NEET UG 2021: ಇದೇ ಮೊದಲ ಬಾರಿಗೆ ದುಬೈನಲ್ಲಿ ನಡೆಯಲಿದೆ ನೀಟ್ ಪ್ರವೇಶ ಪರೀಕ್ಷೆ

NEET: ಇದೇ ಮೊದಲ ಬಾರಿಗೆ ದುಬೈನಲ್ಲಿ ನೀಟ್ ಪ್ರವೇಶ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಈ ಕುರಿತು ಶಿಕ್ಷಣ ಸಚಿವಾಲಯವು ಅಧಿಕೃತವಾಗಿ ಘೋಷಿಸಿದೆ.

NEET UG 2021: ಇದೇ ಮೊದಲ ಬಾರಿಗೆ ದುಬೈನಲ್ಲಿ ನಡೆಯಲಿದೆ ನೀಟ್ ಪ್ರವೇಶ ಪರೀಕ್ಷೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: shivaprasad.hs

Updated on: Jul 23, 2021 | 1:43 PM

ಇದೇ ಮೊದಲ ಬಾರಿಗೆ ದುಬೈನಲ್ಲಿ ನೀಟ್ ಪರೀಕ್ಷೆ(NEET UG 2021) ಬರೆಯಲು ಅವಕಾಶ ಕಲ್ಪಿಸಲಾಗಿದೆ. ಶಿಕ್ಷಣ ಸಚಿವಾಲಯವು ಗುರುವಾರ ಟ್ವಿಟರ್​ನಲ್ಲಿ ಪ್ರಕಟಿಸಿರುವ ಮಾಹಿತಿಯಂತೆ ಕುವೈತ್ ಜೊತೆಗೆ ದುಬೈನಲ್ಲೂ ನೀಟ್ ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರವನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದೆ. ಮಧ್ಯಪ್ರಾಚ್ಯದಲ್ಲಿರುವ ಭಾರತೀಯ ಸಮುದಾಯಗಳಲ್ಲಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಈ ಹಿಂದೆ ಕುವೈತ್​ನಲ್ಲಿ ಪರೀಕ್ಷೆ ನಡೆಸುವುದಾಗಿ ಸಚಿವಾಲಯ ಪ್ರಕಟಿಸಿತ್ತು. ಈಗ ಆ ಪಟ್ಟಿಗೆ ದುಬೈಯನ್ನೂ ಸೇರಿಸಲಾಗಿದೆ.

ಮಾನವ ಸಂಪನ್ಮೂಲ ವಿಭಾಗದ ಕಾರ್ಯದರ್ಶಿ ಅಮಿತ್ ಖರೆ ವಿದೇಶಾಂಗ ಕಾರ್ಯದರ್ಶಿಗೆ ಬರೆದಿರುವ ಪತ್ರದಲ್ಲಿ ಇದನ್ನು ಖಚಿತಪಡಿಸಿದ್ದು, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎನ್​ಟಿಎ) ಕುವೈತ್ ಜೊತೆಗೆ ದುಬೈನಲ್ಲೂ ಪರೀಕ್ಷಾ ಕೇಂದ್ರವನ್ನು ತೆರೆಯಲು ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ಶಿಕ್ಷಣ ಸಚಿವಾಲಯವು ತಮಿಳುನಾಡಿನಲ್ಲಿ ಹೆಚ್ಚುವರಿ ಪರೀಕ್ಷಾ ಕೇಂದ್ರಗಳನ್ನು ತೆರೆಯಲು ಮುಂದಾಗಿತ್ತು. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಈ ಕುರಿತು ಮಾಹಿತಿ ನೀಡಿ, ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ತಮಿಳುನಾಡಿನ ಹೆಚ್ಚುವರಿ ನಾಲ್ಕು ನಗರಗಳಲ್ಲಿ(ಚೆಂಗಲ್​ಪೇಟ್, ವಿರುಧುನಗರ್, ದಿಂಡಿಗುಲ್ ಹಾಗೂ  ತಿರುಪ್ಪೂರ್) ನೀಟ್ ಪರೀಕ್ಷೆ ನಡೆಸಲಾಗುವುದು ಎಂದು ಘೋಷಿಸಿದ್ದರು.

ಈ ಮೊದಲು ದೇಶದಲ್ಲಿ ಒಟ್ಟು 155 ನಗರಗಳಲ್ಲಿ ನೀಟ್ ಪರೀಕ್ಷೆ ನಡೆಯುತ್ತಿದೆ. ಈ ಬಾರಿ ಹೆಚ್ಚುವರಿ ಕೇಂದ್ರಗಳನ್ನು ಸೇರಿಸಿರುವುದರಿಂದ ಒಟ್ಟು 198 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ನೀಟ್ ಪರೀಕ್ಷೆಯು ಒಟ್ಟು 13 ಭಾಷೆಗಳಲ್ಲಿ ನಡೆಯಲಿದೆ. ಅವುಗಳಲ್ಲಿ ಪಂಜಾಬಿ ಮತ್ತು ಮಲಯಾಳಂ ಅನ್ನು ಈ ಬಾರಿ ಸೇರಿಸಲಾಗಿದೆ. ಇವುಗಳಲ್ಲದೇ, ಕನ್ನಡ, ಅಸ್ಸಾಮಿ, ಬೆಂಗಾಲಿ, ಒಡಿಯಾ, ಗುಜರಾತಿ, ಮರಾಠಿ, ತೆಲುಗು, ತಮಿಳು, ಉರ್ದು, ಇಂಗ್ಲೀಷ್ ಹಾಗೂ ಹಿಂದಿಯಲ್ಲಿ ಪರೀಕ್ಷೆಗಳು ನಡೆಯಲಿವೆ. ಈ ಮೊದಲು ನೀಟ್ ಪರೀಕ್ಷೆಯನ್ನು ಆಗಸ್ಟ್ ಒಂದರಂದು ನಡೆಸಲು ತೀರ್ಮಾನಿಸಲಾಗಿತ್ತು. ನಂತರ ಅದನ್ನು ಮುಂದೂಡಿ ಸೆಪ್ಟೆಂಬರ್ 12ರಂದು ಪರೀಕ್ಷೆ ನಡೆಸಲು ಸಚಿವಾಲಯ ತೀರ್ಮಾನಿಸಿದೆ.

2020ರ ನೀಟ್ ಪರೀಕ್ಷೆ ಸೆಪ್ಟೆಂಬರ್ 13ರಂದು ನಡೆದಿತ್ತು. ಕರೊನಾ ಕಾರಣದಿಂದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ಪರೀಕ್ಷೆಯನ್ನು ನಡೆಸಲಾಗಿತ್ತು. ಒಟ್ಟು 13.66ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು. ಅವರಲ್ಲಿ 7,71,500 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದರು.

ಇದನ್ನೂ ಓದಿ:

NEET UG 2021 Registration: ನೀಟ್​ ಪರೀಕ್ಷೆಗೆ ನೋಂದಣಿ ಇಂದಿನಿಂದಲೇ ಪ್ರಾರಂಭ; ಸಿಂಪಲ್​ ಆಗಿ ಅರ್ಜಿ ಸಲ್ಲಿಸುವ ವಿಧಾನ ಹೀಗಿದೆ..

NEET PG Exam 2021: ಸೆಪ್ಟೆಂಬರ್ 11ಕ್ಕೆ ನೀಟ್ ಪರೀಕ್ಷೆ: ಕೇಂದ್ರ ಸಚಿವ ಮನ್​ಸುಖ್ ಮಾಂಡವೀಯ

(NEET UG 2021 Exam to be held in Dubai says education ministry)