National Education Day 2024: ಭಾರತೀಯ ಶಿಕ್ಷಣ ಕ್ಷೇತ್ರಕ್ಕೆ ಮೊದಲ ಶಿಕ್ಷಣ ಸಚಿವರಾಗಿದ್ದ ಆಜಾದ್ ನೀಡಿದ ಕೊಡುಗೆಗಳೇನು? ಇಲ್ಲಿದೆ ಮಾಹಿತಿ
ಇಂದು ರಾಷ್ಟ್ರೀಯ ಶಿಕ್ಷಣ ದಿನ. ಭಾರತದ ಪ್ರಥಮ ಶಿಕ್ಷಣ ಮಂತ್ರಿ ಭಾರತ ರತ್ನ ಡಾ. ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಜನ್ಮದಿವಾದ ನವೆಂಬರ್ 11 ಅನ್ನು ರಾಷ್ಟ್ರೀಯ ಶಿಕ್ಷಣ ದಿನವಾಗಿ ಆಚರಿಸಲಾಗುತ್ತಿದೆ. ಅವರು ದೇಶದ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಅದ್ವಿತೀಯ ಕೊಡುಗೆಗಳನ್ನು ಈ ದಿನದಂದು ನೆನಪಿಸಿಕೊಳ್ಳಲಾಗುತ್ತದೆ. ಹಾಗಾದ್ರೆ ರಾಷ್ಟ್ರೀಯ ಶಿಕ್ಷಣ ದಿನದ ಆಚರಣೆಯೂ ಶುರುವಾದದ್ದು ಯಾವಾಗ? ಏನಿದರ ಮಹತ್ವ? ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.
ಶಿಕ್ಷಣ ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಹಕ್ಕಾಗಿದೆ. ದೇಶವು ಅಭಿವೃದ್ಧಿಯತ್ತ ಸಾಗಬೇಕಾದರೆ ಶಿಕ್ಷಣ ಹಾಗೂ ಆರ್ಥಿಕತೆಯೂ ಪ್ರಮುಖ ಪಾತ್ರವಹಿಸುತ್ತದೆ. ಇವರೆಡು ಇದ್ದಲ್ಲಿ ಮಾತ್ರವೇ ಆ ದೇಶವು ಅಭಿವೃದ್ಧಿಯತ್ತ ಸಾಗಲು ಸಾಧ್ಯ. ಭಾರತದಲ್ಲಿ ಪ್ರತಿವರ್ಷ ನವೆಂಬರ್ ತಿಂಗಳಲ್ಲಿ ರಾಷ್ಟ್ರೀಯ ಶಿಕ್ಷಣ ದಿನ ಆಚರಿಸಲಾಗುತ್ತದೆ. ಭಾರತದಲ್ಲಿ ಸ್ವಾತಂತ್ರ್ಯದ ನಂತರ ಭಾರತದ ಮೊದಲ ಶಿಕ್ಷಣ ಸಚಿವರಾಗಿದ್ದ ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಜನ್ಮದಿನದಂದು ಪ್ರತಿ ವರ್ಷ ನವೆಂಬರ್ 11 ರಂದು ರಾಷ್ಟ್ರೀಯ ಶಿಕ್ಷಣ ದಿನವನ್ನು ಆಚರಿಸಲಾಗುತ್ತದೆ. ಈ ದಿನ ಮೌಲಾನಾ ಅಬುಲ್ ಕಲಾಂ ಆಜಾದ್ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಲಾಗುತ್ತದೆ.
ರಾಷ್ಟ್ರೀಯ ಶಿಕ್ಷಣದ ದಿನದ ಇತಿಹಾಸ
ಮೌಲಾನಾ ಅಬುಲ್ ಕಲಾಂ ಆಜಾದ್ ಸ್ವತಂತ್ರ ಭಾರತದ ಮೊಟ್ಟ ಮೊದಲ ಶಿಕ್ಷಣ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಭಾರತೀಯ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಅವರು ನೀಡಿದ ಮಹತ್ತರವಾದ ಕೊಡುಗೆಯನ್ನು ಗೌರವಿಸುವ ಉದ್ದೇಶದಿಂದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು 2008 ರಲ್ಲಿ ಆಜಾದ್ ಜನ್ಮದಿನವನ್ನು ರಾಷ್ಟ್ರೀಯ ಶಿಕ್ಷಣ ದಿನವಾಗಿ ಆಚರಿಸಲು ಮುಂದಾಯಿತು. ಅಂದಿನಿಂದ ಪ್ರತಿವರ್ಷ ನವೆಂಬರ್ 11 ರಂದು ರಾಷ್ಟ್ರೀಯ ಶಿಕ್ಷಣ ದಿನವನ್ನು ಆಚರಿಸಲಾಗುತ್ತದೆ.
