ನೇಮಕಾತಿ ಪರೀಕ್ಷೆಗಳಿಗೆ ಹಾಜರಾಗುವಾಗ ಮುಖ, ತಲೆ ಮುಚ್ಚುವ ವಸ್ತ್ರ ನಿಷಿದ್ಧ; ಕೆಇಎ ಕಟ್ಟುನಿಟ್ಟಿನ ಆದೇಶ
ಬ್ಲೂಟೂಥ್ ಸಾಧನಗಳನ್ನು ಪರೀಕ್ಷಾ ಕೊಠಡಿಯಲ್ಲಿ ಬಳಸುವುದನ್ನು ತಡೆಯುವ ನಿಟ್ಟಿನಲ್ಲಿ ತಲೆಯ ಮೇಲೆ ಟೋಪಿ ಅಥವಾ ಯಾವುದೇ ವಸ್ತ್ರವನ್ನು ಧರಿಸಿವುದನ್ನು ಬಾಯಿ ಕಿವಿ ಹಾಗು ತಲೆ ಮುಚ್ಚುವ ವಸ್ತ್ರವನ್ನು / ಸಾಧನವನ್ನು ಧರಿಸುವುದನ್ನು ನಿಷೇಧಿಸಲಾಗಿದೆ. ಹಿಜಾಬ್ ವಿವಾದ ಹಾಗೂ ಪಿಎಸ್ಐ, ಎಸ್ಡಿಎ ನೇಮಕಾತಿ ಪರೀಕ್ಷೆ ಹಗರಣಗಳ ದೃಷ್ಟಿಯಿಂದ ಈ ಕ್ರಮ ಮಹತ್ವದ್ದಾಗಿದೆ.
ಬೆಂಗಳೂರು ನ.14: ಮುಂಬರುವ ನೇಮಕಾತಿ ಪರೀಕ್ಷೆಗಳಿಗೆ ಹಾಜರಾಗುವವರು ಬಾಯಿ, ಕಿವಿ ಹಾಗೂ ತಲೆ ಮುಚ್ಚುವ ವಸ್ತ್ರ ಧರಿಸುವಂತಿಲ್ಲ ಎಂದು ರ್ನಾಟಕ ಪರೀಕ್ಷಾ ಪ್ರಾದಿಕಾರ (KEA) ಮಂಗಳವಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಕಳೆದ ವರ್ಷವಷ್ಟೇ ಹಿಜಾಬ್ ವಿವಾದ ರಾಜ್ಯದಾದ್ಯಂತ ಬಹಳ ಚರ್ಚೆಗೆ ಗ್ರಾಸವಾಗಿತ್ತು. ಈ ಮಧ್ಯೆ, 545 ಪಿಎಸ್ಐ, ಎಸ್ಡಿಎ (SDA) ಮತ್ತು ಎಫಡಿಎ (FDA) ನೇಮಕಾತಿ ಲಿಖಿತ ಪರೀಕ್ಷೆ ಹಗರಣ ಬೆಳಕಿಗೆ ಬಂದಿತ್ತು. ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಕರ್ನಾಟಕ ಪರೀಕ್ಷಾ ಪ್ರಾದಿಕಾರ (KEA) ಎಚ್ಚೆತ್ತುಗೊಂಡಿದೆ. ಮುಂಬರುವ ಯಾವುದೇ ನೇಮಕಾತಿ ಪರೀಕ್ಷೆಗಳಿಗೆ ಟೋಪಿ ಅಥವಾ ಬಾಯಿ, ಕಿವಿ ಹಾಗೂ ತಲೆ ಮುಚ್ಚುವ ವಸ್ತ್ರ ಧರಿಸುವಂತಿಲ್ಲ ಎಂದು ಖಡಕ್ ಆದೇಶ ಹೊರಡಿಸಿದೆ.
ಇಷ್ಟೇ ಅಲ್ಲದೆ, ಪರೀಕ್ಷಾ ಕೇಂದ್ರಗಳಿಗೆ ಮೊಬೈಲ್ ಮತ್ತು ಬ್ಲೂಟೂತ್ಗಳನ್ನು ತರುವುದನ್ನು ಕೆಇಎ ನಿಷೇಧಿಸಿದೆ. ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿನ ವಿವಿಧ ಮಂಡಳಿಗಳು ಮತ್ತು ನಿಗಮಗಳಿಗೆ ನಡೆಯುವ ನೇಮಕಾತಿ ಪರೀಕ್ಷೆಗಳಿಗೆ ಯಾವುದೇ ರೀತಿಯ ಶಿರವಸ್ತ್ರವನ್ನು ನಿಷೇಧಿಸಲಾಗಿದೆ. ಪರೀಕ್ಷಾ ಕೊಠಡಿಯೊಳಗೆ ಫೋನ್, ಬ್ಲೂಟೂತ್ ಮತ್ತು ಇಯರ್‌ಫೋನ್‌ಗಳಂತಹ ಯಾವುದೇ ರೀತಿಯ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ತರುವುದನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಿಷೇಧಿಸಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಟ್ವೀಟ್ನಲ್ಲಿ ಏನಿದೆ?
