ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಉಳಿದಿದ್ದು ರಾಜಕೀಯ ವಲಯದಲ್ಲಿ ಆರೋಪ-ಪ್ರತ್ಯಾರೋಪ ತಾರಕಕ್ಕೇರಿವೆ. ಗೋಕಾಕ್ ಹಾಲಿ ಶಾಸಕ ರಮೇಶ ಜಾರಕಿಹೊಳಿ ಸಿಡಿ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ನೇರಾ ನೇರಾ ಆರೋಪ ಮಾಡಿದ್ದಾರೆ. ಇದಲ್ಲದೆ ಸಿಡಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಗೋಕಾಕ್ ಸಾಹುಕಾರ, ಕೇಂದ್ರ ಗೃಹ ಸಚಿವ ಅಮಿತ ಶಾರನ್ನು ಭೇಟಿ ಮಾಡಿದ್ದು, ರಾಜ್ಯ ರಾಜಕಾರಣದಲ್ಲಿ ಕುತುಹಲ ಮೂಡಿಸಿದೆ. ಈ ಪ್ರಕರಣ ಬಿಜೆಪಿ ಪಾಳಯಕ್ಕೆ ವರ ಮತ್ತು ಶಾಪದ ಲೆಕ್ಕಾಚಾರ ಶುರುವಾಗಿದೆ. ಇದರೊಂದಿಗೆ ಬೆಳಗಾವಿ ಗ್ರಾಮಾಂತರದಲ್ಲಿ ಈ ಬಾರಿ ಶತಾಯಗತಾಯ ಕಮಲ ಅರಳಿಸಲು ಗೋಕಾಕ್ ಹಾಲಿ ಶಾಸಕ ಟೊಂಕ್ ಕಟ್ಟಿ ನಿಂತಿದ್ದು, ಕ್ಷೇತ್ರದ ಹಾಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಬಿರುಸಿನ ಪ್ರಚಾರ ಮತ್ತು ಗಿಫ್ಟ್ ಪಾಲಿಟಿಕ್ಸ್ ಪ್ರಾರಂಭಿಸಿದ್ದಾರೆ. ಅಲ್ಲದೆ ಲಕ್ಷ್ಮಿ ಹೆಬ್ಬಾಳ್ಕರ್ಗೆ ವಿಷಕನ್ಯೆ ಎಂದು ಕರೆಯುವ ಮೂಲಕ ತೀರ್ವ ಚರ್ಚೆಗೆ ಕಾರಣರಾಗಿದ್ದಾರೆ. ಹಾಗೆ ಡಿಕೆ ಶಿವಕುಮಾರ್ ನಿನ್ನೆ (ಫೆ.3) ರಂದು ನಟ ಕಿಚ್ಚ ಸುದೀಪ ಅವರನ್ನು ಭೇಟಿಯಾಗಿದ್ದು, ಸುದೀಪ ಕಾಂಗ್ರೆಸ್ ಸೇರುತ್ತಾರಾ ಎಂಬ ಪ್ರಶ್ನೆಗಳು ಮೂಡಿವದರೊಂದಿಗೆ ಇಂದಿನ ಅಪ್ಡೇಟ್ಸ್.
ಬೀದರ್: ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್ ಪರವಾದ ಗಾಳಿ ಬೀಸುತ್ತಿದೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿದರು. ಬಿಜೆಪಿಯವರ ದ್ವೇಷದ ರಾಜಕಾರಣಕ್ಕೆ ರಾಜ್ಯದ ಜನರು ಬೇಸತ್ತಿದ್ದಾರೆ. ನಳಿನ್ ಕುಮಾರ್ ಕಟೀಲು ಜೋಕರ್ ಇದ್ದ ಹಾಗೆ. ಬಿಜೆಪಿಯವರು ರಾಜ್ಯದ ಅಭಿವೃದ್ಧಿ ಬಗ್ಗೆ ಚಿಂತೆ ಮಾಡೋದಿಲ್ಲ. ಬಿಜೆಪಿಯವರು ದ್ವೇಷದ ರಾಜಕಾರಣ ಬಗ್ಗೆ ಚಿಂತೆ ಮಾಡುತ್ತಾರೆ. ಬಿಜೆಪಿ ನಾಯಕರಿಗೆ ದೇಶದ ಸಂವಿಧಾನದ ಬಗ್ಗೆ ಗೌರವ ಇಲ್ಲ ಎಂದು ಹೇಳಿದರು.
ಬೆಂಗಳೂರು: ನಾಳೆ ಮಧ್ಯಾಹ್ನ ಸಿಎಂ ಬಸವರಾಜ ಬೊಮ್ಮಾಯಿ ದೆಹಲಿಗೆ ತೆರಳಲಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಸಾಧ್ಯತೆಯಿದ್ದು, ಸಿಡಿ ಕೇಸ್ ಸಂಬಂಧ ಚರ್ಚೆ ಸಾಧ್ಯತೆ ಎನ್ನಲಾಗುತ್ತಿದೆ. ಇದೇ ವೇಳೆ ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್ನಲ್ಲಿ ಅನುದಾನ ಹಿನ್ನೆಲೆ ಹೈಕಮಾಂಡ್ ನಾಯಕರಿಗೆ ಸಿಎಂ ಬೊಮ್ಮಾಯಿ ಕೃತಜ್ಞತೆ ಸಲ್ಲಿಸಲಿದ್ದಾರೆ.
ಕೋಲಾರ: 50 ದಿನದಲ್ಲಿ ರಾಜ್ಯದ ಜನ ಬಿಜೆಪಿಯವರು ಪಂಚರ್ ಮಾಡ್ತಾರೆ. ಆಪರೇಷನ್ ಕಮಲ ಮಾಡಿ ರಭಸವಾಗಿ ಸರ್ಕಾರ ರಚನೆ ಮಾಡಿದ್ದರು. ನಮ್ಮ ಪ್ರಜಾಧ್ವನಿ ಯಾತ್ರೆ ಬಗ್ಗೆ ಬಿಜೆಪಿಯವರಿಗೆ ಭಯ ಬಂದಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು. ಕಾಂಗ್ರೆಸ್ಗೆ ಸಂಸದೆ ಸುಮಲತಾ ಸೇರ್ಪಡೆ ವದಂತಿ ವಿಚಾರಕ್ಕೆ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಸುಮಲತಾ ಭೇಟಿ ಮಾಡಿಲ್ಲ. ನನ್ನನ್ನು ಯಾರೂ ಭೇಟಿ ಮಾಡಿಲ್ಲ, ಅರ್ಜಿ ಹಾಕಿಲ್ಲ ಎಂದು ಹೇಳಿದರು.
