NEET UG Exam: ನೀಟ್ ಪರೀಕ್ಷೆ ಮುಂದೂಡಿಕೆ ಸಾಧ್ಯವಿಲ್ಲ ಎಂದ ಸುಪ್ರೀಂ ಕೋರ್ಟ್​; ಸೆ. 12ಕ್ಕೆ ಎಕ್ಸಾಂ ನಡೆಯುವುದು ಖಚಿತ

TV9 Digital Desk

| Edited By: Sushma Chakre

Updated on:Sep 06, 2021 | 2:00 PM

NEET Exam 2021 | ನೀಟ್ ಪರೀಕ್ಷೆ ಮುಂದೂಡುವಂತೆ ಸುಪ್ರೀಂ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಇಂದು ಆ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು, ನೀಟ್ ಪರೀಕ್ಷೆ ಮುಂದೂಡಲು ಸಾಧ್ಯವಿಲ್ಲ. ಸೆ. 12ರಂದೇ ಪರೀಕ್ಷೆ ನಡೆಯಲಿದೆ ಎಂದು ಆದೇಶಿಸಿದೆ.

NEET UG Exam: ನೀಟ್ ಪರೀಕ್ಷೆ ಮುಂದೂಡಿಕೆ ಸಾಧ್ಯವಿಲ್ಲ ಎಂದ ಸುಪ್ರೀಂ ಕೋರ್ಟ್​; ಸೆ. 12ಕ್ಕೆ ಎಕ್ಸಾಂ ನಡೆಯುವುದು ಖಚಿತ
ಸುಪ್ರೀಂಕೋರ್ಟ್

ನವದೆಹಲಿ: ಮುಂದಿನ ಭಾನುವಾರ (ಸೆ. 13) ನೀಟ್ ಪರೀಕ್ಷೆಗೆ (NEET UG Exam 2021) ದಿನಾಂಕ ನಿಗದಿಯಾಗಿತ್ತು. ಆದರೆ, ಅದೇ ಸಂದರ್ಭದಲ್ಲಿ ಬೇರೆ ಮಹತ್ವದ ಪರೀಕ್ಷೆಗಳೂ ಇರುವುದರಿಂದ ಪರೀಕ್ಷೆ ಮುಂದೂಡಬೇಕೆಂದು ಅನೇಕ ವಿದ್ಯಾರ್ಥಿಗಳು ಒತ್ತಾಯಿಸಿ, ಟ್ವಿಟ್ಟರ್​ನಲ್ಲಿ ಅಭಿಯಾನವನ್ನೂ ಮಾಡಿದ್ದರು. ಈ ಸಂಬಂಧ ಸುಪ್ರೀಂ ಕೋರ್ಟ್​ನಲ್ಲಿ ಅರ್ಜಿಯನ್ನೂ ಸಲ್ಲಿಸಲಾಗಿತ್ತು. ಆ ಅರ್ಜಿಯನ್ನು ವಜಾ ಮಾಡಿರುವ ಸುಪ್ರೀಂ ಕೋರ್ಟ್​ ನೀಟ್-2021 ಯುಜಿ ಪರೀಕ್ಷೆಯ ಮುಂದೂಡಿಕೆ ಸಾಧ್ಯವಿಲ್ಲ ಎಂದು ಆದೇಶಿಸಿದೆ.

