Isudan Gadhvi: ಎಎಪಿ ಸಿಎಂ ಅಭ್ಯರ್ಥಿ ಇಸುದಾನ್ ಗಢ್ವಿ ರಾಜಕಾರಣಿಯಾಗಿದ್ದರ ಹಿಂದಿದೆ ಹೀಗೊಂದು ಕಥೆ
Isudan Gadhvi; ಖ್ಯಾತ ಟಿವಿ ನಿರೂಪಕರಾಗಿದ್ದ ಗಢ್ವಿ ಅವರನ್ನು ರಾಜಕಾರಣದತ್ತ ಮುಖ ಮಾಡುವಂತೆ ಮಾಡಿದ ಘಟನೆ ಯಾವುದು? ಅವರು ರಾಜಕೀಯಕ್ಕೆ ಧುಮುಕಲು ಮುಖ್ಯ ಕಾರಣವೇನು ಎಂಬುದರ ಹಿಂದಿನ ಅಸಲಿಯತ್ತು ಇಲ್ಲಿದೆ ಓದಿ.
ಅಹಮದಾಬಾದ್: ಇಸುದಾನ್ ಗಢ್ವಿ (Isudan Gadhvi) ಅವರನ್ನು ಗುಜರಾತ್ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಎಎಪಿ (AAP) ಘೋಷಿಸಿದೆ. ಟಿವಿ ನಿರೂಪಕರಾಗಿ, ಪತ್ರಕರ್ತರಾಗಿ ಪ್ರಸಿದ್ಧರಾದ ಗಢ್ವಿ ರಾಜಕಾರಣಿಯಾಗಿದ್ದರ ಹಾಗೂ ಮುಖ್ಯಮಂತ್ರಿ ಅಭ್ಯರ್ಥಿಯಾದದ್ದರ ಹಿಂದೆ ಕಥೆಯೊಂದಿದೆ. ಕೋವಿಡ್ ಎರಡನೇ ಅಲೆ, ರಾಜ್ಯ ಸರ್ಕಾರದ ಆಡಳಿತ ಯಂತ್ರದ ವೈಫಲ್ಯ ಸೇರಿದಂತೆ ಹಲವು ಕಾರಣಗಳು ಗಢ್ವಿಯವರನ್ನು ರಾಜಕಾರಣಿಯಾಗುವಂತೆ ಪ್ರೇರೇಪಿಸಿದವು. ಖ್ಯಾತ ಟಿವಿ ನಿರೂಪಕರಾಗಿದ್ದ ಗಢ್ವಿ ಅವರನ್ನು ರಾಜಕಾರಣದತ್ತ ಮುಖ ಮಾಡುವಂತೆ ಮಾಡಿದ ಘಟನೆ ಯಾವುದು? ಅವರು ರಾಜಕೀಯಕ್ಕೆ ಧುಮುಕಲು ಮುಖ್ಯ ಕಾರಣವೇನು ಎಂಬುದರ ಹಿಂದಿನ ಅಸಲಿಯತ್ತನ್ನು ‘ದಿ ಪ್ರಿಂಟ್’ ತಾಣದಲ್ಲಿ ಡಾ.ಕೆ. ಸಿಂಗ್ ಎಂಬವರು ವಿವರಿಸಿದ್ದಾರೆ.
ಅದು ದೇಶದಲ್ಲಿ ಕೋವಿಡ್ ಎರಡನೇ ಅಲೆ ಹರಡುತ್ತಿದ್ದ ಸಂದರ್ಭ. ಕೋವಿಡ್ನ ಡೆಲ್ಟಾ ತಳಿ ವ್ಯಾಪಕವಾಗಿ ಹರಡುತ್ತಿದ್ದು, ಖ್ಯಾತ ನಿರೂಪಕರಾಗಿದ್ದ ಗಢ್ವಿ ಕೂಡ ಅದರಿಂದ ತೊಂದರೆಗೆ ಸಿಲುಕಿದರು. ಆಗ, ಆಡಳಿತ ಯಂತ್ರದ ಅಸಮರ್ಥತೆ ಅವರನ್ನು ಕೆರಳಿಸಿತು. ಅವರ ತಾಯಿ ಕೋವಿಡ್ನ ಡೆಲ್ಟಾ ತಳಿಯಿಂದಾಗಿ ಸೋಂಕಿಗೆ ತುತ್ತಾದರು. ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲು ಅವಕಾಶವೇ ಇರಲಿಲ್ಲ. ಮನೆಯಲ್ಲೇ ಹೇಗೋ ಅಮ್ಮನ ಚಿಕಿತ್ಸೆಗೆ ವ್ಯವಸ್ಥೆ ಮಾಡಿದರು. ಅದ್ಹೇಗೋ ಅಮ್ಮನ ಚಿಕಿತ್ಸೆಗೆ ವ್ಯವಸ್ಥೆ ಮಾಡಿಸಿ ಬಚಾವಾದೆ ಎಂದುಕೊಳ್ಳುತ್ತಿರುವಾಗಲೇ ಸ್ವತಃ ಗಢ್ವಿಗೇ ಕೋವಿಡ್ ಸೋಂಕು ತಗುಲಿತು. ಅದೃಷ್ಟವಶಾತ್, ಇಬ್ಬರೂ ಸೋಂಕಿನಿಂದ ಗುಣಮುಖರಾದರು.
