ಗೋವಾದಲ್ಲಿ ಪಕ್ಷಾಂತರ ಭೀತಿ: ತಮ್ಮ ಅಭ್ಯರ್ಥಿಗಳನ್ನು ರೆಸಾರ್ಟ್‌ಗೆ ಕರೆದೊಯ್ದ ಕಾಂಗ್ರೆಸ್
ಈ ಹಿಂದೆ ಪಕ್ಷಾಂತರಗಳಿಂದಾಗಿ ಕಾಂಗ್ರೆಸ್ ಸರ್ಕಾರ ರಚನೆಗೆ ವಿಫಲವಾಗಿದ್ದರಿಂದ ಈ ಬಾರಿ ಪಕ್ಷವು ತನ್ನ ಅಭ್ಯರ್ಥಿಗಳನ್ನು ಉತ್ತರ ಗೋವಾದ ರೆಸಾರ್ಟ್‌ಗೆ ಸ್ಥಳಾಂತರಿಸಿದೆ ಎಂದು ವರದಿಯಾಗಿದೆ
ದೆಹಲಿ: ಗೋವಾದಲ್ಲಿ (Goa) ಚುನಾವಣಾ ಫಲಿತಾಂಶ ಅತಂತ್ರ ಎಂದು ಚುನಾವಣೋತ್ತರ ಸಮೀಕ್ಷೆಗಳು(Exit Poll) ಭವಿಷ್ಯ ನುಡಿದಿದ್ದು 2017 ರ ಮಾದರಿಯ ದುರಂತವನ್ನು ತಪ್ಪಿಸಲು ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಕಾಪಾಡಲು ಪ್ರಯತ್ನಿಸುತ್ತಿದೆ. 2017ರಲ್ಲಿ ಕಾಂಗ್ರೆಸ್ (Congress) ಹೆಚ್ಚಿನ ಸ್ಥಾನಗಳನ್ನು ಗೆದ್ದ ನಂತರವೂ ಸರ್ಕಾರ ರಚಿಸಲು ವಿಫಲವಾಗಿತ್ತು.ಈ ಹಿಂದೆ ಪಕ್ಷಾಂತರಗಳಿಂದಾಗಿ ಕಾಂಗ್ರೆಸ್ ಸರ್ಕಾರ ರಚನೆಗೆ ವಿಫಲವಾಗಿದ್ದರಿಂದ ಈ ಬಾರಿ ಪಕ್ಷವು ತನ್ನ ಅಭ್ಯರ್ಥಿಗಳನ್ನು ಉತ್ತರ ಗೋವಾದ ರೆಸಾರ್ಟ್‌ಗೆ ಸ್ಥಳಾಂತರಿಸಿದೆ ಎಂದು ವರದಿಯಾಗಿದೆ. ಅವರು ಗುರುವಾರದ ಮತಗಳ ಎಣಿಕೆ ಮುಗಿದು ಫಲಿತಾಂಶ ಹೊರಬೀಳುವವರೆಗೆ ಅಲ್ಲಿಯೇ ಇರುತ್ತಾರೆ. “ನಮ್ಮ ಎಲ್ಲಾ ಶಾಸಕರು ಒಟ್ಟಿಗೆ ಇರಲು ನಿರ್ಧರಿಸಿದ್ದಾರೆ” ಎಂದು ಕಾಂಗ್ರೆಸ್ ನಾಯಕ ಮತ್ತು ಗೋವಾ ಉಸ್ತುವಾರಿ ದಿನೇಶ್ ಗುಂಡೂರಾವ್ ಎನ್‌ಡಿಟಿವಿಗೆ ತಿಳಿಸಿದ್ದಾರೆ. ಕಾಂಗ್ರೆಸ್ ತನ್ನ ಉನ್ನತ ಸಂಧಾನಕಾರರಾದ ಪಿ ಚಿದಂಬರಂ ಮತ್ತು ಡಿಕೆ ಶಿವಕುಮಾರ್ ಅವರಿಗೆ ಸಣ್ಣ ಪಕ್ಷಗಳು ಮತ್ತು ಪಕ್ಷೇತರರೊಂದಿಗೆ ಮಾತುಕತೆ ನಡೆಸಲು ಹೇಳಿದೆ. ಕಾಂಗ್ರೆಸ್ ಪಕ್ಷವು ತೃಣಮೂಲ ಕಾಂಗ್ರೆಸ್ ಮತ್ತು ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ (ಎಎಪಿ) ಜತೆಯೂ ಮಾತನಾಡಿದೆ. ಬಂಗಾಳ ಮತ್ತು ದೆಹಲಿಯಂತಹ ಇತರ ರಾಜ್ಯಗಳಲ್ಲಿ ಇವು ವಿರೋಧ ಪಕ್ಷಗಳಾಗಿವೆ. “ಗೋವಾದಲ್ಲಿ ಬಿಜೆಪಿ ವಿರುದ್ಧ ಹೋರಾಡಿದ ಎಲ್ಲಾ ಪಕ್ಷಗಳೊಂದಿಗೆ ನಾವು ಮೈತ್ರಿಗೆ ಮುಕ್ತರಾಗಿದ್ದೇವೆ. ತೃಣಮೂಲ ಕಾಂಗ್ರೆಸ್ ಮತ್ತು ಎಎಪಿ ಅಥವಾ ಗೋವಾದಲ್ಲಿ ಬಿಜೆಪಿ ವಿರುದ್ಧ ಇರುವ ಯಾರೊಂದಿಗಾದರೂ ನಾವು ಮೈತ್ರಿಗೆ ಮುಕ್ತರಾಗಿದ್ದೇವೆ” ಎಂದು ಗುಂಡೂರಾವ್ ಹೇಳಿದರು. ಬಿಜೆಪಿಯೇತರ ಮೈತ್ರಿಗಾಗಿ ಕಾಂಗ್ರೆಸ್ ಜೊತೆ ಸಹಕರಿಸಲು ಎಎಪಿ ಆಸಕ್ತಿ ತೋರಿಸಿದೆ.
