ಎಲ್ಲಾ ಶೈಕ್ಷಣಿಕ ವರ್ಷಗಳಿಗೂ ಸಮವಸ್ತ್ರ ಒದಗಿಸಲಾಗಿದೆ: ಹೈಕೋರ್ಟ್ಗೆ ಸರ್ಕಾರಿ ವಕೀಲರ ಮಾಹಿತಿ, ಜೈಲು ಶಿಕ್ಷೆಯ ಎಚ್ಚರಿಕೆ ನೀಡಿದ ಪೀಠ
ಸರ್ಕಾರಿ ಮಕ್ಕಳಿಗೆ ಎರಡು ಜತೆ ಸಮವಸ್ತ್ರ, 1 ಜತೆ ಶೂ ಹಾಗೂ ಎರಡು ಜತೆ ಸಾಕ್ಸ್ ನೀಡುವಂತೆ ಹೈಕೋರ್ಟ್ 2018ರಲ್ಲಿ ಆದೇಶ ಹೊರಡಿಸಿತ್ತು. ಆದರೆ ಸರ್ಕಾರ ಈ ಆದೇಶವನ್ನು ಪಾಲನೆ ಮಾಡುತ್ತಿಲ್ಲ ಎಂದು ಆರೋಪಿ ಕೊಪ್ಪಳದ ಮಾ.ಮಂಜುನಾಥ್ ಎಂಬವರು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು.
ಬೆಂಗಳೂರು: ಸರ್ಕಾರಿ ಶಾಲೆಗಳಿಗೆ ನೀಡಲಾಗುವ ಸಮವಸ್ತ್ರದಲ್ಲಿ ಮಲತಾಯಿ ಧೋರಣೆ ನಡೆಸಲಾಗುತ್ತಿರುವ ಬಗ್ಗೆ ಸರ್ಕಾರಕ್ಕೆ ಛೀಮಾರಿ ಹಾಕಿದ್ದ ಬೆನ್ನಲ್ಲೆ ಹೈಕೋರ್ಟ್ಗೆ (Karnataka High Court) ಸರ್ಕಾರಿ ವಕೀಲರು ಮಾಹಿತಿ ನೀಡಿದ್ದಾರೆ. ಸಮವಸ್ತ್ರ ಖರೀದಿಗೆ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಲಾಗಿದೆ. ಎಲ್ಲಾ ಶೈಕ್ಷಣಿಕ ವರ್ಷಗಳಿಗೂ ಸಮವಸ್ತ್ರ ಒದಗಿಸಲಾಗಿದೆ ಎಂದು ಹೇಳಿದ್ದಾರೆ. ಆದರೆ ಇದಕ್ಕೆ ಸರಿಯಾದ ದಾಖಲೆಯನ್ನು ನೀಡಿಲ್ಲ. ಇದನ್ನು ಗಮನಿಸಿದ ನ್ಯಾ.ಬಿ.ವೀರಪ್ಪ, ನ್ಯಾ.ಕೆ.ಎಸ್. ಹೇಮಲೇಖಾರವರಿದ್ದ ಪೀಠ, ಸರ್ಕಾರಿ ಶಾಲಾ ಮಕ್ಕಳಿಗೆ ಸಮವಸ್ತ್ರ ತಲುಪಿದ ಬಗ್ಗೆ ದಾಖಲೆ ಒದಗಿಸಿಲ್ಲ. ಲೋಪ ಎಸಗಿದರೆ ಅಧಿಕಾರಿಯನ್ನು ಜೈಲಿಗೆ ಕಳುಹಿಸುವ ಎಚ್ಚರಿಕೆ ನೀಡಿ, ಹೈಕೋರ್ಟ್ ಆದೇಶ ಪಾಲನೆ ಬಗ್ಗೆ 2 ವಾರದಲ್ಲಿ ವರದಿ ಸಲ್ಲಿಸುವಂತೆ ಸೂಚನೆ ನೀಡಿತು.
