Gujarat Election 2022 ಮೊದಲ ಹಂತದ ಮತದಾನ ಮುಕ್ತಾಯ; 89 ವಿಧಾನಸಭಾ ಕ್ಷೇತ್ರಗಳಲ್ಲಿ ಶೇ 60.20 ಮತದಾನ

| Updated By: ರಶ್ಮಿ ಕಲ್ಲಕಟ್ಟ

Updated on: Dec 01, 2022 | 9:09 PM

ಮೊದಲ ಹಂತದ ಮತದಾನದಲ್ಲಿ  ಡೈಮಂಡ್ ಸಿಟಿ ಎಂದು ಕರೆಯಲ್ಪಡುವ ಪ್ರಮುಖ ಕೈಗಾರಿಕಾ ಕೇಂದ್ರವಾದ ಸೂರತ್‌ ಹೆಚ್ಚು ಗಮನ ಸೆಳೆಯುತ್ತದೆ. ಸೂರತ್ ಬಿಜೆಪಿಯ ಭದ್ರಕೋಟೆ ಆಗಿದ್ದು 2017 ರ ಚುನಾವಣೆಯಲ್ಲಿ ಪಕ್ಷವು ಅಧಿಕಾರಕ್ಕೆ ಮರಳಲು ಸಹಾಯ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು.

Gujarat Election 2022 ಮೊದಲ ಹಂತದ ಮತದಾನ ಮುಕ್ತಾಯ; 89 ವಿಧಾನಸಭಾ ಕ್ಷೇತ್ರಗಳಲ್ಲಿ ಶೇ 60.20 ಮತದಾನ
ಗುಜರಾತ್ ಚುನಾವಣೆ
Follow us on

ಭಾರತದ ಚುನಾವಣಾ ಆಯೋಗದ (Election Commission of India)ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ (Gujarat Assembly Elections) ಮೊದಲ ಹಂತದ ಮತದಾನದಲ್ಲಿ ಸರಿಸುಮಾರು 60.20 ರಷ್ಟು ಮತದಾನವಾಗಿದೆ. ಗುಜರಾತ್ ವಿಧಾನಸಭೆಗೆ ಇಂದು(ಗುರುವಾರ) ಮೊದಲ ಹಂತದ ಮತದಾನ ನಡೆದಿದೆ.ಸೌರಾಷ್ಟ್ರ-ಕಚ್ ಪ್ರದೇಶದ 19 ಜಿಲ್ಲೆಗಳು ಮತ್ತು ರಾಜ್ಯದ ದಕ್ಷಿಣ ಭಾಗಗಳಲ್ಲಿ ಗುರುವಾರ ಒಟ್ಟು 182 ಸ್ಥಾನಗಳ ಪೈಕಿ 89 ಸ್ಥಾನಕ್ಕೆ ಮತದಾನ ನಡೆದಿದೆ. ಮೊದಲ ಹಂತದ ಮತದಾನದಲ್ಲಿ  ಡೈಮಂಡ್ ಸಿಟಿ ಎಂದು ಕರೆಯಲ್ಪಡುವ ಪ್ರಮುಖ ಕೈಗಾರಿಕಾ ಕೇಂದ್ರವಾದ ಸೂರತ್‌ ಹೆಚ್ಚು ಗಮನ ಸೆಳೆಯುತ್ತದೆ. ಸೂರತ್ ಬಿಜೆಪಿಯ ಭದ್ರಕೋಟೆ ಆಗಿದ್ದು 2017 ರ ಚುನಾವಣೆಯಲ್ಲಿ ಪಕ್ಷವು ಅಧಿಕಾರಕ್ಕೆ ಮರಳಲು ಸಹಾಯ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಆದಾಗ್ಯೂ, ಈ ಬಾರಿ ಜಿಲ್ಲೆಯಲ್ಲಿ ಆಮ್ ಆದ್ಮಿ ಪಕ್ಷ ವ್ಯಾಪಕ ಪ್ರಚಾರ ನಡೆಸಿದ್ದು, 16 ಕ್ಷೇತ್ರಗಳಲ್ಲಿ ಅರ್ಧದಷ್ಟಾದರೂ ಗೆಲ್ಲುವ ಭರವಸೆ ಇದೆ ಎಂದು ಪಕ್ಷದ ವರಿಷ್ಠ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.

ಮೊರ್ಬಿ ಕ್ಷೇತ್ರವನ್ನು ಸೂಕ್ಷ್ಮವಾಗಿ ಗಮನಿಸಲಾಗುವುದು, ಅಲ್ಲಿ ಅಕ್ಟೋಬರ್ 30 ರಂದು ತೂಗು ಸೇತುವೆ ಕುಸಿದು 135 ಜನರು ಸಾವನ್ನಪ್ಪಿದರು. ಈ ದುರಂತದ ಬಗ್ಗೆ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಭಾರೀ ಟೀಕೆಗಳನ್ನು ಎದುರಿಸಿದೆ.  ಘಟನೆಯ ತನಿಖೆಯಿಂದ ಸೇತುವೆಯ ನವೀಕರಣ ಮತ್ತು ನಿರ್ವಹಣೆಯಲ್ಲಿ ಭಾರಿ ಲೋಪಗಳು ಕಂಡುಬಂದಿದ್ದು, ಹೈಕೋರ್ಟ್ ಆಡಳಿತಕ್ಕೆ ಕಠಿಣ ಪ್ರಶ್ನೆಗಳನ್ನು ಕೇಳಿದೆ.

