ಗುಜರಾತ್ ಚುನಾವಣೆಗೆ (Gujarat Assembly Election)ಕೆಲವೇ ದಿನಗಳು ಬಾಕಿ ಇರುವಾಗ ರಾಜಕೀಯ ಪಕ್ಷಗಳು ಜಿದ್ದಾಜಿದ್ದಿನ ಪೈಪೋಟಿಗೆ ಸಿದ್ಧತೆ ನಡೆಸಿದ್ದು ಅಬ್ಬರದ ಪ್ರಚಾರದಲ್ಲಿ ನಿರತವಾಗಿವೆ, ಅಧಿಕಾರದಲ್ಲಿರುವ ಬಿಜೆಪಿ, ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷವು ರಾಜ್ಯಾದ್ಯಂತ ಪ್ರಚಾರ ಮಾಡುತ್ತಿದೆ. ಈ ನಡುವೆ ಎಎಪಿಯ(Aam Aadmi Party) ಮುಖ್ಯಮಂತ್ರಿ ಅಭ್ಯರ್ಥಿ ಇಸುದಾನ್ ಗಢ್ವಿ (Isudan Gadhvi)ಅವರ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಗಢ್ವಿ ಅವರು ಚಲಿಸುತ್ತಿರುವ ವಾಹನದ ಮೇಲಿಂದ ಕೈ ಬೀಸುತ್ತಾ ರೋಡ್ ಶೋ ನಡೆಸುತ್ತಿರುವ ವಿಡಿಯೊ ಅದು. ಆದರೆ, ರಸ್ತೆ ಎರಡೂ ಕಡೆ ಖಾಲಿಯಾಗಿ ಕಾಣುತ್ತಿದ್ದು, ಜನಸಂದಣಿ ಕಾಣುತ್ತಿಲ್ಲ. ಕಾಂಗ್ರೆಸ್ ನಾಯಕರು ಸೇರಿದಂತೆ ವಿಡಿಯೊವನ್ನು ಶೇರ್ ಮಾಡಿ ಎಎಪಿ ನಾಯಕನನ್ನು ಲೇವಡಿ ಮಾಡಿದ್ದಾರೆ. ಎಎಪಿಯ ಗುಜರಾತ್ ಸಿಎಂ ಅಭ್ಯರ್ಥಿಯ ರೋಡ್‌ಶೋನ ದೃಶ್ಯಗಳನ್ನು ನೋಡಿದರೆ ಇಡೀ ಗುಜರಾತ್ ನೆರೆದಂತೆ ಕಾಣುತ್ತಿದೆ ಎಂದು ಕಾಂಗ್ರೆಸ್ ಮುಖಂಡರಾದ ಶ್ರೀನಿವಾಸ್ ಬಿವಿ ಮತ್ತು ಕೇಶವ್ ಚಂದ್ ಯಾದವ್ ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ.
ಅದೇ ಶೀರ್ಷಿಕೆಯ ಜೊತೆಗೆ ಹಿಮಾಚಲ ಪ್ರದೇಶ ಯುವ ಕಾಂಗ್ರೆಸ್, ಮಧ್ಯಪ್ರದೇಶ ಯುವ ಕಾಂಗ್ರೆಸ್ ಮತ್ತು ಯುಪಿ-ಪಶ್ಚಿಮ ಯುವ ಕಾಂಗ್ರೆಸ್‌ನ ಅಧಿಕೃತ ಫೇಸ್‌ಬುಕ್ ಪುಟಗಳಿಂದ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ಅಂದಹಾಗೆ ಈ ವಿಡಿಯೊ ಆರು ತಿಂಗಳಿಗಿಂತ ಹಳೆಯದ್ದು. ಗಢ್ವಿ ಅವರನ್ನು ಗುಜರಾತ್‌ನಲ್ಲಿ ಎಎಪಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸುವ ಮೊದಲಿನ ವಿಡಿಯೊ ಎಂದು ಇಂಡಿಯಾ ಟುಡೇ ಫ್ಯಾಕ್ಟ್ ಚೆಕ್ ವರದಿ ಮಾಡಿದೆ.
