Karnataka Polls: ರಾಜಕೀಯ ಪಕ್ಷಗಳ ಭವಿಷ್ಯಕ್ಕೆ ಈ ಆರು ಪ್ರದೇಶಗಳು ನಿರ್ಣಾಯಕ

ರಾಜ್ಯ ವಿಧಾನಸಭೆ ಚುನಾವಣೆಯ ಫಲಿತಾಂಶವನ್ನು ನಿರ್ಧರಿಸುವಲ್ಲಿ ಈ 6 ಪ್ರದೇಶಗಳು ಬಹಳ ಮುಖ್ಯವಾದದ್ದಾಗಿವೆ. ಆ 6 ಪ್ರದೇಶಗಳ ಮಾಹಿತಿ ಇಲ್ಲಿದೆ.

Karnataka Polls: ರಾಜಕೀಯ ಪಕ್ಷಗಳ ಭವಿಷ್ಯಕ್ಕೆ ಈ ಆರು ಪ್ರದೇಶಗಳು ನಿರ್ಣಾಯಕ
ಸಾಂದರ್ಭಿಕ ಚಿತ್ರ
Follow us
Ganapathi Sharma
|

Updated on:May 01, 2023 | 9:04 PM

ರಾಜ್ಯ ವಿಧಾನಸಭೆ ಚುನಾವಣೆ(Karnataka Assembly Elections 2023) ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ಪ್ರಚಾರ ಭರದಿಂದ ಸಾಗಿದೆ. ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೇರಲು ಬಿಜೆಪಿ (BJP) ಹವಣಿಸುತ್ತಿದ್ದರೆ, ಕಾಂಗ್ರೆಸ್ (Congress) ಅಧಿಕಾರದ ಗದ್ದುಗೆಗೆ ಏರಲು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಜೆಡಿಎಸ್ (JDS) ಮತ್ತೊಮ್ಮೆ ಕಿಂಗ್ ಮೇಕರ್ ಪಾತ್ರ ವಹಿಸಬಹುದು ಎನ್ನಲಾಗುತ್ತಿದೆ. ಆದರೆ, ಕರ್ನಾಟಕದ ಈ 6 ಪ್ರದೇಶಗಳ ಅಂಶ ಬಹಳ ಮುಖ್ಯವಾಗಿದ್ದು, ಇವುಗಳು ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಬಹುದು ಎನ್ನಬಹುದು. ಆ 6 ಪ್ರದೇಶಗಳ ಮಾಹಿತಿ ಇಲ್ಲಿದೆ.

ಕಿತ್ತೂರು ಕರ್ನಾಟಕ

ಈ ಭಾಗದ 50 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಇದೆ. ವೀರಶೈವ ಲಿಂಗಾಯತ ಸಮುದಾಯ ಇಲ್ಲಿ ನಿರ್ಣಾಯಕವಾಗಿದೆ. ಈ ಸಮುದಾಯಗಳನ್ನು ತಮ್ಮತ್ತ ಸೆಳೆಯಲು ಬಿಜೆಪಿ ಮತ್ತು ಕಾಂಗ್ರೆಸ್ ತೀವ್ರ ಪ್ರಯತ್ನ ನಡೆಸುತ್ತಿವೆ.

ಕಲ್ಯಾಣ ಕರ್ನಾಟಕ

ಈ ಪ್ರದೇಶದ 40 ಕ್ಷೇತ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳ ಜನರಿದ್ದಾರೆ. ಈ ಗುಂಪುಗಳಿಗೆ ಸಂಬಂಧಿಸಿದ ಮೀಸಲಾತಿಯ ಕುರಿತು ಕರ್ನಾಟಕ ಸರ್ಕಾರದ ಇತ್ತೀಚಿನ ನಿರ್ಧಾರದ ಪರಿಣಾಮವನ್ನು ಇಲ್ಲಿ ಕಾಣಬಹುದು ಎಂದು ನಿರೀಕ್ಷಿಸಲಾಗುತ್ತಿದೆ.

ಕರಾವಳಿ ಕರ್ನಾಟಕ

ಈ ಪ್ರದೇಶದಲ್ಲಿ 19 ಕ್ಷೇತ್ರಗಳಿವೆ. ಕರಾವಳಿ ಕರ್ನಾಟಕವನ್ನು ಬಿಜೆಪಿಯ ಭದ್ರಕೋಟೆ ಎಂದು ಪರಿಗಣಿಸಲಾಗಿದೆ. ಹಿಜಾಬ್ ವಿವಾದ, ಪಿಎಫ್​ಐ ನಿಷೇಧ ಹಾಗೂ ಮುಸ್ಲಿಂ ಮೀಸಲಾತಿ ತೆರವು ಈ ಬಾರಿ ಈ ಪ್ರದೇಶದಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆ ಇದೆ.

ಮಧ್ಯ ಕರ್ನಾಟಕ

ಈ ಪ್ರದೇಶದಲ್ಲಿ 20 ಕ್ಷೇತ್ರಗಳಿವೆ. ಮಧ್ಯ ಕರ್ನಾಟಕದಲ್ಲಿ ಹಲವು ಸಮಸ್ಯೆಗಳಿದ್ದು, ಇವುಗಳು ರಾಜ್ಯ ವಿಧಾನಸಭೆ ಚುನಾವಣೆ ಮೇಲೆ ನೇರ ಪರಿಣಾಮ ಬೀರಬಹುದು ಎನ್ನಲಾಗುತ್ತಿದೆ. ಅದರಲ್ಲೂ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಹಿಂದುತ್ವದ ವಿಚಾರ ಪ್ರಮುಖ ಪಾತ್ರ ವಹಿಸಲಿದೆ ಎಂಬ ನಿರೀಕ್ಷೆ ಇದೆ.

ಹಳೇ ಮೈಸೂರು

ಒಕ್ಕಲಿಗ ಸಮುದಾಯದ ಪ್ರಾಬಲ್ಯವಿರುವ ಪ್ರದೇಶ ಇದಾಗಿದ್ದು, ಸಾಂಪ್ರದಾಯಿಕವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಜಿದ್ದಾಜಿದ್ದಿನ ಪೈಪೋಟಿ ಇದೆ. ಈ ಪ್ರದೇಶದಲ್ಲಿ ಹೇಗಾದರೂ ಮಾಡಿ ಕಮಲ ಅರಳಿಸಬೇಕು ಎಂದು ಬಿಜೆಪಿ ಶತಾಯಗತಾಯ ಪ್ರಯತ್ನಿಸುತ್ತಿದೆ. ಈ ಪ್ರದೇಶದ ಅನೇಕ ಕ್ಷೇತ್ರಗಳಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ.

ಬೆಂಗಳೂರು ನಗರ

ಹೆಚ್ಚು ಜನನಿಬಿಡ ಪ್ರದೇಶವಾಗಿರುವ ಬೆಂಗಳೂರು ನಗರ ಗರಿಷ್ಠ ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ (28). ಇಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇದೆ. ಮೂಲಸೌಕರ್ಯ ಮತ್ತು ಸೌಲಭ್ಯಗಳು ಇಲ್ಲಿ ನಿರ್ಣಾಯಕ ಸಮಸ್ಯೆಗಳಾಗಿದ್ದು, ಚುನಾವಣಾ ವಿಷಯಗಳೂ ಹೌದು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:01 pm, Mon, 1 May 23