Karnataka Assembly Election 2023: ಪ್ರತಿಷ್ಠೆ ಪಣಕ್ಕಿಟ್ಟ ಸಿದ್ದರಾಮಯ್ಯ-ಸೋಮಣ್ಣ
ವರುಣ ರಾಜ್ಯದ ಹೈ ವೋಲ್ಟೇಜ್ ಕ್ಷೇತ್ರವಾಗಿದೆ. ಹೌದು ವರುಣ ಸಿದ್ದರಾಮಯ್ಯ ಹಾಗೂ ಸೋಮಣ್ಣ ನಡುವಿನ ಸ್ಪರ್ಧೆಗೆ ವೇದಿಕೆಯಾಗಿದೆ. ಇತ್ತ ಟಿಕೆಟ್ ಘೋಷಣೆ ಬೆನ್ನಲ್ಲೇ ಸೋಮಣ್ಣ ಮೈಸೂರು ಕಡೆ ಮುಖ ಮಾಡಿದ್ರೆ. ಅತ್ತ ಸಿದ್ದರಾಮಯ್ಯ ಸಹ ಅಲರ್ಟ್ ಆಗಿ ತವರು ಜಿಲ್ಲೆಯತ್ತ ದೌಡಾಯಿಸುತ್ತಿದ್ದಾರೆ.

ಮೈಸೂರು: ಜಿಲ್ಲೆಯ ವರುಣ ವಿಧಾನಸಭಾ ಕ್ಷೇತ್ರದ ರಣಕಣ ರಂಗೇರತೊಡಗಿದೆ ಇದೇ ನನ್ನ ಕೊನೆ ಚುನಾವಣೆ ಅಂದಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಕೊನೆ ಚುನಾವಣೆಯನ್ನ ಜಿಲ್ಲೆಯ ತವರು ಕ್ಷೇತ್ರದಲ್ಲೇ ಎದುರಿಸಲು ವರುಣ ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸಿದ್ದರು. ಸಿದ್ದರಾಮಯ್ಯ(Siddaramaiah) ಗೆ ವರುಣ ಸುಲಭವಾಗಿ ದಕ್ಕುತ್ತದೆ ಎಂದು ಎಲ್ಲರೂ ಭಾವಿಸಿದ್ದರು ಆದರೆ ಬಿಜೆಪಿ ಸಿದ್ದರಾಮಯ್ಯ ಅವರ ನಿರಾಯಾಸ ಗೆಲುವಿಗೆ ಚೆಕ್ ಇಟ್ಟಿದೆ. ಹೌದು ಪ್ರಭಾವಿ ನಾಯಕ ಸಚಿವ ವಿ.ಸೋಮಣ್ಣ(V. Somanna)ರನ್ನ ಪ್ರತಿಸ್ಪರ್ಧಿಯಾಗಿ ವರುಣ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸಿದೆ.
ಮೈಸೂರಿನತ್ತ ಮುಖ ಮಾಡಿದ ವಿ.ಸೋಮಣ್ಣ
ಸೋಮಣ್ಣ ಹಾಗೂ ಸಿದ್ದರಾಮಯ್ಯ ವರುಣ ಚುನಾವಣೆಯನ್ನ ಗಂಭೀರವಾಗಿ ಪರಿಗಣಿಸಿದ್ದಾರೆ ಇದೇ ಕಾರಣಕ್ಕೆ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ವಿ.ಸೋಮಣ್ಣ ಮೈಸೂರಿನತ್ತ ಮುಖ ಮಾಡಿದ್ದಾರೆ. ಇಂದು(ಏ.13) ಬೆಳಗ್ಗೆ ಮೈಸೂರಿಗೆ ಆಗಮಿಸುವ ಸೋಮಣ್ಣಗೆ ಮೈಸೂರಿನ ಹೆಬ್ಬಾಗಿಲಿನಲ್ಲಿ ಅದ್ದೂರಿ ಸ್ವಾಗತ ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿದೆ. ನಂತರ ಸೋಮಣ್ಣ ಚಾಮುಂಡಿಬೆಟ್ಟಕ್ಕೆ ತೆರಳಿ ನಾಡದೇವತೆ ತಾಯಿ ಚಾಮುಂಡೇಶ್ವರಿ ದರ್ಶನ ಪಡೆಯಲಿದ್ದಾರೆ. ಬಳಿಕ ನಂಜನಗೂಡು ಶ್ರೀಕಂಠೇಶ್ವರ ದೇಗುಲಕ್ಕೆ ಭೇಟಿ ನೀಡಲಿದ್ದಾರೆ. ತದನಂತರ ನಂಜನಗೂಡು ಮಲ್ಲನಮೂಲೆ ಮಠಕ್ಕೆ ಭೇಟಿ ನೀಡಲಿದ್ದಾರೆ.
ಇದನ್ನೂ ಓದಿ:Jagadish Shettar: ಚುನಾವಣೆಯಿಂದ ಹಿಂದೆ ಸರಿಯುವಂತೆ ಹೈಕಮಾಂಡ್ ಕರೆ; ಏನಂದರು ಜಗದೀಶ್ ಶೆಟ್ಟರ್?