ಎಎಪಿಯ ಮುಖ್ಯಮಂತ್ರಿ ಅಭ್ಯರ್ಥಿ ಅಮಿತ್ ಪಾಲೇಕರ್ ಕಾಂಗ್ರೆಸ್ ತಮ್ಮ ಪಕ್ಷ ಜತೆ ಮಾತನಾಡಿರುವುದಾಗಿ ಎನ್‌ಡಿಟಿವಿಗೆ ಖಚಿತಪಡಿಸಿದ್ದಾರೆ. “ಕಾಂಗ್ರೆಸ್‌ನ ಕೆಲವರು ನಮ್ಮನ್ನು ಸಂಪರ್ಕಿಸಿದ್ದಾರೆ” ಎಂದು ಪಾಲೇಕರ್ ಹೇಳಿದ್ದಾರೆ.
“ನಾವು ಬಿಜೆಪಿಯೇತರ ಮೈತ್ರಿಗೆ ಮುಕ್ತವಾಗಿದ್ದೇವೆ. ನಾವು ಯಾವುದೇ ಸಂದರ್ಭದಲ್ಲೂ ಬಿಜೆಪಿಯನ್ನು ಬೆಂಬಲಿಸುವುದಿಲ್ಲ” ಎಂದು ಅವರು ಹೇಳಿದರು. ಆದರೆ ಅವರು ಎನ್‌ಡಿಟಿವಿಯಲ್ಲಿ ಒಟ್ಟಿಗೆ ಬಂದಿದ್ದರಿಂದ, ಇಬ್ಬರು ನಾಯಕರು ತಮ್ಮ ಸಂಭಾವ್ಯ ಮಾತುಕತೆಗಳ ಬಗ್ಗೆ ಬಹಳ ಕಡಿಮೆ ಹೇಳಿದ್ದಾರೆ.
“ಗೋವಾದಲ್ಲಿ ಹಲವು ರಾಜಕೀಯ ಪಕ್ಷಗಳಿವೆ – ಎಂಜಿಪಿ, ತೃಣಮೂಲ, ಎಎಪಿ, ಹಲವು ಪಕ್ಷಗಳಿವೆ ನಮ್ಮ ಸಂಖ್ಯೆಯ ಬಗ್ಗೆ ನಮಗೆ ಖಚಿತವಾಗಿದೆ, ನಾವು ಸರ್ಕಾರ ರಚಿಸುತ್ತೇವೆ. ಮಾರ್ಚ್ 10 (ಫಲಿತಾಂಶಗಳು) ನಂತರ ಏನಾಗಲಿದೆ ಎಂದು ಕಾಯೋಣ” ಎಂದು ಗುಂಡೂರಾವ್ ಹೇಳಿದರು.
ಕಾಂಗ್ರೆಸ್‌ಗೆ, ಇದು ಎಎಪಿ ಮತ್ತು ತೃಣಮೂಲದ ಕಡೆಗೆ ತನ್ನ ನಿಲುವಿನಲ್ಲಿ ದೊಡ್ಡ ತಿರುವು ಆಗಲಿದೆ. ಕೇವಲ ಒಂದು ತಿಂಗಳ ಹಿಂದೆ, ಚಿದಂಬರಂ ಅವರು ಎರಡು ಪಕ್ಷಗಳನ್ನು “ಪಕ್ಷಾಂತರಿಗಳ ಪಕ್ಷಗಳು” ಎಂದು ಬಣ್ಣಿಸಿದ್ದರು. ಎರಡೂ ಪಕ್ಷಗಳು ಗೆಲ್ಲುವ ಸಾಮರ್ಥ್ಯ ಹೊಂದಿಲ್ಲ ಆದರೆ ಬಿಜೆಪಿ ವಿರೋಧಿ ಮತಗಳನ್ನು ವಿಭಜಿಸುತ್ತವೆ ಎಂದು ಅವರು ಹೇಳಿದ್ದಾರೆ.
ಆಡಳಿತಾರೂಢ ಬಿಜೆಪಿಯನ್ನು ಎದುರಿಸಲು ತೃಣಮೂಲ ಕಾಂಗ್ರೆಸ್ ಮತ್ತು ಇತರ ಪಕ್ಷಗಳ ಮೈತ್ರಿಯನ್ನು ಕಾಂಗ್ರೆಸ್ ಈ ಹಿಂದೆ ಪ್ರಸ್ತಾಪಿಸಿತ್ತು. ಆದರೆ ಚಿದಂಬರಂ ಅವರು ಗೋವಾದಲ್ಲಿ ಮೈತ್ರಿ ಮಾಡಿಕೊಳ್ಳುವ ಪ್ರಸ್ತಾಪವನ್ನು “ಪರಿಗಣಿಸಲಾಗಿಲ್ಲ” ಎಂದು ಹೇಳಿದ್ದರು.
ಇದನ್ನೂ ಓದಿ: ಗೋವಾದಲ್ಲಿ ನಿಮ್ಮ ನೇತೃತ್ವದಲ್ಲಿ ಸರ್ಕಾರ ರಚನೆಯಾಗುತ್ತಾ? ಉಸ್ತುವಾರಿ ನಾಯಕ ಡಿ.ಕೆ. ಶಿವಕುಮಾರ್ ಏನಂದರು?