
ಹೆತ್ತವರ ಮುಖದಲ್ಲಿ ಹೆಮ್ಮೆಯ ನಗು ಮೂಡಿಸುವುದು ಪ್ರತೀ ಮಕ್ಕಳ ಕನಸು. ಅದೇ ರೀತಿ ತನ್ನ ತಂದೆಯ ಕನಸನ್ನು ನನಸಾಗಿಸಿ, ಯುಪಿಎಸ್‌ಸಿ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 6ನೇ ರ‍್ಯಾಂಕ್ ಪಡೆದು IAS ಅಧಿಕಾರಿಯಾದ ಶುಭಮ್ ಗುಪ್ತಾ ಅವರ ಜೀವನಗಾಥೆ ಇಂದು ಲಕ್ಷಾಂತರ ಯುವಕರಿಗೆ ಸ್ಫೂರ್ತಿಯಾಗಿದೆ. ಕಠಿಣ ಪರಿಶ್ರಮ, ನಿರಂತರ ಹೋರಾಟ ಮತ್ತು ಎಂದಿಗೂ ಕೈಬಿಡದ ಮನೋಭಾವ ಇದ್ದರೆ ಯಾವುದೇ ಗುರಿಯನ್ನೂ ಸಾಧಿಸಬಹುದು ಎಂಬುದಕ್ಕೆ ಶುಭಮ್ ಜೀವಂತ ಉದಾಹರಣೆ.
ಶುಭಮ್ ಅವರ ಕುಟುಂಬ ಮೂಲತಃ ರಾಜಸ್ಥಾನದ ಸಿಕಾರ್ ಜಿಲ್ಲೆಯದ್ದು. ಬಳಿಕ ಕುಟುಂಬ ಜೈಪುರದಲ್ಲಿ ನೆಲೆಸಿದ್ದರೂ, 2007ರಲ್ಲಿ ತಂದೆಯ ವ್ಯವಹಾರದಲ್ಲಿ ಭಾರೀ ನಷ್ಟ ಉಂಟಾದ ಕಾರಣ ಜೀವನ ಸಂಪೂರ್ಣ ತಲೆಕೆಳಗಾಯಿತು. ಕುಟುಂಬ ಜೀವನೋಪಾಯಕ್ಕಾಗಿ ಗುಜರಾತ್‌ನ ದಹನು ಪ್ರದೇಶಕ್ಕೆ ವಲಸೆ ಹೋಗಬೇಕಾಯಿತು. ಅಲ್ಲಿಂದ ಆರಂಭವಾದ ಕಷ್ಟದ ದಿನಗಳು ಶುಭಮ್ ಅವರನ್ನು ಮತ್ತಷ್ಟು ಗಟ್ಟಿಗೊಳಿಸಿತು.
ದಹನುವಿನಲ್ಲಿ ಹಿಂದಿ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆಗಳಿಲ್ಲದ ಕಾರಣ, ಶುಭಮ್ ಮತ್ತು ಅವರ ಸಹೋದರಿಯನ್ನು 80 ಕಿಲೋಮೀಟರ್ ದೂರದ ಶಾಲೆಗೆ ಸೇರಿಸಲಾಗಿತ್ತು. ಪ್ರತಿದಿನ ರೈಲಿನಲ್ಲಿ ದೂರ ಪ್ರಯಾಣ ಮಾಡಿ ಓದಿದರೂ, ಶಿಕ್ಷಣದ ಮೇಲಿನ ಅವರ ಆಸಕ್ತಿ ಎಂದಿಗೂ ಕಡಿಮೆಯಾಗಲಿಲ್ಲ. 10ನೇ ತರಗತಿಯಲ್ಲಿ 10 CGPA ಪಡೆದು ಜಿಲ್ಲೆಯ ಟಾಪರ್ ಆಗಿ ಹೊರಹೊಮ್ಮಿದ ಅವರು, ನಂತರ ದೆಹಲಿ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಪದವಿ ಪಡೆದರು.
