ಬೆಂಗಳೂರು: ಪಾರದರ್ಶಕ ಚುನಾವಣೆಗಾಗಿ (Karnataka Assembly Elections 2023) ಚುನಾವಣಾ ಅಧಿಕಾರಿಗಳು ಮತ್ತು ಪೊಲೀಸರು ಅಲ್ಲಲ್ಲಿ ಚೆಕ್ಪೋಸ್ಟ್ಗಳನ್ನು ಹಾಕಿ ತಪಾಸಣೆ ನಡೆಸುತ್ತಿದ್ದಾರೆ. ಈ ವೇಳೆ ದಾಖಲೆ ಇಲ್ಲದೆ ಸಾಗಿಸುತ್ತಿರುವ ನಗದು ಚಿನ್ನಾಭರಣ ಇತ್ಯಾದಿ ವಸ್ತುಗಳನ್ನು ಜಪ್ತಿ (Gold Seized) ಮಾಡುತ್ತಿದ್ದಾರೆ. ಅದರಂತೆ ಬೆಂಗಳೂರು ನಗರದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 2 ಕೆಜಿಗೂ ಅಧಿಕ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ನಿರ್ಮಲ್ ಎಂಬಾತನ ವಾಹನವನ್ನು ಹಲಸೂರು ಗೇಟ್ ಠಾಣಾ ವ್ಯಾಪ್ತಿಯ ನಗರತ್ ಪೇಟೆಯಲ್ಲಿ ತಡೆದು ತಪಾಸಣೆ ನಡೆಸಲಾಗಿದೆ. ಈ ವೇಳೆ 2.5 ಕೆಜಿ ಚಿನ್ನಾಭರಣ ಪತ್ತೆಯಾಗಿದೆ. ವಿಚಾರಣೆ ವೇಳೆ ಈ ಚಿನ್ನಾಭರಣಗಳಿಗೆ ದಾಖಲೆ ಇಲ್ಲ ಎಂಬುದು ತಿಳಿದುಬಂದ ಹಿನ್ನೆಲೆ ಪೊಲೀಸರು ಜಪ್ತಿ ಮಾಡಿ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮಾರ್ಚ್ 29ರಿಂದ ಈವರೆಗೆ ಬೆಂಗಳೂರಲ್ಲಿ 53.83 ಕೋಟಿ ರೂಪಾಯಿಗೂ ಅಧಿಕ ಹಣ, ಮದ್ಯ, ಉಡುಗೊರೆಗಳನ್ನು ಜಪ್ತಿ ಮಾಡಲಾಗಿದೆ. ನೀತಿ ಸಂಹಿತೆ ಜಾರಿಯಾದ ಬಳಿಕ ಬರೋಬ್ಬರಿ 1187 ಎಫ್ಐಆರ್ ದಾಖಲಾಗಿವೆ. 8.26 ಕೋಟಿ ರೂ. ನಗದು, 22.16 ಕೋಟಿ ರೂ. ಮೌಲ್ಯದ ಮದ್ಯ, 9.51 ಕೋಟಿ ರೂ. ಮೌಲ್ಯದ ಡ್ರಗ್ಸ್, 4.73 ಲಕ್ಷ ರೂ. ಮೌಲ್ಯದ ಗೃಹಪಯೋಗಿ ವಸ್ತುಗಳು, 4.87 ಕೋಟಿ ರೂ. ಮೌಲ್ಯದ ಉಡುಗೊರೆ ಮತ್ತು 4.27 ಕೋಟಿ ರೂ. ಮೌಲ್ಯದ ವಾಹನಗಳನ್ನು ಜಪ್ತಿ ಮಾಡಲಾಗಿದೆ.