ಮೊದಲ ಹಂತದ ಇತರ ಪ್ರಮುಖ ಅಭ್ಯರ್ಥಿಗಳು ವಿಧಾನಸಭೆಯ ಮಾಜಿ ವಿರೋಧ ಪಕ್ಷದ ನಾಯಕ ಪರೇಶ್ ಧನಾನಿ, ಎಎಪಿಯ ಮುಖ್ಯಮಂತ್ರಿ ಅಭ್ಯರ್ಥಿ ಇಸುದನ್ ಗಧ್ವಿ ಮತ್ತು ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಜಡೇಜಾ ಕಣದಲ್ಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ತವರು ರಾಜ್ಯ ಗುಜರಾತ್ ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿದೆ. ವಿಧಾನಸಭೆಯ 182 ಸ್ಥಾನಗಳ ಪೈಕಿ 140 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಪಕ್ಷ ಹೊಂದಿದೆ. ಪ್ರಧಾನಿಯವರು ಪ್ರಚಾರದ ಮುಖವಾಗಿ, ರಾಜ್ಯದಲ್ಲಿ ಇದುವರೆಗೆ 20 ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಏಳು ಇತರ ರ್ಯಾಲಿಗಳು ಎರಡನೇ ಹಂತದ ಕಾರ್ಯಸೂಚಿಯಲ್ಲಿವೆ.

ಎಎಪಿ ಈ ವರ್ಷ ಪಂಜಾಬ್‌ನಲ್ಲಿ ಭರ್ಜರಿ ಗೆಲುವಿನ ನಂತರ ಅರವಿಂದ ಕೇಜ್ರಿವಾಲ್ ಗುಜರಾತಿನಲ್ಲಿ ಅಬ್ಬರ ಪ್ರಚಾರವನ್ನು ನಡೆಸಿದ್ದಾರೆ. 2017ರ ಚುನಾವಣೆಯಲ್ಲಿ ಖಾತೆ ತೆರೆಯಲು ವಿಫಲವಾಗಿರುವ ಪಕ್ಷ ಈ ಬಾರಿ 92 ಸ್ಥಾನಗಳನ್ನು ಗೆಲ್ಲಲಿದೆ ಎಂದು ಕೇಜ್ರಿವಾಲ್ ಭವಿಷ್ಯ ನುಡಿದಿದ್ದಾರೆ.

ಚುನಾವಣಾ ಆಯೋಗಕ್ಕೆ ಪತ್ರ ಬರೆದ ಕಾಂಗ್ರೆಸ್

ಗುಜರಾತ್‌ನಲ್ಲಿ ಮೊದಲ ಹಂತದ ವಿಧಾನಸಭಾ ಚುನಾವಣೆಯ ಮತದಾನ ನಡೆಯುತ್ತಿದ್ದು, ಮತದಾನದ ನಂತರ ಮತಯಂತ್ರಗಳ ಉಸ್ತುವಾರಿಯನ್ನು ಗುಜರಾತ್ ಪೊಲೀಸರು ವಹಿಸಿಕೊಳ್ಳುತ್ತಾರೆ ಎಂಬ ಆರೋಪದ ನಡುವೆಯೇ ವಿದ್ಯುನ್ಮಾನ ಮತಯಂತ್ರಗಳ ಭದ್ರತೆ ಕುರಿತು ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ಗುರುವಾರ ದೂರು ನೀಡಿದೆ.

ವಿದ್ಯುನ್ಮಾನ ಮತಯಂತ್ರಗಳಲ್ಲಿನ ಕೆಲವು ಸಣ್ಣಪುಟ್ಟ ಸಮಸ್ಯೆಗಳನ್ನು  ಹೊರತುಪಡಿಸಿ, ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾದ ಮತದಾನ ಪ್ರಕ್ರಿಯೆಯು ಬಹುತೇಕ ಶಾಂತಿಯುತವಾಗಿ ನಡೆಯಿತು. ಮುಖ್ಯ ಚುನಾವಣಾಧಿಕಾರಿ (ಸಿಇಒ) ಕಚೇರಿಯ ಪ್ರಕಾರ, ಎಲೆಕ್ಟ್ರಾನಿಕ್ ಮತಯಂತ್ರಗಳು ಮತ್ತು ನಿಯಂತ್ರಣ ಘಟಕಗಳು ಮತ್ತು ಮತದಾರರ ಪರಿಶೀಲಿಸಬಹುದಾದ ಪೇಪರ್ ಆಡಿಟ್ ಟ್ರಯಲ್ (ವಿವಿಪಿಎಟಿ) ಅಸಮರ್ಪಕ ಕಾರ್ಯದಿಂದಾಗಿ ಕೆಲವು ಸ್ಥಳಗಳಲ್ಲಿ ಮತದಾನ ಸ್ಥಗಿತಗೊಂಡಿದೆ. ದೋಷಪೂರಿತ ಘಟಕಗಳನ್ನು ಬದಲಾಯಿಸಲಾಯಿಸಿದ ನಂತರ ತ್ತು ಪ್ರಕ್ರಿಯೆಯು ಪುನರಾರಂಭವಾಯಿತು.

Published On - 8:43 pm, Thu, 1 December 22