ಹಿಜಾಬ್‌ಗೆ ಅನುಮತಿ ಮುಂದುವರಿಯುತ್ತದೆ. ಪರೀಕ್ಷೆಗಳಿಗೆ ಹಾಜರಾಗುವ ಎಲ್ಲಾ ಅಭ್ಯರ್ಥಿಗಳು ನಿಗದಿತ ಸಮಯಕ್ಕಿಂತ ಎರಡು ಗಂಟೆ ಮೊದಲು ಪರೀಕ್ಷಾ ಕೇಂದ್ರಕ್ಕೆ ವರದಿ ಮಾಡಿಕೊಳ್ಳಬೇಕು ಎಂದು ಹೇಳಿದೆ.

ಈ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಮಾತನಾಡಿ ತಲೆ ಹೊದಿಕೆಯನ್ನು ಧರಿಸಿಕೊಂಡು ಬರುವ ಅಭ್ಯರ್ಥಿಗಳಿಗೆ ನಾವು ಈ ಸೂಚನೆಯನ್ನು ನೀಡಿದ್ದೇವೆ. ಇಂತಹ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಒಂದು ಗಂಟೆ ಮುಂಚೆ ಬರಬೇಕು. ಕೇಂದ್ರದಲ್ಲಿ ಸಂಪೂರ್ಣ ಪರೀಕ್ಷೆ ಮಾಡಿದ ನಂತರವೇ ಕೊಠಡಿಯೊಳಗಡೆ ಪ್ರವೇಶಿಸಲು ಅನುಮತಿ ನೀಡಲಾಗುವುದು ಎಂದು ಸ್ಪಷ್ಟನೆ ನೀಡಿದ್ದಾರೆ.

ತಾಳಿ ಮತ್ತು ಕಾಲುಂಗುರಕ್ಕೂ ಅನುಮತಿ

ಹಿಂದೂ ಅಭ್ಯರ್ಥಿಗಳು ಧರಿಸುವ ತಾಳಿ ಮತ್ತು ಕಾಲುಂಗುರಗಳನ್ನು ಪರೀಕ್ಷಾ ಕೊಠಡಿಗಳಿಗೆ ನಿಷೇಧಿಸಿದಕ್ಕೆ ಬಲಪಂಥಿಯ ಸಂಘಟನೆಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಇದರಿಂದ ಎಚ್ಚೆತ್ತ ಕೆಇಎ ತಾಳಿ ಮತ್ತು ಕಾಲುಂಗರಗಳನ್ನು ಹೊರತುಪಡಿಸಿ ಮಹಿಳೆಯರು ಯಾವುದೇ ಆಭರಣಗಳನ್ನು ಧರಿಸುವಂತಿಲ್ಲ ಎಂದು ಹೇಳಿದೆ.
ಪರೀಕ್ಷಾ ಸಭಾಂಗಣಗಳಲ್ಲಿ ಬ್ಲೂಟೂತ್ ಸಾಧನಗಳ ಬಳಕೆಯನ್ನು ತಡೆಗಟ್ಟುವ ಸಲುವಾಗಿ, ಕ್ಯಾಪ್​​ಗಳು ಅಥವಾ ಬಾಯಿ, ಕಿವಿ ಮತ್ತು ತಲೆಯನ್ನು ಮುಚ್ಚುವ ಬಟ್ಟೆ ಅಥವಾ ವಸ್ತುಗಳನ್ನು ನಿಷೇಧಿಸಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ನೇಮಕಾತಿ ಪರೀಕ್ಷೆಗಳಿಗೆ ಹಾಜರಾಗುವಾಗ ಮುಖ, ತಲೆ ಮುಚ್ಚುವ ವಸ್ತ್ರ ನಿಷಿದ್ಧ; ಕೆಇಎ ಕಟ್ಟುನಿಟ್ಟಿನ ಆದೇಶ

ಅಕ್ಟೋಬರ್ 28 ರಂದು ಕಲಬುರಗಿ ಮತ್ತು ಯಾದಗಿರಿ ಪರೀಕ್ಷಾ ಕೇಂದ್ರಗಳಲ್ಲಿ ಸರ್ಕಾರಿ ಇಲಾಖೆಗಳಲ್ಲಿ ಪ್ರಥಮ ವಿಭಾಗದ ಸಹಾಯಕರ (ಎಫ್‌ಡಿಎ) ನೇಮಕಾತಿಗಾಗಿ ಪರೀಕ್ಷೆ ಬರೆದಾಗ ಬ್ಲೂಟೂತ್ ಸಾಧನಗಳನ್ನು ಬಳಸಿ ಸಿಕ್ಕಿಬಿದ್ದ 20 ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಬಂಧಿಸಿದ ಹಿನ್ನೆಲೆಯಲ್ಲಿ ಹೊಸ ವಸ್ತ್ರ ಸಂಹಿತೆ ಜಾರಿ ಮಾಡಲಾಗಿದೆ.

ಅಕ್ಟೋಬರ್‌ನಲ್ಲಿ ಕರ್ನಾಟಕ ಉನ್ನತ ಶಿಕ್ಷಣ ಸಚಿವ ಎಂಸಿ ಸುಧಾಕರ್ ಅವರು ಪ್ರವೇಶ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಹಿಜಾಬ್‌ಗೆ ಅವಕಾಶ ಮಾಡಿಕೊಟ್ಟಿದ್ದರು. ಕಳೆದ ವರ್ಷವಷ್ಟೇ ಹಿಜಾಬ್ ವಿವಾದ ರಾಜ್ಯದಾದ್ಯಂತ ಬಹಳ ಚರ್ಚೆಗೆ ಗ್ರಾಸವಾಗಿತ್ತು. ಅಂದಿನ ಬಿಜೆಪಿ ಸರ್ಕಾರ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಅನ್ನು ನಿಷೇಧಿಸಿತ್ತು. ಕರ್ನಾಟಕ ಹೈಕೋರ್ಟ್ ಕೂಡ ಸರ್ಕಾರದ ಆದೇಶವನ್ನು ಎತ್ತಿ ಹಿಡಿದಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:44 am, Wed, 15 November 23