UPSC ಕನಸನ್ನು ಬೆನ್ನಟ್ಟಲು ಅವರು ‘ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್’ನಲ್ಲಿ ಮಾಡುತ್ತಿದ್ದ ಸ್ನಾತಕೋತ್ತರ ಪದವಿಯನ್ನು ಅರ್ಧಕ್ಕೆ ಕೈಬಿಟ್ಟರು. ದೆಹಲಿಯಿಂದ ಮರಳಿದ ಬಳಿಕ ತಂದೆಯ ಶೂ ಅಂಗಡಿಯಲ್ಲಿ ಕೆಲಸ ಮಾಡುತ್ತಲೇ UPSC ಸಿದ್ಧತೆ ಆರಂಭಿಸಿದರು. ಅಂಗಡಿಯಲ್ಲಿ ಸರಕುಗಳ ಮೂಟೆ ಹೊರುವುದು, ಗ್ರಾಹಕರಿಗೆ ಸೇವೆ ನೀಡುವುದು ಸೇರಿದಂತೆ ಎಲ್ಲಾ ಕೆಲಸಗಳನ್ನು ಮಾಡುತ್ತಾ, ರಾತ್ರಿ ಹೊತ್ತು ಓದುತ್ತಿದ್ದರು.
ಇದನ್ನೂ ಓದಿ: ನಟ ವಿಜಯ್ ಪುತ್ರಿ ದಿವ್ಯಾ ಸಾಶಾ ಬಗ್ಗೆ ನಿಮಗೆಷ್ಟು ಗೊತ್ತು? ಶೈಕ್ಷಣಿಕ ಹಿನ್ನೆಲೆಯ ಬಗ್ಗೆ ಇಲ್ಲಿದೆ ಮಾಹಿತಿ
“ನನ್ನ ಮಗ ಅಧಿಕಾರಿಯಾಗಬೇಕು” ಎಂಬುದು ತಂದೆಯ ದೊಡ್ಡ ಕನಸಾಗಿತ್ತು. ಆ ಕನಸೇ ಶುಭಮ್ ಅವರಿಗೆ ಪ್ರೇರಣೆಯಾಯಿತು. ಆದರೆ UPSC ಪಯಣ ಸುಲಭವಾಗಿರಲಿಲ್ಲ. ಮೊದಲ ಪ್ರಯತ್ನದಲ್ಲಿ ಪ್ರಿಲಿಮ್ಸ್‌ನಲ್ಲೇ ಸೋಲು ಕಂಡ ಅವರು, ಎರಡನೇ ಪ್ರಯತ್ನದಲ್ಲಿ AIR 360 ಪಡೆದು ಇಂಡಿಯನ್ ಆಡಿಟ್ ಅಂಡ್ ಅಕೌಂಟ್ಸ್ ಸರ್ವೀಸ್‌ಗೆ ಆಯ್ಕೆಯಾದರು. ಆದರೂ IAS ಗುರಿ ಕೈಬಿಡಲಿಲ್ಲ. ಮೂರನೇ ಪ್ರಯತ್ನದಲ್ಲಿ ಮತ್ತೆ ವಿಫಲರಾದಾಗ ಸಂಪೂರ್ಣ ನಿರಾಶರಾಗಿದ್ದರು. ಆದರೆ ಕುಟುಂಬದ ಬೆಂಬಲ ಮತ್ತು ಆತ್ಮವಿಶ್ವಾಸದಿಂದ ಮತ್ತೊಮ್ಮೆ ಹೋರಾಡಿದ ಅವರು, 2018ರಲ್ಲಿ ನಾಲ್ಕನೇ ಪ್ರಯತ್ನದಲ್ಲಿ AIR 6 ಪಡೆದು ದೇಶದ ಗಮನ ಸೆಳೆದರು.
ಇಂದು IAS ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಶುಭಮ್ ಗುಪ್ತಾ, “ಯಶಸ್ಸಿಗೆ ಶಾರ್ಟ್‌ಕಟ್ ಇಲ್ಲ. ಹಿನ್ನೆಲೆ ಎಷ್ಟೇ ಸಾಮಾನ್ಯವಾಗಿದ್ದರೂ, ಕಷ್ಟಗಳು ಎಷ್ಟೇ ದೊಡ್ಡದಾಗಿದ್ದರೂ ಗುರಿಯ ಮೇಲಿನ ನಂಬಿಕೆ ಮತ್ತು ಕಠಿಣ ಪರಿಶ್ರಮ ನಿಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ” ಎಂದು ಯುವಕರಿಗೆ ಸಂದೇಶ ನೀಡಿದ್ದಾರೆ.
ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