ರಾಷ್ಟ್ರೀಯ ಶಿಕ್ಷಣ ದಿನದ ಮಹತ್ವ ಹಾಗೂ ಆಚರಣೆ
ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಮತ್ತು ಶಿಕ್ಷಣದ ಮಹತ್ವದ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಮೂಡಿಸಲು ರಾಷ್ಟ್ರೀಯ ಶಿಕ್ಷಣ ದಿನದ ಆಚರಣೆ ಮಹತ್ವದ್ದಾಗಿದೆ. ರಾಷ್ಟ್ರ ನಿರ್ಮಾಣದಲ್ಲಿ ಹಾಗೂ ಭಾರತೀಯ ಶಿಕ್ಷಣ ವ್ಯವಸ್ಥೆಯನ್ನು ಆಧುನೀಕರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ನಾಯಕ ಮೌಲಾನಾ ಅಬುಲ್ ಕಲಾಂ ಆಜಾದ್ ಅವರನ್ನು ನೆನೆಪಿಸಿಕೊಳ್ಳುವುದು ಈ ದಿನದ ಉದ್ದೇಶವಾಗಿದೆ. ಈ ಹಿನ್ನಲೆಯಲ್ಲಿ ಶಾಲೆಗಳು ಮತ್ತು ಕಾಲೇಜುಗಳು ವೈವಿಧ್ಯಮಯ ಕಾರ್ಯಕ್ರಮಗಳು, ವಿಚಾರಗೋಷ್ಠಿಗಳು ಹಾಗೂ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ಇದನ್ನೂ ಓದಿ: ಕಡಿಮೆ ಎಣ್ಣೆಯಲ್ಲಿ ರುಚಿಕರವಾದ ಅಡುಗೆ ಮಾಡಲು ಈ ಸರಳ ಸಲಹೆಗಳನ್ನು ಅನುಸರಿಸಿ
ಶಿಕ್ಷಣಕ್ಕೆ ಮೌಲಾನಾ ಅಬುಲ್ ಕಲಾಂ ಆಜಾದ್ ನೀಡಿದ ಕೊಡುಗೆಗಳು
1888ರ ನವೆಂಬರ್ 11ರಂದು ಜನಿಸಿದ ಮೌಲಾನಾ ಅಬುಲ್ ಕಲಾಂ ಆಜಾದ್ ಅವರು ಭಾರತದ ಮೊದಲ ಶಿಕ್ಷಣ ಸಚಿವರಾಗಿದ್ದರು. ಆಗಸ್ಟ್ 15ರ 1947 ರಿಂದ ಫೆಬ್ರವರಿ 2ರ 1958 ರವರೆಗೆ ಸಚಿವರಾಗಿ ಸೇವೆಯನ್ನು ಸಲ್ಲಿಸುವ ಮೂಲಕ ಮಹತ್ತರವಾದ ಕೊಡುಗೆಯನ್ನು ನೀಡಿದ್ದಾರೆ. 1951ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯನ್ನು ಪ್ರಾರಂಭಿಸಿದವರು ಈ ಆಜಾದ್. ದೆಹಲಿಯ ದಿ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಎಜುಕೇಶನ್ ಅನ್ನು ಸ್ಥಾಪಿಸಿದ ಹಿರಿಮೆ ಆಜಾದ್ ಅವರದ್ದು. 1953ರಲ್ಲಿ ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗವನ್ನು ಸ್ಥಾಪಿಸಿದರು. ಇದರಿಂದ ದೇಶದಲ್ಲಿ ಹತ್ತಾರು ವಿಶ್ವವಿದ್ಯಾಲಯಗಳುಗಳು ಸ್ಥಾಪನೆಗೆ ಕಾರಣವಾಯಿತು. ಇವರು ನೀಡಿದ ಈ ಎಲ್ಲಾ ಕೊಡುಗೆಗಳು ರಾಷ್ಟ್ರದ ಇಡೀ ಶಿಕ್ಷಣ ವ್ಯವಸ್ಥೆಯನ್ನು ಬದಲಾಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ಹೀಗಾಗಿ ಈ ದಿನದಂದು ಮೌಲಾನಾ ಅಬುಲ್ ಕಲಾಂ ಆಜಾದ್ ಅವರು ನೀಡಿದ ಕೊಡುಗೆಗಳನ್ನು ಭಾರತೀಯರು ನೆನಪಿಸಿಕೊಳ್ಳಲೇಬೇಕು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