Pariksha Pe Charcha 2022 Highlights: ಪರೀಕ್ಷಾ ಪೇ ಚರ್ಚಾ; ಗಂಡು ಹೆಣ್ಣು ಭೇದ ಸಲ್ಲದು, ಬಾಲಕಿಯರಿಗೆ ಹೆಚ್ಚು ಅವಕಾಶ ಸಿಗಲಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 01, 2022 | 1:31 PM

PM Modi In Pariksha Pe Charcha: ಪ್ರಸಕ್ತ ಬಾರಿ ಪ್ರಧಾನಿ ನರೇಂದ್ರ ಮೋದಿ, ವಿದ್ಯಾರ್ಥಿಗಳು ಪರೀಕ್ಷೆ ಸಮಯದಲ್ಲಿ ಒತ್ತಡ ಹೇಗೆ ನಿವಾರಣೆ ಮಾಡಿಕೊಳ್ಳಬೇಕು, ಮನಸನ್ನು ಶಾಂತವಾಗಿಟ್ಟುಕೊಳ್ಳಬೇಕು ಎಂಬ ವಿಷಯದ ಬಗ್ಗೆ ಮಾತನಾಡಲಿದ್ದಾರೆ .

Pariksha Pe Charcha 2022 Highlights: ಪರೀಕ್ಷಾ ಪೇ ಚರ್ಚಾ; ಗಂಡು ಹೆಣ್ಣು ಭೇದ ಸಲ್ಲದು, ಬಾಲಕಿಯರಿಗೆ ಹೆಚ್ಚು ಅವಕಾಶ ಸಿಗಲಿ
ಪರೀಕ್ಷಾ ಪೆ ಚರ್ಚೆಯಲ್ಲಿ ಪ್ರಧಾನಿ ನರೇಂದ್ರ ಮೋದಿ

ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾದ ಮೇಲೆ, ತಮ್ಮ ಆಡಳಿತಾತ್ಮಕ ಕಾರ್ಯಗಳಾಚೆ, ಮನ್​ ಕೀ ಬಾತ್​, ಪರೀಕ್ಷಾ ಪೇ ಚರ್ಚಾ(Pariksha Pe Charcha)ದಂತಹ ಕಾರ್ಯಕ್ರಮಗಳನ್ನು ತಪ್ಪದೆ ನಡೆಸಿಕೊಂಡು ಬರುತ್ತಿದ್ದಾರೆ. ಇವು ಸಾರ್ವಜನಿಕರೊಂದಿಗೆ ಪ್ರಧಾನಿಯವರನ್ನು ಬೆಸೆಯುವ ಕಾರ್ಯಕ್ರಮಗಳು. ಮಕ್ಕಳಲ್ಲಿರುವ ಪರೀಕ್ಷಾ ಭಯ ಹೋಗಲಾಡಿಸುವ ಸಲುವಾಗಿ ಪ್ರಧಾನಿ ಮೋದಿ ಈ ಪರೀಕ್ಷಾ ಪೇ ಚರ್ಚಾ ಆಯೋಜಿಸುತ್ತಾರೆ. ಇದರಲ್ಲಿ ದೇಶದ ನಾನಾ ರಾಜ್ಯಗಳ ವಿದ್ಯಾರ್ಥಿಗಳು, ಅವರ ಪಾಲಕರು, ಶಿಕ್ಷಕರೊಂದಿಗೆ ಸಂವಾದ ನಡೆಸುತ್ತಾರೆ.

LIVE NEWS & UPDATES

The liveblog has ended.
  • 01 Apr 2022 01:30 PM (IST)

    ಕಲಿತಿದ್ದು ಮನನ ಮಾಡಿ: ವರ್ತಮಾನದಲ್ಲಿ ಬದುಕಿ

    ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಹಲವು ಬಾರಿ ನಿರ್ಣಯಗಳನ್ನು ತೆಗೆದುಕೊಳ್ಳುವಾಗ ಗೊಂದಲಗಳನ್ನು ಎದುರಿಸುತ್ತಾರೆ. ಕಲಿತಿದ್ದನ್ನು ರಿವೈಸ್ ಮಾಡುವುದು ಅಂದರೆ ಮನನ ಮಾಡುವ ಮೂಲಕ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು. ತರಗತಿಯಲ್ಲಿ ಕಲಿತದ್ದನ್ನು ನಿಮ್ಮ ಗೆಳೆಯರೊಂದಿಗೆ ಚರ್ಚಿಸಿ. ಕಲಿತ ಸಂಗತಿಯನ್ನು ಮನದಟ್ಟು ಮಾಡಿಕೊಳ್ಳಲು ಈ ಉಪಕ್ರಮ ನೆರವಾಗಲಿದೆ ಎಂದು ಪ್ರಧಾನಿ ಹೇಳಿದರು.

    ನೀವು ಬದುಕುತ್ತಿರುವ ಈ ಕ್ಷಣವನ್ನು ಆಸ್ವಾದಿಸಿ, ಅನುಭವಿಸುವುದನ್ನು ಕಲಿಯಿರಿ. ಅದು ನಿಮ್ಮ ಶಕ್ತಿಯಾಗುತ್ತದೆ. ವರ್ತಮಾನ ಎನ್ನುವುದು ದೇವರು ಮನುಷ್ಯರಿಗೆ ಕೊಟ್ಟಿರುವ ಅತಿದೊಡ್ಡ ಶಕ್ತಿಯಾಗಿದೆ. ನೀವು ಈ ಕ್ಷಣದಲ್ಲಿ ಸಮರ್ಪಕ ರೀತಿಯಲ್ಲಿ ಬದುಕಿದರೆ ಭವಿಷ್ಯದಲ್ಲಿ ಎಷ್ಟೋ ಪ್ರಶ್ನೆಗಳು ಕಾಡುವುದನ್ನು ತಪ್ಪಿಸಬಹುದು ಎಂದು ಸಲಹೆ ಮಾಡಿದರು. ನೆರೆದಿದ್ದ ವಿದ್ಯಾರ್ಥಿಗಳೊಂದಿಗೆ ಬೆರೆತು ಮಾತನಾಡಿ, ಹಸ್ತಾಕ್ಷರ ಹಾಕಿಕೊಟ್ಟರು. ವಿಕಲಚೇತನ ವಿದ್ಯಾರ್ಥಿಗಳ ಮೈದಡವಿ ಮೋದಿ ಮಾತನಾಡಿದರು.

