ನವದೆಹಲಿ: ಈಗಾಗಲೇ ಐದು ರಾಜ್ಯಗಳ ಚುನಾವಣೋತ್ತರ ಸಮೀಕ್ಷೆ ಹೊರಬಿದ್ದಿದ್ದು, ಗೋವಾದಲ್ಲಿ ಅತಂತ್ರ ಪರಿಸ್ಥಿತಿ ಉಂಟಾಗುವ ಸಾಧ್ಯತೆಯಿದೆ. ಹೀಗಾಗಿ, ಗೋವಾದ ಅತ್ಯಂತ ಹಳೆಯ ಪ್ರಾದೇಶಿಕ ಪಕ್ಷವಾದ ಎಂಜಿಪಿಯು ನಾಳೆಯ ತೀರ್ಪಿನ ಮುನ್ಸೂಚನೆಗಳ ನಡುವೆ ಹೆಚ್ಚು ಬೇಡಿಕೆಯಿರುವ ಪಕ್ಷವಾಗಿದ್ದು, ಬಿಜೆಪಿ (BJP) ಮತ್ತು ಕಾಂಗ್ರೆಸ್ (Congress) ಎರಡರೊಂದಿಗೂ ಸಂಪರ್ಕದಲ್ಲಿದೆ. ಆದರೆ, ತನ್ನ ಮಿತ್ರ ಪಕ್ಷವಾದ ತೃಣಮೂಲ ಕಾಂಗ್ರೆಸ್ನೊಂದಿಗೆ ಚರ್ಚಿಸಿದ ನಂತರವೇ ಕಾಂಗ್ರೆಸ್ ಅಥವಾ ಬಿಜೆಪಿ ಪಕ್ಷಗಳಲ್ಲಿ ಯಾವುದನ್ನು ಆರಿಸಿಕೊಳ್ಳಬೇಕೆಂದು ನಿರ್ಧರಿಸುವುದಾಗಿ ಹೇಳಿದೆ.
ಚುನಾವಣಾ ಫಲಿತಾಂಶ ಪ್ರಕಟವಾದಾಗ ಎಂಜಿಪಿ ಗೋವಾದಲ್ಲಿ ಕಿಂಗ್‌ಮೇಕರ್ ಆಗಲು ಸಾಕಷ್ಟು ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. ಹೀಗಾಗಿ, ಅವರು ಬಿಜೆಪಿ ಮತ್ತು ಕಾಂಗ್ರೆಸ್ ಎರಡರೊಂದಿಗೂ ಮಾತುಕತೆ ನಡೆಸುತ್ತಿರುವುದಾಗಿ ಎಂಜಿಪಿ ನಾಯಕ ಸುದಿನ್ ಧವಲಿಕರ್ ಎನ್‌ಡಿಟಿವಿಗೆ ತಿಳಿಸಿದ್ದಾರೆ. ಚುನಾವಣೆಗೂ ಮುನ್ನ ಬಿಜೆಪಿ ಜೊತೆಗಿನ ಮೈತ್ರಿಯನ್ನು ಖಡಾಖಂಡಿತವಾಗಿ ತಳ್ಳಿಹಾಕಿದ ನಂತರ ಇದೀಗ ಮತ್ತೆ ಬಿಜೆಪಿ, ಕಾಂಗ್ರೆಸ್ ಜೊತೆಗೆ ಮೈತ್ರಿಯ ಮಾತುಕತೆ ನಡೆಸಲಾಗುತ್ತಿದೆ.
ನಾಳೆಯ ವೇಳೆಗೆ ಎಲ್ಲವೂ ಗೊತ್ತಾಗಲಿದೆ. ನಾವು ಮೈತ್ರಿ ಮಾಡಿಕೊಳ್ಳುವ ಬಗ್ಗೆ ಈ ಹಂತದಲ್ಲಿ ಏನನ್ನೂ ನಿರ್ಧರಿಸಲು ಸಾಧ್ಯವಿಲ್ಲ. ಆದರೆ ನಾವು 10 ಸ್ಥಾನಗಳನ್ನು ದಾಟುವುದು ಖಚಿತವಾಗಿದೆ ಎಂದು ಧವಲೀಕರ್ ಹೇಳಿದ್ದಾರೆ. “ನಾವು ತೃಣಮೂಲ ಕಾಂಗ್ರೆಸ್ ಜೊತೆಗೆ ಚರ್ಚಿಸಿ ಮೈತ್ರಿ ಬಗ್ಗೆ ನಿರ್ಧರಿಸುತ್ತೇವೆ. ನಾಳೆ ಸಂಜೆ 4 ಗಂಟೆಗೆ ನಾವು ಈ ಬಗ್ಗೆ ನಿರ್ಧರಿಸುತ್ತೇವೆ” ಎಂದು ಅವರು ಪ್ರತಿಪಾದಿಸಿದ್ದಾರೆ.
ತೃಣಮೂಲ ನಾಯಕ ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಕೂಡ ಆಗಿರುವ ಅಭಿಷೇಕ್ ಬ್ಯಾನರ್ಜಿ ಮತ್ತು ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರನ್ನು ಇಂದು ಬೆಳಿಗ್ಗೆ ಭೇಟಿಯಾಗಿದ್ದೇನೆ ಎಂದು ಧವಲೀಕರ್ ಹೇಳಿದ್ದಾರೆ.