ಇದನ್ನೂ ಓದಿ: Isudan Gadhvi: ಗುಜರಾತ್ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿದ ಆಮ್ ಆದ್ಮಿ ಪಕ್ಷ
ಆದರೆ, ಎಲ್ಲರಿಗೂ ಇಂಥ ಭಾಗ್ಯ ದೊರೆಯಬೇಕಲ್ಲ… ಒಂದು ದಿನ ಮಹಿಳೆಯೊಬ್ಬರು ಆಸ್ಪತ್ರೆಯೊಂದರ ಹೊರಗೆ ತನ್ನ 20 ವರ್ಷ ವಯಸ್ಸಿನ ಮಗನೊಂದಿಗೆ ರೋಧಿಸುತ್ತಿರುವುದು ಅವರಿಗೆ ಕಾಣಿಸುತ್ತದೆ. ಕಾರಣ, ಖಾಸಗಿ ವಾಹನದಲ್ಲಿ ಕರೆದುಕೊಂಡು ಬಂದ ಕಾರಣ ಆತನನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲು ಅಲ್ಲಿನ ಸಿಬ್ಬಂದಿ ನಿರಾಕರಿಸಿದ್ದರು. ಸರ್ಕಾರದ ಸಹಾಯವಾಣಿ 108ಕ್ಕೆ ಕರೆ ಮಾಡಿ ಆ್ಯಂಬುಲೆನ್ಸ್ನಲ್ಲಿ ಕರೆದುಕೊಂಡು ಬಂದರೆ ಮಾತ್ರ ಆಸ್ಪತ್ರೆಗೆ ದಾಖಲಿಸಿಕೊಳ್ಳಬಹುದೆಂದು ಸರ್ಕಾರ ನಿಯಮ ಮಾಡಿತ್ತು.
ಸರ್ಕಾರಿ ಅಧಿಕಾರಿಯ ಕಾಡಿದ ಗಢ್ವಿ!
ಆ್ಯಂಬುಲೆನ್ಸ್ ನಿಯಮ ಮಾಡಿದ ಅಧಿಕಾರಿಯ ಜಾಡುಹಿಡಿಯಲು ಮುಂದಾಗುತ್ತಾರೆ ಗಢ್ವಿ. ಆ ಸರ್ಕಾರಿ ಅಧಿಕಾರಿಯ ಮೊಬೈಲ್ ದೂರವಾಣಿ ಸಂಖ್ಯೆಯನ್ನು ಅದ್ಹೇಗೋ ಪತ್ತೆ ಮಾಡಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡುತ್ತಾರೆ. ಪರಿಣಾಮವಾಗಿ ಆ ಅಧಿಕಾರಿಗೆ 10,000ಕ್ಕೂ ಹೆಚ್ಚು ಕರೆಗಳು ಬಂದಿವೆ. ಕೊನೆಗೆ ಅಧಿಕಾರಿ ಕೋರ್ಟ್ ಮೆಟ್ಟಿಲೇರುತ್ತಾರೆ. ಈ ವಿದ್ಯಮಾನ ನಡೆದ ಬಳಿಕ ತಾನು ಪತ್ರಿಕೋದ್ಯಮ ಹೊರತುಪಡಿಸಿ ಏನಾದರೂ ಮಾಡಲೇಬೇಕು ಎಂಬ ತುಡಿತ ಬಲಗೊಂಡಿತು ಎಂದು ‘ದಿ ಪ್ರಿಂಟ್’ಗೆ ತಿಳಿಸಿದ್ದಾರೆ ಗಢ್ವಿ.