  • 01 Apr 2022 01:19 PM (IST)

    ಪರಿಸರ ಸಂರಕ್ಷಣೆ ಎಲ್ಲ ಭಾರತೀಯ ಜವಾಬ್ದಾರಿ

    ನಮ್ಮ ಸುತ್ತಲ ಪರಿಸರವನ್ನು ಸ್ವಚ್ಛವಾಗಿ ಇರಿಸಿಕೊಳ್ಳುವುದು ಎಲ್ಲ ಭಾರತೀಯರ ಜವಾಬ್ದಾರಿಯಾಗಿದೆ. ಬಳಸಿ ಬಿಸಾಡುವ ಮನಸ್ಥಿತಿಯಿಂದ ನಾವು ಹೊರಗೆ ಬರಬೇಕಿದೆ. ಯಾವುದೇ ಸಾಧನವನ್ನು ಅದರ ಗರಿಷ್ಠಮಟ್ಟಕ್ಕೆ ಬಳಸಿಕೊಳ್ಳಬೇಕು. ಹೆಚ್ಚು ದಿನ ಬಳಸಿಕೊಳ್ಳಿ. ವಿನಾಕಾರಣ ವಸ್ತುಗಳನ್ನು ಬಿಸಾಡುವುದು, ಹಾಳು ಮಾಡುವುದು ಸರಿಯಲ್ಲ. ಪರಿಸರಕ್ಕೆ ಪೂರಕವಾದ ಜೀವನ ಪದ್ಧತಿಯನ್ನು ನಾವು ರೂಪಿಸಿಕೊಳ್ಳಬೇಕು. ಬದುಕಿನ ರೀತಿಯಲ್ಲಿ ಮಾಡಿಕೊಳ್ಳುವ ಸಣ್ಣಪುಟ್ಟ ಬದಲಾವಣೆಗಳಿಂದ ಪರಿಸರ ಸ್ನೇಹಿ ಬದಲಾವಣೆ, ಭೂಮಂಡಲ ಸ್ನೇಹಿ ಬದುಕಿನ ರೀತಿ ರೂಢಿಸಿಕೊಳ್ಳಬೇಕು. ಇದಕ್ಕಾಗಿ ಪಿಪಿಪಿ (Pro Planet People – PPP) ಮಂತ್ರವನ್ನು ಅಳವಡಿಸಿಕೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.


  • 01 Apr 2022 01:07 PM (IST)

    ಹೆಂಗಸರು ಕುಟುಂಬಗಳ ಶಕ್ತಿಯಾಗಿದ್ದಾರೆ

    ಗುಜರಾತ್​ನಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಶೇ 53ರಷ್ಟು ಜನಪ್ರತಿನಿಧಿಗಳು ಮಹಿಳೆಯರೇ ಇದ್ದಾರೆ. ಅಲ್ಲಿನ ಮಹಿಳೆಯರು ಮೀಸಲು ಕ್ಷೇತ್ರದೊಂದಿಗೆ ಸಾಮಾನ್ಯ ಕ್ಷೇತ್ರಗಳಲ್ಲಿಯೂ ಸ್ಪರ್ಧಿಸಿ ಜಯಗಳಿಸುತ್ತಿದ್ದಾರೆ. ಜನರು ಮಹಿಳೆಯರ ಹೆಚ್ಚು ನಂಬಿಕೆಯಿರಿಸಿ ಗೆಲ್ಲಿಸುತ್ತಿದ್ದಾರೆ. ಇದು ಉತ್ತಮ ಬೆಳವಣಿಗೆ. ಶಿಕ್ಷಕಿಯರು, ನರ್ಸಿಂಗ್ ಕ್ಷೇತ್ರದಲ್ಲಿಯೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಮ್ಮ ದೇಶದ ನರ್ಸ್​ಗಳು ವಿಶ್ವದೆಲ್ಲೆಡೆ ಉತ್ತಮ ಹೆಸರು ಪಡೆದುಕೊಂಡಿದ್ದಾರೆ. ನಮ್ಮ ಸಮಾಜವು ಗಂಡು-ಹೆಣ್ಣು ಭೇದಭಾವ ಮಾಡಬಾರದು. ಸಮಾನ ಅವಕಾಶಗಳು ಸಿಕ್ಕರೆ ಹೆಣ್ಣುಮಕ್ಕಳು ಮಹತ್ವದ್ದನ್ನು ಸಾಧಿಸುತ್ತಾರೆ.

  • 01 Apr 2022 12:57 PM (IST)

    ಮನೆಗಳಲ್ಲೂ ಇರಲಿ ಸ್ಪರ್ಧೆ

    ಸ್ಪರ್ಧೆಯಿಂದ ಉಂಟಾಗುವ ಮಾನಸಿಕ ಒತ್ತಡಗಳ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಧಾನಿ ನರೇಂದ್ರ ಮೋದಿ, ಅಯ್ಯೋ ರಾಮ ಸ್ಪರ್ಧೆಯಿಂದ ಒತ್ತಡ ಏಕಾಗಬೇಕು. ಸ್ಪರ್ಧೆಯಿಂದ ಆಯ್ಕೆ ಹೆಚ್ಚಾಗುತ್ತದೆ. ಗುಣಮಟ್ಟ ಸುಧಾರಿಸುತ್ತದೆ. ಹಿಂದಿನ ಯಾವುದೇ ತಲೆಮಾರಿಗೆ ಸಿಗದಷ್ಟು ಅವಕಾಶಗಳು ನಿಮಗೆ ಸಿಕ್ಕಿವೆ. ಇದಕ್ಕೆ ಕಾರಣ ಸ್ಪರ್ಧೆ. ನಿಮ್ಮ ಮನೆಗಳಲ್ಲೂ ಸ್ಪರ್ಧೆ ಮಾಡಿಕೊಳ್ಳಿ. ಯಾರು ಜಾಸ್ತಿ ಪೂರಿ ತಿನ್ನುತ್ತೇವೆ, ಯಾರು ಮನೆ ಹೆಚ್ಚು ಸ್ವಚ್ಛವಾಗಿಸುತ್ತೇವೆ ಎಂದು ಸ್ಪರ್ಧಿಸಿ. ಸ್ಪರ್ಧೆ ಕೂಡ ಒಂದು ಅವಕಾಶ, ಅನಿವಾರ್ಯತೆ. ಅದರಿಂದ ತಪ್ಪಿಸಿಕೊಳ್ಳಬೇಕು ಎಂಬ ಮನೋಭಾವ ಇರಿಸಿಕೊಳ್ಳಬೇಡಿ. ಸ್ಪರ್ಧೆಯನ್ನು ಎದುರಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಸಲಹೆ ಮಾಡಿದರು.