ತೃಣಮೂಲ ಕಾಂಗ್ರೆಸ್ ಜೊತೆಗೆ ನಮ್ಮ ಮೈತ್ರಿ ಶೇ. 100ರಷ್ಟು ಖಚಿತವಾಗಿದೆ. ಚುನಾವಣಾ ಫಲಿತಾಂಶ ಹೊರಬಿದ್ದ ನಂತರ ನಾವು ಯಾರನ್ನು ಬೆಂಬಲಿಸಬೇಕೆಂದು ನಿರ್ಧರಿಸುತ್ತೇವೆ ಎಂದು ಎಂಜಿಪಿ ನಾಯಕ ಹೇಳಿದ್ದಾರೆ. ತೃಣಮೂಲ ಕಾಂಗ್ರೆಸ್ ಬಿಜೆಪಿಯನ್ನು ಬೆಂಬಲಿಸಲು ನಿರಾಕರಿಸಿದೆ ಮತ್ತು ಅದನ್ನು ಬೆಂಬಲಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದೆ. ಆದರೆ ಅದರ ಗೋವಾದ ಮಿತ್ರಪಕ್ಷ, ಮಾಜಿ ಬಿಜೆಪಿ ಮೈತ್ರಿಕೂಟವಾದ ಎಂಜಿಪಿ ಈ ಮೈತ್ರಿಯ ಬಗ್ಗೆ ಚಿಂತನೆ ನಡೆಸಿದೆ.
ಇನ್ನು, ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ದೆಹಲಿಗೆ ಹೋಗಿದ್ದಾರೆ. ಗೋವಾದಲ್ಲಿ ಬಿಜೆಪಿ ಅಧಿಕಾರವನ್ನು ಉಳಿಸಿಕೊಳ್ಳುವ ಸಾಧ್ಯತೆಗಳ ಬಗ್ಗೆ ವಿವರಿಸಿದ್ದಾರೆ. ಅದಾದ ನಂತರ ಸಾವಂತ್ ಅವರು ಬಿಜೆಪಿಯ ಗೋವಾ ಉಸ್ತುವಾರಿ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿ ಮಾಡಲು ಮುಂಬೈಗೆ ಹಾರಲಿದ್ದಾರೆ. 2019ರಲ್ಲಿ ಮನೋಹರ್ ಪರಿಕ್ಕರ್ ಅವರ ನಿಧನದ ನಂತರ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಗೋವಾ ಸಂಪುಟದಿಂದ ಪಕ್ಷವನ್ನು ಕೈಬಿಟ್ಟಿದ್ದ ಪ್ರಮೋದ್ ಸಾವಂತ್ ಅವರನ್ನು ಬೆಂಬಲಿಸಲು ಎಂಜಿಪಿ ಒಲವು ಹೊಂದಿಲ್ಲ ಎಂದು ಮೂಲಗಳು ತಿಳಿಸಿವೆ.
ಈ ಚುನಾವಣೆಯಲ್ಲಿ ಗೋವಾದಲ್ಲಿ ಪಾದಾರ್ಪಣೆ ಮಾಡಿದ ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್‌ಗೆ ಮೂರು ಸ್ಥಾನಗಳು ಸಿಗಲಿವೆ ಎಂದು ಎಕ್ಸಿಟ್ ಪೋಲ್‌ಗಳಲ್ಲಿ ತಿಳಿಸಲಾಗಿದೆ. ಎಂಜಿಪಿ ಜೊತೆ ತೃಣಮೂಲ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದೆ. ಎನ್‌ಡಿಟಿವಿಯ ಎಕ್ಸಿಟ್ ಪೋಲ್‌ಗಳ ಪ್ರಕಾರ, ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ರಾಜ್ಯದ 40 ಸ್ಥಾನಗಳಲ್ಲಿ 16 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. ಬಹುಮತ ಬರಲು 21 ಸ್ಥಾನಗಳಲ್ಲಿ ಗೆಲುವು ಸಾಧಿಸಬೇಕು.
ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರು ಕಳೆದ ಕೆಲವು ದಿನಗಳಿಂದ ಗೋವಾದಲ್ಲಿ ಬೀಡುಬಿಟ್ಟಿದ್ದಾರೆ ಮತ್ತು ಪರಸ್ಪರ ಬೆಂಬಲಕ್ಕಾಗಿ ಸಾಧ್ಯವಿರುವ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳಲು ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಕಳೆದ ಚುನಾವಣೆಯಲ್ಲಿ ಬಹುಮತದ ಕೊರತೆಯನ್ನು ಸರಿದೂಗಿಸಲು ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳಲು ತಡವಾಗಿದ್ದರಿಂದ ಅಧಿಕಾರ ಕೈತಪ್ಪಿ ಹೋಗಿತ್ತು. ಹೀಗಾಗಿ, ಈ ಬಾರಿ ಆ ರೀತಿಯಾಗದಂತೆ ಕಾಂಗ್ರೆಸ್ ಎಚ್ಚರ ವಹಿಸಿದೆ.
ಇದನ್ನೂ ಓದಿ: ಗೋವಾದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ರೆಸಾರ್ಟ್ ವಾಸದ ಬೆನ್ನಲ್ಲೇ ತಮ್ಮ ಅಭ್ಯರ್ಥಿಗಳಿಗೆ ಕಾವಲಾಗಿ ನಿಂತ ಎಎಪಿ
Goa Assembly Election: ಗೋವಾದಲ್ಲಿ ಅಧಿಕಾರಕ್ಕೇರಲು ಟಿಎಂಸಿ, ಆಮ್ ಆದ್ಮಿ ಜೊತೆ ಮೈತ್ರಿಗೆ ಕಾಂಗ್ರೆಸ್ ಸಿದ್ಧತೆ