ಚಿಕ್ಕಬಳ್ಳಾಪುರ: ಸಿದ್ದರಾಮಯ್ಯ ಸೋಲುವುದು ಬೇಡ, ಈ ಬಾರಿ ಅವರು ಗೆಲ್ಲಲಿ. ಇದು ಸಿದ್ದರಾಮಯ್ಯರ ಕೊನೆ ಯಾತ್ರೆ ಎಂದು ಡಾ.ಕೆ.ಸುಧಾಕರ್ ಹೇಳಿದರು. ನನ್ನ ಸೋಲಿಸಬೇಕೆಂದು ಸಿದ್ದರಾಮಯ್ಯ ಅವರು ಕರೆ ನೀಡಿದ್ದಾರೆ. ಆದರೆ ನಾನು ಸಿದ್ದರಾಮಯ್ಯ ರೀತಿ ಹೇಳಲ್ಲ. 5 ವರ್ಷಗಳ ಕಾಲ ನಿಮ್ಮ ಜತೆ ನಾನು ವಿಶ್ವಾಸಾರ್ಹವಾಗಿ ಇದ್ದೆ. ನಾನು ಹೋರಾಟ ಮಾಡಿ ಮೆಡಿಕಲ್ ಕಾಲೇಜ್ ತರಬೇಕಾಯ್ತು. ನಾನು ನನ್ನ ಕ್ಷೇತ್ರ ಅಭಿವೃದ್ಧಿಯಲ್ಲಿ ತೊಡಗಿದ್ದೇನೆ ಎಂದು ಹೇಳಿದರು.
ತುಮಕೂರು: ಜೆಡಿಎಸ್ನವರು 224 ಕ್ಷೇತ್ರಕ್ಕೆ ಅಭ್ಯರ್ಥಿ ಹಾಕ್ತಾರೆ ಅನ್ನೋದು ಗೊತ್ತಿಲ್ಲ. ಬಿಜೆಪಿಯವರು ಕೆಲ ಅತೃಪ್ತರಿಗೆ ಟಿಕೆಟ್ ಕೊಟ್ಟರೆ ಕೊಡಬಹುದು. ಕಾಂಗ್ರೆಸ್ನಲ್ಲಿ ಈ ಬಾರಿ ಹೊಸ ಮುಖಗಳಿಗೆ ಮೊದಲ ಆದ್ಯತೆ ನೀಡ್ತೇವೆ. ಟಿಕೆಟ್ಗಾಗಿ ಈಗಾಗಲೇ 110 ಮಹಿಳೆಯರು ಅರ್ಜಿ ಹಾಕಿದ್ದಾರೆ. ಕೆಲವು ಮಾನದಂಡಗಳ ಮೇಲೆ ಟಿಕೆಟ್ ಹಂಚಿಕೆ ಮಾಡಲಾಗುತ್ತೆ ಎಂದು ತುಮಕೂರು ನಗರದಲ್ಲಿ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಹೇಳಿದರು.
ವಿಜಯಪುರ: ಸಿದ್ದರಾಮಯ್ಯ ಮೊದಲು ಅವರ ಶಾಸಕರನ್ನು ಗಟ್ಟಿಯಾಗಿ ಇಟ್ಟುಕೊಳ್ಳಲಿ ಎಂದು ಸಿಎಂ ಬೊಮ್ಮಾಯಿ ಹೇಳಿದರು. ಮಾಜಿ ಸಿಎಂ ಸಿದ್ದರಾಮಯ್ಯನವರಂತೆ ನಾನು ಏನೇನೋ ಮಾತನಾಡಲ್ಲ. ಅವರು ಹೋದಲ್ಲೆಲ್ಲ ಇರುವ ಶಾಸಕರನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಲಿ. ಬೊಮ್ಮಾಯಿ ಸರ್ಕಾರ 3 ಲಕ್ಷ ಕೋಟಿ ಸಾಲಮಾಡಿದೆ ಎಂಬ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದು, 3 ಲಕ್ಷ ಕೋಟಿ ಸಾಲಮಾಡಿದ್ದೇ ಕಾಂಗ್ರೆಸ್ ಸರ್ಕಾರವೆಂದು ತಿರುಗೇಟು ನೀಡಿದರು. ರಾಜ್ಯದ ಇತಿಹಾಸದಲ್ಲಿ ಹೆಚ್ಚು ಸಾಲಮಾಡಿದ್ದ ಸಿದ್ದರಾಮಯ್ಯ ಸರ್ಕಾರ ಎಂದು ಹೇಳಿದರು.
ವಿಜಯಪುರ: ಕಾರ್ಕಳ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಹಾಕದಂತೆ ಶ್ರೀರಾಮಸೇನೆ ಒತ್ತಾಯಕ್ಕೆ ಸೊಪ್ಪುಹಾಕದ ಸಿಎಂ ಬಸವರಾಜ ಬೊಮ್ಮಾಯಿ. ನಮ್ಮ ರಾಷ್ಟ್ರೀಯ ಪಕ್ಷ, 224 ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿ ಹಾಕುತ್ತೇವೆ. ಉಡುಪಿ ಜಿಲ್ಲೆ ಕಾರ್ಕಳ ಕ್ಷೇತ್ರದಲ್ಲಿ ಸುನಿಲ್ ಕುಮಾರ್ 3 ಬಾರಿ ಗೆದ್ದಿದ್ದಾರೆ. ವಿ.ಸುನಿಲ್ ಕುಮಾರ್ ಬಿಜೆಪಿಯಿಂದ ಗೆದ್ದು ಸಚಿವರಾಗಿದ್ದಾರೆ ಎಂದು ಶ್ರೀರಾಮಸೇನೆ ಒತ್ತಾಯಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು.
ವಿಜಯಪುರ: ಇದು ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರ, ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಜಿಲ್ಲೆಯ ಸೈನಿಕ ಶಾಲೆ ಹೆಲಿಪ್ಯಾಡ್ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಡಾ.ಪರಮೇಶ್ವರ್ ಬಹಳ ಬುದ್ಧಿವಂತರು, ಎಲ್ಲವನ್ನೂ ಅರ್ಥೈಸಿಕೊಳ್ಳುತ್ತಾರೆ. ಡಾ.ಜಿ.ಪರಮೇಶ್ವರ್ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆಂದರೆ ಅರ್ಥಮಾಡಿಕೊಳ್ಳಿ. ಸಿಡಿ ವಿಚಾರದ ಬಗ್ಗೆ ರಮೇಶ್ ಜಾರಕಿಹೊಳಿಯಿಂದ ಶಾ ಭೇಟಿ ವಿಚಾರದ ಬಗ್ಗೆ ಪ್ರತಿಕ್ರಿಯೆಗೆ ನಿರಾಕರಿಸಿದರು.
