Karnataka Assembly Elections 2023: ಟೌನ್ ಹಾಲ್ ಮುಂಭಾಗ ಅಭ್ಯರ್ಥಿ ಪರ ಟೋಕನ್ ಹಂಚುತ್ತಿದ್ದ ಶಿಕ್ಷಕ ಅರೆಸ್ಟ್
ರಾಜ್ಯ ವಿಧಾನಸಭೆಗೆ ಮೇ 10 ರಂದು ಮತದಾನ ನಡೆಯಲಿದೆ. ಆದ್ರೆ, ಸರ್ಕಾರಿ ನೌಕರರಿಗೆ ಈಗಾಗಲೇ ಅಂಚೆಮತ ಹಾಕಲು ಮೇ.4 ಮತ್ತು 5 ರಂದು ಅವಕಾಶ ನೀಡಲಾಗಿತ್ತು. ಆದ್ರೆ, ಸರ್ಕಾರಿ ನೌಕರದಾರರಿಗೆ ಬಿಜೆಪಿಯವರು ಟೋಕನ್ ನೀಡ್ತಿದ್ದಾರೆ ಅನ್ನೋ ಆರೋಪ ಕಲಬುರಗಿಯಲ್ಲಿ ಕೇಳಿ ಬಂದಿದ್ದು, ಟೋಕನ್ ಹಂಚುತ್ತಿದ್ದ ಆರೋಪದ ಮೇಲೆ ಓರ್ವ ಸರ್ಕಾರಿ ಶಾಲೆ ಶಿಕ್ಷಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಲಬುರಗಿ ನಗರದಲ್ಲಿ ಇದೀಗ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಟೋಕನ್ ಪಾರ್ ಓಟ್ ಗುದ್ದಾಟ ಆರಂಭವಾಗಿದೆ.
ಕಲಬುರಗಿ: ವ್ಯಕ್ತಿಯೋರ್ವನನ್ನು ಹಿಡಿದು, ಆತನ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿರುವ ಕಾಂಗ್ರೆಸ್(Congress) ಕಾರ್ಯಕರ್ತರು. ಮತ್ತೊಂದೆಡೆ ವ್ಯಕ್ತಿಯ ಜೇಬಲ್ಲಿ ಸಿಕ್ಕಿರುವ ಟೋಕನ್ಗಳು. ಇಂತಹದೊಂದು ದೃಶ್ಯ ಕಂಡುಬಂದಿದ್ದು ಕಲಬುರಗಿ ನಗರದ ಟೌನ್ ಹಾಲ್ ಮುಂಬಾಗದಲ್ಲಿ. ಇನ್ನು ತಲೆ ಮೇಲೆ ಟೋಪಿ ಹಾಕಿಕೊಂಡು ಡಿಸೆಂಟ್ ರೀತಿ ಕಾಣುತ್ತಿರುವ ವ್ಯಕ್ತಿಗೆ ಕೈ ಕಾರ್ಯಕರ್ತರು ಹಿಗ್ಗಾಮುಗ್ಗಾ ತರಾಟೆಗೆ ತಗೆದುಕೊಂಡರು. ಇನ್ನು ತರಾಟೆಗೊಳಗಾದ ವ್ಯಕ್ತಿ, ನೂರಾರು ಮಕ್ಕಳಿಗೆ ಮತದಾನದ ಪಾವಿತ್ರ್ಯತೆಯ ಪಾಠ ಮಾಡುವ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕ. ಹೌದು ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಹಾವನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿರುವ ಚಿದಾನಂದ್ ಅನ್ನೋ ಶಿಕ್ಷಕನಿಗೆ ಕೈ ಕಾರ್ಯಕರ್ತರು ತರಾಟೆಗೆ ತಗೆದುಕೊಂಡರು.
ಇದಕ್ಕೆ ಕಾರಣ, ಆತ ಅಭ್ಯರ್ಥಿ ಪರವಾಗಿ ಟೋಕನ್ ಹಂಚುತ್ತಿದ್ದಾನೆ ಅನ್ನೋದು. ಹೌದು ಮೇ 10ರಂದು ರಾಜ್ಯ ವಿಧಾನಸಭೆ ಚುನಾವಣೆಯ ಮತದಾನ ನಡೆಯುತ್ತದೆ. ಆದ್ರೆ, ಅಂದು ಎಲ್ಲಾ ಸರ್ಕಾರಿ ನೌಕರರಿಗೆ ಮತಹಾಕಲು ಕಷ್ಟಸಾಧ್ಯ ಹಿನ್ನೆಲೆಯಲ್ಲಿ, ಅಂಚೆ ಮತಾದನಕ್ಕೆ ಅವಕಾಶ ನೀಡಲಾಗಿದೆ. ಹೀಗಾಗಿ ಮೇ.4 ಮತ್ತು 5 ರಂದು ಅನೇಕ ಸರ್ಕಾರಿ ನೌಕರರು ತಮ್ಮ ತಮ್ಮ ವಿಧಾನಸಭಾ ಕ್ಷೇತ್ರಗಳಲ್ಲಿ ನಿಗದಿ ಮಾಡಿದ ಬೂತ್ಗಳಿಗೆ ಹೋಗಿ ಮತದಾನ ಮಾಡುತ್ತಿದ್ದಾರೆ. ಆದ್ರೆ, ಕಲಬುರಗಿ ದಕ್ಷಿಣ ಕ್ಷೇತ್ರದ ಸರ್ಕಾರಿ ನೌಕರರಿಗೆ ಬಿಜೆಪಿಯವರು ಟೋಕನ್ ಹಂಚುತ್ತಿದ್ದಾರೆ ಎನ್ನುವ ಆರೋಪವನ್ನು ಕೈ ಕಾರ್ಯಕರ್ತರು ಮಾಡುತ್ತಿದ್ದಾರೆ.
