
ಬೆಂಗಳೂರು, (ಜುಲೈ 08): ಸಿಬಿಎಸ್‌ಇ ಮಾದರಿಯಲ್ಲೇ (CBSC Model) ಎಸ್‌ಎಸ್‌ಎಲ್‌ಸಿ ಪರೀಕ್ಷೆ (SSLC Exam) ನಡೆಸಲು ಕರ್ನಾಟಕ ಶಿಕ್ಷಣ ಇಲಾಖೆ ಮುಂದಾಗಿದೆ. ಸಿಬಿಎಸ್‌ಇ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಆಂತರಿಕ ಅಂಕಗಳೂ ಸೇರಿ ಒಟ್ಟಾರೆ ಶೇ 33 ಅಂಕ ಪಡೆದರೂ ತೇರ್ಗಡೆಯಾಗುತ್ತಾರೆ. ಪ್ರತಿ ವಿಷಯಕ್ಕೂ 20 ಆಂತರಿಕ ಅಂಕಗಳಿದ್ದು, 80 ಅಂಕಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಎರಡೂ ಸೇರಿ 100ಕ್ಕೆ ಕನಿಷ್ಠ 33 ಅಂಕ ಪಡೆದವರು ಉತ್ತೀರ್ಣರಾಗುತ್ತಾರೆ. ಇದೇ ಮಾದರಿಯನ್ನು ಎಸ್‌ಎಸ್‌ಎಲ್‌ಸಿಯಲ್ಲೂ ಅಳವಡಿಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (KSEAB)ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ. ಒಂದು ವೇಳೆ ಸರ್ಕಾರ ಇದಕ್ಕೆ ಒಪ್ಪಿಗೆ ಸೂಚಿಸಿದರೆ, ಕರ್ನಾಟಕ ಪಠ್ಯಕ್ರಮ ಅನುಸರಿಸುವ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳ ಮಕ್ಕಳು ಇನ್ನು ಮುಂದೆ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಮಾದರಿಯಲ್ಲೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎದುರಿಸಲಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ಸೇರಿ ಪ್ರಥಮ ಭಾಷೆಯನ್ನು 125ಕ್ಕೆ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ದ್ವಿತೀಯ ಹಾಗೂ ತೃತೀಯ ಭಾಷಾ ವಿಷಯಗಳ ಪರೀಕ್ಷೆಯನ್ನು 100 ಅಂಕಗಳಿಗೆ ನಡೆಸಲಾಗುತ್ತದೆ. ಇದರಲ್ಲಿ ಪ್ರಥಮ ಭಾಷೆ 25 ಹಾಗೂ ಉಳಿದ ಇತರೆ ವಿಷಯಗಳಲ್ಲಿ ತಲಾ 20 ಅಂಕಗಳು ಆಂತರಿಕ ಮೌಲ್ಯಮಾಪನಕ್ಕೆ ನಿಗದಿ ಮಾಡಲಾಗಿದೆ. ಸಿಬಿಎಸ್‌ಇ ಮಾದರಿಯ ಹೊಸ ನಿಯಮ ಜಾರಿಯಾದರೆ ಒಬ್ಬ ವಿದ್ಯಾರ್ಥಿ ಒಂದು ವಿಷಯದಲ್ಲಿ 20 ಆಂತರಿಕ ಅಂಕ ಪಡೆದರೆ, ಲಿಖಿತ ಪರೀಕ್ಷೆಯಲ್ಲಿ 13 ಒಟ್ಟು 33 ಅಂಕ ಬಂದರೂ ಸಾಕು ಆ ವಿಷಯದಲ್ಲಿ ತೇರ್ಗಡೆಯಾಗುತ್ತಾನೆ.
ಕನ್ನಡ ಸೇರಿದಂತೆ ಎಸ್‌ಎಸ್‌ಎಲ್‌ಸಿ ಪ್ರಥಮ ಭಾಷಾ ಪರೀಕ್ಷೆಯ ಅಂಕವನ್ನು 125ರ ಬದಲು 100ಕ್ಕೆ ಸೀಮಿತಗೊಳಿಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ನಿರ್ಧರಿಸಿದೆ. 2026ರ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ನಡೆಯುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಇತರೆ ಐದು ವಿಷಯಗಳಂತೆ ಕನ್ನಡಕ್ಕೂ 125ರ ಬದಲಿಗೆ 100 ಅಂಕಕ್ಕೆ ಇಳಿಸುವ ಚಿಂತನೆಗಳು ನಡೆದಿವೆ. ಈ ಮೂಲಕ ಒಟ್ಟಾರೆ ಅಂಕಗಳು 625ರಿಂದ 600ಕ್ಕೆ ಇಳಿಯಲಿವೆ.
