ಅಹಮದಾಬಾದ್: ಗುಜರಾತ್‌ನಲ್ಲಿ ಗುರುವಾರ (ಡಿ 1) ಮೊದಲ ಹಂತದ ಮತದಾನ ನಡೆಯಲಿದ್ದು, ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರ ಮುಕ್ತಾಯವಾಗಿದೆ. ಮೊದಲ ಹಂತದಲ್ಲಿ 19 ಜಿಲ್ಲೆಗಳ 89 ಸ್ಥಾನಗಳಿಗೆ ಒಟ್ಟು 788 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಸೂರತ್‌ನ ಲಿಂಬಾಯತ್ ವಿಧಾನಸಭಾ ಕ್ಷೇತ್ರದಿಂದ 44 ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಸೂರತ್‌ನ ಮಹುವ ಮತ್ತು ನವಸಾರಿ ಜಿಲ್ಲೆಯ ಗಾಂದೇವಿ ಕ್ಷೇತ್ರದಲ್ಲಿ ಕೇವಲ ಮೂವರು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮೊದಲ ಹಂತದಲ್ಲಿ ಸ್ಪರ್ಧಿಸಿರುವ 788 ಅಭ್ಯರ್ಥಿಗಳ ಪೈಕಿ 211 ಮಂದಿ ಕೋಟ್ಯಾಧಿಪತಿಗಳಿದ್ದು, ಒಂದು ಕೋಟಿ ಅಥವಾ ಅದಕ್ಕಿಂತ ಹೆಚ್ಚು ಮೌಲ್ಯದ ಆಸ್ತಿ ಹೊಂದಿದ್ದಾರೆ. ಕೋಟ್ಯಾಧಿಪತಿ ಅಭ್ಯರ್ಥಿಗಳ ಸರಾಸರಿ ಆಸ್ತಿ 2.88 ಕೋಟಿ ರೂ. ಆಗಿದೆ. ವಿಶೇಷ ಅಂದರೆ ಕೆಲವು ಅಭ್ಯರ್ಥಿಗಳು ಕಡು ಬಡವರಿದ್ದಾರೆ. ಇರಲು ಸ್ವಂತ ಮನೆ,ಆಸ್ತಿ ಇಲ್ಲದವರೂ ಕೂಡ ಈ ಬಾರಿ ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ.
ಸ್ಪರ್ಧಿಸಿರುವ ಕೆಲವು ಅಭ್ಯರ್ಥಿಗಳು ಸಾಕಷ್ಟು ಆಸ್ತಿ ಹೊಂದಿದ್ದರೂ ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ಅವರಲ್ಲಿ ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಮತ್ತು ಎಎಪಿ ಅಭ್ಯರ್ಥಿಗಳು ಸೇರಿದ್ದಾರೆ. ಮೊದಲ ಹಂತದಲ್ಲಿ ಸ್ಪರ್ಧಿಸುತ್ತಿರುವ ಹತ್ತು ಅಭ್ಯರ್ಥಿಗಳ ಪೈಕಿ ಅತಿ ಹೆಚ್ಚು ಸಾಲ ಹೊಂದಿರುವವರು ಐವರು ಕಾಂಗ್ರೆಸ್‌ನಿಂದ, ಮೂವರು ಬಿಜೆಪಿಯಿಂದ ಮತ್ತು ಇಬ್ಬರು ಆಮ್ ಆದ್ಮಿ ಪಕ್ಷದಿಂದ ಸ್ಪರ್ಧಿಸಿದ್ದಾರೆ.
ಹೆಚ್ಚು ಸಾಲ ಹೊಂದಿರುವ ಟಾಪ್ 3 ಅಭ್ಯರ್ಥಿಗಳ ವಿವರ
1. ಇಂದ್ರನೀಲ್ ರಾಜ್‌ಗುರು: ಗುಜರಾತ್‌ನ ಮೊದಲ ಹಂತದಲ್ಲಿ ಸ್ಪರ್ಧಿಸಿರುವ 788 ಅಭ್ಯರ್ಥಿಗಳ ಪೈಕಿ ರಾಜ್‌ಕೋಟ್ ಪೂರ್ವದ ಕಾಂಗ್ರೆಸ್ ಅಭ್ಯರ್ಥಿ ಇಂದ್ರನೀಲ್ ರಾಜ್‌ಗುರು ಹೆಚ್ಚು ಸಾಲಗಾರಾಗಿದ್ದಾರೆ. ರಾಜಗುರು ಅವರ ಒಟ್ಟು ಸಾಲ 76 ಕೋಟಿ ರೂ. ಆಗಿದ್ದು ಅವರ ಒಟ್ಟು ಆಸ್ತಿ 162 ಕೋಟಿ ರೂ. ಆಗಿದೆ. ಇವುಗಳಲ್ಲಿ 66.88 ಕೋಟಿ ರೂಪಾಯಿ ಮೌಲ್ಯದ ಚರಾಸ್ತಿ ಮತ್ತು 76 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಸ್ಥಿರಾಸ್ತಿಗಳಿವೆ. ರಾಜಗುರು ಬಳಿ 17 ಐಷಾರಾಮಿ ವಾಹನಗಳಿವೆ.