ಮಂಡ್ಯ ವಿಧಾನಸಭಾ ಕ್ಷೇತ್ರದ ಮೇಲೆ ಸಂಸದೆ ಸುಮಲತಾ ಕಣ್ಣಿಟ್ಟಿದ್ದಾರೆ. ಟಿವಿ9 ಬಳಿ ಸುಮಲತಾ ಆಪ್ತ ಸ್ಪೋಟಕ ಸತ್ಯ ಬಿಚ್ಚಿಟ್ಟಿದ್ದಾರೆ. ಜನವರಿ 31 ರಂದು ಸಮಲತಾ ಬೆಂಬಲಿಗರ ಸಭೆ ನಡೆದಿತ್ತು. ಸಭೆಯಲ್ಲಿ ರಾಜ್ಯ ರಾಜಕಾರಣಕ್ಕೆ ಸುಮಲತಾ ಬರುವಂತೆ ನಿರ್ಣಯ ತೆಗೆದು ಕೊಳ್ಳಲಾಗಿತ್ತು. ಬೆಂಬಲಿಗರ ಒತ್ತಾಯಕ್ಕೆ ಸ್ವಾಭಿಮಾನಿ ಸಂಸದೆ ಸುಮಲತಾ ಅವರು ತಲೆ ಬಾಗಿದ್ದಾರೆ. ಪತಿ ಅಂಬರೀಷ್ ಪ್ರತಿನಿಧಿಸುತ್ತಿದ್ದ ಮಂಡ್ಯ ಕ್ಷೇತ್ರದಿಂದ ಸುಮಲತಾ ಸ್ಪರ್ಧಿಸೋದು ಬಹುತೇಕ ಫಿಕ್ಸ್ ಆಗಿದೆ. ಶಶಿಕುಮಾರ್
ಬೀದರ್ ಜಿಲ್ಲೆ ಔರಾದ್ ಪಟ್ಟಣಕ್ಕೆ ಸಿದ್ದರಾಮಯ್ಯ ಆಗಮಿಸಿದ್ದು ಸಿದ್ದರಾಮಯ್ಯಗೆ ಕಾಂಗ್ರೆಸ್ ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಸಿದ್ದರಾಮಯ್ಯ ಪ್ರಜಾಧ್ವನಿ ಸಮಾವೇಶದಲ್ಲಿ ಭಾಗಿಯಾಗಲಿದ್ದು ಸಿದ್ದರಾಮಯ್ಯಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸಾಥ್ ನೀಡಲಿದ್ದಾರೆ.
ಮಾಜಿ ಡಿಸಿಎಂ ಲಕ್ಷ್ಮಣ್ ಸವದಿಗೆ ಸಿಎಂ ಆಗುತ್ತೀರಿ ಎಂದು ಜೈನ ಮುನಿಯೊಬ್ಬರು ಆಶೀರ್ವಾದ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಗುಂಡೇವಾಡಿ ಗ್ರಾಮದ ಪಂಚಕಲ್ಯಾಣ ಮಹೋತ್ಸವದಲ್ಲಿ ಪೂಜ್ಯ ಬಾಲಾಚಾರ್ಯ ಶ್ರೀ 108 ಸಿದ್ದಸೇನ ಮುನಿ ಮಹಾರಾಜರು ಆಶೀರ್ವಾದ ನೀಡಿದ್ದಾರೆ. ಉತ್ತರ ಕರ್ನಾಟಕದಲ್ಲಿ ಯಾರು ಸಿಎಂ ಆಗಿಲ್ಲ. ನೀವು ಮುಂದೆ ಸಿಎಂ ಆಗಿ ಎಂದು ಆಶೀರ್ವದಿಸಿದ್ದಾರೆ.
ಜನಾರ್ದನರೆಡ್ಡಿ ಹೊಸ ಪಕ್ಷ ಸ್ಥಾಪನೆ ಹಿನ್ನೆಲೆ ಬಿಜೆಪಿ ಕೌಂಟರ್ ನೀಡಲು ಸಿದ್ಧವಾಗಿದೆ. ಫೆ.21ರಂದು ಬಳ್ಳಾರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಲಿದ್ದಾರೆ. ಸಮಾವೇಶ, ಕಾರ್ಯಕರ್ತರ ಸಂಘಟನಾ ಕಾರ್ಯಕ್ರಮಗಳಲ್ಲಿ ಶಾ ಭಾಗಿಯಾಗಲಿದ್ದಾರೆ. ಬಿಜೆಪಿ ಕಾರ್ಯಕರ್ತರನ್ನು ಜನಾರ್ದನರೆಡ್ಡಿ ಸೆಳೆಯದಂತೆ ಮೀಟಿಂಗ್ ಮಾಡಲಾಗುತ್ತೆ.
ಮೋದಿ ಸರ್ಕಾರಕ್ಕೆ ಜನಸಾಮಾನ್ಯರ ಕಷ್ಟ ಅರ್ಥವಾಗುತ್ತಿಲ್ಲ ಎಂದು ಮೈಸೂರಿನಲ್ಲಿ ಬಿಜೆಪಿ ಎಂಎಲ್ಸಿ ಹೆಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ. ಅಕ್ಷರ, ಅನ್ನ, ಆರೋಗ್ಯವನ್ನು ಬಜೆಟ್ನಲ್ಲಿ ಕಡೆಗಣಿಸಲಾಗಿದೆ. ವಿಮಾನ ನಿಲ್ದಾಣಕ್ಕಿಂತ ನಮಗೆ ಅಕ್ಷರ, ಅನ್ನ, ಆರೋಗ್ಯ ಬೇಕು. ದೇಶ ಎಲ್ಲಾ ಕ್ಷೇತ್ರಗಳಲ್ಲೂ ಹಿಂದೆ ಉಳಿಯುತ್ತಿದೆ. ಸರ್ಕಾರ ಉಳ್ಳವರ ಪರ ಇದೆ, ಸುಳ್ಳು ಹೇಳಿಕೊಂಡು ಓಡಾಡ್ತಿದ್ದಾರೆ ಎಂದರು.
