Updated on: May 01, 2023 | 9:15 PM
ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆ ಕೇಂದ್ರ ಗೃಹ ಸಚಿವರೂ ಆಗಿರುವ ಬಿಜೆಪಿ ಚಾಣಕ್ಯ ಅಮಿತ್ ಶಾ ಅವರು ಇಂದು ಶಿವಮೊಗ್ಗ ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ರೋಡ್ ಶೋ ಮೂಲಕ ಭರ್ಜರಿ ಪ್ರಚಾರ ನಡೆಸಿದರು.
ತಿಪಟೂರಿನಲ್ಲಿ ಬಿ.ಸಿ.ನಾಗೇಶ್ ಪರ, ಶಿವಮೊಗ್ಗ ನಗರದಲ್ಲಿ ಎಸ್.ಎನ್.ಚನ್ನಬಸಪ್ಪ ಪರ, ಗ್ರಾಮಾಂತರದಲ್ಲಿ ಕೆ.ಬಿ.ಅಶೋಕ್ ನಾಯ್ಕ್ ಪರ ಪ್ರಚಾರ ನಡೆಸಿದರು.
ರೋಡ್ ಶೋ ವೇಳೆ ಮಾತನಾಡಿದ ಅಮಿತ್ ಶಾ, ರಾಜ್ಯ ಬಿಜೆಪಿಗೆ ಕೆಎಸ್ ಈಶ್ವರಪ್ಪ ಮತ್ತು ಬಿಎಸ್ ಯಡಿಯೂರಪ್ಪ ಅವರ ಕೊಡುಗೆ ದೊಡ್ಡದು ಎಂದು ಹೇಳಿದರು.
ಈಶ್ವರಪ್ಪ ಮತ್ತು ಯಡಿಯೂರಪ್ಪ ಅವರು ಈ ಚುನಾವಣೆಯಲ್ಲಿ ಹೊಸಬರಿಗೆ ಅವಕಾಶ ನೀಡಿದ್ದಾರೆ. ಶಿವಮೊಗ್ಗ ನಗರ ಕ್ಷೇತ್ರದಿಂದ ಚನ್ನಬಸಪ್ಪ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದೇ ಈಶ್ವರಪ್ಪ ಎಂದು ಅಮಿತ್ ಶಾ ಇದೇ ವೇಳೆ ಹೇಳಿದರು.
ಶಿವಮೊಗ್ಗ ನಗರ ಕ್ಷೇತ್ರದ ಅಭ್ಯರ್ಥಿ ಚನ್ನಬಸಪ್ಪ ಅವರನ್ನು ಗೆಲ್ಲಿಸುವಂತೆ ಕಾರ್ಯಕರ್ತರಿಗೆ ಹಾಗೂ ಮತದಾರರಿಗೆ ಅಮಿತಾ ಶಾ ಕರೆ ನೀಡಿದರು.
ಇನ್ನು, ಅಮಿತ್ ಶಾ ರೋಡ್ ಶೋದಲ್ಲಿ ಅಪಾರ ಸಂಖ್ಯೆಯಲ್ಲಿ ಜನರು, ಕಾರ್ಯಕರ್ತರು ಭಾಗವಹಿಸಿದ್ದರು. ದಾರಿಯುದ್ದಕ್ಕೂ ಅಮಿತ್ ಶಾ, ಮೋದಿ ಪರ ಘೋಷಣೆಗಳು ಕೂಗಲಾಯಿತು, ಭಾರತ ಮಾತೆಗೂ ಜಯ ಘೋಷಗಳು ಮೊಳಗಿದವು.
ತೆರೆದ ವಾಹನದಲ್ಲಿ ಈಶ್ವರಪ್ಪ ಜೊತೆ ರೋಡ್ ಶೋ ನಡೆಸಿದ ಅಮಿತ್ ಶಾಗೆ ಜನರು ಹೂಮಳೆ ಸುರಿದರು. ಜನರ ಅಭಿಮಾನ ಕಂಡು ಬಿಜೆಪಿ ಚಾಣಕ್ಯ ಫಿದಾ ಆಗಿಬಿಟ್ಟರು.
ಇಂತಹ ರೋಡ್ ಶೋ ನಾನು ಈ ಹಿಂದೆ ನೋಡಿರಲಿಲ್ಲ ಎಂದು ಹೇಳುವ ಮೂಲಕ ಅಮಿತ್ ಶಾ ಅವರು ಶಿವಮೊಗ್ಗ ರೋಡ್ ಶೋವನ್ನು ಕೊಂಡಾಡಿದರು.