ನವೆಂಬರ್ 18 ಮತ್ತು 19 ರಂದು ವಿವಿಧ ನಿಗಮ ಮಂಡಳಿಗಳ ನೇಮಕಾತಿ ಪರೀಕ್ಷೆಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಪರೀಕ್ಷೆಗೆ ಧರಿಸಿಕೊಂಡು ಬರಬೇಕಾದ ವಸ್ತ್ರ ಸಂಹಿತೆ ಕುರಿತಂತೆ ಸುತ್ತೋಲೆ ಹೊರಡಿಸಿದೆ. ಸುತ್ತೋಲೆ ಪ್ರಕಾರ ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯೊಳಗೆ ಈ ಕಳಗಿನ ವಸ್ತುಗಳನ್ನು ತರುವುದು ನಿಷೇಧಿಸಲಾಗಿದೆ.
ಡ್ರೆಸ್ ಕೋಡ್ ಅನ್ನು ಅನುಸರಿಸುವುದರ ಜೊತೆಗೆ, ಕೆಳಗೆ ಪಟ್ಟಿ ಮಾಡಲಾದ ಪರೀಕ್ಷಾ ಕೇಂದ್ರಕ್ಕೆ ಯಾವುದೇ ನಿಷೇಧಿತ ವಸ್ತುಗಳನ್ನು ತೆಗೆದುಕೊಂಡು ಹೋಗದಂತೆ, ಅಭ್ಯರ್ಥಿಗಳು ಖಚಿತಪಡಿಸಿಕೊಳ್ಳಬೇಕು.
- ಎಲೆಕ್ಟ್ರಾನಿಕ್ ವಸ್ತುಗಳು, ಮೊಬೈಲ್ ಫೋನ್‌ಗಳು, ಪೆನ್ ಡ್ರೈವ್‌ಗಳು, ಇಯರ್ ಫೋನ್‌ಗಳು, ಮೈಕ್ರೋಫೋನ್‌ಗಳು, ಬ್ಲೂಟೂಥ್ ಸಾಧನಗಳು ಮತ್ತು ಕೈ ಗಡಿಯಾರಗಳನ್ನು ಪರೀಕ್ಷಾ ಕೊಠಡಿಯೊಳಗೆ ಅನುಮತಿಸಲಾಗುವುದಿಲ್ಲ.
- ಆಹಾರ ಪದಾರ್ಥಗಳನ್ನು ಪರೀಕ್ಷಾ ಕೊಠಡಿಯೊಳಗೆ ತರುವುದನ್ನು ಹಾಗೂ ತಿನ್ನುವುದನ್ನು ನಿಷೇಧಿಸಲಾಗಿದೆ.
- ಪೆನ್ಸಿಲ್, ಪೇಪರ್, ಎರೇಸರ್, ಜಾಮಿಟ್ರಿ ಬಾಕ್ಸ್ ಗಳು ಮತ್ತು ಲಾಗ್ ಟೇಬಲ್ಗಳನ್ನು ಪರೀಕ್ಷಾ ಕೇಂದ್ರದೊಳಗೆ ತರುವಂತಿಲ್ಲ.
- ಬ್ಲೂಟೂಥ್ ಸಾಧನಗಳನ್ನು ಪರೀಕ್ಷಾ ಕೊಠಡಿಯಲ್ಲಿ ಬಳಸುವುದನ್ನು ತಡೆಯುವ ನಿಟ್ಟಿನಲ್ಲಿ ತಲೆಯ ಮೇಲೆ ಟೋಪಿ ಅಥವಾ ಯಾವುದೇ ವಸ್ತ್ರವನ್ನು ಧರಿಸಿವುದನ್ನು ಬಾಯಿ ಕಿವಿ ಹಾಗು ತಲೆ ಮುಚ್ಚುವ ವಸ್ತ್ರವನ್ನು / ಸಾಧನವನ್ನು ಧರಿಸುವುದನ್ನು ನಿಷೇಧಿಸಿದೆ.
- ಯಾವುದೇ ರೀತಿಯ ಮಾಸ್ಕ್ ಅನ್ನು ಸಹ ಧರಿಸುವಂತಿಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:23 pm, Tue, 14 November 23