ದೇವನಹಳ್ಳಿಯಲ್ಲಿ ಸಚಿವ ಸುಧಾಕರ್ ಆಪರೇಷನ್ ನಡೆಸಿದ್ದಾರೆ. ದೇವನಹಳ್ಳಿ ತಾಲೂಕಿನ ಪ್ರಮುಖ ಕೈ ಮುಖಂಡರಿಗೆ ಸುಧಾಕರ್ ಗಾಳ ಹಾಕಿ ಯಶಸ್ವಿಯಾಗಿದ್ದಾರೆ. ಸುಧಾಕರ್ ಗಾಳ ಹಿನ್ನೆಲೆ ಇಂದು ಸುಧಾಕರ್ ಗೆ ಟಾಂಗ್ ನೀಡಲು ಕೈ ಪಡೆ ಸಜ್ಜಾಗಿದೆ. ಇತ್ತೀಚೆಗಷ್ಟೆ ಕೈ ನಾಯಕರನ್ನ ಸಿಎಂ ಸಮ್ಮುಖದಲ್ಲಿ ಸಚಿವ ಸುಧಾಕರ್ ಬಿಜೆಪಿ ಸೇರ್ಪಡೆ ಮಾಡಿಸಿದ್ದರು. ವಿಜಯಪುರ ಪಟ್ಟಣ ಸೇರಿದಂತೆ ತಾಲೂಕಿನ ಹಲವು ಕೈ ಮುಖಂಡರು ಬಿಜೆಪಿ ಸೇರ್ಪಡೆಯಾಗಿದ್ದರು. ಹೀಗಾಗಿ ಇಂದು ವಿಜಯಪುರ ಪಟ್ಟಣದಲ್ಲಿ ಪ್ರಜಾಧ್ವನಿ ಸಮಾವೇಶ ಮಾಡಿ ಟಾಂಗ್ ನೀಡಲು ಕೈ ಪಡೆ ಪ್ಲಾನ್ ಮಾಡಿದೆ.
ಬಿಜೆಪಿಯಲ್ಲಿ ಇರುವಂತಹ ಸಂಘಟನೆ ಬೇರೆ ಯಾವುದೇ ಪಕ್ಷದಲ್ಲಿ ಇಲ್ಲ ಎಂದು ಕಾರ್ಯಕಾರಿಣಿಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ರು. ಕಾಂಗ್ರೆಸ್ನಲ್ಲಿ ಇಂತಹ ಸಂಘಟನೆ, ಕಾರ್ಯಕರ್ತರು ಇರಲು ಸಾಧ್ಯವಿಲ್ಲ. ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆದ್ದು ನಾವು ಮತ್ತೆ ಅಧಿಕಾರ ಬರುತ್ತೇವೆ. ಬಿ.ಎಸ್.ಯಡಿಯೂರಪ್ಪನವರಂತಹ ನಾಯಕ ಸಿಕ್ಕಿದ್ದು ನಮ್ಮ ಪುಣ್ಯ. ಕಾಂಗ್ರೆಸ್ನಲ್ಲಿ ನಾಯಕತ್ವ ಇಲ್ಲ, ಪಕ್ಷ ಬಿಟ್ಟು ಹಲವರು ಹೋಗ್ತಿದ್ದಾರೆ. ರಾಹುಲ್ ಗಾಂಧಿ ಯಾವಾಗ ಏನು ಮಾತಾಡ್ತಾರೋ ಅವರಿಗೆ ಗೊತ್ತಿಲ್ಲ. ಕಾಂಗ್ರೆಸ್ನವರಿಗೆ ನೀತಿ ಇಲ್ಲ, ಓಲೈಕೆ ರಾಜಕಾರಣವೇ ಅವರ ಆಸ್ತಿ. ಸಿದ್ದರಾಮಯ್ಯ ಹಿಂದೂಗಳನ್ನು ಅಪಮಾನ ಮಾಡುವ ಹೇಳಿಕೆ ಕೊಡ್ತಾರೆ. ಕಾಂಗ್ರೆಸ್ ನಾಯಕರು ಬಾಯಿಗೆ ಬಂದ ಘೋಷಣೆ ಮಾಡುತ್ತಿದ್ದಾರೆ. ಆರ್ಥಿಕ ಜ್ಞಾನ ಇಲ್ಲದೆ ಉಚಿತ ವಿದ್ಯುತ್ ಘೋಷಣೆ ಮಾಡಿದ್ದಾರೆ ಎಂದು ಕಾರ್ಯಕಾರಿಣಿಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು ಅರಮನೆ ಮೈದಾನದಲ್ಲಿ ಬಿಜೆಪಿ ವಿಶೇಷ ಕಾರ್ಯಕಾರಿಣಿ ಸಭೆ ನಡೆಯುತ್ತಿದ್ದು ಬಿಜೆಪಿ ರಾಷ್ಟ್ರೀಯ ಪ್ರಧಾನ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಸಿಎಂಗಳಾದ ಯಡಿಯೂರಪ್ಪ, ಸದಾನಂದಗೌಡ, ಜಗದೀಶ್ ಶೆಟ್ಟರ್, ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಮತ್ತಿತರರು ಭಾಗಿಯಾಗಿದ್ದಾರೆ.
ಕಾಂಗ್ರೆಸ್ ಬಸ್ ಯಾತ್ರೆ ಪಂಕ್ಚರ್ ಆಗುವುದರಲ್ಲಿ ಅನುಮಾನ ಇಲ್ಲ ಎಂದು ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮಾಜಿ ಸಿಎಂ ಬಿಎಸ್ವೈ ಹೇಳಿಕೆ ನೀಡಿದ್ದಾರೆ. ಬೆಂಗಳೂರು ಅರಮನೆ ಮೈದಾನದಲ್ಲಿ ಬಿಜೆಪಿ ವಿಶೇಷ ಕಾರ್ಯಕಾರಿಣಿ ಸಭೆ ನಡೆಸಿದ್ದು ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನ ತುಂಬಿ ತುಳುಕುತ್ತಿದೆ. ‘ಕೈ’ ಬಸ್ ಯಾತ್ರೆ ವೇಳೆ ಪರಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ, ಎಲ್ಲರೂ ಒಗ್ಗಟ್ಟಿನಿಂದ ಇದ್ದೇವೆ. ನಾನು, ಸಿಎಂ, ಅಧ್ಯಕ್ಷರು 3 ತಂಡಗಳಾಗಿ ರಾಜ್ಯ ಪ್ರವಾಸ ಮಾಡುತ್ತೇವೆ. ನಾವು ಮೈಸೂರು ಭಾಗ, ಕಲ್ಯಾಣ ಕರ್ನಾಟಕಕ್ಕೆ ಹೆಚ್ಚು ಒತ್ತು ನೀಡಿದ್ದೇವೆ. ಹೆಚ್ಚು ಸ್ಥಾನ ಗೆದ್ದು ಯಾರನ್ನೂ ಅವಲಂಬಿಸದೇ ಸರ್ಕಾರ ರಚಿಸಬೇಕಿದೆ. ಸರ್ಕಾರದ ಯೋಜನೆಗಳನ್ನ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡ್ಬೇಕು ಎಂದು ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿಯಾಗಿ ಧರ್ಮೇಂದ್ರ ಪ್ರಧಾನ್ ನೇಮಕಗೊಂಡಿದ್ದು ಸಹ ಉಸ್ತುವಾರಿಯಾಗಿ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ನೇಮಕಗೊಂಡಿದ್ದಾರೆ. ಚುನಾವಣಾ ಉಸ್ತುವಾರಿ ನೇಮಿಸಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಆದೇಶ ಹೊರಡಿಸಿದ್ದಾರೆ.