ಸರ್ಕಾರಿ ಮಕ್ಕಳಿಗೆ ಎರಡು ಜತೆ ಸಮವಸ್ತ್ರ, 1 ಜತೆ ಶೂ ಹಾಗೂ ಎರಡು ಜತೆ ಸಾಕ್ಸ್ ನೀಡುವಂತೆ ಹೈಕೋರ್ಟ್ 2018ರಲ್ಲಿ ಆದೇಶ ಹೊರಡಿಸಿತ್ತು. ಆದರೆ ಸರ್ಕಾರ ಈ ಆದೇಶವನ್ನು ಪಾಲನೆ ಮಾಡುತ್ತಿಲ್ಲ ಎಂದು ಆರೋಪಿ ಕೊಪ್ಪಳದ ಮಾ.ಮಂಜುನಾಥ್ ಎಂಬವರು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ: ಸರ್ಕಾರಿ ಶಾಲೆ ಮಕ್ಕಳಿಗೆ ಎರಡು ಜೊತೆ ಸಮವಸ್ತ್ರ ನೀಡದ ಕರ್ನಾಟಕ ಸರ್ಕಾರಕ್ಕೆ ಛೀಮಾರಿ ಹಾಕಿದ ಹೈಕೋರ್ಟ್
ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿದ್ದ ಇದೇ ಪೀಠ, ಸರ್ಕಾರಿ ಶಾಲೆಗಳಿಗೆ ನೀಡಲಾಗುವ ಸಮವಸ್ತ್ರದಲ್ಲಿ ಮಲತಾಯಿ ಧೋರಣೆ ನಡೆಸಲಾಗುತ್ತಿರುವ ಬಗ್ಗೆ ಕರ್ನಾಟಕ ಸರ್ಕಾರ ಮತ್ತು ಅಧಿಕಾರಿಗಳ ವಿರುದ್ಧ ಗರಂ ಆಗಿತ್ತು. ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಉತ್ಸವಗಳನ್ನು ನಡೆಸಲಾಗುತ್ತದೆ, ಸರ್ಕಾರಿ ಶಾಲೆ ಮಕ್ಕಳಿಗೆ ಸಮವಸ್ತ್ರ ನೀಡಲು ಆಗುದಿಲ್ವಾ? ಸರ್ಕಾರಕ್ಕೆ ಮತ್ತು ಅಧಿಕಾರಿಗಳಿಗೆ ನಾಚಿಕೆಯಾಗಬೇಕು ಎಂದು ಛೀಮಾರಿ ಹಾಕಿತ್ತು.
ಅಧಿಕಾರಿಗಳಿಗೆ ಮರ್ಯಾದೆ, ಆತ್ಮಸಾಕ್ಷಿ ಇಲ್ಲ. ಅವರು ಸರ್ಕಾರಿ ಶಾಲಾ ಮಕ್ಕಳಿಗೆ ಮಾನವೀಯತೆ ತೋರುತ್ತಿಲ್ಲ. ಅಧಿಕಾರಿಗಳ ಮಕ್ಕಳು ಸರ್ಕಾರಿ ಶಾಲೆಗೆ ಹೋಗುವುದಿಲ್ಲ. ಖಾಸಗಿ ಶಾಲೆಗೆ ಕಾರಿನಲ್ಲಿ ಹೋಗಿ ಬರುತ್ತಾರೆ. ಮಕ್ಕಳ ವಿಚಾರದಲ್ಲಿ ಇಂತಹ ಮಲತಾಯಿ ಧೋರಣೆಯನ್ನು ಸಹಿಸುವುದಿಲ್ಲ. ಸರ್ಕಾರ ಈಗಲಾದರೂ ಕಣ್ಣು ತೆರೆದು ಎರಡು ಜತೆ ಸಮವಸ್ತ್ರ ಒದಗಿಸಬೇಕು ಎಂದು ಸೂಚಿಸಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:03 pm, Tue, 14 February 23