  • 01 Apr 2022 12:46 PM (IST)

    ಮೋಸ ಮಾಡುವ ಮನಸಿಗೆ ಇರಲಿ ಕಡಿವಾಣ

    ನಮ್ಮ ದೇಹವೂ ನಮಗೆ ಮೋಸ ಮಾಡುತ್ತೆ. ನೀವು ನೇರವಾಗಿ ಕುಳಿತುಕೊಳ್ಳಬೇಕು ಎಂದುಕೊಂಡಿದ್ದರೂ ದೇಹ ಗೂನಾಗುತ್ತೆ. ಇದೇ ಥರ ಮನಸ್ಸೂ ಅಷ್ಟೇ, ನಮಗೆ ಮೋಸ ಮಾಡುತ್ತೆ. ನಮ್ಮ ಮನಸ್ಸು ನಮಗೆ ಮೋಸ ಮಾಡಲು ಬಿಡಬಾರದು. ಮನಸ್ಸಿಗೆ ಯಾವುದು ಒಳ್ಳೇದು ಅನ್ನಿಸುತ್ತೋ ಅದರ ಹಿಂದೆ ಓಡುತ್ತದೆ. ನಿಮಗೆ ಶ್ರೇಯಸ್ಕರ ಎನ್ನಿಸುವಂಥದ್ದಕ್ಕೆ ಹೆಚ್ಚು ಗಮನ ಕೊಡಬೇಕು, ಪ್ರಿಯವಾಗುವ ಕಡೆಗೆ ಮನಸ್ಸು ಹರಿದಾಗಲೆಲ್ಲಾ ಅದನ್ನು ಹಿಂದಕ್ಕೆ ಕರೆತರಬೇಕು.

  • 01 Apr 2022 12:39 PM (IST)

    ನೆನಪು ನಮ್ಮ ಜೀವನದೊಂದಿಗೆ ಸಂಬಂಧ ಹೊಂದಿದೆ

    ಪ್ರತಿದಿನ ಬೆಳಿಗ್ಗೆ ಎಲ್ಲರೂ ಪೇಪರ್ ಓದುತ್ತೇವೆ. ಅದರೆ ಎಷ್ಟು ಜನರಿಗೆ ಅದರ ಹೆಡ್​ಲೈನ್ ನೆನಪಿರುತ್ತದೆ? ನಾವು ಯಾವ ವಿಷಯಗಳ ಬಗ್ಗೆ ಹೆಚ್ಚು ಗಮನ ಕೊಡುತ್ತೇವೆಯೋ ಅದು ನಮಗೆ ನೆನಪಿರುತ್ತದೆ. ನಿಮ್ಮ ಜೀವನದ ಭಾಗವಾಗಿಸಿಕೊಳ್ಳುವ ವಿಷಯಗಳು ಎಂದಿಗೂ ಮರೆತು ಹೋಗುವುದಿಲ್ಲ. ನೆನಪಿನ ಶಕ್ತಿಯ ಬಗ್ಗೆ ಕೇವಲ ಪರೀಕ್ಷೆಯ ಉದ್ದೇಶದಿಂದ ಯೋಚಿಸಬೇಡಿ. ಕಲಕಿದ ನೀರಿನಡಿ ಇರುವ ನಾಣ್ಯವು ಸ್ಪಷ್ಟವಾಗಿ ಕಾಣಿಸುವುದಿಲ್ಲ. ಆದರೆ ಸ್ಥಿರವಾಗಿರುವ ನೀರಿನಡಿ ಇರುವ ನಾಣ್ಯವು ಸ್ಪಷ್ಟವಾಗಿ ಕಾಣಿಸುತ್ತದೆ. ನಮ್ಮ ಮನಸ್ಸೂ ಅಷ್ಟೇ. ಮನಸ್ಸು ಸ್ಥಿರವಾಗಿದ್ದರೆ ನೆನಪು ಚೆನ್ನಾಗಿರುತ್ತದೆ. ಮನಸ್ಸನ್ನು ಸ್ಥಿರವಾಗಿ ಇರಿಸಿಕೊಳ್ಳಲು ಪ್ರಾಣಾಯಾಮ, ಉಸಿರಾಟದ ವ್ಯಾಯಾಮಗಳು ನೆರವಾಗುತ್ತವೆ. ಮನಸ್ಸಿಗೂ ತರಬೇತಿ ಕೊಡಿ ಎಂದು ಮೋದಿ ಸಲಹೆ ಮಾಡಿದರು.

  • 01 Apr 2022 12:26 PM (IST)

    ಪರೀಕ್ಷೆಯೊಂದಿಗೆ ಮಾತನಾಡಿ

    ನಿಮ್ಮ ಸುತ್ತಮುತ್ತ ಏನೆಲ್ಲಾ ಇದೆ ಎಂಬುದನ್ನು ಗಮನಿಸಿಕೊಳ್ಳಿ. ಅವುಗಳ ಲೋಪಗಳನ್ನು ದೊಡ್ಡದು ಮಾಡಿಕೊಂಡು ನೋಡಬೇಡಿ. ಅವುಗಳ ಸುಧಾರಣೆ ಸಾಧ್ಯತೆಯ ಬಗ್ಗೆ ಚಿಂತನೆ ನಡೆಸಿ. ಪರೀಕ್ಷೆಯ ಜೊತೆಗೆ ಮಾತನಾಡಿ. ನೀವು ಪರೀಕ್ಷೆಗೆ ಹೆದರುವುದಲ್ಲ, ಪರೀಕ್ಷೆಯೇ ನಿಮಗೆ ಹೆದರಬೇಕು ಹಾಗೆ ಮಾಡಿ. ನಿಮ್ಮ ಸಾಮರ್ಥ್ಯಗಳ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳಿ. ಆತ್ಮವಿಶ್ವಾಸ ವೃದ್ಧಿಯಾಗುತ್ತದೆ ಎಂದು ಮೋದಿ ನುಡಿದರು.

