ಬೆಂಗಳೂರು: ಕರ್ನಾಟಕದಲ್ಲಿ ಸೋಮವಾರದಿಂದ (ಮಾರ್ಚ್ 28) ಎಸ್ಎಸ್ಎಲ್ಸಿ ಪರೀಕ್ಷೆಗಳು ನಡೆಯಲಿದ್ದು, 8 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆ ಬರೆಯಲಿರುವ 8,73,846 ವಿದ್ಯಾರ್ಥಿಗಳ ಪೈಕಿ 4,52,732 ಬಾಲಕರು ಮತ್ತು 4,21,110 ಮಂದಿ ಬಾಲಕಿಯರು. ಪರೀಕ್ಷೆಗೆ 15,387 ಶಾಲೆಗಳು ನೋಂದಾಯಿಸಿಕೊಂಡಿದ್ದು, 3,444 ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಬೆಳಗ್ಗೆ 10.30ರಿಂದ ಮಧ್ಯಾಹ್ನ 1.45ರವರೆಗೆ ಪರೀಕ್ಷೆ ನಡೆಯಲಿದ್ದು, ಪರೀಕ್ಷಾ ಕೇಂದ್ರಗಳ ಸುತ್ತ 144ನೇ ಸೆಕ್ಷನ್ ಅನ್ವಯ ನಿರ್ಬಂಧ ಆದೇಶ ಜಾರಿ ಮಾಡಲಾಗಿದೆ. ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಿಗಿಭದ್ರತೆ ವ್ಯವಸ್ಥೆ ಮಾಡಲಾಗಿದ್ದು, ಪರೀಕ್ಷಾ ಕೊಠಡಿಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ಸೇವೆ ಕಲ್ಪಿಸಲಾಗಿದೆ. ಪ್ರವೇಶ ಪತ್ರ ತೋರಿಸಿ ವಿದ್ಯಾರ್ಥಿಗಳು ಸಂಚರಿಸಬಹುದು.
ಏಪ್ರಿಲ್ 11ರವರೆಗೆ ಪರೀಕ್ಷೆ ನಡೆಯಲಿದೆ. ಪರೀಕ್ಷೆಗಾಗಿ 3,275 ಸಾಮಾನ್ಯ ಕೇಂದ್ರಗಳು, 169 ಖಾಸಗಿ ಕೇಂದ್ರಗಳನ್ನು ಗುರುತಿಸಲಾಗಿದೆ. ಸುಮಾರು 45,289 ಪರೀಕ್ಷಾ ಕೊಠಡಿಗಳಲ್ಲಿ ಸಿದ್ಧತೆ ಪೂರ್ಣಗೊಂಡಿದೆ. ಪರೀಕ್ಷೆಗಾಗಿ 3,444 ಮುಖ್ಯ ಅಧಿಕ್ಷಕರು ಹಾಗೂ 49,817 ಕೊಠಡಿ ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ. ಕಳೆದ ವರ್ಷ ಕೋವಿಡ್ ಹಿನ್ನೆಲೆ ಮಲ್ಟಿಪಲ್ ಚಾಯ್ಸ್ ಮೂಲಕ ಪರೀಕ್ಷೆ ನಿರ್ವಹಿಸಲಾಗಿತ್ತು. ಪರೀಕ್ಷೆಗೆ ಹಾಜರಾಗಿದ್ದ ಎಲ್ಲ ವಿದ್ಯಾರ್ಥಿಗಳನ್ನು ಸರ್ಕಾರ ಪಾಸ್ ಮಾಡಿತ್ತು.
ಎಂದು ಯಾವ ವಿಷಯ?
ಪ್ರತಿ ವಿಷಯದ ಪ್ರಶ್ನಪತ್ರಿಕೆ ಓದಲು 15 ನಿಮಿಷ ಸಮಯ ನೀಡಲಾಗುತ್ತದೆ. ಮಾರ್ಚ್ 28ರಂದು ಪ್ರಥಮ ಭಾಷೆ, 30ಕ್ಕೆ ದ್ವಿತೀಯ ಭಾಷೆ, ಅರ್ಥಶಾಸ್ತ್ರ ಮತ್ತು ಕೋರ್ ಸಬ್ಜೆಕ್ಟ್, ಏಪ್ರಿಲ್ 4ರಂದು ಗಣಿತ ಹಾಗೂ ಸಮಾಜಶಾಸ್ತ್ರ, 6ರಂದು ಸಮಾಜ ವಿಜ್ಞಾನ, 8ರಂದು ತೃತೀಯ ಭಾಷೆ, 11ಕ್ಕೆ ವಿಜ್ಞಾನ, ರಾಜ್ಯಶಾಸ್ತ್ರ, ಕರ್ನಾಟಕ / ಹಿಂದೂಸ್ತಾನಿ ಸಂಗೀತ ಪರೀಕ್ಷೆಗಳು ನಡೆಯಲಿವೆ. ಪ್ರತಿದಿನ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 1.45ರವರೆಗೆ ಪರೀಕ್ಷೆಗಳು ನಡೆಯಲಿವೆ.
ಸಮವಸ್ತ್ರ ಕಡ್ಡಾಯ
ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯ ಎಂದು ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ. ಹಿಜಾಬ್ ಧರಿಸಿ ಬಂದರೆ ಪರೀಕ್ಷೆಗೆ ಪ್ರವೇಶ ನೀಡುವುದಿಲ್ಲ. ಆಯಾ ಶಾಲೆಗಳ ಆಡಳಿತ ಮಂಡಳಿ ನಿಗದಿಪಡಿಸಿರುವ ಶಾಲಾ ಸಮವಸ್ತ್ರ ಪಾಲನೆಯು ಖಾಸಗಿ ಶಾಲೆಗಳ ಮಕ್ಕಳಿಗೂ ಕಡ್ಡಾಯ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಹಿಜಾಬ್ ಧರಿಸಿ ಬಂದರೆ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ನಿರಾಕರಿಸಲಾಗುವುದು. ನಿಯಮ 1995ರ ನಿಯಮ 11ರಲ್ಲಿ ಪ್ರದತ್ತವಾಗಿರುವ ಅಧಿಕಾರದನ್ವಯ ಸಮವಸ್ತ್ರ ಜಾರಿ ಮಾಡಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಹಲವು ಮುಸ್ಲಿಂ ಧರ್ಮಗುರುಗಳು ಸಹ ಪರೀಕ್ಷೆಗೆ ಹಾಜರಾಗಲು ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಹಿಜಾಬ್ ಧರಿಸಿಕೊಂಡು ಬಂದ್ರೆ ಎಸ್ಎಸ್ಎಲ್ಸಿ ಪರೀಕ್ಷೆಗೆ ಇಲ್ಲ ಎಂಟ್ರಿ; ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಆದೇಶ
ಇದನ್ನೂ ಓದಿ: ಮಾ.28 ರಿಂದ ಏ.11ರವರೆಗೆ ಎಸ್ಎಸ್ಎಲ್ಸಿ ಪರೀಕ್ಷೆ; ವಿದ್ಯಾರ್ಥಿಗಳಿಗೆ ಕೆಎಸ್‌ಆರ್‌ಟಿಸಿಯಿಂದ ಉಚಿತ ಪ್ರಯಾಣಕ್ಕೆ ಅವಕಾಶ