AAP के गुजरात CM उम्मीदवार के रोड शो की तस्वीरें, मानो पूरा गुजरात उमड़ आया ? pic.twitter.com/QDuGCM3Mtx
— Srinivas BV (@srinivasiyc) November 26, 2022
ಫ್ಯಾಕ್ಟ್ ಚೆಕ್
ಶ್ರೀನಿವಾಸ್ ಬಿವಿ ಅವರ ಟ್ವೀಟ್‌ಗೆ ಪ್ರತಿಕ್ರಿಯೆಗಳಲ್ಲಿ, ವಿಡಿಯೊ ಹಳೆಯದು ಎಂದು ಹಲವರು ಪ್ರತಿಕ್ರಿಯಿಸಿದ್ದು ವೈರಲ್ ವಿಡಿಯೊದ ಫ್ರೇಮ್‌ಗಳನ್ನು ಎಎಪಿ ಗುಜರಾತ್‌ನ ಯೂಟ್ಯೂಬ್ ಪೇಜ್ಗೆ ಅಪ್‌ಲೋಡ್ ಮಾಡಿದ ಆರು ತಿಂಗಳ ಹಳೆಯ ವಿಡಿಯೊದೊಂದಿಗೆ ಹೋಲಿಸಿದ್ದಾರೆ. ಈ ಸುಳಿವಿನ ಸಹಾಯದಿಂದ ಯೂಟ್ಯೂಬ್‌ನಲ್ಲಿ ಸಂಬಂಧಿತ ಕೀವರ್ಡ್‌ಗಳೊಂದಿಗೆ ಹುಡುಕಿದಾಗ ಈ ವರ್ಷದ ಮೇನಲ್ಲಿ ಎಎಪಿ ಗುಜರಾತ್‌ನ ಚಾನಲ್‌ಗೆ ಅಪ್‌ಲೋಡ್ ಮಾಡಿದ ಇದೇ ರೀತಿಯ ರೋಡ್‌ಶೋ ವಿಡಿಯೊ ಇದೆ. ಈ ವಿಡಿಯೊದಲ್ಲಿ ಗಢ್ವಿ ಅವರು ಇದೇ ರೀತಿಯ ಉಡುಪಿನಲ್ಲಿ ರ್ಯಾಲಿಯನ್ನು ಮುನ್ನಡೆಸುತ್ತಿರುವುದನ್ನು ಕಾಣಬಹುದು. ಕೆಲವು ಕೀವರ್ಡ್‌ಗಳನ್ನು ನೀಡಿ ಹುಡುಕಿದಾಗ ಆರು ತಿಂಗಳ ಹಿಂದೆ ಎಎಪಿ ಗುಜರಾತ್‌ನ ಅಧಿಕೃತ ಫೇಸ್‌ಬುಕ್ ಪುಟಕ್ಕೆ ಅಪ್‌ಲೋಡ್ ಮಾಡಲಾದ ಮೂಲ ವಿಡಿಯೊ ಸಿಕ್ಕಿದೆ.ಫೋರ್ಬಂದರ್ನಲ್ಲಿ ನಡೆದ ಪರಿವರ್ತನ್ ಯಾತ್ರೆ ಸಮಯದಲ್ಲಿ ಇದನ್ನು ಸೆರೆಹಿಡಿಯಲಾಗಿದೆ ಎಂದು ಗುಜರಾತಿ ಭಾಷೆಯಲ್ಲಿ ಶೀರ್ಷಿಕೆ ಬರೆದಿದೆ.
ವೈರಲ್ ವಿಡಿಯೊದ ಫ್ರೇಮ್ ಮತ್ತು ಮೂಲ ವಿಡಿಯೊದಿಂದ ಫ್ರೇಮ್‌ಗಳನ್ನು ಹೋಲಿಸಿದ ನಂತರ, ಎರಡೂ ವಿಡಿಯೊಗಳು ಒಂದೇ ಅಂತ ಗೊತ್ತಾಗಿದೆ.
ಮುಖ್ಯಮಂತ್ರಿ ಅಭ್ಯರ್ಥಿಯ ಅಧಿಕೃತ ಹೆಸರನ್ನು ಘೋಷಿಸುವ ಸುಮಾರು ಆರು ತಿಂಗಳ ಮೊದಲು ಈ ವರ್ಷದ ಮೇ 17 ರಂದು ಈ ಲೈವ್ ವಿಡಿಯೊವನ್ನು AAP ಗುಜರಾತ್‌ನ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡಿದೆ. ವರದಿಯ ಪ್ರಕಾರ, ಎಎಪಿ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನವೆಂಬರ್ 4 ರಂದು ಗಢ್ವಿಯ ಹೆಸರನ್ನು ಘೋಷಿಸಿದರು. ಆದ್ದರಿಂದ, ಈ ರೋಡ್ ಶೋ ವೇಳೆ ಗಢ್ವಿ ಗುಜರಾತ್‌ಗೆ ಎಎಪಿಯ ಸಿಎಂ ಅಭ್ಯರ್ಥಿಯಾಗಿರಲಿಲ್ಲ ಎಂಬುದು ಸ್ಪಷ್ಟವಾಗಿದೆ.