High Court: ನಾಗರಿಕರನ್ನು ಸುಲಿಗೆ ಮಾಡುವ ಸರ್ಕಾರವಾಗಬಾರದು: ಕರ್ನಾಟಕ ಹೈಕೋರ್ಟ್

KIADB and Government Get Beating: ಕೆಐಎಡಿಬಿಯಿಂದ ಭೂಸ್ವಾಧೀನ ಆಗಿರುವುದನ್ನು ಪ್ರಶ್ನಿಸಿ ಎಂವಿ ಗುರುಪ್ರಸಾದ್ ಮತ್ತು ನಂದಿನಿ ಗುರುಪ್ರಸಾದ್ ಅವರು ಸಲ್ಲಿಸಿದ ದೂರು ಅರ್ಜಿಯ ವಿಚಾರಣೆ ವೇಳೆ ಹೈಕೋರ್ಟ್ ಕೆಐಎಡಿಬಿ ಮತ್ತು ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕಿದೆ.

High Court: ನಾಗರಿಕರನ್ನು ಸುಲಿಗೆ ಮಾಡುವ ಸರ್ಕಾರವಾಗಬಾರದು: ಕರ್ನಾಟಕ ಹೈಕೋರ್ಟ್
ಕರ್ನಾಟಕ ಹೈಕೋರ್ಟ್
Follow us
TV9 Web
| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on:Feb 14, 2023 | 12:55 PM

ಬೆಂಗಳೂರು: ಕೆಐಎಡಿಬಿಯ ಭೂಸ್ವಾಧೀನ (Land Acquisition) ಪ್ರಕ್ರಿಯೆಯ ರೀತಿ ಬಗ್ಗೆ ರಾಜ್ಯ ಉಚ್ಚ ನ್ಯಾಯಾಲಯ ಅಸಮಾಧಾನಪಟ್ಟಿದೆ. ಖಾಸಗಿಯವರ ಭೂಸ್ವತ್ತನ್ನು ಸರಿಯಾದ ಪರಿಹಾರ (Compensation) ಕೊಡದೇ ಸ್ವಾಧೀನಪಡಿಸಿಕೊಳ್ಳುವ ಕೆಐಎಡಿಬಿಯ ಕ್ರಮವನ್ನು ಕೋರ್ಟ್ (Karnataka High Court) ತರಾಟೆಗೆ ತೆಗೆದುಕೊಂಡಿದೆ. ಈ ವಿಚಾರದಲ್ಲಿ ಸರ್ಕಾರಕ್ಕೂ ತಪರಾಕಿ ಹಾಕಿದೆ. ಸರ್ಕಾರ ಸುಲಿಗೆಕೋರರಂತೆ ವರ್ತಿಸಬಾರದು ಎಂದು ಹೈಕೋರ್ಟ್ ಹೇಳಿದೆ.

ಕೆಐಎಡಿಬಿಯಿಂದ ಭೂಸ್ವಾಧೀನ ಆಗಿರುವುದನ್ನು ಪ್ರಶ್ನಿಸಿ ಎಂವಿ ಗುರುಪ್ರಸಾದ್ ಮತ್ತು ನಂದಿನಿ ಗುರುಪ್ರಸಾದ್ ಅವರು ಸಲ್ಲಿಸಿದ ದೂರು ಅರ್ಜಿಯ ವಿಚಾರಣೆ ವೇಳೆ ಹೈಕೋರ್ಟ್ ಕೆಐಎಡಿಬಿ ಮತ್ತು ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕಿದೆ.

ಏನಿದು ಪ್ರಕರಣ?

ಗುರುಪ್ರಸಾದ್ ದಂಪತಿಗೆ ಸೇರಿದ ಭೂಮಿಯನ್ನು 2007ರಲ್ಲಿ ಕೆಐಎಡಿಬಿ ಸ್ವಾಧೀನಪಡಿಸಿಕೊಂಡಿತ್ತು. ಪರಿಹಾರ ಒದಗಿಸುವ ಅಧಿಸೂಚನೆಯಲ್ಲಿ ಮೊದಲಿಗೆ ಗುರುಪ್ರಸಾದ್ ಮತ್ತು ನಂದಿನಿ ಗುರುಪ್ರಸಾದ್ ಹೆಸರು ಇರಲೇ ಇಲ್ಲ. ಏಳು ವರ್ಷಗಳ ಪ್ರಯತ್ನದ ಬಳಿಕ 2014ರಲ್ಲಿ ಸರ್ಕಾರ ತಿದ್ದುಪಡಿ ಮಾಡಿ ಇವರ ಹೆಸರನ್ನು ಪಟ್ಟಿಗೆ ಸೇರಿಸಿತು. ಆದಾಗ್ಯೂ ಇವರಿಗೆ ಪರಿಹಾರ ಸಿಕ್ಕಿಲ್ಲ. ಕೆಐಎಡಿಬಿಯಿಂದ ನಡೆದ ಭೂಸ್ವಾಧೀನ ಪ್ರಕ್ರಿಯೆಯನ್ನೇ ಪ್ರಶ್ನಿಸಿ ಗುರುಪ್ರಸಾದ್ ಮತ್ತು ನಂದಿನಿ ಗುರುಪ್ರಸಾದ್ ಅವರು ಹೈಕೋರ್ಟ್​ನಲ್ಲಿ ಪೆಟಿಶನ್ ಹಾಕಿದ್ದಾರೆ.