‘ಆಮ್ ಆದ್ಮಿ’ಗಾಗಿ ಎಎಪಿ ಸೇರಿದ ಗಢ್ವಿ
2021ರ ಜೂನ್ನಲ್ಲಿ ಗಢ್ವಿ ಎಎಪಿ ಸೇರುತ್ತಾರೆ. ಬಳಿಕ ನಿರಂತರ ಜನಸಂಪರ್ಕದಲ್ಲಿ ತೊಡಗಿಕೊಳ್ಳುತ್ತಾರೆ. ಕಳೆದ 14 ತಿಂಗಳಲ್ಲಿ ಅವರು ಏನಿಲ್ಲವೆಂದರೂ ಗುಜರಾತಿನಾದ್ಯಂತ 1,200 ಸಭೆಗಳನ್ನು ನಡೆಸಿದ್ದಾರೆ. ಗುಜರಾತಿನಾದ್ಯಂತ 1.05 ಲಕ್ಷ ಕಿಲೋಮೀಟರ್ ಸಂಚರಿಸಿದ್ದಾರೆ. ಎಎಪಿ ಸಂಸ್ಥಾಪಕ, ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರು ಗಢ್ವಿ ಅವರನ್ನು ಗುಜರಾತಿನ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗೊ ಘೋಷಿಸಿದಾಗ ಹೆಚ್ಚಿನವರಿಗೆ ಅದರಿಂದ ಅಚ್ಚರಿಯಾಗಿರಲಿಕ್ಕಿಲ್ಲ ಎಂದು ‘ದಿ ಪ್ರಿಂಟ್’ ಲೇಖನ ಉಲ್ಲೇಖಿಸಿದೆ. 40 ವರ್ಷ ವಯಸ್ಸಿನ ಗಢ್ವಿಗೆ ರಾಜ್ಯದ ಆಗುಹೋಗುಗಳು ಮತ್ತು ಶಿಕ್ಷಣ ಕ್ಷೇತ್ರದ ಬಗ್ಗೆ ಅಪಾರವಾದ ಆಸಕ್ತಿಯಿದೆಯಂತೆ.
ಟಿವಿ ನಿರೂಪಕರಾಗಿ ಪ್ರೇಕ್ಷಕರ ಮನ ಗೆದ್ದಿದ್ದ ಗಢ್ವಿ
ಹನುಮಂತನ ಇತಿಹಾಸಕ್ಕೆ ಸಂಬಂಧಿಸಿ ಪ್ರತಿ ಭಾನುವಾರ ನಡೆಸಿಕೊಡುತ್ತಿದ್ದ ಎಪಿಸೋಡ್, ಕರ್ಮಾ ಕಾ ಸಿದ್ಧಾಂತ್ ಕಾರ್ಯಕ್ರಮ, ಓಲ್ಡ್ ಏಜ್ ಹೋಮ್ಸ್ ಟಿವಿ ಕಾರ್ಯಕ್ರಮಗಳ ನಿರೂಪಣೆಯಿಂದ ಅವರು ಪ್ರೇಕ್ಷಕರ ಮನ ಗೆದ್ದಿದ್ದರು. ಸಂತರು ಮತ್ತು ಮಹಾಂತರ ಜತೆ ಸಂವಾದವನ್ನೂ ನಡೆಸಿಕೊಡುತ್ತಿದ್ದರು. ಈ ಮೂಲಕ ರಾಮಾಯಣ, ಮಹಾಭಾರತದಂಥ ಮಹಾಕಾವ್ಯಗಳ ಬಗ್ಗೆ ಸಂತರ ಮಧ್ಯೆ ಸಂವಾದಕ್ಕೆ ವೇದಿಕೆ ಅಣಿಮಾಡಿಕೊಡುತ್ತಿದ್ದರು. ಇಸುಭಾಯ್ ಎಂದೇ ಗುರುತಿಸಿಕೊಂಡಿದ್ದರು. ವಿದೇಶಗಳಲ್ಲಿ ನೆಲೆಸಿರುವ ಅನೇಕ ಗುಜರಾತಿಗಳೂ ಈ ಕಾರ್ಯಕ್ರಮಗಳಿಂದಾಗಿ ಗಢ್ವಿ ಅವರ ಅಭಿಮಾನಿಗಳಾಗಿದ್ದು, ಅಮೆರಿಕ ಮತ್ತು ಇತರ ದೇಶಗಳಿಗೆ ಕಾರ್ಯಕ್ರಮ ನಡೆಸಿಕೊಡಲು ಆಹ್ವಾನಿಸಿದ್ದರು. ಆದರೆ, ಪಾಸ್ಪೋರ್ಟ್ ಇಲ್ಲವೆಂಬ ಕಾರಣಕ್ಕೆ ಗಢ್ವಿ ಆಹ್ವಾನವನ್ನು ತಿರಸ್ಕರಿಸಿದ್ದರಂತೆ! ಗುಜರಾತ್ ಬಿಟ್ಟು ತೆರಳಲು ಇಷ್ಟವಿಲ್ಲ, ಹೀಗಾಗಿ ಪಾಸ್ಪೋರ್ಟ್ ಮಾಡಿಸಿಲ್ಲ ಎಂದಿದ್ದರಂತೆ!
