ಇನ್ಮುಂದೆ ಶಾಲೆಗಳಲ್ಲಿ ಹೊಸ ರೂಲ್ಸ್: ವಿದ್ಯಾರ್ಥಿಗಳು, ಪೋಷಕರು ಇದನ್ನ ತಿಳಿದುಕೊಳ್ಳಲೇಬೇಕು!
ಇನ್ಮುಂದೆ ಕರ್ನಾಟಕದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಮಕ್ಕಳ ಹಾಜರಾತಿಯಲ್ಲಿ ಹೊಸ ರೂಲ್ಸ್ ಜಾರಿಗೆ ಬರುತ್ತಿದೆ. ಪ್ರಸಕ್ತ ವರ್ಷದಿಂದ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹೆಸರು ಕೂಗಿ ಹಾಜರಾತಿ ಪಡೆಯುವ ಬದಲಾಗಿ, ಶಿಕ್ಷಕರು ಮೊಬೈಲ್‌ನಲ್ಲಿ ವಿದ್ಯಾರ್ಥಿಗಳ ಫೋಟೋ ಕ್ಲಿಕ್ಕಿಸಿಕೊಳ್ಳುವ ಮೂಲಕ ಹಾಜರಾತಿ ದಾಖಲಿಸಿಕೊಳ್ಳಲಿದ್ದಾರೆ. ಕಳೆದ ಬಜೆಟ್ ನಲ್ಲಿ ಸಿಎಂ ಸಿದ್ದರಾಮಯ್ಯ ಈ ಕಾರ್ಯಕ್ರಮದ ಬಗ್ಗೆ ಘೋಷಣೆ ಮಾಡಿದ್ದರು. ಅದರಂತೆ ʼನಿರಂತರʼ ಹೆಸರಿನಲ್ಲಿ ಕಾರ್ಯಕ್ರಮ ಅನುಷ್ಠಾನ ಆಗುತ್ತಿದೆ. ಏನಿದು? ಇದರ ಪ್ರಯೋಜನೆಗಳೇನು ಎನ್ನುವುದನ್ನು ತಿಳಿದುಕೊಳ್ಳಿ.

ಬೆಂಗಳೂರು, (ಜೂನ್ 22): ಕರ್ನಾಟಕದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ (Government And Aided Schools) ಮಕ್ಕಳ ಹಾಜರಾತಿಗೆ (Students Attendance )ಇನ್ಮುಂದೆ ಆನ್‌ಲೈನ್ ಸಿಸ್ಟಮ್ ಜಾರಿಯಾಗಲಿದೆ. ಪ್ರಸಕ್ತ ವರ್ಷದಿಂದಲೇ ಎಐ ಫೇಶಿಯಲ್ ರಿಕಗ್ನಿಷನ್ ( Facial Recognition) ತಂತ್ರಜ್ಞಾನ ಆಧಾರಿತ ಹಾಜರಾತಿ ವ್ಯವಸ್ಥೆ ಜಾರಿಗೆ ಸರ್ಕಾರ ಮತ್ತು ಶಿಕ್ಷಣ ಇಲಾಖೆ (Karnataka School Education Department) ಆದೇಶ ಹೊರಡಿಸಿದ್ದು, 2025-26ನೇ ಶೈಕ್ಷಣಿಕ ಸಾಲಿನಿಂದಲೇ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ. ಹೀಗಾಗಿ ಪ್ರಸಕ್ತ ವರ್ಷದಿಂದ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹೆಸರು ಕೂಗಿ ಹಾಜರಾತಿ ಪಡೆಯುವ ಬದಲಾಗಿ, ಶಿಕ್ಷಕರು ಮೊಬೈಲ್‌ನಲ್ಲಿ ವಿದ್ಯಾರ್ಥಿಗಳ ಫೋಟೋ ಕ್ಲಿಕ್ಕಿಸಿಕೊಳ್ಳುವ ಮೂಲಕ ಹಾಜರಾತಿ ದಾಖಲಿಸಿಕೊಳ್ಳಲಿದ್ದಾರೆ.
