ದೆಹಲಿ ಮಹಿಳೆಯರಿಗೆ ತಿಂಗಳಿಗೆ 2,500 ರೂ., ಸರ್ಕಾರಿ ಉದ್ಯೋಗದಲ್ಲಿ ಶೇ. 33 ಮೀಸಲಾತಿ, 300 ಯೂನಿಟ್ ಉಚಿತ ವಿದ್ಯುತ್; ಕಾಂಗ್ರೆಸ್ ಭರವಸೆ

ದೆಹಲಿಯ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇವೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಮಹಿಳೆಯರಿಗೆ ಬಂಪರ್ ಭರವಸೆಗಳನ್ನು ನೀಡಿದೆ. ದೆಹಲಿಯ ಮಹಿಳೆಯರಿಗೆ ಮಾಸಿಕ 2,500 ರೂ., ಸರ್ಕಾರಿ ಉದ್ಯೋಗದಲ್ಲಿ ಶೇ. 33ರಷ್ಟು ಮೀಸಲಾತಿ ನೀಡುವುದಾಗಿ ಕಾಂಗ್ರೆಸ್ ಘೋಷಿಸಿದೆ. ಹಾಗೇ, ದೆಹಲಿ ಜನರಿಗೆ 300 ಯೂನಿಟ್ ಉಚಿತ ವಿದ್ಯುತ್ ನೀಡುವುದಾಗಿ ಭರವಸೆ ನೀಡಿದೆ. ಹಾಗೇ, ದೆಹಲಿಯಲ್ಲಿ 100 ಇಂದಿರಾ ಕ್ಯಾಂಟೀನ್‌ಗಳ ಭರವಸೆ ನೀಡಿದೆ.

ದೆಹಲಿ ಮಹಿಳೆಯರಿಗೆ ತಿಂಗಳಿಗೆ 2,500 ರೂ., ಸರ್ಕಾರಿ ಉದ್ಯೋಗದಲ್ಲಿ ಶೇ. 33 ಮೀಸಲಾತಿ, 300 ಯೂನಿಟ್ ಉಚಿತ ವಿದ್ಯುತ್; ಕಾಂಗ್ರೆಸ್ ಭರವಸೆ
Jairam Ramesh

Updated on: Jan 29, 2025 | 3:03 PM

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ಇಂದು ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ತಮ್ಮ ಚುನಾವಣಾ ಭರವಸೆಗಳಲ್ಲಿ ಕಾಂಗ್ರೆಸ್ ಮಹಿಳೆಯರಿಗೆ ತಿಂಗಳಿಗೆ 2,500 ರೂ., ಸರ್ಕಾರಿ ಉದ್ಯೋಗಗಳಲ್ಲಿ ಶೇ. 33ರಷ್ಟು ಮೀಸಲಾತಿ ನೀಡುವುದಾಗಿ ಹೇಳಿದೆ. ಹಾಗೇ 300 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡುವುದಾಗಿ ಭರವಸೆ ನೀಡಿದೆ.

ದೆಹಲಿಯ ಜನರಿಗೆ 25 ಲಕ್ಷ ರೂ.ಗಳವರೆಗೆ ಉಚಿತ ಆರೋಗ್ಯ ಚಿಕಿತ್ಸೆಯನ್ನು ನೀಡುವುದಾಗಿಯೂ ಕಾಂಗ್ರೆಸ್ ಪಕ್ಷ ಭರವಸೆ ನೀಡಿದೆ. ಯುವ ಮತದಾರರನ್ನು ಆಕರ್ಷಿಸುವ ಮೂಲಕ ಕಾಂಗ್ರೆಸ್ ಸಾರ್ವಜನಿಕ ಮತ್ತು ಖಾಸಗಿ ವಲಯಗಳಲ್ಲಿ ಒಂದು ವರ್ಷದ ಅಪ್ರೆಂಟಿಸ್‌ಶಿಪ್ ನೀಡುವುದಾಗಿ ಪ್ರತಿಜ್ಞೆ ಮಾಡಿದೆ. ಅಪ್ರೆಂಟಿಸ್‌ಶಿಪ್ ಸಮಯದಲ್ಲಿ ಯುವ ವೃತ್ತಿಪರರಿಗೆ ತಿಂಗಳಿಗೆ 8.500 ರೂ. ಸ್ಟೇಫಂಡ್ ಸಿಗುತ್ತದೆ.

ಇದನ್ನೂ ಓದಿ: ಸಣ್ಣ ಕಾರಿನಲ್ಲಿ ಬಂದ ಕೇಜ್ರಿವಾಲ್ ಶೀಶ್ ಮಹಲ್‌ನಲ್ಲಿ ವಾಸಿಸತೊಡಗಿದರು; ರಾಹುಲ್ ಗಾಂಧಿ ವಾಗ್ದಾಳಿ

ಕಾಂಗ್ರೆಸ್ ಪಕ್ಷವು ದೆಹಲಿಯಲ್ಲಿ ಅಧಿಕಾರಕ್ಕೆ ಬಂದರೆ ದೆಹಲಿ ನಿವಾಸಿಗಳಿಗೆ ರೂ. 25 ಲಕ್ಷದವರೆಗೆ ಉಚಿತ ಚಿಕಿತ್ಸೆಯನ್ನು ನೀಡುವುದಾಗಿ ಭರವಸೆ ನೀಡಿದೆ. ಮುಂಬರುವ ದೆಹಲಿ ಚುನಾವಣೆಗೆ ಕಾಂಗ್ರೆಸ್ ಪಕ್ಷವು ಇಂದು ತನ್ನ ಪ್ರಣಾಳಿಕೆಯ ಎರಡನೇ ಭಾಗವನ್ನು ಬಿಡುಗಡೆ ಮಾಡಿದೆ. ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಪ್ರಣಾಳಿಕೆಯನ್ನು ಬಹಿರಂಗಪಡಿಸಿದ್ದಾರೆ.


ಕಾಂಗ್ರೆಸ್ 500 ರೂ.ಗೆ ಸಬ್ಸಿಡಿ ಎಲ್‌ಪಿಜಿ ಸಿಲಿಂಡರ್‌ಗಳನ್ನು ನೀಡುವುದಾಗಿಯೂ ಭರವಸೆ ನೀಡಿದೆ. ಇದಲ್ಲದೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೆಹಲಿಯ ಕುಟುಂಬಗಳಿಗೆ 2 ಕೆ.ಜಿ ಸಕ್ಕರೆ, 1 ಕೆ.ಜಿ ಅಡುಗೆ ಎಣ್ಣೆ, 6 ಕೆ.ಜಿ ದ್ವಿದಳ ಧಾನ್ಯಗಳು ಮತ್ತು 250 ಗ್ರಾಂ ಚಹಾ ಎಲೆಗಳನ್ನು ಒಳಗೊಂಡ ಉಚಿತ ಪಡಿತರ ಕಿಟ್ ಅನ್ನು ಸಹ ನೀಡುವುದಾಗಿ ತಿಳಿಸಿದೆ.

ಇದನ್ನೂ ಓದಿ: ರಾಬರ್ಟ್ ವಾದ್ರಾಗೆ ಬಿಜೆಪಿಯಿಂದ ಕ್ಲೀನ್ ಚಿಟ್ ಸಿಕ್ಕಿದ್ದು ಹೇಗೆ?; ರಾಹುಲ್ ಗಾಂಧಿಗೆ ಕೇಜ್ರಿವಾಲ್ ತಿರುಗೇಟು

ಪಿಂಚಣಿಯನ್ನು 2,500 ರಿಂದ 5,000 ರೂ.ಗೆ ಹೆಚ್ಚಿಸಲಾಗುವುದು. ವಿಧವೆಯರ ಹೆಣ್ಣುಮಕ್ಕಳ ಮದುವೆಗೆ 1.1 ಲಕ್ಷ ರೂ. ನೀಡಲಾಗುವುದು. ದೆಹಲಿಯಾದ್ಯಂತ 100 ಇಂದಿರಾ ಕ್ಯಾಂಟೀನ್‌ಗಳನ್ನು ಸ್ಥಾಪಿಸಲಾಗುವುದು. ಈ ಕ್ಯಾಂಟೀನ್‌ಗಳಲ್ಲಿ ಒಂದು ಪ್ಲೇಟ್ ಊಟದ ಬೆಲೆ 5 ರೂ.ಗಳನ್ನು ನಿಗದಿಪಡಿಸಲಾಗುವುದು. 7.5 ಲಕ್ಷ ಬೀದಿ ವ್ಯಾಪಾರಿಗಳಿಗೆ ಉತ್ತಮ ಅವಕಾಶಗಳನ್ನು ನೀಡಲಾಗುವುದು. ದೆಹಲಿಯಲ್ಲಿ ಜಾತಿ ಜನಗಣತಿ ನಡೆಸಲಾಗುವುದು. ಪ್ರತಿ ವಾರ್ಡ್‌ನಲ್ಲಿ 24 ಗಂಟೆಗಳ ಔಷಧಾಲಯ, 10 ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳು ಮತ್ತು 25 ಲಕ್ಷ ರೂ.ಗಳವರೆಗೆ ಉಚಿತ ಆರೋಗ್ಯ ರಕ್ಷಣೆ ಒದಗಿಸಲಾಗುವುದು. ವಿದ್ಯಾರ್ಥಿಗಳಿಗಾಗಿ 700 ಸಾರ್ವಜನಿಕ ಗ್ರಂಥಾಲಯಗಳನ್ನು ಸ್ಥಾಪಿಸಲಾಗುವುದು. ಯಮುನಾ ನದಿಯಲ್ಲಿ ಸಂಸ್ಕರಿಸಿದ ನೀರನ್ನು ಮಾತ್ರ ಬಿಡಲಾಗುವುದು ಎಂದು ಕಾಂಗ್ರೆಸ್ ಘೋಷಿಸಿದೆ.

ದೆಹಲಿಯ ಎಲ್ಲಾ 70 ವಿಧಾನಸಭಾ ಸ್ಥಾನಗಳಿಗೆ ಫೆಬ್ರವರಿ 5ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮತಗಳ ಎಣಿಕೆ ಫೆಬ್ರವರಿ 26ರಂದು ನಡೆಯಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