ಇದನ್ನೂ ಓದಿ: ಮಾ.29ರಿಂದ ರಾಜ್ಯದಲ್ಲಿ ಈವರೆಗೆ 126.14 ಕೋಟಿ ರೂ. ಹಣ, ವಸ್ತು ಜಪ್ತಿ: ಬೆಂಗಳೂರು ಪಾಲೆಷ್ಟು? ಇಲ್ಲಿದೆ ಅಂಕಿ ಅಂಶ
ಬೆಳಗಾವಿ: ಜಿಲ್ಲೆಯಲ್ಲಿ ದಾಖಲೆ ಇಲ್ಲದೆ ಅಕ್ರಮವಾಗಿ ಹಣ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದ್ದು, 9 ಲಕ್ಷ ಹಣವನ್ನು ಚುನಾವಣಾ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಜಿಲ್ಲೆಯ ಕುಡಚಿ ಚೆಕ್‌ಪೋಸ್ಟ್‌ನಲ್ಲಿ ಕಾರೊಂದನ್ನು ತಡೆದು ತಪಾಸಣೆ ನಡೆಸಿದಾಗ 8 ಲಕ್ಷ ನಗದು ಪತ್ತೆಯಾಗಿದೆ. ಪ್ರಾಥಮಿಕ ವಿಚಾರಣೆ ವೇಳೆ ದಾಖಲೆ ಇಲ್ಲದಿರುವುದು ತಿಳಿದುಬಂದಿದೆ. ಹೀಗಾಗಿ ಅಧಿಕಾರಿಗಳು ಹಣವನ್ನು ಜಪ್ತಿ ಮಾಡಿದ್ದಾರೆ. ಇತ್ತ ಚಿಕ್ಕಾಲಗುಡ್ಡ ಚೆಕ್ಪೋಸ್ಟ್ನಲ್ಲೂ ಒಂದು ಕಾರನ್ನು ತಪಾಸಣೆ ನಡೆಸಿದಾಗ ದಾಖಲೆ ಇಲ್ಲದ 1 ಲಕ್ಷ ನಗದು ಪತ್ತೆಯಾಗಿದೆ. ಕೂಡಲೇ ಅಧಿಕಾರಿಗಳು ಹಣವನ್ನು ಜಪ್ತಿ ಮಾಡಿದ್ದಾರೆ. ಸದ್ಯ ಚುನಾವಣಾ ಅಧಿಕಾರಿಗಳು ಎರಡು ಪ್ರತ್ಯೇಕ ಠಾಣೆಗಳಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಚಿಕ್ಕಮಗಳೂರು: ಜಿಲ್ಲೆಯ ವಿವಿಧ ಚೆಕ್ಪೋಸ್ಟ್ಗಳಲ್ಲಿ 20 ಲಕ್ಷ ರೂಪಾಯಿ ನಗದು, ಲಕ್ಷಾಂತರ ಮೌಲ್ಯದ ಗಿಫ್ಟ್‌ಗಳನ್ನು ಜಪ್ತಿ ಮಾಡಲಾಗಿದೆ. ಕಡೂರು ಚೆಕ್‌ಪೋಸ್ಟ್‌ನಲ್ಲಿ 6 ಲಕ್ಷಕ್ಕೂ ಹೆಚ್ಚು, ತರೀಕೆರೆ ಚೆಕ್‌ಪೋಸ್ಟ್‌ನಲ್ಲಿ 3 ಲಕ್ಷಕ್ಕೂ, ಲಕ್ಕವಳ್ಳಿ ಎಂ.ಎನ್.ಕ್ಯಾಂಪ್‌ನಲ್ಲಿ ಒಂದು ಲಕ್ಷ ನಗದು ಸೀಜ್ ಮಾಡಲಾಗಿದೆ. ಕೊರಿಯರ್ ಮೂಲಕ ಅಕ್ರಮವಾಗಿ ಸಾಗಿಸುತ್ತಿದ್ದ 7.5 ಲಕ್ಷ ಮೌಲ್ಯದ 760 ಜೀನ್ಸ್ ಪ್ಯಾಂಟ್ ಮತ್ತು ಬೀರೂರಿನಲ್ಲಿ 68 ಸಾವಿರಕ್ಕೂ ಮೌಲ್ಯದ 47 ಕುಕ್ಕರ್, 77 ಸೀರೆಗಳನ್ನು ಚುನಾವಣಾ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಹಾಗಾಗಿ ಜಿಲ್ಲೆಯ ಚೆಕ್‌ಪೋಸ್ಟ್‌ನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:07 pm, Wed, 12 April 23