ಇದನ್ನೂ ಓದಿ: Amit Shah: ಕರ್ನಾಟಕದಲ್ಲಿ ಬಿಜೆಪಿಗೆ ಪೂರ್ಣ ಬಹುಮತ: ಅಮಿತ್ ಶಾ

ಭೂಸ್ವಾಧೀನ ಕ್ರಮವನ್ನು ಹಿಂಪಡೆಯಬೇಕೆಂದು ಇವರು ಮಾಡಿಕೊಂಡಿರುವ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ಆದರೆ. ಸೂಕ್ತ ಪರಿಹಾರ ಒದಗಿಸಬೇಕೆಂದು ಆದೇಶಿಸಿದೆ.

ಒಂದೂವರೆ ದಶಕಗಳ ಕಾಲವಾದರೂ ಪರಿಹಾರ ಯಾಕೆ ಕೊಟ್ಟಿಲ್ಲ? ಇದಕ್ಕೆ ಸಮಾಧಾನಕರ ಉತ್ತರ ಬಂದಿಲ್ಲ ಎಂದು ನ್ಯಾ| ಕೃಷ್ಣ ದೀಕ್ಷಿತ್ ಈ ಪ್ರಕರಣದ ತೀರ್ಪಿನಲ್ಲಿ ಹೇಳಿದ್ದಾರೆ. 2013ರ ಭೂಸ್ವಾಧೀನ, ಪುನರ್ವಸತಿಯಲ್ಲಿ ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕತೆಯ ಹಕ್ಕು ಕಾಯ್ದೆ ಅಡಿಯಲ್ಲಿ ಎಣಿಸಲಾದ ಮೊತ್ತದ ಶೇ 50ರ ದರದಲ್ಲಿ ಪರಿಹಾರ ನೀಡಬೇಕು. ಅರ್ಜಿದಾರರಿಗೆ ಒಂದು ಎಕರೆಗೆ 25 ಸಾವಿರ ರೂ ಲೆಕ್ಕದಲ್ಲಿ ಪರಿಹಾರ ಕೊಡಬೇಕು ಎಂದು ಕೆಐಎಡಿಬಿಗೆ ನ್ಯಾಯಾಧೀಶರು ನಿರ್ದೇಶನ ನೀಡಿದ್ದಾರೆ.

ಈ ವಿಚಾರದಲ್ಲಿ ಸರ್ಕಾರದ ಧೋರಣೆ ಬಗ್ಗೆಯೂ ನ್ಯಾಯಪೀಠ ಅಸಮಾಧಾನ ಪಟ್ಟಿತು. “ಸರ್ಕಾರ ಭೂಗಳ್ಳರಂತೆ ವರ್ತಿಸಬಾರದು. ಸೂಕ್ತ ಪರಿಹಾರ ಕೊಡದೇ ಸಾರ್ವಜನಿಕ ಉದ್ದೇಶದಿಂದ ಖಾಸಗಿ ಭೂನಿಯನ್ನು ಸ್ವಾಧೀನಪಡಿಸಿಕೊಳ್ಲುವುದು ಸಂವಿಧಾನದ ಆಶಯಕ್ಕೆ ವಿರುದ್ಧವಾದುದುಎಂದು ನ್ಯಾಯಾಧೀಶರು ತಮ್ಮ ತೀರ್ಪಿನಲ್ಲಿ ತಿಳಿಸಿದ್ದಾರೆ. ಅದಕ್ಕಾಗಿ ಐದನೇ ಶತಮಾನದಲ್ಲಿ ಸೇಂಟ್ ಆಗಸ್ಟೀನ್ ಬರೆದ ದಿ ಸಿಟಿ ಆಫ್ ಗಾಡ್ ಪುಸ್ತಕದ ಒಂದು ಹೇಳಿಕೆಯನ್ನು ಕೋರ್ಟ್ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿತು: “ನ್ಯಾಯ ಇಲ್ಲದೇ ಸರ್ಕಾರ ಕಳ್ಳರ ಪಡೆ ಅಲ್ಲವೇ?”

Published On - 12:55 pm, Tue, 14 February 23