  • 01 Apr 2022 12:24 PM (IST)

    ನಿಮ್ಮನ್ನು ನೀವು ಅರ್ಥ ಮಾಡಿಕೊಳ್ಳಿ ಎಂದ ಮೋದಿ

    ಯಾವೆಲ್ಲ ಸಂಗತಿಗಳಿಂದ ನಿಮ್ಮ ಮನಸ್ಸು ಖಿನ್ನವಾಗುತ್ತದೆ, ನಿಮಗೆ ಬೇಸರವಾಗುತ್ತದೆ ಎಂಬುದನ್ನು ಸ್ಪಷ್ಟವಾಗಿ ಗುರುತಿಸಿಕೊಳ್ಳಿ. ಯಾವಾಗೆಲ್ಲಾ ನಿಮಗೆ ಬೇರೆಯವರು ನಿಮ್ಮ ಬಗ್ಗೆ ದಯೆ ತೋರಿಸಬೇಕು ಎಂಬ ನಿರೀಕ್ಷೆ ಮೂಡುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ. ಅದೇ ರೀತಿ ಯಾವೆಲ್ಲ ಅಂಶಗಳು ನಿಮ್ಮ ಮನಸ್ಸಿಗೆ ಖುಷಿಕೊಡುತ್ತವೆ ಎಂಬುದನ್ನೂ ತಿಳಿದುಕೊಳ್ಳಿ. ಅದು ಸಂಗೀತ, ಚಿತ್ರಕಲೆ, ಮಾತುಕತೆ ಏನು ಬೇಕಿದ್ದರೂ ಆಗಬಹುದು. ಆದರೆ ನೀವು ಗುರುತಿಸಿಕೊಳ್ಳುವುದು ಮುಖ್ಯ. ‘ನಾನು ಅಸಹಾಯಕ, ಬೇರೊಬ್ಬರು ನನಗೆಗೆ ದಯೆ ತೋರಿಸಬೇಕು’ ಎಂಬ ಮನೋಭಾವವನ್ನು ಎಂದಿಗೂ ಬೆಳೆಸಿಕೊಳ್ಳಬೇಡಿ ಎಂದು ಮೋದಿ ಸಲಹೆ ಮಾಡಿದರು.

  • 01 Apr 2022 12:18 PM (IST)

    ಸ್ಫೂರ್ತಿ ಉಳಿಸಿಕೊಳ್ಳುವುದು ಹೇಗೆ

    ಹತ್ತಾರು ಸಮಸ್ಯೆಗಳ ನಡುವೆ ಸದಾ ಸ್ಫೂರ್ತಿ ಉಳಿಸಿಕೊಳ್ಳುವುದು ಹೇಗೆ ಎಂದು ದೆಹಲಿಯ ವಿಕಲಚೇತನ ವಿದ್ಯಾರ್ಥಿ ವೈಭವ್ ಕನೋಜಿಯಾ ಪ್ರಶ್ನಿಸಿದರು. ಇತರ ವಿದ್ಯಾರ್ಥಿಗಳು ಇದೇ ಪ್ರಶ್ನೆಯನ್ನು ವಿಭಿನ್ನ ರೀತಿಯಲ್ಲಿ ಪ್ರಸ್ತಾಪಿಸಿದರು.

  • 01 Apr 2022 12:15 PM (IST)

    ವಿಶ್ವಾಸ ಕಳೆದುಕೊಳ್ಳದಿರಿ

    ನೀವು ಯಾರ ಮಾತು ಕೇಳುತ್ತೀರಿ ಎನ್ನುವುದು ಮುಖ್ಯ. ಎಂಥ ಬೀಜ ಬಿತ್ತನೆಯಾದರೆ ಅಂಥದ್ದೇ ಬೆಳೆ ಬರುತ್ತದೆ. ನಿಮ್ಮ ಪೋಷಕರ, ಶಿಕ್ಷಕರ ಮಾತು ಕೇಳಬೇಡಿ ಎಂದು ನಾನು ಹೇಳುವುದಿಲ್ಲ. ಆದರೆ ನಿಮ್ಮ ಸಾಮರ್ಥ್ಯದ ಬಗ್ಗೆ ಸದಾ ವಿಶ್ವಾಸ ಇರಿಸಿಕೊಳ್ಳಿ. ಅದರಿಂದ ನಿಮಗೆ ಸಾಕಷ್ಟು ಅನುಕೂಲವಾಗುತ್ತದೆ ಎಂದು ಮೋದಿ ನುಡಿದರು.

  • 01 Apr 2022 12:05 PM (IST)

    ವಿದ್ಯಾರ್ಥಿಗಳೇ ಗುರು ಸಹ ಆಗುತ್ತಿದ್ದಾರೆ

    ನಮ್ಮ ಮಕ್ಕಳು ಕ್ರಿಯೇಟಿವ್ ಇದ್ದಾರೆ. ಬ್ಲೂಟೂತ್ ಪ್ರಿಂಟರ್ ಮಾಡಿದ್ದಾರೆ. ವೇದ ಗಣಿತದ ಮಾದರಿಗಳನ್ನು ಮಾಡಿದ್ದಾರೆ. ಇನ್ನೂ ವಿದ್ಯಾರ್ಥಿಗಳೇ ಆಗಿರುವ ಮಕ್ಕಳು ತಮ್ಮ ಪ್ರತಿಭೆಯಿಂದ ಗುರು ಆಗುತ್ತಿದ್ದಾರೆ. ಮಕ್ಕಳಲ್ಲಿ ಒಂದು ವಿಷನ್ ಇದೆ. ಅದನ್ನು ಗುರುತಿಸಿ, ಬೆಳಕು ಚೆಲ್ಲಲು ರಾಷ್ಟ್ರೀಯ ಶಿಕ್ಷಣ ನೀತಿ ನೆರವಾಗುತ್ತದೆ. ಇಂದು ಮಕ್ಕಳು ತೋರಿಸಿದ ಪ್ರಾತ್ಯಕ್ಷಿಕೆಗಳಿಂದ ನನಗೆ ತುಂಬಾ ಸಂತೋಷವಾಯಿತು. ಅವರು ತಂತ್ರಜ್ಞಾನವನ್ನು ಸೂಕ್ತ ರೀತಿಯಲ್ಲಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಮೋದಿ ಹೇಳಿದರು.

  • 01 Apr 2022 12:02 PM (IST)

    ವಿದ್ಯಾರ್ಥಿಗಳ ಆಸಕ್ತಿಗೆ ಹೆಚ್ಚು ಒತ್ತು

    ವಿದ್ಯಾರ್ಥಿಗಳು ಏನು ಓದಬೇಕು ಎನ್ನುವುದನ್ನು ಪೋಷಕರು ಅಥವಾ ಸಮಾಜ ನಿರ್ಧರಿಸುವ ಪರಿಸ್ಥಿತಿಯಿದೆ. ಕೆಲವೊಮ್ಮೆ ಯಾವುದೋ ಒಂದು ಕೋರ್ಸ್​ನಲ್ಲಿ ಒಂದೆರೆಡು ವರ್ಷ ಓದಿದ ನಂತರ ಇದು ನನ್ನ ಆಸಕ್ತಿ ಅಲ್ಲ ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಆಗಬಹುದು. ಇಂಥ ಸಂದರ್ಭದಲ್ಲಿ ಕೋರ್ಸ್​ ಬದಲಿಸಿಕೊಳ್ಳಲು ಹೊಸ ಶಿಕ್ಷಣ ನೀತಿ ಅವಕಾಶ ಕೊಡುತ್ತದೆ.

  • 01 Apr 2022 12:00 PM (IST)

    ಕ್ರೀಡೆಗೆ ಒತ್ತುಕೊಡುವ ನೀತಿ

    ಶಿಕ್ಷಣ ನೀತಿಯು ಕ್ರೀಡೆಗೆ ವಿಶೇಷ ಒತ್ತು ನೀಡಿದೆ. ನಮ್ಮ ಮನಸ್ಸು ಮುಕ್ತಗೊಳ್ಳಲು ಕ್ರೀಡೆ ಅತ್ಯಗತ್ಯ. ನಾವು ಓದಿನಿಂದಲೇ ಎಲ್ಲವನ್ನೂ ಕಲಿಯಲು ಆಗುವುದಿಲ್ಲ. ಕೆಲವೊಂದಿಷ್ಟು ವಿಷಯಗಳನ್ನು ಆಟದ ಮೈದಾನದಲ್ಲಿಯೂ ತಿಳಿಯಬೇಕು. ಇಂಥ ಸೂಕ್ಷ್ಮ ಅಂಶಗಳನ್ನು ತಜ್ಞರು ಶಿಕ್ಷಣ ನೀತಿಯಲ್ಲಿ ಅಳವಡಿಸಿದ್ದಾರೆ ಎಂದು ಮೋದಿ ತಿಳಿಸಿದರು.

  • 01 Apr 2022 11:56 AM (IST)

    ರಾಷ್ಟ್ರೀಯ ಶಿಕ್ಷಣ ನೀತಿಗೆ ಸ್ವಾಗತ ಸಿಕ್ಕಿದೆ

    ಯಾವುದೇ ಸರ್ಕಾರ ಅಥವಾ ಪಕ್ಷ ಏನಾದರೂ ಮಾಡಲು ಹೊರಟರೆ ವಿರೋಧ ವ್ಯಕ್ತವಾಗುವುದು ಸಹಜ. ಆದರೆ ಶಿಕ್ಷಣ ನೀತಿಯ ವಿಚಾರದಲ್ಲಿ ಹೀಗಾಗಲಿಲ್ಲ. ಇಡೀ ದೇಶ ಶಿಕ್ಷಣ ನೀತಿಯನ್ನು ಸ್ವಾಗತಿಸಿತು. ಏಕೆಂದರೆ ಇದು ನಮ್ಮ ಸರ್ಕಾರದ ರೂಪಿಸಿದ ನೀತಿಯಲ್ಲ. ಈ ದೇಶದ ಜನರು ಅವರಿಗಾಗಿ ರೂಪಿಸಿಕೊಂಡ ನೀತಿ ಎಂದು ಮೋದಿ ನುಡಿದರು.

  • 01 Apr 2022 11:52 AM (IST)

    ಗ್ಯಾಜೆಟ್ ಟೂಲ್ ಬಳಸಿಕೊಳ್ಳಿ

    ನಿಮ್ಮ ಪೋಷಕರು ಮತ್ತು ಶಿಕ್ಷಕರು ಹಿಂದಿನ ತಲೆಮಾರಿಗೆ ಸೇರಿದವರು. ಅವರ ಕಾಲದಲ್ಲಿ ಕಲಿಕೆಗೆ ಇದ್ದ ಉಪಕರಣಗಳು ಸೀಮಿತವಾಗಿದ್ದವು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಇರುವ ಅವಕಾಶಗಳನ್ನು ಬಳಸಿಕೊಂಡು ಕಲಿಕೆ ಸುಧಾರಿಸಿಕೊಳ್ಳಿ. ಗ್ಯಾಜೆಟ್​ಗಳಲ್ಲಿರುವ ಟೂಲ್​ಗಳನ್ನು ಬಳಸುವ ಮೂಲಕ ಬದುಕಿನಲ್ಲಿ ಡಿಜಿಟಲ್ ಶಿಸ್ತು ರೂಢಿಸಿಕೊಳ್ಳಿ ಎಂದು ಮೋದಿ ಹೇಳಿದರು.