ದೇವಸ್ಥಾನ ಭೇಟಿ ಮುಗಿದ ಮೇಲೆ ಮೈಸೂರಿನ ಜಯಲಕ್ಷ್ಮಿಪುರಂನಲ್ಲಿರುವ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಲಿದ್ದಾರೆ. ಸಿದ್ದರಾಮಯ್ಯ ವಿರುದ್ದ ತೊಡೆ ತಟ್ಟಿರುವ ಸೋಮಣ್ಣನವರ ಪ್ರಸಾದ್ ಭೇಟಿ ಸಾಕಷ್ಟು ಮಹತ್ವ ಪಡೆದುಕೊಳ್ಳಲಿದೆ. ಇದಾದ ನಂತರ ಸೋಮಣ್ಣ ಚಾಮರಾಜಪುರಂನಲ್ಲಿರುವ ಬಿಜೆಪಿ ಕಚೇರಿಗೆ ಭೇಟಿ ನೀಡಲಿದ್ದಾರೆ. ಕೊನೆಗೆ ಮೈಸೂರಿನ ಪ್ರೆಸಿಡೆಂಟ್ ಹೋಟೆಲ್‌ನಲ್ಲಿ ಬಿಜೆಪಿ ಪ್ರಮುಖರ ಜೊತೆ ಸಭೆ ನಡೆಸಲಿದ್ದಾರೆ. ಮೈಸೂರಿನ ಕಾರ್ಯಕ್ರಮ ಮುಗಿಸಿ ಸಚಿವ ವಿ.ಸೋಮಣ್ಣ ಚಾಮರಾಜನಗರಕ್ಕೆ ತೆರಳಿ ಅಲ್ಲಿಯೂ ಸಹ ಸಭೆ ನಡೆಸಲಿದ್ದಾರೆ. ಸೋಮಣ್ಣ ವರುಣ ಪ್ರವಾಸ ಸಾಕಷ್ಟು ಕುತೂಹಲ ಕೆರಳಿಸಿದೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ಸಹ ತವರು ಜಿಲ್ಲೆಗೆ ದೌಡು
ಇತ್ತ ಸೋಮಣ್ಣ ಮೈಸೂರು ಚಾಮರಾಜನಗರ ಪ್ರವಾಸ ಮಾಡುತ್ತಿದ್ದರೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸಹ ತವರು ಜಿಲ್ಲೆ, ಮೈಸೂರಿನ ಕಡೆಗೆ ದೌಡಾಯಿಸುತ್ತಿದ್ದಾರೆ. ಇಂದು ಬೆಳಗ್ಗೆ ಮೈಸೂರಿಗೆ ಆಗಮಿಸುತ್ತಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಬೆಳಗ್ಗೆಯಿಂದ ರಾತ್ರಿವರೆಗೂ ಮೈಸೂರಿನಲ್ಲೇ ಬೀಡು ಬಿಡಲಿದ್ದಾರೆ. ಮಧ್ಯಾಹ್ನ ಮೈಸೂರಿನ ಕೂರ್ಗಳ್ಳಿಯಲ್ಲಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಜೊತೆ ಸಭೆ ಕರೆಯಲಾಗಿದೆ. ಸಭೆ ಮುಗಿಸಿ ಮನೆಗೆ ಆಗಮಿಸುವ ಸಿದ್ದರಾಮಯ್ಯ ಕೆಲಕಾಲ ಮನೆಯಲ್ಲಿ ಬೇರೆ ಬೇರೆ ಕ್ಷೇತ್ರದ ಮುಖಂಡರ ಜೊತೆ ಮಾತುಕತೆ ನಡೆಸಲಿದ್ದಾರೆ ಈ ಮಧ್ಯೆ ಸಿದ್ದರಾಮಯ್ಯ ವರುಣ ಕ್ಷೇತ್ರಕ್ಕೆ ಹೋಗೋದು ಡೌಟ್ ಎನ್ನಲಾಗುತ್ತಿದೆ. ಯಾಕೆಂದರೆ ಈಗಾಗಲೇ ಸಿದ್ದರಾಮಯ್ಯ ನಾನು ವರುಣ ಕ್ಷೇತ್ರಕ್ಕೆ ಪ್ರಚಾರಕ್ಕೆ ಬರುವುದಿಲ್ಲ. ಕೇವಲ ನಾಮಪತ್ರ ಸಲ್ಲಿಸಲು ಹಾಗೂ ಮತ ಹಾಕಲು ಮಾತ್ರ ಹೋಗುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಒಂದೇ ದಿನ ವಿಪಕ್ಷ ನಾಯಕ ಸಿದ್ದರಾಮಯ್ಯ, ಸಚಿವ ವಿ.ಸೋಮಣ್ಣ ತಮ್ಮ ಕ್ಷೇತ್ರದ ಕಡೆ ಮುಖ ಮಾಡಿರುವುದು ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ ಇಬ್ಬರೂ ಸಹ ಕ್ಷೇತ್ರವನ್ನು ಗಂಭೀರವಾಗಿ ಪರಿಗಣಿಸಿದ್ದು ಶತಾಯಗತಾಯ ಪ್ರಯತ್ನಿಸಿ ಕ್ಷೇತ್ರದಿಂದಲೇ ಗೆಲ್ಲಬೇಕು ಎಂದು ಪಣತೊಟ್ಟಿರೋದಂತೂ ಸತ್ಯ.
ವರದಿ: ರಾಮ್ ಟಿವಿ9 ಮೈಸೂರು
ಇನ್ನಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