ಈ ಬಾರಿಯ ನೀಟ್ ಪರೀಕ್ಷೆಯ (NEET UG Exam 2021) ಆಸುಪಾಸಿನಲ್ಲೇ ಸಿಬಿಎಸ್​ಇ (CBSE), ಕರ್ನಾಟಕದ ಕಾಮೆಡ್​ಕೆ (CoMEDK Exam), ಒರಿಸ್ಸಾ ಜೆಇಇ (Odisha JEE), ಮಧ್ಯಪ್ರದೇಶದ 12ನೇ ತರಗತಿ ಪರೀಕ್ಷೆಗಳಿವೆ ಎಂಬ ಕಾರಣಕ್ಕೆ ಅನೇಕ ವಿದ್ಯಾರ್ಥಿಗಳು ಸೆ. 12ರಂದು ನಡೆಯಲಿರುವ ನೀಟ್ ಪರೀಕ್ಷೆಯನ್ನು ಅಕ್ಟೋಬರ್​ವರೆಗೆ ಮುಂದೂಡಬೇಕೆಂದು ಒತ್ತಾಯಿಸಿದ್ದರು. ಅಲ್ಲದೆ, ಪಶ್ಚಿಮ ಬಂಗಾಳ, ಮಧ್ಯಪ್ರದೇಶದಲ್ಲಿ ಭಾರೀ ಪ್ರವಾಹ ಉಂಟಾಗಿರುವುದರಿಂದ ಅನೇಕ ವಿದ್ಯಾರ್ಥಿಗಳಿಗೆ ನೀಟ್ ಪರೀಕ್ಷೆಗೆ ತಮ್ಮ ಹೆಸರು ನೋಂದಾಯಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂಬ ಅಭಿಪ್ರಾಯವೂ ಕೇಳಿಬಂದಿತ್ತು. ಆದರೆ, ಯಾವುದೇ ಕಾರಣಕ್ಕೂ ನೀಟ್ ಪರೀಕ್ಷೆಯನ್ನು ಮುಂದೂಡುವುದಿಲ್ಲ ಎಂದು ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ (ಎನ್​ಟಿಎ) ಖಚಿತಪಡಿಸಿತ್ತು.

ಇದಾದ ಬಳಿಕ ನೀಟ್ ಪರೀಕ್ಷೆ ಮುಂದೂಡುವಂತೆ ಆದೇಶಿಸಲು ಮನವಿ ಮಾಡಿ ಸುಪ್ರೀಂ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಇಂದು ಆ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು, ಈ ಅರ್ಜಿಯನ್ನು ಪರಿಗಣಿಸಿ, ಪರೀಕ್ಷೆ ಮುಂದೂಡಲು ಸಾಧ್ಯವಿಲ್ಲ. ಸೆ. 12ರಂದೇ ನೀಟ್ ಪರೀಕ್ಷೆ ನಡೆಯಲಿದೆ. ಸುಮಾರು 16 ಲಕ್ಷ ವಿದ್ಯಾರ್ಥಿಗಳು ಈ ಬಾರಿ ನೀಟ್ ಪರೀಕ್ಷೆ ಬರೆಯಲಿದ್ದಾರೆ. ಕೆಲವೇ ಕೆಲವು ವಿದ್ಯಾರ್ಥಿಗಳು ಪರೀಕ್ಷೆ ಮುಂದೂಡಿಕೆಗೆ ಒತ್ತಾಯಿಸುತ್ತಿದ್ದಾರೆಂದ ಮಾತ್ರಕ್ಕೆ ಪರೀಕ್ಷೆ ಮುಂದೂಡುವಂತೆ ಆದೇಶ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಸೆ. 12ರಂದು ನೀಟ್ ಪರೀಕ್ಷೆ ನಡೆಯಲಿದ್ದು, ಬರೋಬ್ಬರಿ 16 ಲಕ್ಷ ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಬರೆಯಲಿದ್ದಾರೆ. ನೀಟ್-2021ರ ಪರೀಕ್ಷಾ ಕೇಂದ್ರಗಳ ಪಟ್ಟಿಯನ್ನು ಈಗಾಗಲೇ NTA ಬಿಡುಗಡೆ ಮಾಡಿದೆ. ನೀವೇನಾದರೂ ನೀಟ್ ಪರೀಕ್ಷೆ ಬರೆಯಲು ಹೆಸರು ನೋಂದಾಯಿಸಿಕೊಂಡಿದ್ದರೆ ನಿಮ್ಮ ಪರೀಕ್ಷಾ ಕೇಂದ್ರದ (NEET Exam Centre) ಬಗ್ಗೆ ಮಾಹಿತಿ ಪಡೆಯಲು ನೀಟ್‌ನ ಅಧಿಕೃತ ವೆಬ್‌ಸೈಟ್ neet.nta.nic.inಗೆ ಭೇಟಿ ನೀಡಬಹುದು.