ನನ್ನ ರಕ್ತದ ಕಣ ಕಣದಲ್ಲೂ ಕಾಂಗ್ರೆಸ್ ಇದೆ. ನಾನು ಹಿಡಿಯುವ ಧ್ವಜ ಕಾಲದ ಅನುಸಾರ ಬದಲಾಗಿರಬಹುದು. ಆದರೆ ನನ್ನ ತತ್ವಗಳು ಬದಲಾಗಿಲ್ಲ. ನಾನು ಈಗ ಬಿಜೆಪಿ ತೊರೆಯಲು ಸಿದ್ದವಾಗಿರುವುದು ಸತ್ಯ. ಹಿಂದೆ ಜೆಡಿಎಸ್ ರಾಜ್ಯಾಧ್ಯಕ್ಷನಾಗಿದ್ದು ಕಾಂಗ್ರೆಸ್ ಪಕ್ಷ ಬಿಟ್ಟಿದ್ದು ಸತ್ಯ. ಬಿಜೆಪಿಯಿಂದ ಹಣ ಪಡೆದು ಬಿಜೆಪಿ ಸರ್ಕಾರ ತಂದಿದ್ದರೆ ಇವತ್ತು ಹೀಗೆ ಬಿಜೆಪಿ ಸರ್ಕಾರದ ತಪ್ಪು ಹೇಳುವುದಕ್ಕೆ ಧೈರ್ಯ ಬರುತ್ತಿತ್ತಾ? ಐ ಯಾಮ್ ಕ್ಲೀನ್ ಮ್ಯಾನ್. ನಾನು ಇಷ್ಟು ವರ್ಷ ರಾಜಕಾರಣದಲ್ಲಿದ್ದರು ಇನ್ನು ಚಿಕ್ಕ ಮನೆಯಲ್ಲಿದ್ದೇನೆ. ಮೂರು ಎಕರೆ ಜಮೀನಿದೆ ನನ್ನ ಮಕ್ಕಳನ್ನು ಅದರಲ್ಲೇ ಸಾಕಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಹೇಳಿದ್ರು.
ಭ್ರಷ್ಟ ಬಿಜೆಪಿ ಸರ್ಕಾರದ ವಿರುದ್ಧ ಜನರು ರೋಸಿ ಹೋಗಿದ್ದಾರೆ ಎಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ. ಒಂದು ಪೋಡಿ ಮಾಡಿಕೊಳ್ಳುವುದಕ್ಕೂ 40 ಸಾವಿರ ಕೊಡಬೇಕಂತೆ. ಆರ್.ಅಶೋಕ್ ಹೋಗಿ ಮಲಗಿ ಬರುತ್ತಿದ್ದಾರೆ, ಏನು ಪ್ರಯೋಜನ. ನಾವು ರಾಜ್ಯದ ಜನರಿಗೆ ಉಚಿತ ಘೋಷಣೆ ಮಾಡಿದ್ದೇವೆ. ಗ್ಯಾರಂಟಿ ಸಹಿ ಹಾಕಿ ಕಳುಹಿಸಿ ಕೊಡುತ್ತಿದ್ದೇವೆ. ಯಾವ ರೀತಿ ಉಚಿತವಾಗಿ ಕೊಡಬೇಕೆಂದು ತೋರಿಸುತ್ತೇನೆ ಎಂದರು.
ಮೈಸೂರು ನಗರದ ಜಯಲಕ್ಷ್ಮೀಪುರಂನಲ್ಲಿರುವ ಚಾಮರಾಜ ಕ್ಷೇತ್ರದ ಮಾಜಿ ಶಾಸಕ ವಾಸು ನಿವಾಸಕ್ಕೆ ಎಂ.ವೀರಪ್ಪ ಮೊಯ್ಲಿ ಭೇಟಿ ನೀಡಿದ್ದಾರೆ. ಟಿಕೆಟ್ ಕೈತಪ್ಪುವ ಮಾತು ಕೇಳಿ ಬಂದ ಹಿನ್ನೆಲೆ ವಾಸು ಅಸಮಾಧಾನರಾಗಿದ್ದು ಮಾಜಿ ಶಾಸಕ ವಾಸು ಜೊತೆ ಎಂ.ವೀರಪ್ಪ ಮೊಯ್ಲಿ ಸಮಾಲೋಚನೆ ನಡೆಸಿದ್ದಾರೆ.
ಸೂರಜ್ ರೇವಣ್ಣ ಮತ್ತು ಹೆಚ್ಡಿ ರೇವಣ್ಣ ನಿನ್ನೆ ದೇವೇಗೌಡರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಭವಾನಿಯವರಿಗೆ ಟಿಕೆಟ್ ನೀಡುವ ವಿಚಾರವಾಗಿ ಗೌಡರಿಗೆ ಸೂರಜ್ ಮತ್ತು ರೇವಣ್ಣ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಹಾಸನದ ಸದ್ಯದ ಸ್ಥಿತಿ ಗತಿ ಬಗ್ಗೆ ವಿವರಿಸಿದ್ದಾರೆ.
ಬೆಂಗಳೂರಿನಲ್ಲಿ ಜೆಡಿಎಸ್ ಕಚೇರಿಯಲ್ಲಿ ಇಂದು ಹೆಚ್ಡಿ ಕುಮಾರಸ್ವಾಮಿ ಸಭೆ ನಡೆಸಲಿದ್ದಾರೆ. ಹಳೇ ಮೈಸೂರು, ಉತ್ತರ ಕರ್ನಾಟಕ ಭಾಗದಲ್ಲಿ ಪಂಚರತ್ನ ರಥಯಾತ್ರೆ ಪೂರ್ಣವಾದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಜತೆ ಪ್ರತ್ಯೇಕವಾಗಿ ಹೆಚ್ಡಿಕೆ ಸಭೆ ನಡೆಸಲಿದ್ದಾರೆ. ಈಗಾಗಲೇ ಟಿಕೆಟ್ ಘೋಷಿಸಿರುವ 93 ಅಭ್ಯರ್ಥಿಗಳ ಜತೆ ಸಭೆ ನಡೆಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರಿ ಮಾಜಿ ಸಿಎಂ ಎಸ್.ಎಂ.ಕೃಷ್ಣರನ್ನು ಭೇಟಿಯಾಗಿದ್ದಾರೆ. ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾದ ಹಿನ್ನೆಲೆಯಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.
