ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಮುಕ್ತಾಯ: ಫೆಬ್ರವರಿ ಕೊನೆಯಲ್ಲಿ ಮೊದಲ ಪಟ್ಟಿ ಘೋಷಣೆ ಸಾಧ್ಯತೆ
ಪ್ರದೇಶ ಎಲೆಕ್ಷನ್ ಕಮಿಟಿಯ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಮುಕ್ತಾಯವಾಗಿದ್ದು, ಫೆಬ್ರವರಿ ಕೊನೆಯಲ್ಲಿ ಮೊದಲ ಪಟ್ಟಿ ಘೋಷಣೆ ಸಾಧ್ಯತೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಮಾಹಿತಿ ನೀಡಿದ್ದಾರೆ.
ಉಡುಪಿ: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Eelctions 2023) ಸಮೀಪಿಸುತ್ತಿದ್ದಂತೆಯೇ ಇತ್ತ ಕಾಂಗ್ರೆಸ್ನಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಜೋರಾಗಿದೆ. ಇದಕ್ಕೆ ಪೂರಕವೆಂಬಂತೆ ನಿನ್ನೆ(ಫೆಬ್ರವರಿ 02) ಕೆಪಿಸಿಸಿ ಎಲೆಕ್ಷನ್ ಕಮಿಟಿ ಮಹತ್ವದ ಸಭೆ ನಡೆಸಿದೆ. 37 ಅಭ್ಯರ್ಥಿಗಳ ಪಟ್ಟಿ (Congress Candidates List) ಸಭೆ ಮುಂದೆ ಬಂದಿದ್ದು, ಈ ಬಗ್ಗೆ ಎಲ್ಲರೂ ತಮ್ಮ ಅಭಿಪ್ರಾಯ, ಶಿಫಾರಸುಗಳನ್ನು ಮಾಡಿದ್ದಾರೆ. ಇದೀಗ ಮೊದಲ ಪಟ್ಟಿ ಸ್ಕ್ರೀನಿಂಗ್ ಕಮಿಟಿಗೆ ರವಾನಿಸಿದ್ದು, ಫೆಬ್ರವರಿ ಅಂತ್ಯದೊಳಗೆ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸುವ ಸಾಧ್ಯತೆಗಳಿವೆ. ಈ ಬಗ್ಗೆ ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್(BK Hariprasad) ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಕೋಲಾರದಲ್ಲಿ ಸಿದ್ದರಾಮಯ್ಯ ಪರ ಮತ ಬೇಟೆಗಿಳಿದ ಕಾಂಗ್ರೆಸ್ ನಾಯಕರು, ಮೊದಲು ಒಕ್ಕಲಿಗ ಸಮುದಾಯಕ್ಕೆ ಗಾಳ
ಉಡುಪಿಯಲ್ಲಿ ಇಂದು(ಫೆಬ್ರವರಿ 03) ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ನಿನ್ನೆ ಪ್ರದೇಶ ಎಲೆಕ್ಷನ್ ಕಮಿಟಿಯ ಜವಾಬ್ದಾರಿ ಮುಕ್ತಾಯವಾಗಿದೆ. ಅಭ್ಯರ್ಥಿಗಳ ಪಟ್ಟಿಗಳು ಈಗಾಗಲೇ ನಿನ್ನೆ ಪ್ರದೇಶ ಕಾಂಗ್ರೆಸ್ ಸಮಿತಿಯಲ್ಲಿ 37 ಜನರ ಸಮ್ಮುಖ ಬಂದಿದೆ. ಸಭೆಯಲ್ಲಿ ಎಲ್ಲರೂ ತಮ್ಮ ಅಭಿಪ್ರಾಯ, ಶಿಫಾರಸುಗಳನ್ನು ಕೊಟ್ಟಿದ್ದಾರೆ. ಅಭ್ಯರ್ಥಿಗಳ ಪಟ್ಟಿಯನ್ನು ಎಐಸಿಸಿ ನಾಯಕರು ಘೋಷಿಸಲಿದ್ದಾರೆ. ಫೆಬ್ರವರಿ ಅಂತ್ಯದೊಳಗೆ ಅಭ್ಯರ್ಥಿಗಳ ಹೆಸರು ಘೋಷಣೆ ಸಾಧ್ಯತೆ ಇದೆ ಎಂದು ಸ್ಪಷ್ಟಪಡಿಸಿದರು.
ನಿನ್ನೆ(ಫೆಬ್ರವರಿ 02) ಸಂಜೆ 4 ಗಂಟೆವರೆಗೂ ಸುದೀರ್ಘವಾಗಿ ಚರ್ಚೆ ಮಾಡಲಾಗಿದೆ. ಮುಂದಿನ ಹಂತದಲ್ಲಿ ಸ್ಕ್ರೀನಿಂಗ್ ಕಮಿಟಿ ಮುಂದೆ ಪಟ್ಟಿ ಹೋಗಲಿದೆ. ಸ್ಕ್ರೀನಿಂಗ್ ಕಮಿಟಿಯಲ್ಲಿ ಅಭ್ಯರ್ಥಿಗಳ ಹೆಸರು ಆಯ್ಕೆಯಾಗಬೇಕು. ಅದರಲ್ಲಿ ಮೂವರು ಎಐಸಿಸಿ ನಾಯಕರು ಇರುತ್ತಾರೆ. ಸ್ಕ್ರೀನಿಂಗ್ ಕಮಿಟಿ ಬಳಿಕ ಸೆಂಟ್ರಲ್ ಎಲೆಕ್ಷನ್ ಕಮಿಟಿಗೆ ಹೋಗುತ್ತೆ. ಪ್ರಾಥಮಿಕ ಹಂತದ ಪ್ರಕ್ರಿಯೆ ಮುಗಿದು ಬಂದಿದ್ದು, ನಿನ್ನೆ ಪ್ರದೇಶ್ ಎಲೆಕ್ಷನ್ ಕಮಿಟಿ ಜವಾಬ್ದಾರಿ ಮುಕ್ತಾಯವಾಗಿದೆ. ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿ ಅವರು ಅಭ್ಯರ್ಥಿಗಳ ಪಟ್ಟಿ ಘೋಷಣೆ ಮಾಡಲಿದ್ದಾರೆ ಎಂದು ಹೇಳಿದರು.