ಈ ಬಾರಿ ಇಂಗ್ಲಿಷ್, ಕನ್ನಡ, ಹಿಂದಿ, ಅಸ್ಸಾಮೀಸ್, ಬೆಂಗಾಲಿ, ಗುಜರಾತಿ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು, ಉರ್ದು ಈ 13 ಭಾಷೆಗಳಲ್ಲಿ ನೀಟ್ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಈ ಬಾರಿ ನೀಟ್ ಪರೀಕ್ಷೆ ಪೇಪರ್ ಮತ್ತು ಪೆನ್​ ಮೋಡ್​ನಲ್ಲಿರಲಿದೆ. ನೀಟ್ ಪರೀಕ್ಷಾ ಕೇಂದ್ರಗಳ ಜೊತೆಗೆ ಮೆಡಿಕಲ್ ಪ್ರವೇಶ ಪರೀಕ್ಷೆಯ ಸ್ಯಾಂಪಲ್ ಓಎಂಆರ್ ಶೀಟ್ ಹಾಗೂ ಓಎಂಆರ್ ಶೀಟ್ ಅನ್ನು ಹೇಗೆ ಭರ್ತಿ ಮಾಡುವುದೆಂಬ ಮಾಹಿತಿಯನ್ನು ಕೂಡ ಬಿಡುಗಡೆ ಮಾಡಲಾಗಿದೆ. ಇದು ಕೂಡ ನೀಟ್ ಅಧಿಕೃತ ವೆಬ್​ಸೈಟ್​ನಲ್ಲಿ ಲಭ್ಯವಿದೆ.

ಎಂಬಿಬಿಎಸ್. ಬಿಡಿಎಸ್, ಬಿಎಎಂಎಸ್, ಬಿಯುಎಂಎಸ್, ಬಿಎಚ್​ಎಂಎಸ್ ಕೋರ್ಸ್​ಗಳ ಪ್ರವೇಶಾತಿಗೆ ನೀಟ್ ಪರೀಕ್ಷೆಯ ಫಲಿತಾಂಶವನ್ನು ಬಳಸಬಹುದು. ಭಾರತದಲ್ಲಿ ಮಾತ್ರವಲ್ಲದೆ ಮಧ್ಯಪ್ರಾಚ್ಯದಲ್ಲಿರುವ ಭಾರತೀಯ ಸಮುದಾಯಗಳಲ್ಲಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಈ ಬಾರಿ ಕುವೈತ್​ ಹಾಗೂ ದುಬೈನಲ್ಲಿ ಕೂಡ ನೀಟ್ ಯುಜಿ ಪರೀಕ್ಷೆ ನಡೆಯಲಿದೆ. ಒಟ್ಟು 198 ಕೇಂದ್ರಗಳಲ್ಲಿ ಈ ಬಾರಿ ನೀಟ್ ಪರೀಕ್ಷೆಗಳು ನಡೆಯಲಿದೆ.