HD ರೇವಣ್ಣ ಕೆ.ಆರ್. ಪೇಟೆ ಕ್ಷೇತ್ರದಲ್ಲಿ ಸ್ಪರ್ಧೆ ಚರ್ಚೆ ಬೆನ್ನಲ್ಲೆ ಸಚಿವ ನಾರಾಯಣಗೌಡ JDS ದಿಗ್ಗಜರಿಗೆ ಆಹ್ವಾನ ನೀಡಿದ್ದಾರೆ. ರೇವಣ್ಣ ಇಲ್ಲಾ ಅಂದ್ರೆ ದೇವೇಗೌಡರೆ ಬಂದು ಸ್ಪರ್ಧೆ ಮಾಡಲಿ. ಯಾರು ಎಲ್ಲಿ ಬೇಕಾದರೂ ಸ್ಪರ್ಧೆ ಮಾಡಬಹುದು. HD ರೇವಣ್ಣ ಆದ್ರೂ ಬರಲಿ, ದೇವೇಗೌಡರಾದರೂ, HD ಕುಮಾರಣ್ಣ ಆದರೂ ಬರಲಿ. ಅವರಿಗೆ ನಾನು ಆಹ್ವಾನ ಮಾಡ್ತಿದ್ದೀನಿ. ನನಗೆ ಯಾವುದೇ ಭಯದ ವಾತಾವರಣ ಇಲ್ಲಾ. ಚುನಾವಣೆಯನ್ನ ಎದುರಿಸೋದು ನಮ್ಮ ಧರ್ಮ. ನಮ್ಮ ತಾಲೂಕಿನ ಮತದಾರ ದೇವತೆಗಳು ನಿರ್ಧರಿಸ್ತಾರೆ. ಅವರನ್ನ ಬರಬೇಡಿ ಎಂದು ಹೇಳಲು ನಾನು ಯಾರು. ಬರೋರನ್ನ ನಾವು ಬೇಡ ಅನ್ನೋಲ್ಲ ಎಂದು ಮಂಡ್ಯದ ಕೆ.ಆರ್ ಪೇಟೆಯಲ್ಲಿ ಸಚಿವ ಕೆ.ಸಿ ನಾರಾಯಣಗೌಡ ಪ್ರತಿಕ್ರಿಯೆ ನೀಡಿದರು.
JDS ವಿರುದ್ಧ ಪರೋಕ್ಷವಾಗಿ ಶಾಸಕ ಎ.ಟಿ.ರಾಮಸ್ವಾಮಿ ಅಸಮಾಧಾನ ಹೊರ ಹಾಕಿದ್ದಾರೆ. ಎ.ಟಿ.ರಾಮಸ್ವಾಮಿ ಹಾಸನ ಜಿಲ್ಲೆಯ ಉತ್ತಮ ರಾಜಕಾರಣಿ ಅಂತಾರೆ. ಅಂತಹವರನ್ನು ಮೂಲೆಗುಂಪು ಮಾಡಲು ಪ್ರಮುಖ ಪಕ್ಷಗಳಿಂದ ಯತ್ನ ನಡೆದಿದೆ. ಪ್ರಜೆಗಳೇ ಪ್ರಜಾಪ್ರಭುತ್ವದ ಮಾಲೀಕರು ಎಂದು ಶಾಸಕ ಎ.ಟಿ.ರಾಮಸ್ವಾಮಿ ಅಸಮಾಧಾನ ಹೊರ ಹಾಕಿದ್ದಾರೆ. ಅದು ದುಡ್ಡು, ಧರ್ಮ, ಜಾತಿಯ ಪ್ರಜಾಪ್ರಭುತ್ವ ಆಗಬಾರದು. ನಮ್ಮದು ಜಾತ್ಯತೀತ ರಾಷ್ಟ್ರ, ಅದನ್ನ ಉಳಿಸಿಕೊಂಡು ಹೋಗಬೇಕು. ಯುವಕರು ಒಳ್ಳೆಯದು ಹಾಗೂ ಕೆಟ್ಟದನ್ನು ಆಲೋಚನೆ ಮಾಡಬೇಕು ಎಂದು ಹಾಸನ ಜಿಲ್ಲೆಯ ಅರಕಲಗೂಡಿನಲ್ಲಿ ನಡೆದ ಕಾಲೇಜು ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ರಾಮಸ್ವಾಮಿ ಹೇಳಿದ್ರು.
ಮಂಡ್ಯ ಜಿಲ್ಲೆಯಲ್ಲೂ ಗಿಫ್ಟ್ ಪಾಲಿಟಿಕ್ಸ್ ಶುರುವಾಗಿದೆ. ಸಚಿವ ನಾರಾಯಣಗೌಡರಿಂದ ಗ್ರಾ.ಪಂ ಸದಸ್ಯರಿಗೆ ಭರ್ಜರಿ ಗಿಫ್ಟ್ ನೀಡಲಾಗಿದೆ. ಕೆ.ಆರ್.ಪೇಟೆ ತಾಲೂಕಿನ ಗ್ರಾ.ಪಂ ಚುನಾವಣೆಯಲ್ಲಿ ಗೆದ್ದ, ಸೋತವರಿಗೆ ಸ್ಮಾರ್ಟ್ ಟಿವಿ ನೀಡಲಾಗಿದೆ. ವಿಧಾನಸಭೆ ಚುನಾವಣೆ ಘೋಷಣೆಗೂ ಮುನ್ನ ಕೆ.ಆರ್.ಪೇಟೆ ಕ್ಷೇತ್ರದ ಬಿಜೆಪಿ ಶಾಸಕರಾಗಿರುವ ಕೆ.ಸಿ.ನಾರಾಯಣಗೌಡ ಌಕ್ಟಿವ್ ಆಗಿದ್ದಾರೆ.