ಸರ್ಕಾರಿ ಶಾಲೆಯ ಶಿಕ್ಷಕನಾಗಿರುವ ಚಿದಾನಂದ್, ಅಭ್ಯರ್ಥಿ ದತ್ತಾತ್ರೇಯ್ ಪಾಟೀಲ್ ಪರವಾಗಿ ಮತಹಾಕಿ, ಮತಹಾಕಿದ್ರೆ ನಿಮಗೆ ಟೋಕನ್ ಕೊಡ್ತೇವೆ. ಒಂದು ಟೋಕನ್ ಗೆ ಇಂತಿಷ್ಟು ಹಣ ನೀಡಲಾಗುತ್ತದೆ ಎಂದು ಹೇಳಿ, ಟೋಕನ್ ಹಂಚುತ್ತಿದ್ದನಂತೆ. ಮತಗಟ್ಟೆಯ ಹೊರಗೆ ಚಿದಾನಂದ್ ಟೋಕನ್ ಹಂಚುತ್ತಿದ್ದಾಗ ಅಲ್ಲಿಗೆ ಎಂಟ್ರಿ ನೀಡಿದ ಕೈ ಕಾರ್ಯಕರ್ತರು, ಶಿಕ್ಷಕ ಚಿದಾನಂದ್ನನ್ನು ಹಿಡಿದು, ತರಾಟೆಗೆ ತಗೆದುಕೊಂಡ್ರು. ನಂತರ ಪೊಲೀಸರು ಮತ್ತು ಚುನಾವಣೆ ಅಧಿಕಾರಿಗಳನ್ನು ಕರೆಸಿ, ಚಿದಾನಂದ್ನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.
ಇನ್ನು ಟೋಕನ್ ನಲ್ಲಿ ಯಾವುದೇ ಪಕ್ಷದ ಚಿಹ್ನೆ ಮತ್ತು ಅಭ್ಯರ್ಥಿಯ ಮಾಹಿತಿ ಇಲ್ಲ. ಟುಗೆದರ್ ಅನ್ನೋ ಟೋಕನ್ ಮಾತ್ರ ಇದ್ದು, ಅದನ್ನು ತೋರಿಸಿದ್ರೆ, ದುಡ್ಡು ಕೊಡ್ತಾರೆ. ಬಿಜೆಪಿಯವರು ಸರ್ಕಾರಿ ನೌಕರರ ಮತವನ್ನು ಖರೀದಿ ಮಾಡ್ತಿದ್ದಾರೆ ಅನ್ನೋ ಆರೋಪವನ್ನು ಕೈ ಕಾರ್ಯಕರ್ತರು ಮಾಡುತ್ತಿದ್ದಾರೆ. ಆದ್ರೆ, ಈ ಆರೋಪವನ್ನ ಬಿಜೆಪಿ ನಾಯಕರು ಅಲ್ಲಗಳೆದಿದ್ದಾರೆ. ನಾವು ಯಾವುದೇ ಟೋಕನ್ ನೀಡಿಲ್ಲ. ಸರ್ಕಾರಿ ನೌಕರರಿಗೆ ಕಾಂಗ್ರೆಸ್ನವರು ಅವಮಾನ ಮಾಡ್ತಿದ್ದಾರೆ. ಉದ್ದೇಶಪೂರ್ಕವಾಗಿ ಬಂದು ಅವರಿಗೆ ಬೆದರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕೈ ನಾಯಕರ ವಿರುದ್ದ ಬಿಜೆಪಿ ಅಭ್ಯರ್ಥಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:Fact Check: ಬಿಜೆಪಿ ಬದಲು ಕಾಂಗ್ರೆಸ್ ಸರ್ಕಾರ ಎಂದು ಹೇಳಿದರಾ ಮೋದಿ?; ವೈರಲ್ ವಿಡಿಯೊ ಎಡಿಟ್ ಮಾಡಿದ್ದು
ಸರ್ಕಾರಿ ನೌಕರರಿಗೆ ಮತಕ್ಕಾಗಿ ಹಣದ ಟೋಕನ್ ನೀಡುತ್ತಿರುವುದು ಇದೀಗ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಆದ್ರೆ, ಈಗಾಗಲೇ ಪೊಲೀಸರ ವಶದಲ್ಲಿರುವ ಸರ್ಕಾರಿ ಶಿಕ್ಷಕ, ಚಿದಾನಂದ್ ಮಾತ್ರ ನಾನು ಟೋಕನ್ ಹಂಚುತ್ತಿರಲಿಲ್ಲ. ಯಾರೋ ಕೊಟ್ಟರು ಕೈಯಲ್ಲಿ ಹಿಡಿದುಕೊಂಡಿದ್ದೆ. ನಾನು ಯಾವುದೇ ಪಕ್ಷದ ಪರ ಕೆಲಸ ಮಾಡಿಲ್ಲ ಎಂದು ಹೇಳುತ್ತಿದ್ದಾನೆ. ಆದ್ರೆ, ವಿಚಾರಣೆ ನಂತರವೇ ಸತ್ಯಾಸತ್ಯತೆ ಗೊತ್ತಾಗಲಿದೆ.
ವರದಿ: ಸಂಜಯ್,ಟಿವಿ9 ಕಲಬುರಗಿ
ಇನ್ನಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