ಒಟ್ಟು 52,686 ಶಾಲೆಗಳಲ್ಲಿ ಆನ್‌ಲೈನ್ ಹಾಜರಾತಿ
ಮೊಬೈಲ್ ಆಧಾರಿತ AI-Driven Facial Recognition Attendance system ಇದಾಗಿದೆ. ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಈ ವ್ಯವಸ್ಥೆ ಜಾರಿಯಾಗುತ್ತಿದ್ದು, 52,686 ಶಾಲೆಗಳಲ್ಲಿ ಆನ್‌ಲೈನ್ ಹಾಜರಾತಿ ವ್ಯವಸ್ಥೆ ಬರಲಿದೆ. ‘ನಿರಂತರ’ ಯೋಜನೆಯಡಿ ರಾಜ್ಯದ 40,74,525 ಸರ್ಕಾರಿ ಹಾಗೂ 11,81,213 ಅನುದಾನಿತ ಸೇರಿ ಒಟ್ಟು 52,686 ಶಾಲೆಗಳ 52 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಹಾಜರಾತಿಯನ್ನು ಕೃತಕ ಬುದ್ಧಿಮತ್ತೆ ಚಾಲಿತ, ಮುಖ ಚಹರೆ ಗುರುತು ಆಧಾರಿತವಾಗಿ (ಎಐ ಫೇಶಿಯಲ್ ರಿಕಗ್ನಿಷನ್) ತೆಗೆದುಕೊಳ್ಳಲಾಗುತ್ತದೆ.
ಇದನ್ನೂ ಓದಿ: ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಲೈಂಗಿಕ ಶಿಕ್ಷಣ, ಸಿಡಿದೆದ್ದ ಹಿಂದೂ ಸಂಘಟನೆಗಳು
ಸುಮಾರು 5 ಕೋಟಿ ರೂ. ವೆಚ್ಚದ ಈ ಯೋಜನೆಯನ್ನು ಕರ್ನಾಟಕ ಸ್ಟೇಟ್ ಡೇಟಾ ಸೆಂಟರ್ (ಕೆಎಸ್‌ಡಿಸಿ) ಮೂಲಕ ನಿರ್ವಹಣೆ ಮಾಡಲಾಗುತ್ತದೆ. ಇದಕ್ಕಾಗಿ ಸಾಫ್ಟ್‌ವೇರ್ ಕೂಡ ಸಿದ್ಧಪಡಿಸಲಾಗುತ್ತಿದೆ. ಇದು ಗರಿಷ್ಠ ಗೌಪ್ಯತೆ ಮತ್ತು ಸುರಕ್ಷತೆ ಕಾಪಾಡುತ್ತದೆ. ಪ್ರಸಕ್ತ ವರ್ಷದಿಂದಲೇ ಇ-ಹಾಜರಾತಿ ಜಾರಿಗೆ ಬರಲಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆದೇಶದಲ್ಲಿ ತಿಳಿಸಲಾಗಿದೆ.
ಪ್ರತಿನಿತ್ಯ ತ್ವರಿತವಾಗಿ ನಿಖರ ಹಾಜರಾತಿಯಿಂದ ಸಂಬಂಧಿಸಿದ ಶಾಲೆಯ ವ್ಯವಸ್ಥೆ ಸುಧಾರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ. ಪ್ರಸ್ತುತ ಕೈಯಿಂದ ಬರೆಯುವ ಹಾಜರಾತಿಯಲ್ಲಿನ ನ್ಯೂನತೆಗಳು, ನಕಲಿ ಹಾಜರಾತಿ ತಪ್ಪಿಸಬಹುದು. ನಿಖರವಾದ ಮಾಹಿತಿ ರಿಯಲ್ ಟೈಮ್‌ನಲ್ಲಿ ಲಭ್ಯವಾಗುವುದರಿಂದ ಮಕ್ಕಳ ಹಾಜರಾತಿಯ ಮೇಲ್ವಿಚಾರಣೆ ಸಾಧ್ಯವಾಗಲಿದೆ. ಹಾಜರಾತಿ ಹೆಸರಲ್ಲಿ ಅನಗತ್ಯ ಮತ್ತು ಹೆಚ್ಚುವರಿ ಅನುದಾನ ಹಂಚಿಕೆ ಕೂಡ ಗಣನೀಯವಾಗಿ ತಡೆಗಟ್ಟಬಹುದು ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
ಇ-ಹಾಜರಾತಿ ಕಾರ್ಯ ನಿರ್ವಹಣೆ ಹೇಗೆ?