ಚುನಾವಣಾ ರಾಜಕೀಯದಿಂದ ನಿವೃತ್ತಿ ಪಡೆಯಲು ಕಲಬುರಗಿ ಜಿಲ್ಲೆ ಅಫಜಲಪುರ ಕಾಂಗ್ರೆಸ್ ಶಾಸಕ ಎಂ.ವೈ.ಪಾಟೀಲ್ ನಿರ್ಧಾರ ಮಾಡಿದ್ದಾರೆ. 82 ವರ್ಷ ಹಿನ್ನೆಲೆ ಚುನಾವಣೆಗೆ ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ. ಶಾಸಕ ಎಂ.ವೈ.ಪಾಟೀಲ್ ತಮ್ಮ ಪುತ್ರನಿಗೆ ಕಾಂಗ್ರೆಸ್ ಟಿಕೆಟ್ ಕೇಳಿದ್ದಾರೆ. ಸಿದ್ದರಾಮಯ್ಯ ಬೆಂಬಲಿಗ ಜೆ.ಎಂ.ಕೊರಬು ಕೂಡ ಟಿಕೆಟ್ಗಾಗಿ ಬೇಡಿಕೆ ಇಟ್ಟಿದ್ದಾರೆ. ಹಾಗೂ ಅರುಣ್ ಪಾಟೀಲ್, ಸಂಜಯ್ ಪಾಟೀಲ್ರಿಂದಲೂ ಟಿಕೆಟ್ಗೆ ಬೇಡಿಕೆ ಇದೆ.
ಕುಂದಗೋಳ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ನನಗೆ ಕನ್ಫರ್ಮ್ ಆಗಿದೆ ಎಂದು ಧಾರವಾಡ ಜಿಲ್ಲೆ ಹುಬ್ಬಳ್ಳಿಯಲ್ಲಿ ಶಾಸಕಿ ಕುಸುಮಾ ಶಿವಳ್ಳಿ ಹೇಳಿಕೆ ನೀಡಿದ್ದಾರೆ. ದೆಹಲಿಗೆ ನನ್ನ ಹೆಸರು ಮಾತ್ರ ಹೋಗಿರುವ ಬಗ್ಗೆ ಮಾಹಿತಿ ಇದೆ. ಕುಟುಂಬದ ಬೇರೆಯವರಿಗೆ ಟಿಕೆಟ್ ಕೊಡೋದು ವರಿಷ್ಠರಿಗೆ ಬಿಟ್ಟ ವಿಚಾರ. ಕುಂದಗೋಳ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಗಳು ಇರುವುದು ಸಹಜ. ನಮ್ಮ ನಾಯಕರು ಕ್ಷೇತ್ರದಲ್ಲಿ ಕೆಲಸ ಮಾಡಿಕೊಂಡಿರು ಎಂದಿದ್ದಾರೆ. ನಾನು ಶಾಸಕಿಯಾಗಿ ಮಾಡಿದ ಕೆಲಸ ತೃಪ್ತಿ ತಂದಿದೆ. ಮುಂದಿನ ಚುನಾವಣೆಯಲ್ಲಿ ನನಗೆ ಟಿಕೆಟ್ ಸಿಗುತ್ತೆ, ನಾನೇ ಗೆಲ್ಲುತ್ತೇನೆ. ಕೆಲವರು ಟಿಕೆಟ್ ತಪ್ಪಿಸಲು ಕುತಂತ್ರ ಮಾಡ್ತಿದ್ದಾರೆ. ಬಿಜೆಪಿಯವರು ಭಯದಿಂದ ಕ್ಷೇತ್ರದಲ್ಲಿ ರೋಡ್ ಶೋ ಮಾಡಿದ್ದಾರೆ ಎಂದು ಕುಸುಮಾ ಶಿವಳ್ಳಿ ತಿಳಿಸಿದರು.
ಮಾಜಿ ಡಿಸಿಎಂ ಡಾ.ಪರಮೇಶ್ವರ್ ಶೀಘ್ರದಲ್ಲೇ ದೆಹಲಿಗೆ ತೆರಳುವ ಸಾಧ್ಯತೆ ಇದೆ. ನವದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಲಿದ್ದಾರೆ. ಎಐಸಿಸಿ ಅಧ್ಯಕ್ಷ ಖರ್ಗೆ ಭೇಟಿಯಾಗಲು ಡಾ.ಜಿ.ಪರಮೇಶ್ವರ್ ಪ್ಲ್ಯಾನ್ ಮಾಡಿಕೊಂಡಿದ್ದಾರೆ.
ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ ನೀರಲೂಟಿ ಗ್ರಾಮದಲ್ಲಿ ಮಾಜಿ ಸಚಿವ ಶಿವರಾಜ ತಂಗಡಗಿಗೆ ಕಾಂಗ್ರೆಸ್ ಕಾರ್ಯಕರ್ತ ತರಾಟೆಗೆ ತೆಗೆದುಕೊಂಡಿದ್ದಾರೆ. ನಿಮ್ಮನ್ನ ಭೇಟಿಯಾಗಲು 4 ಜನರಿಂದ ಅನುಮತಿ ಪಡೆದುಕೊಳ್ಳಬೇಕಾ? ಎಂದು ಸ್ವಪಕ್ಷೀಯ ಕಾರ್ಯಕರ್ತನಿಂದಲೇ ಮಾಜಿ ಸಚಿವ ತಂಗಡಗಿಗೆ ಕ್ಲಾಸ್ ನಡೆದಿದೆ. ನಿಮ್ಮ ಮೊಬೈಲ್ಗೆ ಕರೆ ಮಾಡಿದರೆ ಸ್ವೀಕರಿಸುವುದಿಲ್ಲ. ಕಾಂಗ್ರೆಸ್ಗಾಗಿ ಪ್ರಾಣ ಕೊಟ್ಟಿದ್ದೇವೆ, ನಮಗೆ ಕಷ್ಟ ಅಂದ್ರೆ ನೀವ್ ಬರಲ್ಲ ಎಂದು ಪ್ರಚಾರಕ್ಕೆ ಬಂದಿದ್ದ ಶಿವರಾಜ ತಂಗಡಗಿಗೆ ಕಾರ್ಯಕರ್ತ ತರಾಟೆಗೆ ತೆಗೆದುಕೊಂಡಿದ್ದಾನೆ.
ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಮೆಣಸೆಯಲ್ಲಿ ಮಹಿಳಾ ಸಮಾವೇಶದ ಹೆಸರಿನಲ್ಲಿ ಮತದಾರರಿಗೆ ಗಿಫ್ಟ್ ಹಂಚಿಕೆ ಮಾಡಲಾಗುತ್ತಿದೆ. ಸಮಾವೇಶಕ್ಕೆ ಬಂದಿದ್ದ 4,000ಕ್ಕೂ ಹೆಚ್ಚು ಮಹಿಳೆಯರಿಗೆ ಸೀರೆ ಗಿಫ್ಟ್ ಮಾಡಲಾಗಿದೆ. ಸಿಎಂ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ಅವರು ಮಹಿಳೆಯರಿಗೆ ಗಿಫ್ಟ್ ಕೊಟ್ಟಿದ್ದಾರೆ. ಸಮಾವೇಶದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭಾಗಿಯಾಗಿದ್ದರಉ. ಶೃಂಗೇರಿ ಕ್ಷೇತ್ರದ ಹಲವೆಡೆ ಸಮಾವೇಶ ಆಯೋಜಿಸಲಾಗುತ್ತಿದೆ.