ಪತ್ರಕರ್ತರಾಗಿ ಗಢ್ವಿ
2015ರ ಏಪ್ರಿಲ್ 15ರಂದು ಗಢ್ವಿ ತಾವು ಕಾರ್ಯನಿರ್ವಹಿಸುತ್ತಿರುವ ಟಿವಿ ಚಾನೆಲ್ನ ಬ್ಯೂರೋ ಚೀಫ್ ಆಗಿ ಬಡ್ತಿ ಹೊಂದುತ್ತಾರೆ. 2016ರಲ್ಲಿ ಚಾನೆಲ್ ಮುಖ್ಯಸ್ಥರಾಗಿ ನೇಮಕಗೊಳ್ಳುತ್ತಾರೆ. ಬೇರೆ ಕೆಲವು ಟಿವಿ ಚಾನೆಲ್ಗಳನ್ನು ಮುನ್ನಡೆಸುವಂತೆಯೂ ಅವರಿಗೆ ಆಫರ್ಗಳು ಬರುತ್ತವೆ.
ಈ ಎಲ್ಲ ಬೆಳವಣಿಗೆಗಳಿಗೂ ಮುನ್ನ, ಅಂದರೆ 2014ರಲ್ಲಿ ಗಢ್ವಿ ತಂದೆಗೆ ಕಿಡ್ನಿ ಸಂಬಂಧಿತ ಸಮಸ್ಯೆ ಕಾಣಿಸಿತ್ತು. ಆಗ ವೃತ್ತಿಯನ್ನೇ ತ್ಯಜಿಸಿ ತಂದೆಯ ಸೇವೆಗೆ ಮುಂದಾಗಿದ್ದರು. ಆದರೆ, ಅದಕ್ಕೊಪ್ಪದ ತಂದೆ, ಕೆಲಸಕ್ಕೆ ಮರಳು-ಜನರ ಸೇವೆ ಮಾಡು ಎಂದಿದ್ದರು ಎಂದು ನೆನಪಿಸಿಕೊಂಡಿದ್ದಾರೆ ಗಢ್ವಿ.
ಇಸುದಾನ್ ಗಢ್ವಿ ಹಿನ್ನೆಲೆ
ಗುಜರಾತ್ನ ದ್ವಾರಕಾ ಜಿಲ್ಲೆಯ ಪಿಪಲಿಯಾ ಜಿಲ್ಲೆಯಲ್ಲಿ ಜನಿಸಿದ ಗಢ್ವಿ ಜಾಮ್ನಗರದಲ್ಲಿ ಶಿಕ್ಷಣ ಪಡೆದರು. ಬಳಿಕ ಅಹಮದಾಬಾದ್ಗೆ ತೆರಳಿ ಪತ್ರಿಕೋದ್ಯಮ ಓದಿದರು. ಈಟಿವಿ ಹೈದರಾಬಾದ್ನಲ್ಲಿ ವೃತ್ತಿ ಜೀವನ ಆರಂಭಿಸಿದರು. ಪತ್ನಿ, ಇಬ್ಬರು ಮಕ್ಕಳು ಹಾಗೂ ತಾಯಿಯೊಂದಿಗೆ ವಾಸಿಸುತ್ತಿದ್ದಾರೆ ಎಂದು ‘ದಿ ಪ್ರಿಂಟ್’ ವರದಿ ತಿಳಿಸಿದೆ.
ಇದನ್ನೂ ಓದಿ: ಗುಜರಾತ್ ಚುನಾವಣೆ: ಡಿಸೆಂಬರ್ 1ರಂದು ಪ್ರಥಮ, 5ರಂದು 2ನೇ ಹಂತದ ಮತದಾನ; ಡಿಸೆಂಬರ್ 8ರಂದು ಫಲಿತಾಂಶ ಪ್ರಕಟ
Published On - 5:53 pm, Sat, 5 November 22