ಶಾಲೆಯ ಮೊದಲ ತರಗತಿಯಲ್ಲಿ ಹಾಜರಾತಿ ಪುಸ್ತಕ ತೆರೆದು ಹೆಸರು ಕೂಗಿ ಟಿಕ್ ಮಾಡಿಕೊಳ್ಳುವ ಬದಲು, ಶಿಕ್ಷಕರ ಮೊಬೈಲ್‌ಗೆ ಅಳವಡಿಸಲಾಗಿರುವ ಸಾಫ್ಟ್‌ವೇರ್‌ನಲ್ಲಿ ಮಕ್ಕಳ ಫೋಟೋ ಕ್ಲಿಕ್ಕಿಸಿಕೊಳ್ಳಲಾಗುತ್ತದೆ. ಅದರಲ್ಲಿ ಮಕ್ಕಳ ಹೆಸರು ಮತ್ತು ತರಗತಿ ವಿವರ ಮೊದಲೇ ಫೀಡ್ ಮಾಡಲಾಗಿದ್ದು, ಫೋಟೋ ಕ್ಲಿಕ್ಕಿಸಿದ ಕೂಡಲೇ ಆ್ಯಪ್‌ನಲ್ಲಿ ಸ್ವಯಂಚಾಲಿತವಾಗಿ ಹೆಸರು, ಸಮಯ ಸಹಿತ ಹಾಜರಾತಿ ದಾಖಲಾಗುತ್ತದೆ. ಈ ವಿವರ ನೇರವಾಗಿ ಕೇಂದ್ರ ಕಚೇರಿಗೆ ರವಾನೆಯಾಗುವ ಕಾರಣ ಏಕಕಾಲದಲ್ಲಿ ನಿಖರ ಮಾಹಿತಿ ಶಿಕ್ಷಣ ಇಲಾಖೆಯ ಪ್ರಧಾನ ಕಚೇರಿಗೆ ತಲುಪುತ್ತದೆ. ಮಕ್ಕಳು ಬಾರದೇ ಇದ್ದರೂ, ತೋರಿಕೆಗಾಗಿ ಶಿಕ್ಷಕರು ಹಾಕಬಹುದಾದ ಸಂಭವನೀಯ ನಕಲಿ ಹಾಜರಾತಿಗೂ ಕಡಿವಾಣ ಬೀಳಲಿದೆ.
ಸ್ಮಾರ್ಟ್ ಹಾಜರಾತಿ ಪ್ರಯೋಜನಗಳೇನು?
- ವಿದ್ಯಾರ್ಥಿಗಳ ಹಾಜರಾತಿ ಕಡಿಮೆ ಸಮಯದಲ್ಲಿ ಲಭ್ಯವಾಗುತ್ತದೆ. ವಿದ್ಯಾರ್ಥಿಗಳ ಹಾಜರಾತಿಯಲ್ಲಿ ನಿಖರತೆ ದೊರೆಯುತ್ತದೆ.
- ಪ್ರಸ್ತುತ ಹಾಜರಾತಿ ದಾಖಲಾತಿಯಲ್ಲಿನ ವ್ಯವಸ್ಥೆಯಲ್ಲಿನ ನ್ಯೂನ್ಯತೆ ಸರಿಪಡಿಸಿ ನಿಖರ ಹಾಜರಾತಿಯನ್ನು ನಿತ್ಯವೂ ಪಡೆಯಬಹುದು.
- ಯಾವುದೇ ಶಾಲೆಯಲ್ಲಿ ಹಾಜರಾತಿಯಲ್ಲಿ ಕೊರತೆ ಬಂದರೆ ನಿತ್ಯವೂ ಮೇಲ್ವಿಚಾರಣೆ ಮಾಡಬಹುದು. *ವಿವಿಧ ಪ್ರೋತ್ಸಾಹದಾಯಕ ಯೋಜನೆಗಳ ಅನುಷ್ಠಾನಕ್ಕೆ ನಿಖರ ಮಾಹಿತಿ ಲಭ್ಯವಾಗುತ್ತದೆ.
- ವಿದ್ಯಾರ್ಥಿಗಳ ನಿಖರ ಮಾಹಿತಿ ಸಿಗುವುದರಿಂದ ಅನಗತ್ಯ, ಹೆಚ್ಚುವರಿ ಅನುದಾನ ಹಂಚಿಕೆ ತಡೆಗಟ್ಟಬಹುದು.
- ನಿತ್ಯವೂ ಹಾಜರಾತಿ ಲಭ್ಯವಾಗುವುದರಿಂದ ಶಾಲೆಗಳಲ್ಲಿನ ಶೈಕ್ಷಣಿಕ ವ್ಯವಸ್ಥೆ ಸುಧಾರಿಸಬಹುದು.