ಅಹಮದಾಬಾದ್: ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ (Bhupendra Patel) ಘಟ್ಲೋಡಿಯಾ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ (Gujarat Assembly Election) ಸ್ಪರ್ಧಿಸಿದ್ದು, ಕಾಂಗ್ರೆಸ್‌ನ ಡಾ. ಅಮೀ ಯಾಗ್ನಿಕ್ ಅವರಿಗಿಂತ 50,000 ಮತಗಳ ಮುನ್ನಡೆ ಸಾಧಿಸಿ, ಗೆಲುವು ಕಂಡಿದ್ದಾರೆ. ಅವರಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi), ಗೃಹ ಸಚಿವ ಅಮಿತ್ ಶಾ (Amit Shah) ಶುಭಾಶಯ ಕೋರಿದ್ದಾರೆ. ಚುನಾವಣಾ ಆಯೋಗದ ಇತ್ತೀಚಿನ ಮಾಹಿತಿ ಪ್ರಕಾರ, ಭೂಪೇಂದ್ರ ಪಟೇಲ್ ಅವರು ಶೇ. 80.86ರಷ್ಟು ಮತಗಳನ್ನು ಪಡೆದಿದ್ದಾರೆ. ಅವರ ಪ್ರತಿಸ್ಪರ್ಧಿ ಕಾಂಗ್ರೆಸ್ ಅಮಿ ಯಾಗ್ನಿಕ್ ಶೇ. 9.81ರಷ್ಟು ಮತಗಳನ್ನು ಪಡೆದು ಹೀನಾಯ ಸೋಲನ್ನು ಅನುಭವಿಸಿದ್ದಾರೆ. ಹಾಗೇ, ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ವಿಜಯ್ ಪಟೇಲ್ ಶೇ. 6.73ರಷ್ಟು ಮತಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.
ಗಾಂಧಿನಗರ ಲೋಕಸಭಾ ಕ್ಷೇತ್ರದ ಭಾಗವಾಗಿರುವ ಪಾಟಿದಾರ್ ಪ್ರಾಬಲ್ಯದ ಘಟ್ಲೋಡಿಯಾ ಕ್ಷೇತ್ರ ಗುಜರಾತ್‌ಗೆ ಇಬ್ಬರು ಮುಖ್ಯಮಂತ್ರಿಗಳನ್ನು ನೀಡಿದೆ. ಭೂಪೇಂದ್ರ ಪಟೇಲ್ ಮತ್ತು ಆನಂದಿಬೆನ್ ಪಟೇಲ್ ಇಬ್ಬರೂ ಇದೇ ಕ್ಷೇತ್ರದವರಾಗಿದ್ದಾರೆ. ಇದು ಬಿಜೆಪಿಯ ಭದ್ರಕೋಟೆಯಾಗಿದೆ.
ಭೂಪೇಂದ್ರ ಪಟೇಲ್ ಅವರು 2017ರಲ್ಲಿ 1.17 ಲಕ್ಷ ಮತಗಳ ಭಾರೀ ಅಂತರದಿಂದ ಗೆದ್ದಿದ್ದರು. ಈ ಬಾರಿಯ ಚುನಾವಣೆಯ ನಂತರ ಭೂಪೇಂದ್ರ ಪಟೇಲ್ ಅವರನ್ನೇ ಮತ್ತೆ ಮುಖ್ಯಮಂತ್ರಿಯಾಗಿ ನೇಮಿಸಲಾಗುವುದು ಎಂದು ಬಿಜೆಪಿ ಈಗಾಗಲೇ ಘೋಷಿಸಿದೆ. ಹೀಗಾಗಿ, ಮತ್ತೊಂದು ಅವಧಿಗೆ ಮುಖ್ಯಮಂತ್ರಿಯಾಗುವ ಭೂಪೇಂದ್ರ ಪಟೇಲ್ ಅವರ ಹಾದಿ ಸುಗಮವಾದಂತಾಗಿದೆ. ಸುಮಾರು 3.70 ಲಕ್ಷ ಮತದಾರರನ್ನು ಹೊಂದಿರುವ ಘಟ್ಲೋಡಿಯಾ ಕ್ಷೇತ್ರ 2012ರಲ್ಲಿ ವಿಧಾನಸಭಾ ಕ್ಷೇತ್ರವಾಯಿತು. ಮೊದಲು ಇದು ಸರ್ಖೇಜ್ ಕ್ಷೇತ್ರದ ಭಾಗವಾಗಿತ್ತು.
Gujarat CM Bhupendra Patel and state BJP chief CR Paatil have sweets in celebration as the party sweeps the #GujaratAssemblyPolls
The Chief Minister is also leading from his constituency Ghatlodia by a margin of 1,07,960 votes. pic.twitter.com/9CAGPjMLsM
— ANI (@ANI) December 8, 2022
ಬಿಗಿ ಭದ್ರತೆಯ ನಡುವೆ ಇಂದು ಬೆಳಗ್ಗೆ 8 ಗಂಟೆಗೆ ಚುನಾವಣೆಯ ಮತ ಎಣಿಕೆ ಆರಂಭವಾಯಿತು. ಆಡಳಿತಾರೂಢ ಬಿಜೆಪಿ ಎಲ್ಲಾ 182 ಸ್ಥಾನಗಳಲ್ಲಿ ಸ್ಪರ್ಧಿಸಿದ್ದರೆ, ಹೊಸದಾಗಿ ಗುಜರಾತ್ ಚುನಾವಣಾ ಅಖಾಡಕ್ಕೆ ಪ್ರವೇಶಿಸಿದ ಆಮ್ ಆದ್ಮಿ ಪಕ್ಷ (ಎಎಪಿ) 181 ಸ್ಥಾನಗಳಲ್ಲಿ ಸ್ಪರ್ಧಿಸಿದೆ. ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ 179 ಸ್ಥಾನಗಳಲ್ಲಿ ಸ್ಪರ್ಧಿಸಿದೆ.
ಭಾರತೀಯ ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ಗುಜರಾತ್‌ನಲ್ಲಿ ಸರ್ಕಾರ ರಚಿಸಲು ಅಗತ್ಯವಿರುವ ಬಹುಮತವನ್ನು ಮೀರಿ ಬಿಜೆಪಿ 154 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಆದರೆ ಕಾಂಗ್ರೆಸ್ 19 ಸ್ಥಾನಗಳೊಂದಿಗೆ ಹಿಂದುಳಿದಿದೆ. ಆಡಳಿತ ಪಕ್ಷಕ್ಕಿಂತ ಕಾಂಗ್ರೆಸ್ ಬಹಳ ದೂರದಲ್ಲಿದೆ. ಎಎಪಿ ಕೇವಲ 6 ಸ್ಥಾನಗಳಲ್ಲಿ ಮುಂದಿದೆ. 1995ರಿಂದ ಗುಜರಾತ್ ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ ಯಾವುದೇ ಚುನಾವಣೆಯಲ್ಲಿ ಸೋತಿಲ್ಲ.