ನಿವೃತ್ತ ಪ್ರಾಧ್ಯಾಪಕ ಗಣೇಶ್ ಭಟ್ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಪರೀಕ್ಷೆ ಸುಧಾರಣಾ ಸಮಿತಿಯು, ಮುಂಬರುವ ಎಸ್‌ಎಸ್ ಎಲ್‌ಸಿ ಪರೀಕ್ಷೆಯಲ್ಲಿ ಒಂದು ಅಂಕದ, ಬಹು ಆಯ್ಕೆಯ ಪ್ರಶ್ನೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಅಳವಡಿಸಲು, ಪ್ರತಿ ವಿಭಾಗದಲ್ಲೂ ಹೆಚ್ಚು ಪ್ರಶ್ನೆಗಳನ್ನು ನೀಡಿ, ಯಾವುದಾದರೂ ಎರಡು, ಮೂರು, ನಾಲ್ಕು ಪ್ರಶ್ನೆಗಳನ್ನು ಆಯ್ಕೆ ಮಾಡಿಕೊಂಡು ಉತ್ತರ ಬರೆಯುವ ಅವಕಾಶವನ್ನು ವಿದ್ಯಾರ್ಥಿಗಳಿಗೆ ನೀಡಲು ಸಮಿತಿ ಚರ್ಚೆ ನಡೆಸಿದೆ.
ಸಿಬಿಎಸ್‌ಇ ಮಾದರಿಯ ಹೊಸ ನಿಯಮ ಜಾರಿಯಾದರೆ ಒಬ್ಬ ವಿದ್ಯಾರ್ಥಿ ಒಂದು ವಿಷಯದಲ್ಲಿ 20 ಆಂತರಿಕ ಅಂಕ ಪಡೆದರೆ, ಲಿಖಿತ ಪರೀಕ್ಷೆಯಲ್ಲಿ 13 ಬಂದರೂ ತೇರ್ಗಡೆಯಾಗುತ್ತಾನೆ. ಈಗಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷಾ ನಿಯಮದ ಪ್ರಕಾರ ಒಬ್ಬ ವಿದ್ಯಾರ್ಥಿ ಉತ್ತೀರ್ಣರಾಗಲು ಶೇ 35 ಅಂಕಗಳನ್ನು ಪಡೆಯಬೇಕು. ಖಾಸಗಿ ಶಾಲೆಗಳ ಒಕ್ಕೂಟ ಈ ಹಿಂದೆ ಪತ್ರಿಕಾಗೋಷ್ಠಿ ಮಾಡಿ ಈ ಬಗ್ಗೆ ಒತ್ತಾಯ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಒಟ್ಟಿನಲ್ಲಿ ಈ ಹಿಂದಿನಿಂದಲೂ ಪರೀಕ್ಷಾ ವ್ಯವಸ್ಥೆಯಲ್ಲಿ ಬದಲಾವಣೆ ಆಗಬೇಕು ಬೇರೆ ರಾಜ್ಯಗಳಲ್ಲಿ ಇರುವಂತೆ ನಮ್ಮಲ್ಲಿಯೂ ಶೇಕಡಾವಾರು 33 ಪರ್ಸೆಂಟ್ ತರಬೇಕು ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದ್ದು ಈಗ ಸರ್ಕಾರಕ್ಕೆ ಶಿಕ್ಷಣ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ. ಇನ್ನು ಸರ್ಕಾರ 2026-27 ನೇ ಸಾಲಿಗೆ ಈ ನಿಯಮ ಜಾರಿ ಮಾಡಿ ಆದೇಶ ಹೊರಡಿಸುವ ಸಾಧ್ಯತೆ ಇದೆ.
Published On - 5:50 pm, Tue, 8 July 25