ಬಿಎಸ್​ಸಿ ನರ್ಸಿಂಗ್ ಕೋರ್ಸ್​ಗಳಿಗೆ ನೀಟ್ ಪರೀಕ್ಷೆಯ ಮೂಲಕ ಸೇರಲಿಚ್ಛಿಸುವ ಅಭ್ಯರ್ಥಿಗಳಿಗೆ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಬಿಎಸ್​ಸಿ ನರ್ಸಿಂಗ್ ಕೋರ್ಸ್​ಗೆ ಸೇರಲು ಬಯಸುವ ಅಭ್ಯರ್ಥಿಗಳಿಗೆ ಡಿಸೆಂಬರ್ 31ರ ವೇಳೆಗೆ ಕನಿಷ್ಠ 17 ವರ್ಷ ಪೂರ್ತಿಯಾಗಬೇಕು. ದೇಶದ ನಾನಾ ಕಾಲೇಜುಗಳಲ್ಲಿ ಅಥವಾ ಶಿಕ್ಷಣ ಸಂಸ್ಥೆಗಳಲ್ಲಿ ಬಿಎಸ್​ಸಿ ನರ್ಸಿಂಗ್ ಕೋರ್ಸ್​ಗೆ ದಾಖಲಾತಿ ಪಡೆಯುವ ವಿದ್ಯಾರ್ಥಿಗಳು ಆ ಕಾಲೇಜು/ ವಿಶ್ವವಿದ್ಯಾಲಯ/ ಶಿಕ್ಷಣ ಸಂಸ್ಥೆಗಳಲ್ಲಿನ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿಕೊಳ್ಳಬೇಕು. ಬಿಎಸ್​ಸಿ ನರ್ಸಿಂಗ್​ಗೆ ಸೇರಲಿಚ್ಛಿಸುವ ಅಭ್ಯರ್ಥಿಗಳು ಪಿಸಿಬಿ (ಫಿಸಿಕ್ಸ್, ಕೆಮಿಸ್ಟ್ರಿ, ಬಯಾಲಜಿ) ಹಾಗೂ ಇಂಗ್ಲಿಷ್​ನಲ್ಲಿ ಶೇ. 45 ಅಂಕಗಳನ್ನಾದರೂ ಪಡೆದಿರಬೇಕು. ಪಿಯುಸಿಯಲ್ಲಿ ಪಿಸಿಬಿ ಕಾಂಬಿನೇಷನ್ ಪಡೆದಿರಬೇಕು ಎಂದು ಶೈಕ್ಷಣಿಕ ಅರ್ಹತೆಯ ಬಗ್ಗೆ ಎನ್​ಟಿಎ ತಿಳಿಸಿದೆ.

ಹಾಗೇ, ಎಸ್​ಸಿ/ ಎಸ್​ಟಿ ಅಥವಾ ಒಬಿಸಿ ಸಮುದಾಯಕ್ಕೆ ಸೇರಿರುವ ಅಭ್ಯರ್ಥಿಗಳು ಪಿಯುಸಿಯಲ್ಲಿ ಪಿಸಿಬಿ ಕಾಂಬಿನೇಷನ್ ಪಡೆದು ಶೇ. 40ರಷ್ಟು ಅಂಕವನ್ನು ಗಳಿಸಿರಬೇಕು. ಜನರಲ್ ಕೆಟಗರಿಯವರಾದರೆ ಶೇ. 45ರಷ್ಟು ಅಂಕ ಪಡೆದಿರಬೇಕು. ಹಾಗೇ. ದಿವ್ಯಾಂಗರಿಗೆ ಶೇ. 3ರಷ್ಟು ಮೀಸಲಾತಿ ನೀಡಲಾಗುವುದು. ಅವರಿಗೂ ಶೈಕ್ಷಣಿಕ ಅರ್ಹತೆ ಹಾಗೂ ವಯಸ್ಸಿನ ನಿಯಮಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಎನ್​ಟಿಎ ಮಾಹಿತಿ ನೀಡಿದೆ. ನೀಟ್ ಪರೀಕ್ಷೆಯ ಬಗ್ಗೆ ಮಾಹಿತಿಗಳು ಬೇಕಾಗಿದ್ದರೆ 011-40759000 ಸಂಖ್ಯೆಗೆ ಕರೆ ಮಾಡಬಹುದು.

ಇದನ್ನೂ ಓದಿ: NEET 2021: ಸೆ. 12ರ ನೀಟ್ ಪರೀಕ್ಷೆ ಮುಂದೂಡಿಕೆಗೆ ವಿದ್ಯಾರ್ಥಿಗಳ ಒತ್ತಾಯ; ಸ್ಪಷ್ಟನೆ ನೀಡಿದ NTA

NEET 2021 Entrance Exam: ನೀಟ್ ಪರೀಕ್ಷಾ ಕೇಂದ್ರಗಳ ಪಟ್ಟಿ ಬಿಡುಗಡೆ; ಈ ಬಾರಿ ಎಕ್ಸಾಂ ಬರೆಯಲಿದ್ದಾರೆ 16 ಲಕ್ಷ ವಿದ್ಯಾರ್ಥಿಗಳು

(NEET-UG 2021 will not be postponed Supreme Court dismisses plea for postponing exam NEET to held on September 12)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada