ಬೆಂಗಳೂರು, ಮೇ 12: ಪರೀಕ್ಷಾ ಅಕ್ರಮ ತಡೆಯಲು ವೆಬ್ ಕಾಸ್ಟ್ ನಿರ್ವಹಣೆ ಮಾಡಿ ಮಕ್ಕಳಲ್ಲಿ ಮಾನಸಿಕ ವೇದನೆ ಸೃಷ್ಟಿಸಿದ ಸರ್ಕಾರ ಇಂದು 1.79 ಲಕ್ಷ ಮಕ್ಕಳಿಗೆ ಕೃಪಾಂಕ ನೀಡಿ ಪಾಸು ಮಾಡಿರುವುದು ವ್ಯವಸ್ಥೆಯ ಕ್ರೂರ ಅಣಕ ಎಂದು ಮಾಜಿ ಸಚಿವ ಎಸ್.ಸುರೇಶ್ ಕುಮಾರ್ (S. Suresh Kumar) ಕಿಡಿಕಾರಿದ್ದಾರೆ. ಈ ಕುರಿತಾಗಿ ಸಿಎಂ ಸಿದ್ದರಾಮಯ್ಯಗೆ (Siddaramaiah) ಪತ್ರ ಬರೆಯಲಾಗಿದ್ದು, ಪರೀಕ್ಷಾ ಕೇಂದ್ರಿತ ವ್ಯವಸ್ಥೆಗಿಂತಲೂ ಬೋಧನಾ ವ್ಯವಸ್ಥೆಯನ್ನು ಬಲಪಡಿಸುವುದು ಮುಖ್ಯ. ಯಾವುದೇ ವ್ಯವಸ್ಥೆಗಳು ಅಂತಿಮವಾಗಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಮೂಡಿಸುವ, ಸಮಗ್ರ ಕಲಿಕೆಗೆ ಪ್ರೇರೇಪಿಸುವಂತಹವುಗಳಾಗಿರಬೇಕೇ ಹೊರತು ಮಕ್ಕಳ ಸ್ಥೈರ್ಯ ಕಸಿಯುವಂತಹದ್ದಾಗಿರಬಾರದು ಈ ನಿಟ್ಟಿನಲ್ಲಿ ಸಂಬಂಧಪಟ್ಟವರಿಗೆ ನಿರ್ದೇಶನ ನೀಡಿ ಎಂದು ಮನವಿ ಮಾಡಿದ್ದಾರೆ.
2024ರ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶಗಳು, ನಮ್ಮ ಆಡಳಿತ ವ್ಯವಸ್ಥೆಯ ಲೋಪದೋಷಗಳನ್ನಷ್ಟೇ ಅಲ್ಲ, ನೀತಿ ನಿರೂಪಕರುಗಳ ಜವಾಬ್ದಾರಿರಾಹಿತ್ಯವನ್ನು ಕೂಡ ಸಮರ್ಪಕವಾಗಿಯೇ ಬಯಲು ಮಾಡಿದೆ. ವಿದ್ಯಾರ್ಥಿಗಳ ಮಾನಸಿಕ ಪರಿಸ್ಥಿತಿಗಳನ್ನು ಒಂದು ಚೂರೂ ಗಮನಿಸದೇ, ಪರೀಕ್ಷೆಗಳನ್ನು ಶಿಸ್ತುಬದ್ಧವಾಗಿ ನಿರ್ವಹಿಸುತ್ತೇವೆಂದು ಘೋಷಿಸಿಕೊಳ್ಳುವುದು, ಮಕ್ಕಳನ್ನು ಸಿಸಿಟಿವಿಗಳ ಕಣ್ಗಾವಳೊಳಗೆ ಇರಿಸಿ ಭಯೋತ್ಪಾದನೆ ಮಾಡುವುದು, ನಂತರ ಕೃಪಾಂಕಗಳನ್ನು ನೀಡಿ ಫಲಿತಾಂಶ ಹೆಚ್ಚಿಸುವುದು ನನಗಂತೂ ಇಂದಿನ ವ್ಯವಸ್ಥೆಯ ಕ್ರೂರ ಅಣಕವಾಗಿ ಕಂಡಿದೆ.
ಇದನ್ನೂ ಓದಿ: SSLC Result: 50ರ ಗಡಿಯಲ್ಲಿದ್ದ ಫಲಿತಾಂಶ ಹೆಚ್ಚಿಸಲು ಕೃಪಾಂಕ ಹಾದಿ, ಆದರೂ 10% ರಿಸಲ್ಟ್ ಡೌನ್
ಕಳೆದ ಸಾಲಿನ ಪರೀಕ್ಷೆಗಳಿಗೆ ಹೋಲಿಸಿದರೆ ಶೇ.83 ರಿಂದ ಈ ಬಾರಿ ಶೇ 53ಕ್ಕೆ ಅಂದರೆ ಶೇ.30 ರಷ್ಟು ಫಲಿತಾಂಶ ಕುಸಿತ ಕಂಡಿದೆ. ನಂತರ ಕೇವಲ ಕೃಪಾಂಕದ ಕಾರಣವೇ 1.79 ಲಕ್ಷ ವಿದ್ಯಾರ್ಥಿಗಳು ಪಾಸಾಗಿ ನಿಟ್ಟುಸಿರು ಬಿಟ್ಟಿದ್ದಾರೆ ಎಂದರೆ ಪರಿಸ್ಥಿತಿಯ ಗಂಭೀರತೆ ಅರ್ಥ ಮಾಡಿಕೊಳ್ಳಬಹುದು. ಇದು ಶೇರು ಮಾರುಕಟ್ಟೆಯ ಮಾದರಿಯಲ್ಲಿ ಏರಿಳಿತ ಎಂದು ಆಲೋಚಿಸಿಕೊಂಡು ಸುಮ್ಮನಿರುವ ವಿಷಯವಲ್ಲ. ಒಂದಿಡೀ ಪೀಳಿಗೆಯ ಮನೋಸ್ಥೈರ್ಯವನ್ನು ಕಂಗೆಡಿಸುವ ವಿಷಯ ಇದಾಗಿದೆ. ಪರೀಕ್ಷೆ ಆನೂಚಾನವಾಗಿ ನಡೆದುಬಂದ ಒಂದು ವ್ಯವಸ್ಥೆಯನ್ನು ಬದಲಾಯಿಸುವಾಗ ಸಮಗ್ರ ಆಲೋಚನೆ ಎಷ್ಟು ಮುಖ್ಯವಾಗುತ್ತದೆ ಎನ್ನುವುದನ್ನು ಸರ್ಕಾರ ಆಲೋಚನೆ ಮಾಡಬೇಕಿತ್ತು ಎನ್ನುವುದು ನನ್ನ ಪ್ರಾಮಾಣಿಕ ಅನಿಸಿಕೆ. ಇದೆಲ್ಲವನ್ನೂ ಗಮನಿಸಿದ ಬಳಿಕ ಇಷ್ಟು ದಿನ ಸರ್ಕಾರಗಳು ಕೇವಲ ಜನರನ್ನು ಸುಳ್ಳೇ ನಂಬಿಸುವ ಕೆಲಸ ಮಾಡುತ್ತಿದ್ದವೇ ಎನ್ನುವ ಅನುಮಾನ ಬಾರದಿರಲು ಸಾಧ್ಯವಿಲ್ಲ. ಈ ಕುರಿತು ನನ್ನ ಕೆಲ ಅಭಿಪ್ರಾಯಗಳನ್ನು ನಿಮ್ಮ ಗಮನಕ್ಕೆ ತರಬಯಸುತ್ತೇನೆ.
ಇದನ್ನೂ ಓದಿ: SSLC Exam 2 Time Table: ಎಸ್‌ಎಸ್‌ಎಲ್‌ಸಿ ಪರೀಕ್ಷೆ- 2ರ ವೇಳಾಪಟ್ಟಿ ಪ್ರಕಟ
ತಮ್ಮ ಸರ್ಕಾರ ಈ ಕುರಿತಂತೆ ಇನ್ನಷ್ಟು ವಸ್ತುನಿಷ್ಠವಾಗಿ ಆಲೋಚಿಸಬೇಕಿದೆ. ವಿಭಿನ್ನತೆಯ ನೆಪದಲ್ಲಿ ಪರೀಕ್ಷೆಯ ಹಿಂಸೆಯನ್ನು ಮಕ್ಕಳ ಮೇಲೆ ಹೇರುವ ಮುನ್ನ, ನಂತರ ಕೃಪಾಂಕಗಳನ್ನು ನೀಡಿ ಎಡವಟ್ಟು ಮಾಡುವ, ವಿಶ್ವಾಸ ಕದಡುವ ಮುನ್ನ ಬೋಧನಾ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಶ್ರಮ ವಹಿಸಬೇಕಿದೆ. ತಮ್ಮ ಹಕ್ಕನ್ನು ಪಡೆಯಲು ಯಾವ ಸಮೂಹ ಶಕ್ತಿಯನ್ನೂ ಹೊಂದದ ಆ ವಿದ್ಯಾರ್ಥಿಗಳ ಕುರಿತಂತೆ ಸಹಾನುಭೂತಿಯ ನಿಲುವು ಮುಖ್ಯ. ಈ ಕುರಿತಂತೆ ಸಂಬಂಧಪಟ್ಟವರಿಗೆ ನಿಮ್ಮಿಂದ ಸೂಕ್ತ ಹಾಗೂ ಕಠಿಣ ನಿರ್ದೇಶನ ತಲುಪಿದಲ್ಲಿ ಒಂದಷ್ಟು ಬದಲಾವಣೆ ಸಾಧ್ಯ ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.