ಬೀದರ್ ಜಿಲ್ಲೆಯ 4 ಕ್ಷೇತ್ರಗಳಲ್ಲಿಂದು ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶ ನಡೆಯಲಿದೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರಜಾಧ್ವನಿ ಯಾತ್ರೆ ನಡೆಯಲಿದ್ದು ಸಿದ್ದರಾಮಯ್ಯಗೆ ಜಮೀರ್ ಅಹ್ಮದ್, ಎಂ.ಬಿ.ಪಾಟೀಲ್ ಸಾಥ್ ನೀಡಲಿದ್ದಾರೆ. ಬೆಳಗ್ಗೆ 11ಕ್ಕೆ ಔರಾದ್ನಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶ ನಡೆಯಲಿದೆ. ಮಧ್ಯಾಹ್ನ ಬೀದರ್ ಉತ್ತರ & ದಕ್ಷಿಣ ಕ್ಷೇತ್ರದಲ್ಲಿ ಸಮಾವೇಶ ನಡೆಯಲಿದ್ದು ಸಂಜೆ ಬೀದರ್ ಜಿಲ್ಲೆ ಹುಮ್ನಾಬಾದ್ ಪಟ್ಟಣದಲ್ಲಿ ಪ್ರಜಾಧ್ವನಿ ಸಮಾವೇಶ ನಡೆಯಲಿದೆ.
ಚಿತ್ರದುರ್ಗ ಜಿಲ್ಲೆ ಹಿರಿಯೂರಲ್ಲಿಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಮಾವೇಶ ನಡೆಯಲಿದೆ. ಹಿರಿಯೂರು ಪಟ್ಟಣದ ನೆಹರು ಮೈದಾನದಲ್ಲಿ ಸಮಾವೇಶ ನಡೆಯಲಿದ್ದು KRP ಪಕ್ಷದ ಅಧ್ಯಕ್ಷ, ಮಾಜಿ ಸಚಿವ ಜನಾರ್ಧನರೆಡ್ಡಿ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಬೆಳಗ್ಗೆ 11ಗಂಟೆಗೆ ಸಮಾವೇಶಕ್ಕೆ ಜನಾರ್ಧನರೆಡ್ಡಿ ಚಾಲನೆ ನೀಡಲಿದ್ದಾರೆ.
ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ಇಂದು ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶ ನಡೆಯಲಿದ್ದು ಸಮಾವೇಶಕ್ಕೆ ಭರ್ಜರಿ ಸಿದ್ದತೆ ನಡೆದಿದೆ. ಮಾಲೂರಿನಲ್ಲಿ ಶಕ್ತಿ ಪ್ರದರ್ಶಕ್ಕೆ ಶಾಸಕ ಕೆ.ವೈ.ನಂಜೇಗೌಡ ಮುಂದಾಗಿದ್ದಾರೆ. ಪ್ರಜಾಧ್ವನಿ ಯಾತ್ರೆಗಾಗಿ ಮಾಲೂರಿನಲ್ಲಿ ಬೃಹತ್ ವೇದಿಕೆ ಸಜ್ಜಾಗಿದೆ. ಮಾಲೂರು ಪಟ್ಟಣದಲ್ಲಿ ಕಾಂಗ್ರೆಸ್ ನಾಯಕರ ಪ್ಲೆಕ್ಸ್ ಗಳು ಜಗಮಗಿಸುತ್ತಿದೆ.
ವಿಧಾನಸಭೆ ಚುನಾವಣೆ ಇನ್ನೆನು ಕೆಲವು ತಿಂಗಳುಗಳು ಬಾಕಿ ಇದ್ದು, ಚುನಾವಣಾ ಕಾವು ಶುರುವಾಗಿದೆ. ಕೆಲವರಿಗೆ ಟಿಕೆಟ್ ಕೈ ತಪ್ಪುವ ಭೀತಿ ಎದುರಾಗಿದ್ದರೆ, ಇನ್ನೂ ಕೆಲವರು ಈ ಬಾರಿಯಾದರೂ ನಮಗೆ ಟಿಕೆಟ್ ಸಿಗಬಹುದೆಂಬ ಆಶಾಭಾವನೆಯಿಂದ ಎದುರು ನೋಡುತ್ತಿದ್ದಾರೆ. ಒಟ್ಟಿನಲ್ಲಿ ಚುನಾವಣಾ ಹತ್ತಿರ ಬರುತ್ತಿದ್ದಂತೆ ಟಕೆಟ್ ಆಕಾಂಕ್ಷಿಗಳಿಗೆ ಭಯ ಶುರುವಾಗಿರುವುದಂತೂ ಸುಳ್ಳಲ್ಲ. ಅದರಂತೆ ವಿವಿಧ ಕಾರಣ ನೀಡಿ ಈ ನಾಲ್ವರು ಶಾಸಕರಿಗೆ ಈ ಬಾರಿ ಟಿಕೆಟ್ ಕೈ ತಪ್ಪುವ ಭೀತಿ ಎದುರಾಗಿದೆ. ವಯಸ್ಸಿನ ಕಾರಣದಿಂದ ಅಫ್ಜಲ್ಪುರ ಶಾಸಕ ಎಂ.ವೈ.ಪಾಟೀಲ್ ಹಾಗೂ ಪಾವಗಡದಿಂದ ವೆಂಕಟರಮಣಪ್ಪ, ಕ್ಷೇತ್ರದಲ್ಲಿ ಅನುಕಂಪದ ಅಲೆ ಇಲ್ಲದ ಕಾರಣ ಕುಂದಗೋಳದಿಂದ ಕುಸುಮಾ ಶಿವಳ್ಳಿ, ಇನ್ನು ಸರ್ವೆ ವರದಿ ಇರದ ಹಿನ್ನೆಲೆ ಲಿಂಗಸುಗೂರಿನ ಡಿ.ಎಸ್.ಹುಲಗೇರಿ ಅವರಿಗೆ ಟಿಕೆಟ್ ಕೈ ತಪ್ಪುವ ಭಯ ಶುರುವಾಗಿದೆ.
Published On - 9:23 am, Sat, 4 February 23