  • 01 Apr 2022 11:50 AM (IST)

    ಆನ್​ಲೈನ್​ ನೋಟ್ಸ್ ಸಿಕ್ಕರೆ ತಪ್ಪೇನು

    ಆನ್​ಲೈನ್​ನಲ್ಲಿರುವುದೆಲ್ಲಾ ತಪ್ಪು ಎಂದು ಹೇಳಲು ಆಗುವುದಿಲ್ಲ. ನಿಮಗೆ ನಿಮ್ಮ ಶಿಕ್ಷಕರು ಆನ್​ಲೈನ್​ನಲ್ಲೇ ನೋಟ್ಸ್ ಕೊಡಬಹುದು. ನೀವು ಅದನ್ನು ಗಮನಿಸಿ ಸುಧಾರಿಸಬಹುದು. ಆನ್​ಲೈನ್ ಎನ್ನುವುದು ಓದಲು, ಕಲಿಯಲು ಇದೆ. ಆಫ್​ಲೈನ್ ಎನ್ನುವುದು ಪ್ರಯೋಗಿಸಲು ಇದೆ. ಇದರ ಬಗ್ಗೆ ಚಿಂತಿಸಿ ಎಂದು ಮೋದಿ ಸಲಹೆ ಮಾಡಿದರು.

  • 01 Apr 2022 11:47 AM (IST)

    ಕಾಲಕ್ಕೆ ತಕ್ಕಂತೆ ಕಲಿಕೆಗೆ ಹೊಸ ಅವಕಾಶ

    ಮಾಧ್ಯಮ ಆನ್​ಲೈನ್ ಅಥವಾ ಆಫ್​ಲೈನ್ ಆಗಿರಬಹುದು. ಕಲಿಕೆಗೆ ಏಕಾಗ್ರತೆ ಮುಖ್ಯ. ನೀವು ಮನಸ್ಸನ್ನು ಪಳಗಿಸಲು ಪ್ರಯತ್ನಿಸಬೇಕು. ನನಗೆ ಆನ್​ಲೈನ್ ಅಥವಾ ಆಫ್​ಲೈನ್​ನಲ್ಲಿ ವ್ಯತ್ಯಾಸವಿದೆ ಎಂದು ಅನ್ನಿಸುವುದಿಲ್ಲ. ಮಾಧ್ಯಮಗಳು ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುತ್ತದೆ. ಹಿಂದೆ ಗುರುಕುಲ ಪದ್ಧತಿಯಿತ್ತು. ಮುದ್ರಣ ಸೌಕರ್ಯ ಇರಲಿಲ್ಲ. ನಂತರದ ದಿನಗಳಲ್ಲಿ ಮುದ್ರಣದ ಅನುಕೂಲ ಒದಗಿ ಪುಸ್ತಕಗಳು ಬಂದವು. ಈಗ ಡಿಜಿಟಲ್ ಮಾಧ್ಯಮದಿಂದ ಕಲಿಕೆಯನ್ನು ಸುಲಭವಾಗಿಸಬಹುದಾಗಿದೆ. ಈಗ ಅವಕಾಶಗಳು ಹೆಚ್ಚಾಗಿವೆ. ಇದನ್ನು ಸಮಸ್ಯೆ ಎಂದು ನಾವು ಭಾವಿಸಬಾರದು.

  • 01 Apr 2022 11:44 AM (IST)

    ಆನ್​ಲೈನ್ ಶಿಕ್ಷಣ ಮತ್ತು ಏಕಾಗ್ರತೆ

    ಇತರ ಹಲವು ವಿದ್ಯಾರ್ಥಿಗಳು ಸಹ ಆನ್​ಲೈನ್ ಶಿಕ್ಷಣ ಕ್ರಮದಲ್ಲಿ ಏಕಾಗ್ರತೆ ಕಾಪಾಡಿಕೊಳ್ಳುವ ಕುರಿತು ಪ್ರಶ್ನೆ ಕೇಳಿದರು. ಚಂದ್ರಚೂಡೇಶ್ವರನ್ ಎಂಬ ಶಿಕ್ಷಕರ ಪ್ರಶ್ನೆಯೂ ಇದೇ ವಿಷಯವನ್ನು ಒಳಗೊಂಡಿತ್ತು.

  • 01 Apr 2022 11:41 AM (IST)

    ಮೈಸೂರಿನ ತರುಣ್ ಕೇಳಿದ ಪ್ರಶ್ನೆ

    ಸಾಮಾಜಿಕ ಮಾಧ್ಯಮಗಳಿಂದ ಏಕಾಗ್ರತೆಗೆ ಭಂಗ ಬರುತ್ತದೆ. ಪರೀಕ್ಷೆಗೆ ಒಂದೇ ಮನಸ್ಸಿನಿಂದ ಸಿದ್ಧತೆ ಮಾಡಿಕೊಳ್ಳುವುದು ಹೇಗೆ?

  • 01 Apr 2022 11:38 AM (IST)

    ಪರೀಕ್ಷೆ ಅಂದ್ರೆ ಹೆದರಿಕೆ ಅನಗತ್ಯ

    ನಿಮ್ಮ ಮನಸ್ಸಿನಲ್ಲಿ ಭಯವಾಗೋದು ಏಕೆ? ದೊಡ್ಡ ಸಮುದ್ರ ಈಜಿದ ಮೇಲೆ ದಡದಲ್ಲಿ ನಡೆಯಲು ಭಯವೇಕೆ? ಪರೀಕ್ಷೆ ಎನ್ನುವುದು ಜೀವನದ ಅವಿಭಾಜ್ಯ ಅಂಗ. ಪ್ರತಿ ಪರೀಕ್ಷೆಯೂ ನಮ್ಮ ಅನುಭವ ಮತ್ತು ಸಾಮರ್ಥ್ಯ ಹೆಚ್ಚಿಸುತ್ತದೆ. ಹೆದರಿಕೆ ಅನಗತ್ಯ.

  • 01 Apr 2022 11:32 AM (IST)

    ನಿಮಗಲ್ಲ ನಿಮ್ಮ ಪೋಷಕರಿಗೆ ಚಿಂತೆ ಎಂದ ಪ್ರಧಾನಿ

    ಪರೀಕ್ಷಾ ಪೆ ಚರ್ಚಾ ವೇದಿಕೆಗೆ ಬಂದ ಪ್ರಧಾನಿ ನರೇಂದ್ರ ಮೋದಿ ಉತ್ಸಾಹದಿಂದ ಮಾತು ಆರಂಭಿಸಿದರು. ನಿಮ್ಮಲ್ಲಿ ಯಾರಿಗಾದರೂ ಪರೀಕ್ಷೆಯ ಬಗ್ಗೆ ಚಿಂತೆ ಇದೆಯೇ ಎಂದು ಪ್ರಶ್ನಿಸಿದಾಗ, ಕೆಲ ವಿದ್ಯಾರ್ಥಿಗಳು ಕೈ ಎತ್ತಿದರು. ನಿಮ್ಮ ಪೋಷಕರಿಗೆ ಹೆಚ್ಚು ಚಿಂತೆ ಇರುತ್ತೆ ಎಂದು ಮೋದಿ ತಮಾಷೆ ಮಾಡಿದರು.

  • 01 Apr 2022 11:28 AM (IST)

    ಓದಿನ ಜೊತೆಗೆ ಆತ್ಮವಿಶ್ವಾಸ ಇರಲಿ

    ಜೀವನದಲ್ಲಿ ಪ್ರತಿ ಹಂತದಲ್ಲಿಯೂ ಪರೀಕ್ಷೆಗಳು ಎದುರಾಗುತ್ತವೆ. ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲು ಒಳ್ಳೆಯ ಓದಿನೊಂದಿಗೆ ಆತ್ಮವಿಶ್ವಾಸವೂ ಇರಬೇಕು. ಶಿಕ್ಷಣವನ್ನು ಪ್ರಧಾನಿ ಮೋದಿ ಒಂದು ಜನಾಂದೋಲನವಾಗಿಸಿದ್ದಾರೆ. ಕೊರೊನಾದಿಂದಾಗಿ ಶಿಕ್ಷಣ ವ್ಯವಸ್ಥೆಯಲ್ಲಿ ಸಮಸ್ಯೆಗಳು ಕಾಣಿಸಿಕೊಂಡಿದ್ದವು, ಈಗ ಎಲ್ಲವೂ ಒಂದು ಹಂತಕ್ಕೆ ಬರುತ್ತಿದೆ ಎಂದು ಧರ್ಮೇಂದ್ರ ಪ್ರಧಾನ್ ಹೇಳಿದರು.

  • 01 Apr 2022 11:25 AM (IST)

    ಎಲ್ಲ ರಾಜ್ಯಗಳ ರಾಜ್ಯಪಾಲರ ಉಪಸ್ಥಿತಿ

    ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮದಲ್ಲಿ ಈ ವರ್ಷ ಎಲ್ಲ ರಾಜ್ಯಗಳ ರಾಜ್ಯಪಾಲರು, ಬಹುತೇಕ ರಾಜ್ಯಗಳ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರು ಪಾಲ್ಗೊಂಡಿದ್ದಾರೆ. ಎಲ್ಲ ರಾಜ್ಯಗಳ ಪ್ರತಿಭಾವಂತ ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ ಎಂದು ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದರು.

  • 01 Apr 2022 11:24 AM (IST)

    ವೇದಿಕೆಗೆ ಬಂದ ಪ್ರಧಾನಿ ಮೋದಿ

    ಪರೀಕ್ಷಾ ಪೆ ಚರ್ಚಾ ವೇದಿಕೆಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದರು. ನೆರೆದಿರುವ ಗಣ್ಯರು ಮತ್ತು ವಿದ್ಯಾರ್ಥಿಗಳಿಂದ ಹರ್ಷೋದ್ಗಾರ. ಕರತಾಡನದೊಂದಿಗೆ ಸ್ವಾಗತಿಸಿದರು. ಸಚಿವ ಧರ್ಮೇಂದ್ರ ಪ್ರಧಾನ್ ಅವರು ಪ್ರಧಾನಿಯನ್ನು ಸ್ವಾಗತಿಸಿದರು.

  • 01 Apr 2022 11:18 AM (IST)

    ಗಮನ ಸೆಳೆದ ಆವಿಷ್ಕಾರಗಳು

    ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ನಿರ್ವಹಿಸುವ ಕೇಂದ್ರೀಯ ವಿದ್ಯಾಲಯ, ನವೋದಯ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಇತ್ತೀಚೆಗೆ ರೂಪಿಸಿರುವ ಹಲವು ಉಪಕರಣಗಳು ಮತ್ತು ಕಲಾಕೃತಿಗಳನ್ನು ಪ್ರಧಾನಿ ನರೇಂದ್ರ ಮೋದಿ ಆಸ್ಥೆಯಿಂದ ವೀಕ್ಷಿಸಿದರು. ಬ್ಲೂಟೂತ್ ಮೂಲಕ ನಿರ್ವಹಿಸುವ ರೋಬೊಟ್, ರೇಡಿಯೊ ಟ್ರಾನ್ಸ್​ಸಿಸ್ಟರ್, ವೇದ ಗಣಿತದ ಮಾದರಿಗಳ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆದುಕೊಂಡರು. ರೇಡಿಯೊ ಮಾದರಿ ಮೋದಿ ಅವರಿಗೆ ಇಷ್ಟವಾಯಿತು. ಅದನ್ನು ರೂಪಿಸಿದ ವಿದ್ಯಾರ್ಥಿಯ ಹಸ್ತಾಕ್ಷರದೊಂದಿಗೆ ಆ ಮಾದರಿಯನ್ನು ಕೇಳಿ ಪಡೆದುಕೊಂಡರು.

    ವಿದ್ಯಾರ್ಥಿಗಳು ರೂಪಿಸಿರುವ ಕಲಾಕೃತಿಗಳನ್ನು ಪ್ರಧಾನಿ ನರೇಂದ್ರ ಮೋದಿ ವೀಕ್ಷಿಸಿದರು.

  • 01 Apr 2022 11:13 AM (IST)

    ಪರೀಕ್ಷಾ ಕಿ ಬಾತ್

    ಪರೀಕ್ಷಾ ಪೆ ಚರ್ಚಾದ 5ನೇ ಆವೃತ್ತಿಗೆ ‘ಪರೀಕ್ಷಾ ಕಿ ಬಾತ್, ಪಿಎಂ ಕೆ ಸಾತ್’ ಎಂಬ ಘೋಷವಾಕ್ಯ ನೀಡಲಾಗಿತ್ತು.

  • 01 Apr 2022 11:11 AM (IST)

    15.7 ಲಕ್ಷ ಮಂದಿ ನೋಂದಣಿ

    ಪರೀಕ್ಷಾ ಪೆ ಚರ್ಚಾದಲ್ಲಿ ಪಾಲ್ಗೊಳ್ಳಲು ಒಟ್ಟು 15.7 ಲಕ್ಷ ಮಂದಿ ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ 12.1 ಲಕ್ಷ ವಿದ್ಯಾರ್ಥಿಗಳು, 2.7 ಲಕ್ಷ ವಿದ್ಯಾರ್ಥಿಗಳು ಮತ್ತು 90 ಸಾವಿರ ಪೋಷಕರು.

  • 01 Apr 2022 11:07 AM (IST)

    ಉತ್ಸುಕನಾಗಿದ್ದೇನೆ ಎಂದಿದ್ದ ಪ್ರಧಾನಿ

    ಏಪ್ರಿಲ್​ 1ರಂದು ಪರೀಕ್ಷಾ ಪೇ ಚರ್ಚಾ ನಡೆಯುವ ಬಗ್ಗೆ ಮಾರ್ಚ್​ 30ರಂದು ಟ್ವೀಟ್ ಮಾಡಿದ್ದ ಪ್ರಧಾನಿ ಮೋದಿ, ಈ ವರ್ಷದ ಪರೀಕ್ಷಾ ಪೇ ಚರ್ಚಾ ದೆಡೆಗೆ ವಿದ್ಯಾರ್ಥಿಗಳು ಅತ್ಯುತ್ಸಾಹಭರಿತ ಆಸಕ್ತಿ ತೋರಿಸುತ್ತಿದ್ದಾರೆ. ಲಕ್ಷಾಂತರ ಜನರು ಈಗಾಗಲೇ ತಮ್ಮ ಅನಿಸಿಕೆ, ಅನುಭವ, ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮವನ್ನು ಏಪ್ರಿಲ್​ 1ರಂದು ನಡೆಸಲು ಉತ್ಸುಕನಾಗಿದ್ದೇನೆ ಎಂದು ಹೇಳಿದ್ದರು.

  • 01 Apr 2022 11:07 AM (IST)

    ಡಿಡಿಯಲ್ಲಿ ನೇರ ಪ್ರಸಾರ

    ಪ್ರಧಾನಿ ನರೇಂದ್ರ ಮೋದಿಯವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವುದನ್ನು ಡಿಡಿ ನ್ಯಾಶನಲ್​, ಡಿಡಿ ನ್ಯೂಸ್​, ಡಿಡಿ ಇಂಡಿಯಾಗಳಲ್ಲಿ ನೇರಪ್ರಸಾರದಲ್ಲಿ ವೀಕ್ಷಿಸಬಹುದು. ರೇಡಿಯೋ, ಯೂಟ್ಯೂಬ್​ ಚಾನಲ್​​ಗಳಲ್ಲೂ ಪ್ರಸಾರವಾಗಲಿದೆ.

  • 01 Apr 2022 11:06 AM (IST)

    ಒತ್ತಡ ಮುಕ್ತಿಗೆ ಮೋದಿ ಕೊಡಲಿದ್ದಾರೆ ಟಿಪ್ಸ್

    2018ರಿಂದ ಈ ಕಾರ್ಯಕ್ರಮ ನಡೆಯುತ್ತಿದೆ. ಕಳೆದ ವರ್ಷ ಕೊರೊನಾ ಕಾರಣದಿಂದ ವರ್ಚ್ಯುವಲ್​ ಆಗಿ ನಡೆದಿತ್ತು. ಈ ಬಾರಿ ಮುಖಾಮುಖಿಯಾಗಿ ನಡೆಯಲಿದೆ. ಪ್ರಸಕ್ತ ಬಾರಿ ಪ್ರಧಾನಿ ನರೇಂದ್ರ ಮೋದಿ, ವಿದ್ಯಾರ್ಥಿಗಳು ಪರೀಕ್ಷೆ ಸಮಯದಲ್ಲಿ ಒತ್ತಡ ಹೇಗೆ ನಿವಾರಣೆ ಮಾಡಿಕೊಳ್ಳಬೇಕು, ಮನಸನ್ನು ಶಾಂತವಾಗಿಟ್ಟುಕೊಳ್ಳಬೇಕು ಎಂಬ ವಿಷಯದ ಬಗ್ಗೆ ಮಾತನಾಡಲಿದ್ದಾರೆ .

  • 01 Apr 2022 11:06 AM (IST)

    ದೆಹಲಿ ಕ್ರೀಡಾಂಗಣದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ

    ದೆಹಲಿಯ ಟಾಲ್ಕಟೋರಾ ಸ್ಟೇಡಿಯಂನಲ್ಲಿ ಇಂದು ನಡೆಯಲಿರುವ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಕರ್ನಾಟಕದ ವಿದ್ಯಾರ್ಥಿಯೊಬ್ಬನೂ ಪಾಲ್ಗೊಳ್ಳಲಿದ್ದಾನೆ. ಅಂದಹಾಗೇ ಇದು 5ನೇ ಆವೃತ್ತಿಯ ಚರ್ಚೆ. ಈ ಕಾರ್ಯಕ್ರಮಕ್ಕೆ ನೋಂದಣಿ ಪ್ರಕ್ರಿಯೆ ಇದ್ದು, ಕೊನೆಯಲ್ಲಿ ಆಯ್ಕೆಯಾದವರು ಪ್ರಧಾನಿಯವರೊಂದಿಗೆ ಚರ್ಚೆಯಲ್ಲಿ ಪಾಲ್ಗೊಳ್ಳುತ್ತಾರೆ.

Published On - 11:00 am, Fri, 1 April 22

Follow us on