2. ಭಚುಭಾಯಿ ಧರ್ಮಶಿ: ಕಛ್ ರಾಪರ್ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಭಚುಭಾಯಿ ಧರ್ಮಶಿ ಅವರು ಗುಜರಾತ್‌ನಲ್ಲಿ ಎರಡನೇ ಅತಿ ಹೆಚ್ಚು ಸಾಲಗಾರ ಅಭ್ಯರ್ಥಿಯಾಗಿದ್ದಾರೆ. ಭಚುಭಾಯಿ 30 ಕೋಟಿಗೂ ಹೆಚ್ಚು ಸಾಲ ಹೊಂದಿದ್ದಾರೆ. ಅವರ ಒಟ್ಟು ಆಸ್ತಿ 97 ಕೋಟಿ ರೂ ಆಗಿದೆ. ಇದರಲ್ಲಿ 75 ಕೋಟಿಗೂ ಹೆಚ್ಚು ಮೌಲ್ಯದ ಚರ ಆಸ್ತಿಗಳು ಮತ್ತು 22 ಕೋಟಿಗೂ ಹೆಚ್ಚು ಮೌಲ್ಯದ ಸ್ಥಿರಾಸ್ತಿಗಳು ಸೇರಿವೆ. ಭಚುಭಾಯಿ ಓದಿದ್ದು 11ನೇ ತರಗತಿವರೆಗೆ ಮಾತ್ರ.
3. ಜಗ್ಮಲ್‌ಭಾಯ್ ಜಾದವ್‌ಭಾಯ್ ವಾಲಾ: ಆಮ್ ಆದ್ಮಿ ಪಕ್ಷದ ಟಿಕೆಟ್‌ನಲ್ಲಿ ಸೋಮನಾಥ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಜಗ್ಮಲ್‌ಭಾಯ್ ಜಾದವ್‌ಭಾಯ್ ವಾಲಾ ಅವರು ಮೂರನೇ ಅತಿ ಹೆಚ್ಚು ಸಾಲಗಾರ ಅಭ್ಯರ್ಥಿಯಾಗಿದ್ದಾರೆ. ಜಗ್ಮಲ್‌ಭಾಯ್ ಒಟ್ಟು 22 ಕೋಟಿ ಸಾಲವನ್ನು ಹೊಂದಿದ್ದಾರೆ. ಅವರ ಒಟ್ಟು ಆಸ್ತಿ 25 ಕೋಟಿ ರೂಪಾಯಿ ಎಂದು ಘೋಷಿಸಿದ್ದಾರೆ.
ಇದನ್ನೂ ಓದಿ: ಗುಜರಾತ್‌ನ ಜನ ಈ ಬಾರಿ ಎಲ್ಲ ದಾಖಲೆಯನ್ನೂ ಮುರಿಯುತ್ತಾರೆ; ಸೂರತ್ ರೋಡ್ಶೋನಲ್ಲಿ ಪ್ರಧಾನಿ ಮೋದಿ
ಎಷ್ಟು ಅಭ್ಯರ್ಥಿಗಳು ಎಷ್ಟು ಆಸ್ತಿ ಹೊಂದಿದ್ದಾರೆ
73 ಅಭ್ಯರ್ಥಿಗಳು 5 ಕೋಟಿಗೂ ಹೆಚ್ಚು ಆಸ್ತಿ ಹೊಂದಿದ್ದಾರೆ. ಇನ್ನು 77ಅಭ್ಯರ್ಥಿಗಳು 2 ರಿಂದ 5 ಕೋಟಿ ಆಸ್ತಿ ಹೊಂದಿದ್ದರೆ, 638 ಅಭ್ಯರ್ಥಿಗಳು 10 ಲಕ್ಷದಿಂದ 50 ಲಕ್ಷ ರೂಪಾಯಿಯನ್ನು ಘೋಷಿಸಿದ್ದಾರೆ.
ಗುಜರಾತ್ ಚುನಾವಣೆಯ ಮೊದಲ ಹಂತದ ಚುನಾವಣೆಯಲ್ಲಿ ಗರಿಷ್ಠ ಸಂಖ್ಯೆಯ ಕೊಟ್ಯಾಧಿಪತಿ ಅಭ್ಯರ್ಥಿಗಳನ್ನು ಬಿಜೆಪಿ ಹೊಂದಿದೆ. ಅಂಕಿ ಅಂಶಗಳ ಪ್ರಕಾರ ಶೇ.89 ರಷ್ಟು ಬಿಜೆಪಿ ಅಭ್ಯರ್ಥಿಗಳು ಕೋಟ್ಯಾಧಿಪತಿಗಳು. ಎರಡನೇ ಸ್ಥಾನದಲ್ಲಿ ಕಾಂಗ್ರೆಸ್‌ನ 75 % ಮತ್ತು ಎಎಪಿಯ 38 % ರಷ್ಟು ಅಭ್ಯರ್ಥಿಗಳು ಕೋಟ್ಯಾಧಿಪತಿಗಳ ಪಟ್ಟಿಯಲ್ಲಿದ್ದಾರೆ.
ವರದಿ: ಹರೀಶ್ ಟಿವಿ9 ನವದೆಹಲಿ
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